ಚಾಮುಂಡೇಶ್ವರಿ: ಎಚ್ಡಿಕೆ, ಬಿಎಸ್ವೈ ಮೈಂಡ್ ಗೇಮ್!

chamundeshwari: hdk,Bsy mind game

02-04-2018

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸದರೆ ಅವರಿಗೆ ಸೋಲು ಖಚಿತ ಎಂಬ ವದಂತಿಯನ್ನು ಉದ್ದೇಶ ಪೂರ್ವಕವಾಗಿ ಹರಡಲಾಗುತ್ತಿದೆಯೇ?

ಮುಖ್ಯ ಮಂತ್ರಿ ಸಿದ್ದರಾಮಯ್ಯ ತಾವು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ಚುನಾವಣೆ  ಸ್ಪರ್ಧಿಸುವೆ ಎಂದು ಈಗಾಗಲೇ ಅನೇಕ ತಿಂಗಳುಗಳಿಂದ ಹೇಳುತ್ತಲೇ ಇದ್ದಾರೆ. ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಸಹ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಸ್ಪರ್ಧೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದಲೇ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ, ಸಿದ್ದರಾಮಯ್ಯ ಈ ಬಾರಿ ಚಾಮುಂಡೇಶ್ವರಿಯಿಂದ ಸ್ಪರ್ಧಿಸೊಲ್ಲ, ಸ್ಪರ್ಧಿಸಿದರೂ ಗೆಲ್ಲುವುದಿಲ್ಲ, ಅವರು ಬೇರೆಡೆಯಿಂದ ಕಣಕ್ಕಿಳಿಯಲು ನಿರ್ಧಾರಿಸಿದ್ದಾರೆ ಅನ್ನುವಂತಹ ಸುದ್ದಿಯನ್ನು ಹರಿಬಿಡಲಾಗುತ್ತಿದೆ.

ಇನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಅಂತೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿಯಿಂದ ಸ್ಪರ್ಧಿಸುವುದೇ ಅನುಮಾನ. ಇನ್ನೂ ಗೆಲ್ಲುವುದೆಲ್ಲಿಂದ ಬಂತು. ಹೀಗಾಗಿ, ಚುನಾವಣೆ ಫಲಿತಾಂಶದ ದಿನ ಮೈಸೂರಿಗೆ ಬಂದು ಮಾಧ್ಯಮಗಳ ಜೊತೆ ಸಿದ್ದರಾಮಯ್ಯ ಸೋತ ಸುದ್ದಿಯನ್ನು ಹಂಚಿಕೊಳ್ಳುತ್ತೇನೆ ಅನ್ನುವ ಮಾತುಗಳನ್ನು ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲಿ ಹೇಗೆ ಗೆಲ್ತಾರೊ ನೋಡ್ತಿನಿ ಎನ್ನುವ ಧಾಟಿಯಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ಈ ಬಾರಿ ಮತ್ತೆ 2006ರಲ್ಲಿ ದೇಶದ ಗಮನ ಸೆಳೆದಿದ್ದ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಈ ಬಾರಿಯೂ ಮತ್ತೊಮ್ಮೆ ಅಂಥದೇ ಸ್ಥಿತಿ ನಿರ್ಮಾಣವಾದಂತಿದೆ.

ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಚುನಾವಣಾ ವಿವರಗಳನ್ನು ಗಮನಿಸುವುದಾರೆ ಸಿದ್ದರಾಮಯ್ಯ 7 ಬಾರಿ ಅಲ್ಲಿಂದ ಸ್ಪರ್ಧಿಸಿ 5 ಬಾರಿ ಗೆದ್ದು 2 ಸಲ ಸೋಲನ್ನು ಅನುಭವಿಸಿದ್ದಾರೆ. 2013ರಲ್ಲಿ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅದಕ್ಕೂ ಮುನ್ನ ಒಮ್ಮೆ ಎ.ಎಸ್.ಗುರು ಸ್ವಾಮಿ ಅವರು ಗೆದ್ದಿದ್ದನ್ನು ಹೊರೆತು ಪಡಿಸಿ ಇಲ್ಲಿ ಸಿದ್ದರಾಮಯ್ಯನವರೇ 1983ರಿಂದ ಪಕ್ಷೇತರ, ಜನತಾ ಪರಿವಾರ ಮತ್ತು ಕಾಂಗ್ರೆಸ್ ಪಕ್ಷದಿಂದ ಗೆದ್ದಿದ್ದಾರೆ.

ಜಾತಿ ಲೆಕ್ಕಾಚಾರದ ಪ್ರಕಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಕ್ಕಲಿಗರು ಮೊದಲ ಸ್ಥಾನದಲ್ಲಿ ಅಂದರೆ 70 ಸಾವಿರ ಮತದಾರರಿದ್ದಾರೆ. ಎರಡನೇ ಸ್ಥಾನದಲ್ಲಿ ದಲಿತರು, ಕುರುಬರು 40 ಸಾವಿರ, 3ನೇ ಸ್ಥಾನದಲ್ಲಿ ನಾಯಕರು 30-35 ಸಾವಿರ, ಲಿಂಗಾಯತರು 25 ಸಾವಿರ, ಬ್ರಾಹ್ಮಣರು 15 ಸಾವಿರ, ಮುಸ್ಲಿಂರು 5 ಸಾವಿರ, ಹಾಗೂ ಇತರರು 40 ಸಾವಿರ ಅಂದರೆ ಒಟ್ಟು 2,77,896 ಮಂದಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ.

1983ರಲ್ಲಿ ಮೊದಲ ಬಾರಿ ಚಾಮುಂಡೇಶ್ವರಿ ಕ್ಷೇತ್ರದ ಜನರೇ ತಾವೇ ಹಣ ಸಂಗ್ರಹಿಸಿ ಕೊಟ್ಟು ಒತ್ತಾಯ ಮಾಡಿ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದರು. 2006ರ ಉಪ ಚುನಾವಣೆಯಲ್ಲಿ ಖುದ್ದು ಬಿ.ಎಸ್.ಯಡಿಯೂರಪ್ಪ ಹಾಗೂ ಕುಮಾರ ಸ್ವಾಮಿ ಚುನಾವಣೆ ಘೋಷಣೆ ದಿನದಿಂದ ಮತದಾನದ ದಿನದವರೆಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬೀಡುಬಿಟ್ಟು ಏನೆಲ್ಲಾ ಪ್ರಯತ್ನಗಳನ್ನೂ ಮಾಡಿದರೂ ಮತದಾರರು ಸಿದ್ದರಾಮಯ್ಯನವರ ಪರ ನಿಂತು ಗೆಲ್ಲಿಸಿದ್ದರು.

ಪರಿಸ್ಥಿತಿ ಹೀಗಿದ್ದರೂ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಯಾಕೆ ಮತ್ತೆ-ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಚುನಾವಣೆಗೆ ಸ್ಪರ್ಧಿಸಿದರೆ ಸೋಲು ಖಚಿತ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಅವರಿಗೆ ಕನಸಿನಲ್ಲೂ ಕಾಡುತ್ತಿದ್ದಾರೆಯೇ? ಅವರ ಅಧಿಕಾರಗಳಿಕೆಯ ಮಹತ್ವಾಕಾಂಕ್ಷೆಗೆ ಅಡ್ಡಿಯಾಗಿದ್ದಾರೆಯೇ?

ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ನವರ ಈ ಕಾರ್ಯತಂತ್ರ ಇದೆಯಲ್ಲ ಅದನ್ನೇ 'ಮೈಂಡ್ ಗೇಮ್' ಅನ್ನುವುದು. ಪ್ರಬಲ ಎದುರಾಳಿಯ ಮನದಲ್ಲಿ ಭೀತಿ ತುಂಬುವ, ಎದುರಾಳಿಯನ್ನು ಕಟ್ಟಿ ಹಾಕುವ ತಂತ್ರ ಇದು. ಸಿದ್ದರಾಮಯ್ಯ ನವರನ್ನು ಚಾಮುಂಡೇಶ್ವರಿ ಕ್ಷೇತ್ರಕ್ಕೆ ಸೀಮಿತಗೊಳಿಸಿ ಅವರು ರಾಜ್ಯ ಮರೆತು ಅಲ್ಲೇ ಹೆಚ್ಚು ದಿನ ಪ್ರಚಾರದಲ್ಲಿ ತೊಡಗುವಂತೆ ಮಾಡುವ ಚುನಾವಣಾ ಕಾರ್ಯತಂತ್ರ ಇದು.

ಸಿದ್ದರಾಮಯ್ಯ ರಾಜ್ಯದ ಮಟ್ಟಿಗೆ ಅವರೇ ಕಾಂಗ್ರೆಸ್ ನ ಸೇನಾಧಿಪತಿ. ಅವರ ನಾಯಕತ್ವವನ್ನೇ ಪಕ್ಷ ನಿರೀಕ್ಷಿಸುತ್ತಿದೆ. ಬಹುತೇಕ ಚುನಾವಣ ಪೂರ್ವ ಸಮೀಕ್ಷೆಗಳು ರಾಜ್ಯದಲ್ಲಿ ಮತ್ತೆ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎನ್ನುವ ಮುನ್ಸೂಚನೆ ನೀಡಿವೆ. ಸಿದ್ದರಾಮಯ್ಯ ಎಂತಹ ಲೆಕ್ಕಾಚಾರದ ರಾಜಕಾರಣಿ ಅಂದರೆ ಚುನಾವಣಾ ತಂತ್ರ-ಪ್ರತಿ ತಂತ್ರಗಳಲ್ಲಿ ಪ್ರವೀಣ. ಗೆಲುವಿಗಾಗಿ ಕಾಲಕ್ಕೆ ತಕ್ಕಂತೆ ದಾಳ ಉರುಳಿಸಬಲ್ಲ ಆಟಗಾರ. ಅಂತಹ ಸಿದ್ದರಾಮಯ್ಯನವರನ್ನು ರಾಜ್ಯ ಸುತ್ತಿ ಪಕ್ಷ ಸಂಘಟಿಸದಂತೆ, ಮತದಾರರನ್ನು ಕಾಂಗ್ರೆಸ್ ಪಕ್ಷದ ಕಡೆಗೆ ಸೆಳೆಯಂತೆ ಮಾಡಿಬಿಟ್ಟರೇ? ಅಷ್ಷೇ ಅಲ್ಲಿಗೆ ಕಾಂಗ್ರೆಸ್ ಅನ್ನು ಅರ್ಧ ಕಟ್ಟಿಹಾಕಿದಂತೆ. ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಮಾಡುತ್ತಿರುವುದೂ ಅದನ್ನೇ.

ಇದನ್ನು ಅರಿತೇ ಸಿದ್ದರಾಮಯ್ಯ ತಮ್ಮ ಚುನಾವಣಾ ಪ್ರಚಾರ ಪ್ರವಾಸವನ್ನು ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಹಾಗೂ ತಮ್ಮಪುತ್ರ ಕಣಕ್ಕಿಳಿಯುವ ವರುಣ ವಿಧಾನಸಭಾ ಕ್ಷೇತ್ರದಿಂದ  ಅರಂಭಿಸಿದ್ದಾರೆ. ತಮ್ಮ ಕ್ಷೇತ್ರದ ಮತದಾರರನ್ನು ಮೊದಲು ತಮ್ಮೆಡೆಗೆ ಸೆಳೆದುಕೊಂಡು ನಂತರ ರಾಜ್ಯ ಸುತ್ತುವುದು ಅವರ ಲೆಕ್ಕಾಚಾರ.


ಸಂಬಂಧಿತ ಟ್ಯಾಗ್ಗಳು

siddaramaiah election ಮತದಾರ ಪ್ರಚಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ