ಸ್ವ ಕ್ಷೇತ್ರದಿಂದ ಸಿಎಂ ಚುನಾವಣಾ ಪ್ರಚಾರ ಆರಂಭ

cm siddaramaiah Election campaign begin

29-03-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಂಡ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮಮೊದಲ ಚುನಾವಣಾ ಪ್ರಚಾರ ಪ್ರವಾಸವನ್ನು ಇಂದಿನಿಂದ ಅಧಿಕೃತವಾಗಿ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ಚುನಾವಣಾ ಕಣಕ್ಕಿಳಿಯಲಿರುವ ಮೈಸೂರಿನ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಿಂದಲೇ ಪ್ರವಾಸ ಆರಂಭಿಸಿರುವುದು ವಿಶೇಷ.

ಐದು ದಿನಗಳ ಕಾಲ ಸಿದ್ದರಾಮಯ್ಯ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳುವರು. ಇದರಲ್ಲಿ ಎರಡು ದಿನ ಬಂಡಿಪುರದ ರೆಸಾರ್ಟ್ ನಲ್ಲಿ ತಂಗಿ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ರಮ್ಮನಹಳ್ಳಿಯಿಂದ ಆರಂಭವಾಗಿದ್ದು, ಕಾಳಸಿದ್ದನ ಹುಂಡಿ, ಅಂಚ್ಯ, ಗಳಗರ ಹುಂಡಿ, ಮೆಲ್ಲಹಳ್ಳಿ, ಉದಬೂರು ಗ್ರಾಮಗಳಿಗೆ ಸಿಎಂ ಮೊದಲ ದಿನ ಭೇಟಿ ನೀಡಲಿದ್ದಾರೆ.

ಮುಖ್ಯಮಂತ್ರಿ ‌ಸಿದ್ದರಾಮಯ್ಯ ಅವರನ್ನು ಶತಾಯಗತಾಯ ಈ ಬಾರಿ ಚುನಾವಣೆಯಲ್ಲಿ ಸೋಲಿಸಲೇ ಬೇಕೆಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ , ಅಧ್ಯಕ್ಷ ಎಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಷಾ ಪಣತೊಟ್ಟಿರುವ ಹಿನ್ನೆಲೆಯಲ್ಲಿ ಸರ್ಧೆಯನ್ನು ಸಿದ್ದರಾಮಯ್ಯ ಗಂಭೀರವಾಗಿ ತೆಗೆಕೊಂಡಿರುವುದನ್ನು ಮತ್ತು ಗೆಲುವು ಅಷ್ಟು ಸುಲಭವಲ್ಲ ಎಂಬುದನ್ನು ಅರ್ಥ ಮಾಡಿಕೊಂಡಿರುವುದನ್ನು ಅವರ ಈ ಪ್ರವಾಸ ಹೇಳುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿರುವ ಮೈಸೂರು ಭಾಗದ ಪ್ರಬಲ ದಲಿತ ನಾಯಕ ಶ್ರೀನಿವಾಸ್ ಪ್ರಸಾದ್ ಹಾಗೂ ಜೆಡಿಎಸ್ ಗೆ ಸೇರ್ಪಡೆಯಾಗಿರುವ ಎಚ್.ವಿಶ್ವನಾಥ್ ಸಹ ಈ ಬಾರಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇ ಬೇಕೆಂದು ಹಟಕ್ಕೆ ಬಿದ್ದಿದ್ದಾರೆ.

ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದ ಪ್ರಕಾರ ಒಕ್ಕಲಿಗರು, ಲಿಂಗಾಯತರು, ನಾಯಕರು ನಂತರ ಕುರುಬರು, ದಲಿತ ಮತದಾರರು ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜಾತಿ ಲೆಕ್ಕಾಚಾರದ ಪ್ರಕಾರವೇ ಚುನಾವಣೆ ನಡೆಯುವುದರಿಂದ ಈ ಬಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಬಾರಿ ಗೆಲವು ಸುಲಭವಲ್ಲ ಎನ್ನುವುದು ಅವರ ವಿರೋಧಿಗಳ ಲೆಕ್ಕಾಚಾರ. ಆದರೆ, ಸಿದ್ದರಾಮಯ್ಯ  ಅವರು ಜೆಡಿಎಸ್ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಾಗ ಎಚ್.ಡಿ.ದೇವೇಗೌಡ ಕುಟುಂಬ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಭಾರೀ ಪ್ರತಿರೋಧ, ತಂತ್ರಗಳ ನಡುವೆಯೂ ಸಿದ್ದರಾಮಯ್ಯ ಅವರಿಗೆ ವಿಜಯಲಕ್ಷ್ಮಿ ಒಲೆದಿದ್ದಳು. ಹಾಗಾಗಿ, ಸಿದ್ದರಾಮಯ್ಯ ಅವರಿಗೇ ಈ ಬಾರಿಯೂ ಗೆಲವು ಖಚಿತ ಎನ್ನುವುದು ಅವರ ಅಭಿಮಾನಿಗಳ ಹಾಗೂ ಸ್ವತಃ ಸಿದ್ದರಾಮಯ್ಯ ಅವರ ವಿಶ್ವಾಸ.

ಒಟ್ಟಿನಲ್ಲಿ, ರಾಜ್ಯದ ಲ್ಲಿ ಕಾಂಗ್ರೆಸ್ ಪಕ್ಷ ವನ್ನು ಮತ್ತೆ ಅಧಿಕಾರಕ್ಕೆತರಲೇ ಬೇಕಾದ ಒತ್ತಡದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಾದ್ಯಂತ ಚುನಾವಣಾ ಪ್ರಚಾರ ಆರಂಭಿಸುವ ಮುನ್ನ ತಾವು ಕಣಕ್ಕಿಳಿಯಲಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ , ತಮ್ಮ ಪುತ್ರ ಡಾ.ಯತೀಂದ್ರ ಸ್ಪರ್ಧಿಸಲಿರುವ ವರುಣ ಕ್ಷೇತ್ರ ಸೇರಿದಂತೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ  ಕಾಂಗ್ರೆಸ್ ಪಕ್ಷದತ್ತ ಮತದಾರರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ