ಲಾಲ್ ಬಾಗ್ ನಲ್ಲಿ ಹೆಚ್ಚಾಗ್ತಿದೆ ಜೇನು ನೊಣಗಳ ಕಾಟ!

Be careful about honey bee in lal bagh

02-04-2018

ಬೆಂಗಳೂರು: ಚೈತ್ರ ಕಾಲದ ಹಿನ್ನಲೆಯಲ್ಲಿ ನಗರದ  ಸಸ್ಯಕಾಶಿ ಲಾಲ್‍ಬಾಗ್ ಜೇನು ನೊಣಗಳ ಕಾಟ ಹೆಚ್ಚಾಗಿದೆ. ಚೈತ್ರ ಕಾಲದ ಹಿನ್ನಲೆಯಲ್ಲಿ ಲಾಲ್‍ಬಾಗ್‍ನಲ್ಲಿನ ಅನೇಕ ಮರಗಳು ಚಿಗುರುವುದು, ಹೂ ಬಿಡುವ ಸಮಯವಾಗಿರುವುದರಿಂದ ಹಲವೆಡೆ ಜೇನುಗಳು ಗೂಡು ಕಟ್ಟಿವೆ. ಉದ್ಯಾನವನದಲ್ಲಿ ಅತ್ತಿಂದಿತ್ತ ಸಂಚರಿಸುತ್ತಿರುವ ಜೇನು ನೊಣಗಳು ಮಳೆಗಾಲಕ್ಕೆ ಆಹಾರ ಸಂಗ್ರಹಿಸಿಟ್ಟುಕೊಳ್ಳುವ ಕಾರ್ಯದಲ್ಲಿ ನಿರತವಾಗಿವೆ.

ಅದರಿಂದಾಗಿ ಕಪ್ಪು ಬಟ್ಟೆ ಹಾಗೂ ಸುಗಂಧ ದ್ರವ್ಯ ಇವನ್ನು ಆಕರ್ಷಿಸುತ್ತವೆ. ಇದರಿಂದ ಈ ಎರಡನ್ನೂ ಹೊಂದಿದವರತ್ತ ಇವು ಮುತ್ತಿಕೊಳ್ಳುವ ಸಾಧ್ಯತೆ ಇರುತ್ತದೆ. ಕೊಂಚ ಹೆಚ್ಚು ಕಡಿಮೆ ಆದರೂ, ಅವು ದಾಳಿ ನಡೆಸುತ್ತವೆ. ಅತ್ಯಂತ ಸೂಕ್ಷ್ಮ ಕೀಟಗಳಾದ ಇವುಗಳಿಂದ ತಪ್ಪಿಸಿಕೊಳ್ಳಲು ಲಾಲ್‍ಬಾಗ್‍ನ ಅಂದ ಸವಿಯುಲು ಬರುವವರಿಗೆ ಕಪ್ಪು ಬಟ್ಟೆ ಧರಿಸಬಾರದು ಹಾಗೂ ಅತಿಯಾಗಿ ಸುಗಂಧದ್ರವ್ಯ (ಸೆಂಟ್)ವನ್ನು ಹಾಕಿಕೊಳ್ಳಬಾರದು ಎನ್ನುವ ಎಚ್ಚರಿಕೆ ನೀಡಲಾಗಿದೆ.

ಲಾಲ್‍ಬಾಗ್ ಸಸ್ಯತೋಟದ ಎಲ್ಲಾ ಕಡೆ ಜೇನುಗೂಡುಗಳು ಇಲ್ಲ. ಕೆಲ ಸ್ಥಳಗಳಲ್ಲಿ ಮಾತ್ರ ಇದ್ದು, ಈ ಎರಡು ನಿರ್ಬಂಧ ಇರುವುದು ಈ ಭಾಗಗಳಲ್ಲಿ ಮಾತ್ರ. ಅಂದಹಾಗೆ ಇದು ಶಾಶ್ವತವಾಗಿ ಮಾಡಿದ ನಿಯಮವೋ, ತಾತ್ಕಾಲಿಕವೋ ಎನ್ನುವುದು ತಿಳಿದು ಬಂದಿಲ್ಲ.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಚಂದ್ರಶೇಖರ್ ಅವರು ಈ ವಿಷಯವನ್ನು ದೃಢಪಡಿಸಿದ್ದು, ಜೇನು ನೊಣಗಳು ಹೆಚ್ಚಿರುವ ಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ವಿಶೇಷವಾಗಿ ಸಿಬ್ಬಂದಿ ನಿಯೋಜಿಸಿದ್ದು ಅವರು ಜನರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಇವರಿಗೆ ಎಲ್ಲಾ ವಿಧದ ನಿಯಮಗಳನ್ನೂ ವಿವರಿಸಲಾಗಿದೆ. ಅವರ ಮಾತನ್ನು ಪಾಲಿಸಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಾವು ಕಳೆದ ಎರಡು ವರ್ಷ ಈ ವಿಚಾರವಾಗಿ ಅಧ್ಯಯನ ನಡೆಸಿದ್ದೇವೆ. ಕಪ್ಪು ಬಟ್ಟೆ, ಸುಗಂಧ ದ್ರವ್ಯಕ್ಕೆ ಆಕರ್ಷಿತವಾಗುತ್ತವೆ ಎನ್ನುವುದು ತಿಳಿದು ಬಂದಿದೆ. ಇದಕ್ಕಾಗಿಯೇ ಕ್ರಮಕ್ಕೆ ಮುಂದಾಗಿದ್ದೇವೆ. ಜನ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.

ಎರಡು ವರ್ಷ ಹಿಂದೆ ಸಾವು: ಎರಡು ವರ್ಷ ಹಿಂದೆ ಲಾಲ್‍ಬಾಗ್ ಫಲಪುಷ್ಪ ಪ್ರದರ್ಶನ ವೇಳೆ ವೈಷ್ಣವಿ ಎಂಬ ಬಾಲಕಿ ಮೇಲೆ ಜೇನುನೊಣ ದಾಳಿ ನಡೆಸಿ ಸಾವಿಗೆ ಕಾರಣವಾಗಿತ್ತು. ಕಳೆದ ವರ್ಷ ಕೂಡ ಒಂದೆರಡು ಪ್ರಕರಣ ನಡೆದಿತ್ತು. ಚೈತ್ರಮಾಸದಲ್ಲಿ ಗಿಡ-ಮರಗಳು ಚಿಗುರೊಡೆಯುತ್ತಿದ್ದು, ಹೂವುಗಳು ಬಿಡುತ್ತಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಈ ಆದೇಶ ಹೊರಡಿಸಲಾಗಿದೆ. ಪ್ರವಾಸಿಗಳು ಓಡಾಡುವ ಸ್ಥಳದಲ್ಲಿ ಜೇನುಗೂಡು ಇರುವೆಡೆ ಈ ನಿರ್ಬಂಧ ಹೇರಲಾಗಿದೆ.


ಸಂಬಂಧಿತ ಟ್ಯಾಗ್ಗಳು

Lal bagh Honey bee ಚೈತ್ರಮಾಸ ಪ್ರವಾಸಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ