ಕುಮಾರ ಸ್ವಾಮಿಗೆ ಸಿಎಂ ಸಿದ್ದರಾಮಯ್ಯ ಟಾಂಗ್

cm Siddaramaiah stared election campain at mysore

29-03-2018

ಬೆಂಗಳೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಿಂದ ನಾನು ಎಷ್ಟು ಬಾರಿ ಸ್ಪರ್ಧೆ ಮಾಡಿದ್ದೇನೆ ಎಂಬುದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರಿಗೆ ಗೊತ್ತಿದೆಯೇ ? ನಾನು ಎಳು ಬಾರಿ ಸ್ಪರ್ಧೆ ಮಾಡಿ ಐದು ಬಾರಿ ಗೆದ್ದಿದ್ದೇನೆ. ಇದೆಲ್ಲವೂ ಅವರಿಗೆ ಗೊತ್ತಿದೆಯೇ ? ಕುಮಾರಸ್ವಾಮಿ ಅವರಿಂದ ನಾನು ಪಾಠ ಕಲಿಯಬೇಕೇ ?ಎಂದು ಮೈಸೂರು ಜಿಲ್ಲೆಯ ಪ್ರವಾಸದ ಲ್ಲಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ, ಉಪ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಚಾಮುಂಡೇಶ್ವರಿ ಕ್ಷೇತ್ರದ ಮರು ಚುನಾವಣೆಯಲ್ಲಿ ನನ್ನ ವಿರುದ್ಧ ನಿಂತರು. ಆದರೆ ಗೆದ್ದವರು ಯಾರು? ಕಡಿಮೆ ಮತಗಳ ಅಂತರದಲ್ಲಿ ನಾನು ಆಗ ಗೆದ್ದಿರಬಹುದು. ಆದರೆ ಗೆಲುವು ಗೆಲುವೇ ಅಲ್ಲವೇ ? ಸಂತೇಮರಹಳ್ಳಿ  ಕ್ಷೇತ್ರದಲ್ಲಿ ಧ್ರುವನಾರಾಯಣ ಅವರು ಒಂದು ಮತದ ಅಂತರದಿಂದ ಜಯ ಸಾಧಿಸಿರಲಿಲ್ಲವೇ ?ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿನ ಎಲ್ಲಾ ಮತದಾರರು ನನಗೆ ಗೊತ್ತಿದ್ದಾರೆ. ಅವರ ಆಶೀರ್ವಾದ ನನ್ನ ಮೇಲಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ಮತದಾರರು ಅವರ ಮಾತು ಕೇಳಲಿಲ್ಲ. ಈಗ ಕೇಳುವರೇ ? ಎಂದು ಕಾಲೆಳಿದಿದ್ದಾರೆ. ಮರು ಚುನಾವಣೆಯಲ್ಲಿ ನನ್ನ ಜೊತೆ ಇದ್ದವರು ಈಗಲೂ ಇದ್ದಾರೆ. ಜೆಡಿಎಸ್ ಗೆ ಹೋಗಿದ್ದವರೂ ವಾಪಸ್ ಬಂದಿದ್ದಾರೆ. ಇದೆಲ್ಲದರ ಜೊತೆಗೆ ಮತದಾರರು ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಂಬಿಕೆ ಇದೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ನಾನು ಸ್ಪರ್ಧೆ ಮಾಡುತ್ತೇನೆ. ಅಲ್ಲಿಯೇ ಜನರ ಆಶೀರ್ವಾದ ಕೇಳುತ್ತೇನೆ.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಯಡಿಯೂರಪ್ಪ ಅವರು ನಂಜನಗೂಡು, ಗುಂಡ್ಲುಪೇಟೆ ಮರು ಚುನಾವಣೆಯಲ್ಲೂ ಹೇಳಿದ್ದರು. ಮರು ಚುನಾವಣೆ ಫಲಿತಾಂಶ ಮುಂಬರುವ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದಿದ್ದರು. ಹಾಗಾದರೆ ಆ ಚುನಾವಣೆ ಫಲಿತಾಂಶ ದಿಕ್ಸೂಚಿ ಆಗುವುದಿಲ್ಲವೇ ? ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಗೇಲಿಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ರಾಜ್ಯಕ್ಕೆ ಎಷ್ಟು ಬಾರಿಯಾದರೂ ಬರಲಿ. ಎಲ್ಲಿಗಾದರೂ ಭೇಟಿ ಕೊಡಲಿ. ಯಾರೊಂದಿಗಾದರೂ ಮಾತನಾಡಲಿ. ಅದು ಅವರ ವೈಯುಕ್ತಿಕ ವಿಚಾರ. ಅವರು ಏನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Siddaramaiah H.D kumaraswamy ವಿಶ್ವಾಸ ಅಧಿಕಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ