ಮೋಜಿಗಾಗಿ ಸುಲಿಗೆ, ಅಪಹರಣ: ನಾಲ್ವರ ಬಂಧನ

extortions for fun life: 2 arrested

27-03-2018

ಬೆಂಗಳೂರು: ಸ್ಟುಡಿಯೋ ಆರಂಭಿಸಲು ಹಣ ಹೊಂದಿಸಿಕೊಂಡಿದ್ದ ಛಾಯಾಗ್ರಾಹಕರೊಬ್ಬರನ್ನು ಕಾರಿನಲ್ಲಿ ಅಪಹರಿಸಿ ಅಕ್ರಮ ಬಂಧನಲ್ಲಿಟ್ಟುಕೊಂಡು 3ಲಕ್ಷದವರೆಗೆ ಹಣದೋಚಿದ್ದ ನಾಲ್ವರು ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.

ಕೃತ್ಯ ನಡೆದ ಕೇವಲ 24 ಗಂಟೆಗಳ ಅವಧಿಯಲ್ಲಿ ಆರೋಪಿಗಳಾದ ಕೆಂಬತ್ತಹಳ್ಳಿಯ ಮಧು ಕಿರಣ್ ಅಲಿಯಾಸ್ ಮಧು (32), ಮುನೇಶ್ವರ ಲೇಔಟ್‍ನ ಮಂಜುನಾಥ್ (29), ದೊಡ್ಡಕಲ್ಲಸಂದ್ರದ ಆನಂದ(26), ಜಿಗಣಿಯ ಚಿನ್ನಯ್ಯಪಾಳ್ಯ ನರೇಂದ್ರ (24) ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ

ಬಂಧಿತರಿಂದ 2 ಲಕ್ಷ 30 ಸಾವಿರ ನಗದು, 2 ಚಿನ್ನದ ಸರ, ಒಂದು ಉಂಗುರ, ಮೊಬೈಲ್ ಹಾಗೂ ಕೃತ್ಯಕ್ಕೆ ಬಳಿಸಿದ ಮಹೀಂದ್ರ ಟಿಯುವಿ ಕಾರು, ವೇಗಾ ಬೈಕ್, 3 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಕೋಡಿಚಿಕ್ಕನಹಳ್ಳಿಯ ಫೋಟೋ ಗ್ರಾಫರ್ ಪ್ರತಾಪ್ ಹೊಸದಾಗಿ ಸ್ಟುಡಿಯೋ ಆರಂಭಿಸಲು ಸ್ನೇಹಿತರಿಂದ ಸಂಬಂಧಿಕರಿಂದ 3 ಲಕ್ಷದವರೆಗೆ ಹಣಪಡೆದುಕೊಂಡಿದ್ದರು. ಇನ್ನೇನು ಸ್ಟುಡಿಯೋ ಆರಂಭಿಸಲು ಸಿದ್ಧತೆ ನಡೆಸಿದ್ದರು. ಇವರಿಗೆ ಭಾರ್ಗವ ಎನ್ನುವ ಸ್ನೇಹಿತನಿದ್ದನು. ಕಳೆದ ಮಾರ್ಚ್ 10 ರಂದು ಮೊದಲು ಬಂಧಿತ ಆರೋಪಿಗಳು ಭಾರ್ಗವನನ್ನು ಅಪಹರಿಸಿ, ರಾತ್ರಿ 9ರ ವೇಳೆ ಆತನಿಂದ ಪ್ರತಾಪ್‍ಗೆ ಮೊಬೈಲ್ ಕರೆಮಾಡಿಸಿದ್ದರು.

ಭಾರ್ಗವ ತನ್ನ ಸಹೋದರಿಗೆ ಆರೋಗ್ಯ ಸರಿಯಿಲ್ಲ ಎಂದು ಕರೆ ಮಾಡಿದ ಕೂಡಲೇ ಕೊತ್ತನೂರು ದಿಣ್ಣೆಯ ಎಕ್ಸೆಸ್ ಬ್ಯಾಂಕ್ ಬಳಿ ಬಂದ ಪ್ರತಾಪ್‍ನನ್ನು ಆರೋಪಿ ಮಧುಕಿರಣ್ ಕಾರಿನಲ್ಲಿ ಎಲ್ಲ ಆರೋಪಿಗಳು ಸೇರಿ ಅಪಹರಿಸಿ ಮೈಲಸಂದ್ರ ದಿಣ್ಣೆಯಲ್ಲಿರುವ ಐಫೆಲ್ ಗ್ರೀನ್ ರೆಸಾರ್ಟ್‍ಗೆ ಕರೆದುಕೊಂಡು ಹೋಗಿ ಅಲ್ಲಿನ ಕೊಠಡಿಯೊಂದರಲ್ಲಿ ಅಕ್ರಮ ಬಂಧನಲ್ಲಿಟ್ಟು 80 ಸಾವಿರ ನಗದು, ಡೆಬಿಟ್ ಕಾರ್ಡ್ ಕಳುಹಿಸಿದ್ದು ಚಾಕು ತೋರಿಸಿ ಅದರ ಪೀನ್ ನಂಬರ್ ಪಡೆದುಕೊಂಡರು.

ಆ ಕಾರ್ಡ್‍ನಿಂದ 95 ಸಾವಿರ ರೂ.ಗಳನ್ನು ಡ್ರಾ ಮಾಡಿಕೊಂಡು ಚುಂಚಘಟ್ಟ ಮುಖ್ಯರಸ್ತೆಯ ಮೇಘ ಜ್ಯುವೆಲ್ಲರಿ ಶಾಪ್‍ನಲ್ಲಿ 1 ಲಕ್ಷ 50 ಸಾವಿರ ರೂ.ಗಳ ಚಿನ್ನಾಭರಣ ಖರೀದಿಸಿ ನಂತರ 25 ಸಾವಿರ ಡ್ರಾ ಮಾಡಿ, ಒಟ್ಟು 2 ಲಕ್ಷದ 72 ಸಾವಿರ ಹಣ ಪಡೆದು ಪೊಲೀಸರಿಗೆ ದೂರು ಕೊಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಬಿಟ್ಟು ಕಳುಹಿಸಿದ್ದರು.

ಪ್ರತಾಪ್ ಅಪಹರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೋಣೆನಕುಂಟೆ ಪೊಲೀಸ್ ಇನ್ಸ್ಪೆಕ್ಟರ್ ಸದಾನಂದ ಅವರ ನೇತೃತ್ವದ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ಕಾರ್ಯಾಚರಣೆ ನಡೆಸಿ, ಸಿಸಿಟಿವಿ ಕ್ಯಾಮರಾ, ದೃಶ್ಯಾವಳಿಗಳು ಇನ್ನಿತರ ಮಾಹಿತಿ ಸಂಗ್ರಹಿಸಿ ಕೃತ್ಯ ನಡೆದ 24 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಮಂಜುನಾಥ್ ಕೊಲೆ ಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ಬಿಟ್ಟರೆ ಉಳಿದೆಲ್ಲವ ಮೊದಲ ಬಾರಿಗೆ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡಿದ್ದು, ಮೋಜಿನ ಜೀವನ ಹಾಗೂ ಹಣದ ಆಸೆಗಾಗಿ ಪ್ರತಾಪ್ ಅವರನ್ನು ಅಪಹರಿಸಿ ಸುಲಿಗೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

 

 

 

 


ಸಂಬಂಧಿತ ಟ್ಯಾಗ್ಗಳು

kidnap robbery ಅಪಹರಿಸಿ ದೃಶ್ಯಾವಳಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ