ಸಿ.ವಿ.ರಾಮನ್ ನಗರ: ಕಾಂಗ್ರೆಸ್ ಟಿಕೆಟ್ ಯಾರಿಗೆ?

CV Raman nagar: for whom Congress Ticket?

29-03-2018

ಬೆಂಗಳೂರು: ಈ ಬಾರಿ ರಾಜ್ಯ ವಿಧಾನಸಭೆಗೆ ನಡೆಯುವ ಚುನಾವಣೆಯಲ್ಲಿ ಬೆಂಗಳೂರಿನ ಸಿ.ವಿ.ರಾಮನ್ ನಗರ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಯಾರಿಗೆ ಈ ಬಾರಿಯ ಟಿಕೇಟ್? ಅವರ್ ಬಿಟ್ಟ್ ,ಇವರ್ಬಿಟ್ಟ್ ,ಇನ್ಯಾರಿಗೆ ಈ ಬಾರಿಯ ಕಾಂಗ್ರೆಸ್ ಟಿಕೆಟ್? ಇದು ಕಳೆದ 3-4 ತಿಂಗಳಿನಿಂದ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಕೇಳಿ ಬರುತ್ತಿರುವ ಬಹು ಚರ್ಚಿತ ವಿಷಯ. ಇದೆಲ್ಲಾ ಆರಂಭವಾಗಿದ್ದು ರಾಜ್ಯ ಸರ್ಕಾರದ ಪ್ರಭಾವಿ ಸಚಿವ ಹಾಗೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಚ್.ಸಿ.ಮಹಾದೇವಪ್ಪ ಅವರು ಈ ಬಾರಿ ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆ ವ್ಯಕ್ತಪಡಿಸಿದ ನಂತರ.

ಮಹಾದೇವಪ್ಪ 2013ರ ವಿಧಾನಸಭಾ ಚುನಾವಣೆಯಲ್ಲಿ ಟಿ.ನರಸೀಪುರ ಕ್ಷೇತ್ರದದಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಈ ಬಾರಿ ಟಿ.ನರಸೀಪುರ ಕ್ಷೇತ್ರವನ್ನು ತಮ್ಮ ಪುತ್ರ ಸುನೀಲ್ ಬೋಸ್ ಗೆ ಬಿಟ್ಟುಕೊಟ್ಟು ತಾವು ಸಿವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದಿಂದ ಅದೃಷ್ಟ ಪರೀಕ್ಷೆಗೆ ಇಳಿಯ ಬೇಕು ಎನ್ನವುದು ಅವರ ಲೆಕ್ಕಾಚಾರ.

ಅದಕ್ಕೆ ತಕ್ಕಂತೆ ಮಹಾದೇವಪ್ಪ ಸಿದ್ಧತೆಗಳನ್ನೂ ಆರಂಭಿಸಿದರು. ಅವರ ಭಾವಚಿತ್ರ ಇರುವ ಪೋಸ್ಟರ್ ಗಳು ಕ್ಷೇತ್ರದಾದ್ಯಂತ ರಾರಾಜಿಸಲಾರಂಭಿಸಿದವು. ಕಳೆದ ತಿಂಗಳು ಅಭಿವೃದ್ಧಿ ಕಾರ್ಯಗಳು ಹಾಗೂ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಗಾಗಿ ಸಿ.ವಿ.ರಾಮನ್ ನಗರ ಕ್ಷೇತ್ರಕ್ಕೆ ತೆರಳಿದ್ದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಸಹ ಪರೋಕ್ಷವಾಗಿ ಮಹಾದೇವಪ್ಪ ಅವರೇ ಅಭ್ಯರ್ಥಿ ಎನ್ನುವ ಸೂಚನೆ ನೀಡಿದ್ದರು. ಬಹುಕಾಲದ ಟಿಕೆಟ್ ಆಕಾಂಕ್ಷಿ ಹಾಗೂ ಕಳೆದ ಬಾರಿ ಸೋಲುಂಡಿದ್ದ ಪಿ.ರಮೇಶ್ ದೂರ ಉಳಿದಿದ್ದರು.

ಮುಖ್ಯ ಮಂತ್ರಿಗಳ ಕ್ಷೇತ್ರ ಭೇಟಿಯ ನಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಒಡೆದ ಮನೆಯಂತಾಯಿತು. ಅಂದರೆ ಒಂದು ಮನೆ ಮೂರು ಬಾಗಿಲು ಎನ್ನುವಂತಾಯಿತು. ಕಳೆದ ಚುನಾವಣೆಯಲ್ಲಿ ಪರಾಭವ ಗೊಂಡಿದ್ದ ಪಿ.ರಮೇಶ್ ಅಂದಿನಿಂದಲೇ ಚುನಾವಣಾ ಸಿದ್ಧತೆ ಆರಂಭಿಸಿದ್ದರು. ಅದಕ್ಕಾಗಿ ಸಾಕಷ್ಟು ಹಣವನ್ನೂ ಖರ್ಚು ಮಾಡಿದ್ದರು. ಮಹಾದೇವಪ್ಪನವರ ದಿಢೀರ್ ಪ್ರವೇಶ ಅವರನ್ನು ದಿಕ್ಕೆಡಿಸಿತ್ತು. ಟಿಕೇಟ್ ಕೈತಪ್ಪುವ ಭೀತಿಯಲ್ಲಿ ರಮೇಶ್ ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ್ ರನ್ನು ಭೇಟಿ ಮಾಡಿ ತಮಗೇ ಈ ಬಾರಿ ಟಿಕೆಟ್ ನೀಡುವಂತೆ ಅದಕ್ಕಾಗಿ ತಾವು ನಡೆಸಿರುವ ಸಿದ್ಧತೆಗಳನ್ನು ವಿವರಿಸಿದ್ದರು.

ಈ ಮಧ್ಯೆ, ಬೆಂಗಳೂರಿನ ಮೇಯರ್ ಸಂಪತ್ ರಾಜ್ ತಮಗೆ ಸಿ.ವಿ.ರಾಮನ್ ನಗರ ಇಲ್ಲವೇ ಪಕ್ಕದ ಪುಲಿಕೇಶಿ ನಗರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಟಿಕೇಟ್ ನೀಡುವಂತೆ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಎಚ್.ಸಿ.ಮಹಾದೇವಪ್ಪ ಕಳೆದ ವಾರ ತಾವು ಟಿ.ನರಸೀಪುರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಆದರೂ, ಈ ಬಾರಿ ಸಿ.ವಿ.ರಾಮನ್ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರು? ಯಾರಿಗೆ ಈ  ಬಾರಿ ಕಾಂಗ್ರೆಸ್ ಟಿಕೇಟ್ ಅನ್ನುವ ಕುತೂಹಲ ಮಾತ್ರ ಮುಂದುವರಿದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ