ಕಾಂಗ್ರೆಸ್ ಗೆ ತಿರುಮಂತ್ರಕ್ಕೆ: ಅಮಿತ್ ಷಾ ಸೂತ್ರ!

Amith shah visited siddaganga mutt

26-03-2018

ಬೆಂಗಳೂರು: ಪ್ರತ್ಯೇಕ ಲಿಂಗಾಯಿತ– ವೀರಶೈವ ಲಿಂಗಾಯಿತ ಪ್ರತ್ಯೇಕ ಧರ್ಮ ಸ್ಥಾಪನೆಯ ನಾಡಿ ಮಿಡಿತ ಅರಿಯಲು ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ರಾಜ್ಯದ ಹಳೇ ಮೈಸೂರು ಮತ್ತು ಮಲೆನಾಡು ಪ್ರದೇಶಗಳಲ್ಲಿ ಮಠಾಧಿಪತಿಗಳ ಅಭಿಪ್ರಾಯ ಸಂಗ್ರಹಣೆ ಪ್ರಕ್ರಿಯೆ ಆರಂಭಿಸಿದ್ದಾರೆ. ಪಕ್ಷದ ರಾಜ್ಯ ಘಟಕದಲ್ಲಿರುವ ಆಂತರಿಕ ಕಲಹ ಶಮನಗೊಳಿಸಿ, ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು ಮಾಡಿದ ರಾಜ್ಯ ಸರ್ಕಾರದ ವಿರುದ್ಧ ನಿರ್ಣಾಯಕ ತಂತ್ರ ರೂಪಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಪ್ರತ್ಯೇಕ ಧರ್ಮ ವಿರೋಧಿಸುತ್ತಿರುವ ವೀರಶೈವ ಮಠಗಳಿಗೆ ಎಲ್ಲಾ ರೀತಿಯ ಶಕ್ತಿ ತುಂಬಿ, ಕಾಂಗ್ರೆಸ್ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ಅಣಿಗೊಳಿಸಲು ನಿರ್ಧರಿಸಿದ್ದಾರೆ. ಏಕಕಾಲಕ್ಕೆ ಪಕ್ಷದೊಳಗಿನ ದೌರ್ಬಲ್ಯ ಸರಿಪಡಿಸುವುದು. ಎದುರಾಳಿಯ ವಿರುದ್ಧ ಎಲ್ಲ ಬಲ ಉಪಯೋಗಿಸಿ ಪ್ರಹಾರ ಮಾಡುವ ಕುರಿತಂತೆಯೂ ಚರ್ಚೆ ಆರಂಭಿಸಿದ್ದಾರೆ.

ಲಿಂಗಾಯಿತ ಹಾಗೂ ವೀರಶೈವರನ್ನು ವಿಭಜಿಸಿ ಲಿಂಗಾಯಿತರಿಗೆ ಅಲ್ಪಸಂಖ್ಯಾತರ ಸ್ಥಾನಮಾನ ತರುವ ಮೂಲಕ ಒಂದು ಹಂತದಲ್ಲಿ ಬಿಜೆಪಿಯ ಮತಬ್ಯಾಂಕ್ ಒಡೆಯುವಲ್ಲಿ ಯಶಸ್ವಿಯಾಗಿರುವ ಕಾಂಗ್ರೆಸ್ ನಾಯಕರ ಪ್ರಯತ್ನಕ್ಕೆ ಹಾಗೂ ವಿಶೇಷ ಅಸ್ತ್ರವಾಗಿ ತಮ್ಮದಲ್ಲದ ಮತಬ್ಯಾಂಕನ್ನು ಗಿಟ್ಟಿಸಿಕೊಂಡು ಬೀಗುತ್ತಿರುವ ಕಾಂಗ್ರೆಸ್‍ಗೆ ತಿರುಮಂತ್ರ ಹೆಣೆಯಲು ಅಮಿತ್ ಷಾ ಒಂದು ಸೂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಸುತ್ತಲಿರುವ ಇವರು ಕಾಂಗ್ರೆಸ್‍ನ ಪ್ರಯತ್ನವನ್ನು ಮಣ್ಣುಪಾಲು ಮಾಡಲಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಿಕೊಳ್ಳುತ್ತಿದ್ದು, ಅದೇನಾಗುವುದೋ ಕಾದು ನೋಡಬೇಕಿದೆ. ಕೇಸರಿ ಬ್ರಿಗೇಡ್ ರಚಿಸಿರುವ ಮಾಸ್ಟರ್ ಪ್ಲ್ಯಾನ್ ಹಿಂದೆ ಎರಡೂ ಮತಬ್ಯಾಂಕ್‍ಗಳಿಂದಲೂ ಯಾರ ಕೈತಪ್ಪಿ ಹೋಗದಂತೆ ತಡೆಯಲು ಯೋಜನೆ ರೂಪಿಸಲಾಗಿದ್ದು, ಷಾ ಇದನ್ನು ಜಾರಿಗೆ ತರಲಿದ್ದಾರೆ ಎನ್ನಲಾಗುತ್ತಿದೆ.

ಅಮಿತ್ ಷಾ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಅವರ ಸೂಚನೆಯಂತೆ ಅದಾಗಲೇ ರಾಜ್ಯ ಬಿಜೆಪಿ ನಾಯಕರು ಮಠ ಮಾನ್ಯಗಳ ಉಸ್ತುವಾರಿ ಸಮಿತಿ ರಚಿಸಿದ್ದಾರೆ. ಲಿಂಗಾಯಿತ ಪ್ರತ್ಯೇಕ ಧರ್ಮದ ಶಿಫಾರಸಿನಿಂದ ಪಕ್ಷದ ಮತಬ್ಯಾಂಕ್ ಮೇಲೆ ಯಾವುದೇ ಪರಿಣಾಮ ಬೀರದಂತೆ ತಡೆಯಲು ಒಂದೊಂದೇ ಅಸ್ತ್ರವನ್ನು ಬಿಜೆಪಿ ಹುಡುಕುತ್ತಿದ್ದು, ಈ ಸಮಿತಿ ಇದರಲ್ಲಿ ಒಂದು.

ನಾಲ್ವರ ಸಮಿತಿ : ನಾಲ್ವರು ಸದಸ್ಯರ ಈ ಸಮಿತಿಯಲ್ಲಿ ಮೂವರು ವೀರಶೈವ ಲಿಂಗಾಯಿತ ಸಮುದಾಯದ ನಾಯಕರಿದ್ದಾರೆ. ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಶಿವಯೋಗಿ ಸ್ವಾಮಿ, ನಿವೃತ್ತ ಡಿಸಿಪಿ ಶಂಕರ ಬಿದರಿ, ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪೂರ್ ಅವರಿಗೆ ಸಮಿತಿಯಲ್ಲಿ ಸ್ಥಾನ ಕಲ್ಪಿಸಲಾಗಿದೆ. ಇವರಿಗೆ ಮಹತ್ವದ ಜವಾಬ್ದಾರಿ ನೀಡಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಅಜೀಂ ನಾಲ್ಕನೇ ಸದಸ್ಯರಾಗಿದ್ದಾರೆ. ಇವರು ಸಮುದಾಯದಲ್ಲಿ ಆಗಿರುವ ಒಡಕನ್ನು ಸರಿದೂಗಿಸುವ ಹಾಗೂ ಒಂದೊಮ್ಮೆ ಸರಿಪಡಿಸಲು ಸಾಧ್ಯವಾಗದ ಪಕ್ಷದಲ್ಲಿ ದೊಡ್ಡ ನಷ್ಟವಾಗದಂತೆ ನೋಡಿಕೊಳ್ಳುವ ಕಾರ್ಯ ಮಾಡಲಿದ್ದಾರೆ.

ಮಠಕ್ಕೆ ಭೇಟಿ : ಇನ್ನೊಂದೆಡೆ ಅಮಿತ್ ಷಾ ಮಠಮಾನ್ಯಗಳಿಗೆ ಭೇಟಿ ಮಾಡಲಿದ್ದು, ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶತಯುಷಿಗಳಾದ ಡಾ. ಶಿವಕುಮಾರ ಸ್ವಾಮೀಜಿಯವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆಯುವುದರೊಂದಿಗೆ ಷಾ ತಮ್ಮ ಪ್ರವಾಸ ಆರಂಭಿಸಿದರು. ಸ್ವಾಮೀಜಿಯವರೊಂದಿಗೆ ಸುಮಾರು 15 ನಿಮಿಷಗಳ ಮಾತುಕತೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅಮಿತ್ ಷಾ, ತಮ್ಮ ಈ ಭೇಟಿ ಪಕ್ಷದಲ್ಲಿ ಉತ್ಸಾಹವನ್ನು ತಂದಿದ್ದು, ಮುಂಬರುವ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಪಕ್ಷಕ್ಕೆ ಬಲ ತುಂಬಿದೆ ಎಂದು ಹೇಳಿದರು.


ಸಂಬಂಧಿತ ಟ್ಯಾಗ್ಗಳು

Amith shah lingayat ಉಸ್ತುವಾರಿ ವಿಧಾನ ಪರಿಷತ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ