ಬಾಂಬ್ ನಾಗ ಮತ್ತು ಆತನ ಪುತ್ರರ ಬಂಧನ

bomb naga and his sons taken into judicial custody

30-03-2018

ಬೆಂಗಳೂರು: ಸಹೋದರನ ಪತ್ನಿ ಮತ್ತು ಅವರ ಮಗಳ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದ ರೌಡಿ ವಿ.ನಾಗರಾಜ್ ಹಾಗೂ ಆತನ ಇಬ್ಬರು ಪುತ್ರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಹೋದರನ ಪತ್ನಿ ಚಾಮುಂಡೇಶ್ವರಿ ಬೆದರಿಕೆ ಬಗ್ಗೆ ನೀಡಿದ್ದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡ ಶ್ರೀರಾಮಪುರ ಪೊಲೀಸರು ನಾಗರಾಜ್, ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ನಿನ್ನೆ ಬಂಧಿಸಿ ತಡರಾತ್ರಿ ನ್ಯಾಯಧೀಶರ ಮುಂದೆ ಹಾಜರುಪಡಿಸಿದ್ದರು.

ನಾಗರಾಜ್, ಆತನ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಗೆ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕಳೆದ ವರ್ಷ ಸಾವನ್ನಪ್ಪಿದ್ದ ತಮ್ಮ ಧರ್ಮನ ಹೆಸರಿನಲ್ಲಿ ನಗರದಲ್ಲಿ ಮನೆ ಇದೆ. ಅಲ್ಲಿ ಅವರ ಪತ್ನಿ ಚಾಮುಂಡೇಶ್ವರಿ ಹಾಗೂ ಮಗಳು ವಾಸವಿದ್ದಾರೆ. ಅದನ್ನು ತನ್ನ ಹೆಸರಿಗೆ ಬರೆಯುವಂತೆ ಪೀಡಿಸುತ್ತಿದ್ದ ನಾಗರಾಜ್, ಮನೆಗೆ ನುಗ್ಗಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.

ಇತ್ತೀಚೆಗೆ ಮನೆಗೆ ಹೋಗಿದ್ದ ವೇಳೆ ತಾಯಿ ಮಗಳ ಮೇಲೆ ಹಲ್ಲೆ ಮಾಡಿದ್ದ ನಾಗರಾಜ್ ಹಾಗೂ ಆತನ ಮಕ್ಕಳು, `ಆಸ್ತಿಯನ್ನೆಲ್ಲ ನಮಗೆ ಕೊಟ್ಟು ಊರು ಬಿಟ್ಟು ಹೋಗಿ. ಇಲ್ಲದಿದ್ದರೆ, ನಿಮ್ಮ ಮೇಲೆ ಸಾರ್ವಜನಿಕವಾಗಿ ಅತ್ಯಾಚಾರ ಮಾಡುತ್ತೇವೆ. ನೀವು ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಪೊಲೀಸರಿಗೆ ದೂರು ನೀಡಿ ಮರ್ಯಾದೆ ತೆಗೆಯುತ್ತೇವೆ. ಸ್ವಲ್ಪ ದಿನವಾದ ನಂತರ ಕೊಲೆ ಮಾಡುತ್ತೇವೆ' ಎಂದು ಬೆದರಿಕೆ ಹಾಕಿದ್ದರು.

ಇದರಿಂದ ನೊಂದ ಚಾಮುಂಡೇಶ್ವರಿ, ಮಗಳ ಸಮೇತ ಠಾಣೆಗೆ ಬಂದು ದೂರು ಕೊಟ್ಟಿದ್ದರು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು. ಕಳೆದ ವರ್ಷ ಉದ್ಯಮಿಗಳನ್ನು ಅಪಹರಿಸಿ ಹಣ ಸುಲಿಗೆ ಮಾಡಿದ್ದ ಆರೋಪದಡಿ ನಾಗರಾಜ್ ಹಾಗೂ ಮಕ್ಕಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಪ್ರಕರಣದಲ್ಲಿ ಮೂವರಿಗೂ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.


ಸಂಬಂಧಿತ ಟ್ಯಾಗ್ಗಳು

Bomb Naga Threaten ಬೆದರಿಕೆ ರೌಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ