ಟಿಕೆಟ್ ಗಾಗಿ ಪುರಪಿತೃಗಳ ಭಾರೀ ಪೈಪೋಟಿ

karnataka assembly election: Ticket aspirants in bbmp

31-03-2018

ಬೆಂಗಳೂರು: ವಿಧಾನಸಭೆಯ ಸದಸ್ಯತ್ವದ ಆಕರ್ಷಣೆ ದೊಡ್ಡದು. ಜೀವನದ ಮಹತ್ವದ ಸಾಧನೆಗಳಲ್ಲಿ ಅದೂ ಒಂದು. ಯಾರನ್ನಾದರೂ ಶಾಸಕರೊ ಸಂದಸದರೊ ಆಗಿರಿ ಅಂದರೆ ನಿರಾಕರಿಸುವವರ ಸಂಖ್ಯೆ ಕಡಿಮೆ. ಅಂತಹ ಸೆಳಹು ಅದರಲ್ಲಿದೆ. ಇಷ್ಟೆಲ್ಲಾ ಪೀಠಿಕೆ ಯಾಕೆಂದರೆ, ಈ ಬಾರಿ ರಾಜ್ಯ ವಿಧಾನ ಸಭೆ ಪ್ರವೇಶಕ್ಕೆ ಬೆಂಗಳೂರು ಮಹಾನಗರ ಪಾಲಿಕೆಯ ಮೇಯರ್, ಮಾಜಿ ಮೇಯರ್, ಪಾಲಿಕೆಯ ಹಾಲಿ ಹಾಗೂ ಮಾಜಿ ಸದಸ್ಯರುಗಳ ದೊಡ್ಡ ದಂಡೇ ಟಿಕೆಟ್ ಆಕಾಂಕ್ಷಿಗಳಾಗಿ ಪಕ್ಷದ ಪ್ರಮುಖರ ಮನವೊಲಿಕೆಯಲ್ಲಿ ನಿರತವಾಗಿದೆ.

ಮೇಯರ ಸಂಪತ್ ರಾಜ್ ಕಾಂಗ್ರೆಸ್ ಪಕ್ಷದಿಂದ ಸಿ.ವಿ.ರಾಮನ್ ನಗರ ಹಾಗೂ ಪುಲಿಕೇಶಿ ನಗರದ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಕಳೆದ 25 ವರ್ಷಗಳಿಂದ ಸತತವಾಗಿ ಬಸವನಗುಡಿ ವಾರ್ಡ್ ನಿಂದ ಮಹಾನಗರ ಪಾಲಿಕೆ ಸದಸ್ಯರಾಗಿ ಚುನಾಯಿತರಾಗುತ್ತಿರುವ ಮಾಜಿ ಮೇಯರ್ ಬಿ.ಎಸ್.ಸತ್ಯನಾರಾಯಣ ಈ ಬಾರಿ ವಿಧಾನ ಸಭಾ ಸದಸ್ಯತ್ವದ ಬಯಕೆಯಲ್ಲಿದ್ದಾರೆ. ಬಸವನ ಗುಡಿ ವಿಧಾನ ಸಭಾ ಕ್ಷೇತ್ರದಲ್ಲಿ ಹಾಲಿ ಬಿಜೆಪಿ ಶಾಸಕರಿದ್ದರೂ ಈ ಬಾರಿ ತಮಗೆ ಅವಕಾಶ ನೀಡುವಂತೆ ಪಕ್ಷದ ವರಿಷ್ಠರಲ್ಲಿ ಬೇಡಿಕೆ ಇಟ್ಟಿದ್ದಾರೆ. ಕ್ಷೇತ್ರದಲ್ಲಿ ಹಾಲಿ ಶಾಸಕರಿದ್ದರೂ ಗುಜರಾತ್ ಹಾಗೂ ಉತ್ತರ ಪ್ರದೇಶಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಿರುವುದನ್ನು ಉದಾಹರಣೆ ನೀಡುತ್ತಿರುವ ಸತ್ಯನಾರಾಯಣ ಈಗಾಗಲೇ ಪ್ರಚಾರವನ್ನೂ ಆರಂಭಿಸಿದ್ದಾರೆ.

ಮಾಜಿ ಮೇಯರ್ ಪದ್ಮಾವತಿ ಅವರು ರಾಜಾಜಿನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಪಕ್ಷದ ನಾಯಕರ ಭರವಸೆ ಮೇರೆಗೆ ಅವರು ಪ್ರಚಾರಕಾರ್ಯ ಆರಂಭಿಸಿದ್ದಾರೆ. ಇನ್ನೂ ಮತೊಬ್ಬ ಮಾಜಿ ಮೇಯರ್ ವೆಂಕಟೇಶ ಮೂರ್ತಿ ಪದ್ಮನಾಭನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ‌. ಅದೇ ಕ್ಷೇತ್ರದಿಂದ ಕಾಂಗ್ರೆಸ್ನ ಟಿಕೆಟ್ಗಾಗಿ ಪಾಲಿಕೆ ಹಾಲಿ ಸದಸ್ಯ ಅನ್ವರ್ ಪಾಷಾ ಪ್ರಯತ್ನ ನಡೆಸಿದ್ದಾರೆ.

ಸರ್ವಜ್ಞ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಚಾಮರಾಜಪೇಟೆಯಿಂದ ಬಿಜೆಪಿ ಟಿಕೆಟ್ಗಾಗಿ ಪಾಲಿಕೆಯ ಮಾಜಿ ಸದಸ್ಯ ಬಿ.ವಿ.ಗಣೇಶ್ ಹಾಗೂ ಮಾಜಿ ಉಪ ಮೇಯರ್ ಲಕ್ಷ್ಮಿ ನಾರಾಯಣ ಪೈಪೋಟಿ ನಡೆಸಿದ್ದಾರೆ.

ಕೆ.ಆರ್.ಪುರಂ ಇಲ್ಲವೆ ಹಿರಿಯೂರಿನಿಂದ ಬಿಜೆಪಿ ಅಭ್ಯರ್ಥಿ ಯಾಗಬೇಕೆನ್ನುವುದು ಮಾಜಿ ಸದಸ್ಯೆ ಪೂರ್ಣಿಮಾ ಅವರ ಇಚ್ಚೆ. ಅದೇ ರೀತಿ ಬಿಜೆಪಿಯಿಂದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎನ್.ಆರ್.ರಮೇಶ್.ಶಾಂತಿ ನಗರ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಗಾಗಿ ಮಾಜಿ ಉಪಮೇಯರ್ ವಾಸುದೇವ ಮೂರ್ತಿ ಹಾಗೂ ಮಾಜಿ ಸದಸ್ಯ ಶ್ರೀಧರ ರೆಡ್ಡಿ ಪೈಪೋಟಿ ನಡೆಸಿದ್ದಾರೆ.

ವಿಜಯನಗರ ವಿಧಾನ ಸಭಾ ಕ್ಷೇತ್ರದಿಂದ ಪಾಲಿಕೆಯ ಮಾಜಿ ಸದಸ್ಯ ರವೀಂದ್ರ, ಹಾಗೂ ಗೋವಿಂದರಾಜ ನಗರ ಕ್ಷೇತ್ರದಿಂದ ಮಾಜಿ ಮೇಯರ್ ಶಾಂತಕುಮಾರಿ ಹಾಗೂ ಉಮೇಶ್ ಶೆಟ್ಟಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಇನ್ನೂ ಮಹಾಲಕ್ಷ್ಮಿ ಬಡಾವಣೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲೂ ಮಾಜಿ ಮೇಯರ್ ಎಂ.ನಾಗರಾಜ್ ಹಾಗೂ ಮಾಜಿ ಉಪ ಮೇಯರ್ ಕಳೆದ ಬಾರಿಯ ಪರಾಜಿತ ಅಭ್ಯರ್ಥಿ ಹರೀಶ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.


ಸಂಬಂಧಿತ ಟ್ಯಾಗ್ಗಳು

BBMP Election ಮೇಯರ್ ಮಾಜಿ ಮೇಯರ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ