ಚುನಾವಣೆ: ಟಿಕೆಟ್ ಬೇಟೆಯಲ್ಲಿ ಅಪ್ಪ-ಮಕ್ಕಳು

karnataka election: Hereditary politics and curiosity

30-03-2018

ಬೆಂಗಳೂರು: ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಜೋಡಿ ಅಪ್ಪ-ಮಕ್ಕಳ ಸ್ಪರ್ಧೆ ಕಾರಣಕ್ಕಾಗಿ ದೇಶದ ಗಮನ ಸೆಳೆಯುವ ಸಾಧ್ಯತೆಗಳಿವೆ. ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಯ ಅನೇಕ ನಾಯಕರು ತಮ್ಮ ಜೊತೆಗೆ ತಮ್ಮ ಮಕ್ಕಳಿಗೂ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್  ಬೆನ್ನಿಗೆ ಬಿದ್ದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ಟಿಕೆಟ್ ನೀಡಿದರೆ ತಮ್ಮ ಪುತ್ರ ಡಾ.ಯತೀಂದ್ರ ವರುಣಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂದು ಈಗಾಗಲೇ ಹೇಳಿದ್ದಾರೆ.

ಗೃಹ ಸಚಿವ ರಾಮಲಿಂಗಾರೆಡ್ಡಿ ತಮ್ಮ ಪುತ್ರಿ ಸೌಮ್ಯ ರೆಡ್ಡಿಗೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್ ಕೇಳುತ್ತಿದ್ದಾರೆ. ಅದಕ್ಕಾಗಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರೊಂದಿಗೆ ಮಾತಿನ ಚಕಮಕಿಯನ್ನು ನಡೆಸಿದ್ದಾರೆ. ಸೌಮ್ಯ ರೆಡ್ಡಿ ಅವರಿಗೆ ಜಯನಗರ ಬದಲು ಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಸಿಗುವ ಸಾಧ್ಯತೆ ಇದೆ. ಅದೇ ರೀತಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸಹ ತಮ್ಮ ಮಗನಿಗೆ ಈ ಬಾರಿಯಾದರೂ ಸ್ಪರ್ಧೆಗೆ ಅವಕಾಶ ನೀಡುವಂತೆ ಲಾಬಿ ನಡೆಸುತ್ತಿದ್ದಾರೆ.

ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಸಹ ಈ ಬಾರಿ ಯಾದರೂ ತಮ್ಮ ಪುತ್ರಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ ಮನವೊಲಿಕೆಗೆ ಮುಂದಾಗಿದ್ದಾರೆ. ಕಾಂಗ್ರೆಸ್‌ನ ಮತ್ತೊಬ್ಬ ನಾಯಕಿ ಮಾರ್ಗರೇಟ್ ಆಳ್ವ ತಮ್ಮ ಪುತ್ರ ನಿವೇದಿತ್ ಆಳ್ವಗೆ ಶಾಂತಿನಗರ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಬಯಸಿದ್ದಾರೆ. ಮಾಜಿ ಸಚಿವೆ ಮೋಟಮ್ಮ ಮಗಳಿಗೆ ಮೂಡಿಗೆರೆ ಟಿಕೆಟ್ ಕೇಳುತ್ತಿದ್ದಾರೆ.

85 ವರ್ಷ ವಯಸ್ಸಿನ ಸಮೀಪ ಬಂದಿರುವ ಕಾಗೋಡು ತಿಮ್ಮಪ್ಪ ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ತಮ್ಮ ಬದಲಿಗೆ ಮಗಳಿಗೆ ನೀಡುವಂತೆ ಕೇಳುತ್ತಿದ್ದಾರೆ. ಎಲ್ಲರಿಗೂ ಈಗಾಗಲೇ ತಿಳಿದಿರುವಂತೆ ಸಚಿವ ಎಚ್.ಸಿ.ಮಹಾದೇವಪ್ಪ ತಮ್ಮ ಪುತ್ರ ಸುನೀಲ್ ಬೋಸ್ ಗೆ ಟಿ.ನರಸೀಪುರದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಇನ್ನು ಬಿಜೆಪಿ ನಾಯಕರೂ ತಮ್ಮ ಮಕ್ಕಳಿಗೆ ಟಿಕೆಟ್ ದೊರೆಕಿಸಿ ಕೊಡುವ ಯತ್ನದಲ್ಲಿ ಹಿಂದೆ ಬಿದ್ದಿಲ್ಲ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಎರಡನೇ ಮಗ ಬಿ.ವೈ.ರಾಘವೇಂದ್ರರನ್ನು ವರುಣಾ ಕ್ಷೇತ್ರದಿಂದ ಕಣಕ್ಕಿಳಿಸಲು ಉತ್ಸುಕರಾಗಿದ್ದಾರೆ.

ಬಿಜೆಪಿಯ ರಾಮಚಂದ್ರೇಗೌಡ ತಮ್ಮ ಪುತ್ರ ಸಪ್ತಗಿರಿಗೌಡರನ್ನು ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ಅದಕ್ಕಾಗಿ ಪಕ್ಷದ ಅನೇಕ ಮುಖಂಡರು ಹಾಗೂ ಆರ್.ಎಸ್.ಎಸ್ ನಾಯಕರ ಮನವೊಲಿಕೆ ಯತ್ನ ನಡೆಸಿದ್ದಾರೆ.

ಗೋವಿಂದರಾಜ ನಗರ ಹಾಗೂ ವಿಜಯನಗರ ವಿಧಾನ ಸಭಾ ಕ್ಷೇತ್ರಗಳನ್ನು ಈಗಾಗಲೇ ಕಳೆದು ಕೊಂಡಿರುವ ವಿ.ಸೋಮಣ್ಣ ತಮ್ಮ ಪುತ್ರ ಅರುಣ್ ಸೋಮಣ್ಣಗೆ ಅರಸೀಕೆರೆ ಟಿಕೆಟ್ ಬಯಕೆಯಲ್ಲಿದ್ದಾರೆ. ಆದರೆ, ಅರುಣ್ ಗೆ ಅರಸೀಕೆರೆ ಬದಲು ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ದೊರೆಯುವ ಸಾಧ್ಯತೆ ಇದೆ. ಈ ಎಲ್ಲಾ ನಿರೀಕ್ಷೆ, ಲಾಬಿ, ತಂತ್ರಗಳು ಎಷ್ಟರ ಮಟ್ಟಿಗೆ ಯಶ ಕಾಣಲಿವೆ ಎನ್ನುವುದನ್ನು ಕಾಣಲು ಹೆಚ್ಚಿನ ದಿನಗಳೇನು ಕಾಯಬೇಕಿಲ್ಲ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ