ಮೂಲೆ ಸೇರಿದ ಜಾತಿ ಗಣತಿ ವರದಿ..!

Caste census report: govt decided to to not publish at this time

30-03-2018

ಬೆಂಗಳೂರು: ರಾಜ್ಯದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದ್ದ ಜಾತಿ ಗಣತಿಯ ವರದಿ ಇದೀಗ ಶೀತಲಗೃಹ ಸೇರಿದೆ. ವರದಿ ಬಿಡುಗಡೆ ಮಾಡದಿರಲು ನಿರ್ಧಸಲಾಗಿದೆ. ಇದೀಗ ವರದಿ ಬಿಡುಗಡೆಗೆ ನೀತಿ ಸಂಹಿತೆಯೂ ಸಹ ಅಡ್ಡಿಯಾಗಿದ್ದು, ಇಂತಹ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವುದು ಬೇಡ ಎನ್ನುವ ನಿಲುವಿಗೆ ಬಂದಿದೆ. ವರದಿ ಬಿಡುಗಡೆ ಮಾಡಬೇಕೋ, ಬೇಡವೋ ಎನ್ನುವ ಕುರಿತು ಪಕ್ಷದ ನಾಯಕರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಲವು ಸುತ್ತಿನ ಚರ್ಚೆ ನಡೆಸಿದ ನಂತರ ವರದಿ ಬಿಡುಗಡೆ ಸೂಕ್ತವಲ್ಲ ಎನ್ನುವ ನಿರ್ಧಾರ ತಳೆದಿದ್ದಾರೆ.

ಲಿಂಗಾಯತ ಧರ್ಮಕ್ಕೆ ಪ್ರತ್ಯೇಕತೆಯ ಸ್ಥಾನಮಾನ ನೀಡಬೇಕು, ಅಲ್ಪಸಂಖ್ಯಾತ ಸ್ಥಾನಮಾನ ನೀಡಬೇಕು ಎಂಬ ನಿರ್ಧಾರದ ಬಗ್ಗೆ ಸರ್ಕಾರ ಕೈಗೊಂಡಿರುವ ನಿರ್ಧಾರದ ವಿರುದ್ಧ ಕೆಲ ಶಕ್ತಿಗಳು ವ್ಯಾಪಕ ಕೋಲಾಹಲ ಎಬ್ಬಿಸುತ್ತಿವೆ. ಈ ಹಂತದಲ್ಲಿ ಜಾತಿ ಗಣತಿಯ ವರದಿ ಬಿಡುಗಡೆ ಮಾಡುವುದು ಸರಿಯಲ್ಲ ಎಂದು ಹಲವು ನಾಯಕರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಸಿದ್ಧರಾಮಯ್ಯ ಸಧ್ಯಕ್ಕೆ ಮೌನವಾಗಿರಲು ನಿರ್ಧರಿಸಿದ್ದಾರೆ.

ಇದೇ ಮೂಲಗಳ ಪ್ರಕಾರ ವೀರಶೈವ ಮಹಾಸಭಾ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ಜೊತೆ ಈಗಾಗಲೇ ಮುಖ್ಯಮಂತ್ರಿಗಳು ಮಾತನಾಡಿದ್ದು ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬ ತೀರ್ಮಾನದ ವಿರುದ್ಧ ರಂಪ ಮಾಡುವುದು ಬೇಡ ಎಂದಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿರುವುದರಿಂದ ಶಾಮನೂರು ಶಿವಶಂಕರಪ್ಪ ಅವರೂ ಈ ವಿಷಯವನ್ನು ಪ್ರತಿಷ್ಟೆಯ ವಿಷಯವನ್ನಾಗಿ ಮಾಡಿಕೊಂಡು ಕೈ ಪಾಳೆಯಕ್ಕೆ ಮುಜುಗರ ನೀಡದಿರಲು ತೀರ್ಮಾನ ಮಾಡಿದ್ದಾರೆ. ಹೀಗಾಗಿ ಚುನಾವಣೆಯ ಒಳಗಾಗಿ ಇದರ ಕಾವು ಕಡಿಮೆಯಾಗಿ ಲಿಂಗಾಯತ ಮತಗಳು ಗಣನೀಯ ಪ್ರಮಾಣದಲ್ಲಿ ಕೈ ಪಾಳೆಯಕ್ಕೆ ಬಂದರೆ ಸಾಕು ಎಂಬ ನಿಲುವಿಗೆ ಬರಲಾಗಿದ್ದು, ಇದೇ ಕಾರಣಕ್ಕಾಗಿ ಜಾತಿಗಣತಿಯ ವರದಿಯನ್ನು ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ.

ಅಂದ ಹಾಗೆ ಜಾತಿಗಣತಿಯ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿದ್ದರೂ ಒಂದೂ ಕಾಲು ಕೋಟಿಯಷ್ಟಿರುವ ದಲಿತರು, ಎಪ್ಪತ್ತೈದು ಲಕ್ಷದಷ್ಟು ಮುಸ್ಲಿಮರು ಸೇರಿದಂತೆ ವಿವಿಧ ಸಮುದಾಯಗಳ ಜನಸಂಖ್ಯೆಯ ವಿವರ ಬಹುತೇಕ ಬಹಿರಂಗವಾಗಿದ್ದು ಹೀಗಿರುವಾಗ ಮತ್ತೊಮ್ಮೆ ಪ್ರತ್ಯೇಕವಾಗಿ ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡುವುದು ಬೇಡ ಎಂಬುದು ಕೈ ಪಾಳೆಯದ ನಾಯಕರ ಸಲಹೆ.

ಸಧ್ಯದ ಸ್ಥಿತಿಯಲ್ಲಿ ಕೇಂದ್ರದ ಮೋದಿ ಸರ್ಕಾರದ ಆರ್ಥಿಕ ನೀತಿಗಳು ಅಹಿಂದ ಸಮುದಾಯಗಳನ್ನು ತಲ್ಲಣಗೊಳಿಸಿರುವುದರಿಂದ ಆ ಸಮದಾಯಗಳ ಗಣನೀಯ ಪ್ರಮಾಣದ ಮತಗಳು ಕಾಂಗ್ರೆಸ್‍ಗೆ ಬರುತ್ತವೆ. ಅದೇ ಕಾಲಕ್ಕೆ ಲಿಂಗಾಯತ ಮತಗಳು ಕೂಡಾ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿದ್ದು, ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಅಭ್ಯರ್ಥಿಗಳಿಗೂ, ಸೋಲು ಅನುಭವಿಸಿದ್ದ ಅಭ್ಯರ್ಥಿಗಳಿಗೂ ಅನುಕೂಲವಾಗಲಿದೆ ಎಂಬುದು ಕೈ ಪಾಳೆಯದ ಲೆಕ್ಕಾಚಾರ.

ಹೀಗೆ 1999ರ ಚುನಾವಣೆಯಲ್ಲಿ ಒಕ್ಕಲಿಗ ಪ್ಲಸ್ ಅಹಿಂದ ಮತಗಳು ಕಾಂಗ್ರೆಸ್‍ನ ಕೈ ಹಿಡಿದಿದ್ದರೆ, ಈ ಚುನಾವಣೆಯಲ್ಲಿ ಲಿಂಗಾಯತ ಪ್ಲಸ್ ಅಹಿಂದ ಮತಗಳು ಕೈ ಹಿಡಿಯಲಿವೆ ಎಂದು ಈ ನಾಯಕರು ಹೇಳಿದ್ದು, ಇಂತಹ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಜಾತಿಗಣತಿಯ ವರದಿಯನ್ನು ಬಿಡುಗಡೆ ಮಾಡದೆ ಇರಲು ತೀರ್ಮಾನಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

cast census congress government ಚುನಾವಣೆ ಅಹಿಂದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ