ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

Cauvery Water Dispute: SC To Hear Petition on 9 April

02-04-2018

ಬೆಂಗಳೂರು: ನ್ಯಾಯಾಲಯದ ಆದೇಶದಂತೆ ಗಡುವಿನೊಳಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ತಮಿಳು ನಾಡು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯನ್ನು ವಿಚಾರಣೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ.ಎಂ.ಖನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ನ್ಯಾಯಪೀಠ, ಪ್ರಕರಣದ ವಿಚಾರಣೆಯನ್ನು ಈ ತಿಂಗಳ 9ಕ್ಕೆ ಮುಂದೂಡಿದೆ. ಆರು ವಾರಗಳಲ್ಲಿ ಜಲ ನಿರ್ವಹಣಾ ಮಂಡಳಿ ರಚಿಸುವಂತೆ ಸುಪ್ರೀಂ ಕೋರ್ಟ್ ಕಳೆದ ಫೆಬ್ರವರಿ 16ರಂದು ತೀರ್ಪು ನೀಡಿತ್ತು.

ಕಳೆದ 2007ರಲ್ಲಿ ಕಾವೇರಿ ನ್ಯಾಯಾಧೀಕರಣ ನೀಡಿದ ತನ್ನ ಅಂತಿಮ ತೀರ್ಪುನಲ್ಲಿ ಜಲ ನಿರ್ವಹಣಾ ಮಂಡಳಿ ರಚಿಸುವಂತೆ ಸೂಚಿಸಿತ್ತು. ನ್ಯಾಯಾಧೀಕರಣದ ತೀರ್ಪಿನ ವಿರುದ್ಧ ಕಾವೇರಿ ನದಿ ಪಾತ್ರದ ರಾಜ್ಯಗಳಾದ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ಸುಪ್ರೀಂ ಕೋರ್ಟ್‍ಗೆ ಅರ್ಜಿ ಮೇಲ್ಮನವಿ ಸಲ್ಲಿಸಿದ್ದವು.

ಈ ಮಧ್ಯೆ ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮಿಳುನಾಡು ಒತ್ತಡಕ್ಕೆ ಮಣಿದು ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಬಾರದು ಎಂದರು. ಕೇಂದ್ರ ಸರ್ಕಾರ ತಮಿಳುನಾಡು ಒತ್ತಡಕ್ಕೆ ಮಣಿಯಬಾರದು. ಜಲ ನಿರ್ವಹಣಾ ಮಂಡಳಿ ಬದಲಿಗೆ ಜಲ ಸಂಕಷ್ಟ ವರ್ಷದಲ್ಲಿ ಸಂಕಷ್ಟ ಸೂತ್ರ ರೂಪಿಸಲು ಆದ್ಯತೆ ನೀಡಬೇಕು. ನೀರು ಲಭ್ಯವಿದ್ದ ಸಂದರ್ಭದಲ್ಲಿ ತಮಿಳುನಾಡಿಗೆ 177 ಟಿ.ಎಂ.ಸಿ ನೀರು ಬಿಡುಗಡೆ ಮಾಡಬೇಕು. ನೀರಿನ ಕೊರತೆ ಇದ್ದಾಗ ಸಂಕಷ್ಟ ಸೂತ್ರದಂತೆ ನೀರು ಹಂಚಿಕೆಗೆ ಸೂಕ್ತ ಸಲಹೆ ನೀಡುವ ವ್ಯವಸ್ಥೆ ರೂಪುಗೊಳ್ಳಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು. ಮೇಕೆದಾಟು ಬಳಿ ಅಣೆಕಟ್ಟೆ ನಿರ್ಮಾಣ ಮಾಡುವ ಸಂಬಂಧ ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Supreme court central government ತೀರ್ಪು ನ್ಯಾಯಾಧೀಕರಣ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ