ಲೋಕಸಭೆಗೆ ಮತ್ತೆ ಸ್ಪರ್ಧಿಸುವುದಿಲ್ಲ: ಹೆಚ್.ಡಿ.ದೇವೇಗೌಡ



30-03-2018

ಬೆಂಗಳೂರು: ನಾನು‌ ಮುಂದಿನ ಲೋಕಸಭೆ ಚುನಾವಣೆಗೆ ನಿಲ್ಲಲ್ಲ, ನಾನು ವ್ಹೀಲ್ ಚೇರ್ ನಲ್ಲಿ ಸಂಸತ್ಗೆ ಹೋಗಲು ಬಯಸಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸ್ಪಷ್ಟಪಡಿಸಿದ್ದಾರೆ. ಹಾಸನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಹೆಚ್.ಡಿ.ದೇವೇಗೌಡ, ಜಿಲ್ಲೆಯ ನಮ್ಮ ಪಕ್ಷದ ನಾಯಕರ ಅಭಿಪ್ರಾಯ ಕೇಳುವೆ ಅವರು ಸ್ಪರ್ಧಿಸಿ ಎಂದರೆ ಸ್ಪರ್ಧಿಸುವೆ, ಇಲ್ಲವೆ ತಮ್ಮ ಮೊಮ್ಮಗ ಪ್ರಜ್ವಲ್ನನ್ನು ಲೋಕಸಭೆಗೆ ಕಳಿಸಬೇಕು ಎಂಬ ಆಸೆ ಇದೆ ಎಂದು ದೇವೇಗೌಡ ಮನದಿಂಗಿತ ಹೊರಹಾಕಿದರು.

ಮೊಮ್ಮಗ ವಿದ್ಯಾವಂತ, ಕೊಂಚ ದುಡುಕು ಬುದ್ಧಿ‌ ಅಷ್ಟೆ ನನ್ನ ಬಿಟ್ಟು ಬೇರೆಯವರು ಸ್ಪರ್ಧೆ ಮಾಡಿದರೆ ಸ್ವಾಗತ, ಇಲ್ಲವಾದ್ರೆ ಪ್ರಜ್ವಲ್ನನ್ನು ಮಗನೆಂದು ತಿಳಿದು ಗೆಲ್ಲಿಸಲಿ ಎಂದು ದೇವೇಗೌಡರು ಮನವಿ ಮಾಡಿದರು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಅಧಿಕಾರ ಅವಧಿಯನ್ನು ಮತ್ತೆ ಮೂರು ತಿಂಗಳು ಮುಂದುವರಿಸಿರು ಕುರಿತು ಪ್ರತಿಕ್ರಿಯೆ ನೀಡಿದ ದೇವೇಗೌಡರು, ಚುನಾವಣೆಯಲ್ಲಿ ಅವರು ನಿಷ್ಪಕ್ಷಪಾತವಾಗಿ ನಡೆದುಕೊಳ್ಳಬೇಕು. ಇಲ್ಲವಾದರೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.

ನಾನು‌ ಚುನಾವಣಾ ಪೂರ್ವ ಸರ್ವೇ ನೋಡಿ ಸುಮ್ಮನೆ ಕೂರೋದಿಲ್ಲ, ಈ ಸಾರಿ‌ ಕಾಂಗ್ರೆಸ್, ಬಿಜೆಪಿ ಬಿಟ್ಟು ಸರಕಾರ ಮಾಡಲೇಬೇಕು ಎಂಬ ಹಠ ನನ್ನದು. 115 ಸ್ಥಾನ ಗೆಲ್ಲುವುದು ನನ್ನ ಟಾರ್ಗೆಟ್. ಚುನಾವಣೆಗೆ ಇನ್ನೂ 45 ದಿನ ಇದೆ ಅಷ್ಟು ದಿನ ವಿರಮಿಸದೇ ನಾನು ರಾಜ್ಯ ಸುತ್ತುತ್ತೇನೆ ಎಂದು ದೇವೇಗೌಡರು ತಿಳಿಸಿದರು.

ರಾಜ್ಯಕ್ಕೆ ನಾನೂ ಅಲ್ಪ ಸ್ವಲ್ಪ ಕೆಲಸ ಮಾಡಿದ್ದೇನೆ, ಸಾಮಾಜಿಕ ನ್ಯಾಯದ ಬಗ್ಗೆ ಬೇರೆಯವರಿಂದ ಹೇಳಿಸಿಕೊಳ್ಳಬೇಕಿಲ್ಲ. ನಮ್ಮಲ್ಲಿ ಹಣದ ಕೊರತೆ ಇದೆ, ಆದರೆ ಹೋರಾಟ ನಿಲ್ಲಲ್ಲ ಎಂದು ದೇವೇಗೌಡರು ಸ್ಪಷ್ಟಪಡಿಸಿದರು. ಪಕ್ಷ ತೊರೆಯುವವರ ಬಗ್ಗೆ ನಾನು ತಲೆ ಕೆಡಿಸಿ ಕೊಳ್ಳುವುದಿಲ್ಲ, ಕುಮಾರಸ್ವಾಮಿಯನ್ನು ನಾನು ಸಿಎಂ ಮಾಡಬೇಕು ಎನ್ನುತ್ತಿಲ್ಲ, ಜನರ ಬಾಯಲ್ಲಿ ಇದೆ ಎಂದು ದೇವೇಗೌಡರು ಹೇಳಿದರು.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಮೈಸೂರು ರಾಜ ವಂಶಸ್ಥರ ಭೇಟಿ ಕುರಿತು, ಯಾವ ಕಾರಣಕ್ಕೆ ಹೋಗಿದ್ದಾರೋ ಗೊತ್ತಿಲ್ಲ. ದಲಿತರ ಜೊತೆ ಷಾ‌ ಭೋಜನ, ಈಗಲಾದರೂ ಅವರಿಗೆ ಈ ಬುದ್ಧಿ ಬಂದಿದ್ದಕ್ಕೆ ಸಂತೋಷ ಎಂದು ಕಾಲೆಳೆದರು. ಇದು‌ ನನ್ನ ಕೊನೆಯ‌‌‌ ಚುನಾವಣೆ ಎಂಬ ಸಿಎಂ ‌ಹೇಳಿಕೆಗೆ, ಈ‌ ರೀತಿಯ ಹೇಳಿಕೆಯನ್ನು ಯಾರೂ‌ ಗಂಭೀರವಾಗಿ ತೆಗೆದು ಕೊಳ್ಳಬಾರದು, ಕಳೆದ ಬಾರಿಯೂ ಸಿದ್ದರಾಮಯ್ಯ ಹೀಗೇ ಹೇಳಿದ್ದರು. ಅವರ ಬಳಿ ಅಧಿಕಾರ ಇದೆ, ಅದಕ್ಕೆ ಯಾರು ಏನೇ‌ ಮಾಡಿದರು ಗೆದ್ದೇ ಗೆಲ್ಲುವೆ ಎನ್ನುತ್ತಿದ್ದಾರೆ, ನಾನು‌ ಮಾತ್ರ ನಮ್ಮ ಅಭ್ಯರ್ಥಿ ಜಿ.ಟಿ.ದೇವೇಗೌಡರ ಪರ ಹೋರಾಟ ಮಾಡುವೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

H.D.Deve Gowda Lok Sabha ವ್ಹೀಲ್ ಚೇರ್ ಸಂಸತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ