ಕಾಂಗ್ರೆಸ್ ಕಿವಿಗೆ ವೇಣುನಾದ ..!

Kannada News

12-05-2017 442

ರಾಜ್ಯ ಕಾಂಗ್ರೆಸ್‍ನಲ್ಲೀಗ ಬದಲಾವಣೆಯ ಪರ್ವ. ಸವಾಲನ್ನು ನಿಭಾಯಿಸಲು ಅನುಸರಿಸಬೇಕಾದ ಕ್ರಮಗಳನ್ನು ರೂಪಿಸುವ ಸಮಯ. ಕಾರ್ಯಕರ್ತರಲ್ಲಿ ಹೊಸ ಹುರುಪು  ತುಂಬಲು ನಾಯಕರು ಪ್ರಯತ್ನಿಸುವ ಕಾಲ. ಮತದಾರರ ಮನಗೆಲ್ಲಲು ಅನುಸರಿಸಬೇಲಾದ ಕ್ರಮಗಳ ಬಗ್ಗೆ ಚಿಂತಿಸುವ ಘಳಿಗೆ.
ಇದಕ್ಕೆ ಪ್ರಮುಖ ಕಾರಣ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ಸರ್ಕಾರ ಮೇ 13ಕ್ಕೆ ನಾಲ್ಕು ವರ್ಷ ಆಡಳಿತಾವಧಿಯನ್ನು ಪೂರ್ಣಗೊಳಿಸಿ ಐದನೇ ವರ್ಷಕ್ಕೆ ಕಾಲಿಡುತ್ತಿದೆ. ಹೀಗಾಗಿ ಇದು ಚುನಾವಣಾ ವರ್ಷ. ಒಂದು ಲೆಕ್ಕಾಚಾರದಂತೆ ಈ ವರ್ಷ ಡಿಸೆಂಬರ್ ಅಂತ್ಯಾ ಇಲ್ಲವೇ ಬರುವ ವರ್ಷ ಜನವರಿ 2ನೇ ವಾರದಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಸಲು ಲೆಕ್ಕಾಚಾರ ಮತ್ತು ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಮತ್ತೊಂದೆಡೆ ಇಂತಹ ತಂತ್ರದ ಬದಲಿಗೆ ನಿಗಧಿಯಂತೆ ಐದು ವರ್ಷ ಅಧಿಕಾರವಧಿಯನ್ನು ಪೂರ್ಣಗೊಳಿಸುವುದು, ಆಯೋಗ ಏಪ್ರಿಲ್ ಆದಿಭಾಗದಲ್ಲಿ ಚುನಾವಣೆ ನಡೆಸಲಿದೆ. ಮೇ ಮೊದಲ ವಾರದೊಳಗೆ ನೂತನ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎನ್ನುವ ಲೆಕ್ಕಾಚಾರ. 
ಹೀಗಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಗೆಲುವು ಸಾಧಿಸಿ ಅಧಿಕಾರ ಚುಕ್ಕಾಣಿ ಹಿಡಿಯುವ ಲೆಕ್ಕಾಚಾರಗಳು ಆರಂಭವಾಗಿವೆ. ಆದರೆ ಇಂತಹ ಲೆಕ್ಕಚಾರಗಳು ಎಷ್ಟರ ಮಟ್ಟಿಗೆ ಕಾರ್ಯ ಸಾದ್ಯ ಎಂಬ ಪ್ರಶ್ನೆಗಳು ಕಾರ್ಯಕರ್ತರ ವಲಯದಲ್ಲಿ ಮೂಡುತ್ತಿದ್ದವು. ಅದಕ್ಕೆ ಪ್ರಮುಖ ಕಾರಣ ಹಿರಿಯ ನಾಯಕರಾದ ಜನಾರ್ಧನ ಪೂಜಾರಿ, ಸಿ.ಕೆ. ಜಾಫರ್ ಶರೀಫ್, ಹೆಚ್. ವಿಶ್ವನಾಥ್ ಸೇರಿದಂತೆ ಹಲವು ನಾಯಕರು ಸರ್ಕಾರ ಮತ್ತು ಪಕ್ಷದ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿಯೇ ಅಸಮದಾನ ವ್ಯಕ್ತಪಡಿಸುತ್ತಿದ್ದಾರೆ. ಇವರ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. 
ಪಕ್ಷದ ಪ್ರಭಾವಿ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಾಜಿ ಮಂತ್ರಿಗಳಾದ ಜೈ ಪ್ರಕಾಶ್ ಹೆಗಡೆ, ಕುಮಾರ್ ಬಂಗಾರಪ್ಪ ಸೇರಿಂತೆ ಹಲವರು ಪಕ್ಷ ತೊರೆದಿದ್ದಾರೆ. ಮತ್ತೊಂದೆಡೆಯಲ್ಲಿ ವಲಸಿಗರಿಗೆ ಉನ್ನತ ಹುದ್ದೆ ನೀಡಬೇಕೆಂಬ ಕೂಗು ಮುಂದುವರಿತಲೇ ಇದೆ. ಪಕ್ದ ಅಧ್ಯಕ್ಷ ಪರಮೇಶ್ವರ್ ಮತ್ತು ಪಕ್ಷದ ರಾಜ್ಯ ಘಟಕದ ಉಸ್ತುವಾರಿ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನಡುವಿನ ಮುಸುಕಿನ ಗುದ್ದಾಟ ಪಕ್ಷದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ. ಇಷ್ಟೊಂದು ವೈರುದ್ಯಗಳನ್ನಿಟ್ಟುಕೊಂಟು ತಾವು ಮತ್ತೆ ಅಧಿಕಾರಕ್ಕೆ ಬರಲು ಹೇಗೆ ಎಂಬ ಪ್ರಶ್ನೆ ಪಕ್ಷದ ಹಲವಾರು ಮಂದಿ ಕಾರ್ಯಕರ್ತರಲ್ಲಿ ಮೂಡಿತ್ತು.
ಅದರಲ್ಲೂ ಹಿರಿಯ ನಾಯಕರಾದ ಎಂ. ವಿ. ರಾಜಶೇಖರನ್. ಎಲ್. ಹನುಮಂತಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಪ್ರಮುಖ ನಾಯಕರನ್ನು ಬೇಟಿ ಮಾಡಿ ರಾಜ್ಯ ಕಾಂಗ್ರೆಸ್‍ನಲ್ಲಿರುವ ಎಲ್ಲಾ ಬಿನ್ನಮತಗಳಿಗೆ ಮಾಹಿತಿ ನೀಡಿದರು. ಇನ್ನು ಇದೇ ರೀತಿ ಮುಂದುವರೆದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ದೊಡ್ಡ ಬೆಲೆ ತೆತ್ತಬೇಕಾಗಲಿದೆ, ಪಕ್ಷ ಸಂಘಟನೆಯನ್ನು ಸರಿದಾರಿಗೆ ತರಬೇಕಿದೆ ಎಂಬ ಸಲಹೆ ನೀಡಿದರು. 
ಈ ಎಲ್ಲಾ ಸಲಹೆಗಳನ್ನು ಸ್ವೀಕರಿಸಿದ ಸೋನಿಯಾ ಮತ್ತು ಅಹಮದ್ ಪಟೇಲ್ ಕರ್ನಾಟಕದಲ್ಲಿನ ಕಾಂಗ್ರೆಸ್ ಮದ್ಯವರ್ತಿಗಳು ಇಂತಹ  ಸ್ವರೂಪ ಪಡೆಯಲು ಕಾರಣವೇನು ಎಂದು ತಮ್ಮದೇ ಮೂಲಗಳಿಂದ ಮಾಹಿತಿ ಸಂಗ್ರಹಿಸಲು ಆರಂಭಿಸಿದರು.
ಇದರ ನಡುವೆ ವಿಧಾನಪರಿಷತ್ ಸದಸ್ಯ ಗೋವಿಂದರಾಜು ಅವರ ಡೈರಿ ಪ್ರಕರಣ ಬಹಿರಂಗಗೊಂಡು ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸಿತು. ಡೈರಿಯನ್ನು ಬೆನ್ನು ಹತ್ತಿದ ಐಟಿ ಅಧಿಕಾರಿಗಳು ರಾಜ್ಯ ಮತ್ತು ಕೇಂದ್ರದ ಹಲವು ಕಾಂಗ್ರೆಸ್ ನಾಯಕರನ್ನು ವಿಚಾರಣೆಗೆ ಒಳಪಡಿಸಿದರು. ಈ ವೇಳೆ ದಿಗ್ವಿಜಯ್ ಸಿಂಗ್ ಕರ್ನಾಟಕದಲ್ಲಿ ನಡೆಸಿದ ವಹಿವಾಟಿನ ಸಮಗ್ರ ಮಾಹಿತಿ ಸೋನಿಯಾ ಮತ್ತು ರಾಹುಲ್ ಅವರನ್ನು ತಲುಪಿತು. 
ಇದರ ನಡುವೆ  ಪಕ್ಷ ಸಂಘಟನೆ ಕುರಿತಾಗಿ ರಾಹುಲ್ ಗಾಂಧಿ ಕರ್ನಾಟಕದ ಸಮಗ್ರ ವರದಿಯೊಂದನ್ನು ಪಡೆದುಕೊಂಡರು. ಅದರಲ್ಲಿ ರಾಜ್ಯದ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಪಕ್ಷ ಸಂಘಟನೆ ಕುರಿತು ನಡೆಸಿದ ಸಭೆಗಳ ವಿವರ ನೋಡಿ ಅಚ್ಚರಿಗೊಂಡರು. ದಿಗ್ವಿಜಯ್ ಸಿಂಗ್ ಪಕ್ಷ ಸಂಘಟನೆಗಾಗಿ ಬೆಂಗಳೂರಿನಲ್ಲಿ ಒಂದೆರಡು ಸಭೆಗಳನ್ನು ನಡೆಸಿದ್ದು ಬಿಟ್ಟರೆ ರಾಜ್ಯದ ಯಾವುದೇ ಬಾಗದಲ್ಲಿ ಪ್ರವಾಸ ಕೈಗೊಂಡಿರಲಿಲ್ಲ. ಯಾವುದೇ ಕಾರ್ಯಕರ್ತರ ಅಹವಾಲು ಕೇಳಿರಲಿಲ್ಲ. ಬೆಂಗಳೂರಿಗೆ ಬರುವಾಗ ಸಿಎಂ ಹಾಗೂ ಕೆಲವು ಮಂತ್ರಿಗಳನ್ನು ನೋಡಿ ದೆಹಲಿಯತ್ತ ಪ್ರಯಾಣ ಬೆಳಸಿದ್ದು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ ಎಂಬ ಮಾಹಿತಿ ಆ ವರದಿಯಲ್ಲಿತ್ತು.
ಮತ್ತೊಂದೆಡೆ ಜಾಫರ್ ಶರೀಫ್, ಜನಾರ್ಧನ್ ಪೂಜಾರಿ, ವಿಶ್ವನಾಥ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರೂ ಅವರನ್ನು ಸೌಜನ್ಯಕ್ಕಾದರೂ ಒಮ್ಮಯೂ ಮಾತನಾಡಿಸಿಲ್ಲ ಎಂಬ ಮಾಹಿತಿ ಕೂಡ ರಾಹುಲ್ ಕಿವಿಗೆ ಬಿತ್ತು. ಇದರ ಬೆನ್ನಲ್ಲೆ ಸೋನಿಯಾ ಅವರನ್ನು ಬೇಟಿ ಮಾಡಿದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಪರಮೇಶ್ವರ್ ರಾಜ್ಯದಲ್ಲಿ ಪಕ್ಷ ಸಂಘಟನೆಯ ಸಂಪೂರ್ಣ ಚಿತ್ರಣ ತೆರೆದಿಟ್ಟರು. ದಿಗ್ವಿಜಯ್‍ಸಿಂಗ್ ಪಕ್ಷ ಸಂಘಟನೆಯ ದೃಷ್ಠಿಯಿಂದ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ, ಚುನಾವಣಾ ವರ್ಷದಲ್ಲಿ ಇಂತಹ ನಾಯಕತ್ವ ಪಕ್ಷಕ್ಕೆ ಉಪಯೋಗವಾಗುವುದಿಲ್ಲ ಎಂದು ದೂರಿದರು.
ಇದನ್ನು ಗಂಭಿರವಾಗಿ ಪರಿಗಣಿಸಿದ ರಾಹುಲ್ ಮತ್ತು ಸೋನಿಯಾ ಕರ್ನಾಟಕ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್ ಅವರನ್ನು ಬಿಡುಗಡೆಗೊಳಿಸುವ ಪ್ರಯತ್ನ ಆರಂಭಿಸಿದರು. ಆದರೆ ಈ ವೇಳೆಗೆ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ವಿಧಾನ ಸಭೆಗೆ ಚುನಾವಣಾ ವೇಳಾ ಪಟ್ಟಿ ಪ್ರಕಟಗೊಂಡಿತ್ತು. ಈ ಪೈಕಿ ಗೋವಾ ಕೂಡ ಒಂದಾಗಿದ್ದು ಇದರ ಉಸ್ತುವಾರಿಯಾಗಿ ದಿಗ್ವಿಜಯ್ ಸಿಂಗ್ ಕಾರ್ಯನಿರ್ವಹಿಸುತ್ತಿದ್ದರು. ಚುನಾವಣಾ ಸಮಯದಲ್ಲಿ ಉಸ್ತುವಾರಿ ಬದಲಾವಣೆಯಂತಹ ನಿರ್ಧಾರ ಒಳ್ಳೆಯ ಕ್ರಮವಲ್ಲ ಎಂದು ಪ್ರಕ್ರಿಯೆಯನ್ನು ಮುಂದೂಡಿದರು.
ಇನ್ನೇನು ದಿಗ್ವಿಜಯ್ ಸಿಂಗ್ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿಯಿಂದ ಬದಲಾಗಲಿದ್ದಾರೆಂದು ನಿರೀಕ್ಷಿಸುತ್ತಿದ್ದವರಿಗೆ ಹಠಾತ್ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಅಚ್ಚರಿ ಮೂಡಿಸಿತು. ಸೋನಿಯಾ ಅವರ ಬಳಿ ಈ ಕುರಿತು ಹಿರಿಯ ನಾಯಕ ಆಸ್ಕರ್ ಫರ್ನಾಂಡೀಸ್ ತಮ್ಮ ಅಸಮಧಾನ ಹೊರಹಾಕಿದರು. ಸೋನಿಯಾ ಆಗ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನಾದರು. ಇದು ಎಲ್ಲರನ್ನೂ ಮತ್ತಷ್ಟು ಚಿಂತೆಗೀಡುಮಾಡಿತು. 
ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿತು. ಗೋವದಲ್ಲಿ ಕಾಂಗ್ರೆಸ್ ಬಹುಮತಗಳಿಸಿದರೂ ಸರ್ಕಾರ ರಚನೆಗೆ ಬೇಕಾದ ಸಂಖ್ಯೆ ತುಂಬಲು 3 ಮತಗಳ ಕೊರತೆ ಉಂಟಾಯಿತು. ಫಲಿತಾಂಶ ಹೊರಬಿದ್ದ ನಂತರ ಒರ್ವ ಪಕ್ಷೇತರ ಶಾಸಕ ಹಾಗು ಗೋಮಂತಕ್ ಪಕ್ಷಕ್ಕೆ ಸೇರಿದ ನಾಲ್ವರು ಕಾಂಗ್ರೆಸ್‍ಗೆ ಬೆಂಬಲ ನೀಡಲು ಮುಂದಾದರು ಆದರೆ, ಈ ಶಾಸಕರೊಂದಿಗೆ ಮಾತನಾಡಿ ಪ್ರಕ್ರಿಯೆ ನಡೆಸಬೇಕಿದ್ದ ಗೋವಾ ಕಾಂಗ್ರೆಸ್ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ನಾಪತ್ತೆಯಾಗಿದ್ದರು. ಸರ್ಕಾರ ರಚನೆಗೆ ಬೆಂಬಲ ನೀಡುವುದಾಗಿ ಹೇಳಿದ್ದ ತಮ್ಮೊಂದಿಗೆ ಯಾರೂ ಮಾತನಾಡುತ್ತಾರೆಂದು ತಿಳಿಯದೆ ಗೋಮಂತಕ್ ಪಕ್ಷದ ಶಾಸಕರು ಗೊಂದಲಕ್ಕೆ ಬಿದ್ದರೆ, ನೂತನವಾಗಿ ಆಯ್ಕೆಯಾದ ಕಾಂಗ್ರಸ್ ಶಾಸಕರು ಮುಂದೇನು ಮಾಡಬೇಕೆಂದು ತಿಳಿಯದೆ ಉಸ್ತುವಾರಿ ನಾಯಕ ದಿಗ್ವಿಜಯ್ ಸಿಂಗ್ ಅವರಿಗೆ ಹುಡುಕಾಟ ನಡೆಸಿದರೆ, ಅವರು ಹೊರವಲಯದ ರೆಸಾರ್ಟ್‍ನಲ್ಲಿ ಮೋಜಿನ ಕೂಟದಲ್ಲಿ ಪಾಲ್ಗೊಂಡಿದ್ದರು. ಮತ್ತೊಂದೆಡೆ ಕೇಂದ್ರ ರಕ್ಷಣಾ ಸಚಿವರಾಗಿದ್ದ ಮನೋಹರ ಪರಿಕ್ಕರ್ ಕಾಂಗ್ರೆಸ್‍ನ ಶಾಸಕರೂ ಸೇರಿ ಪಕ್ಷದ ಮತ್ತು ಗೋಮಂತಕ್ ಪಕ್ಷದ ಶಾಸಕರ ಜೊತೆ ಮಾತುಕತೆ ನಡೆಸಿ ಬಿಜೆಪಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲವನ್ನು ಕೋಢೀಕರಿಸುವಲ್ಲಿ ಯಶಸ್ವಿಯಾದರು.
ಬಹುಮತವಿದ್ದು ಸರ್ಕಾರ ರಚನೆಗೆ ಕೇವಲ ಮೂರು ಶಾಸಕರ ಆಗತ್ಯವಿದ್ದು ಬೆಂಬಲ ನೀಡಲು ಪಕ್ಷೇತರರು ಮುಂದೆ ಬಂದರೂ ಸೂಕ್ತ ರೀತಿಯ ತಂತ್ರಗಾರಿಕೆ ಹಾಗೂ ರಾಜಕೀಯ ಮುತ್ಸಧಿತನ ಪ್ರದರ್ಶಿಸದ ಪರಿಣಾಮ ಗೋವಾದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರುವಂತಾಯಿತು. ಇದಕ್ಕೆಲ್ಲ ದಿಗ್ವಿಜಯ್‍ಸಿಂಗ್ ಕಾರಣ ಎಂದು ಅವರ ವಿರೋಧಿಗಳು ಆರೋಪ ಮಾಡತೊಡಗಿದರು. ಆದರೂ ರಾಹುಲ್ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ದಿಗ್ವಿಜಯ್ ಸಿಂಗ್ ಅವರು ರಾಹುಲ್‍ಗೆ ಅತ್ಯಂತ ಆಪ್ತ. ಹೀಗಾಗಿ ಅವರು ಯಾವುದೇ ನಿರ್ಧಾರ ಗೈಗೊಳ್ಳುತ್ತಿಲ್ಲ ಎಂಬೆಲ್ಲಾ ವ್ಯಾಖ್ಯಾನಗಳು ಎಐಸಿಸಿ ಕಛೇರಿಯಲ್ಲಿ ಹರಿದಾಡ ತೊಡಗಿದವು. 
ಸರಿಸುಮಾರು ಇದೇ ಅವಧಿಯಲ್ಲಿ ಒಡಿಶಾದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಿತು. ಇದರಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದ್ದರೂ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಕಳೆದುಕೊಂಡಿತು. ಇದನ್ನು ನೆಪವಾಗಿಸಿಕೊಂಡು ಅಲ್ಲಿನ ಕಾಂಗ್ರೆಸ್ ಉಸ್ತುವಾರಿ ನಾಯಕ ಬಿ.ಕೆ.ಹರಿಪ್ರಸಾದ್ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜನಾಮೆ ನೀಡಿ ಉಸ್ತುವಾರಿ ಹುದ್ದೆಯಿಂದ ನಿರ್ಗಮಿಸಿದರು. ಅಷ್ಟೇ ಅಲ್ಲಾ ಈ ರೀತಿ ಇತರೇ ರಾಜ್ಯಗಳಲ್ಲೂ ಸೋಲಿನ ಹೊಣೆ ಹೊತ್ತು ಉಸ್ತುವಾರಿ ನಾಯಕರು ತಮ್ಮ ಸ್ಥಾನಗಳಿಗೆ ರಾಜನಾಮೆ ನೀಡಬೇಕು, ಎಐಸಿಸಿ ಪುನರ್‍ರಚನೆ ಮಾಡಲು ಸೋನಿಯಾ ಮತ್ತು ರಾಹುಲ್ ಅವರಿಗೆ ಮುಕ್ತ ಸ್ವಾತಂತ್ರ್ಯ ನೀಡಬೇಕೆಂದು ಹೇಳಿ ದಿಗ್ವಿಜಯ್ ಸಿಂಗ್ ರಾಜನಾಮೆ ಅಗತ್ಯತೆಯನ್ನು ಪ್ರತಿಪಾದಿಸಿದರು.
ಇದರ ಬೆನ್ನಲ್ಲೇ ಗೋವ ವಿಧಾನಸಭೆಗೆ ಆಯ್ಕೆಯಾದ ಕಾಂಗ್ರೆಸ್‍ನ ಮೂವರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾದರು. ಅವರು ಇದಕ್ಕಾಗಿ ಮಾಡಿದ ಒಂದೇ ಆರೋಪ ದಿಗ್ವಿಜಯ್ ಸಿಂಗ್ ಕಾರ್ಯತಂತ್ರ ಹಾಗೂ ಸಂಘಟನಾ ಚಾತುರ್ಯದ ವೈಫಲ್ಯ. ಅಷ್ಟೇ ಅಲ್ಲ ದಿಗ್ವಿಜಯ್ ಸಿಂಗ್ ಮೂರು ಬಾರಿ ಮದ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅಲ್ಲಿ ಇವರು ಸಂಘಟನೆಗೆ ಯಾವುದೇ ಗಮನಹರಿಸದ ಪರಿಣಾಮ ಈಗ ಕಾಂಗ್ರೆಸ್ ಅಲ್ಲಿ ಅತ್ಯಂತ ದಯನೀಯ ಪರಿಸ್ಥಿತಿಯಲ್ಲಿದೆ. ಇವರಿಗೆ ಹೇಗೆ ಪಕ್ಷ ಸಂಘಟನೆ ಮಾಡಬೇಕೆಂದೇ ತಿಳಿದಿಲ್ಲ ಎಂದು ಆರೋಪಿಸಿದರು. 
ಇಷ್ಟಾದರು ದಿಗ್ವಿಜಯ್ ಸಿಂಗ್ ತಮ್ಮ ವಿರುದ್ದದ ಯಾವುದೇ ಆರೋಪಗಳಿಗೆ ಉತ್ತರ ನೀಡಲಿಲ್ಲ. ಇದಾದ ಬಳಿಕ ಕರ್ನಾಟಕದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ ಈ ಉಪಚುನಾವಣೆಯ ಯಾವುದೇ ಕಾರ್ಯತಂತ್ರದ ಸಭೆಯಲ್ಲಿ ದಿಗ್ವಿಜಯ್ ಸಿಂಗ್ ಸಕ್ರಿಯವಾಗಿ ತೊಡಗಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಸರಿಯಾಗಿ ಮಾಜಿ ಸಂಸದ ಎಚ್. ವಿಶ್ವನಾಥ್ ಪಕ್ಷದ ಅಧ್ಯಕ್ಕೆ ಸೋನಿಯಾ ಅವರನ್ನು ಭೇಟಿ ಮಾಡಿ ದಿಗ್ವಿಜಯ್ ಸಿಂಗ್ ವಿರುದ್ದ ಕೆಲವು ಆರೋಪಗಳನ್ನು ದಾಖಲೆ ಸಮೇತ ವಿವರಿಸಿದರು.
ಇದೇ ಅವಧಿಯಲ್ಲಿ ದೆಹಲಿಯ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಕಾಂಗ್ರೆಸ್ ಮತ್ತೆ ಕಳಪೆ ಪ್ರದರ್ಶನ ಮಾಡಿತು. ಎರಡು ವರ್ಷ ಹಿಂದಿನ ಸ್ಥಿತಿಗೆ ಹೋಲಿಸಿದರೆ ಅಲ್ಲಿ ಪಕ್ಷದ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಸೋಲಿನ ನೈತಿಕ ಹೊಣೆಯನ್ನು ಹೊತ್ತು ಕಾಂಗ್ರೆಸ್ ಉಸ್ತುವಾರಿ ಪಿ.ಸಿ ಚಾಕೋ ತಮ್ಮ ಸ್ಥಾನಕ್ಕೆ ರಾಜನಾಮೆ ನೀಡಿದರು. ನೈತಿಕ ಹೊಣೆ ಎಂಬುವುದನ್ನು ಪ್ರತಿಪಾದಿಸಿದ ಅವರೂ ಕೂಡ ದಿಗ್ವಿಜಯ್ ಸಿಂಗ್ ರಾಜೀನಾಮೆಗೆ ಒತ್ತಡ ತೀವ್ರಗೊಳಿಸಿದರು.
ಈಗ ಎಲ್ಲರೂ ದಿಗ್ವಿಜಯ್‍ಸಿಂಗ್ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆಂದು ನೋಡುತ್ತಿದ್ದರು. ಆದರೆ ಅವರಿಂದ ಯಾವುದೇ ಪ್ರತಿಕ್ರಿಯೆ ಹೊರಬಾರದೆ ಇದ್ದಾಗ ಏಕಾಏಕಿ ರಂಗ ಪ್ರವೇಶಿಸಿದ ಸೋನಿಯಾಗಾಂಧಿ ರಾಜ್ಯ ಕಾಂಗ್ರೆಸ್ ಉಸ್ತುವಾರಿಯಿಂದ ದಿಗ್ವಿಜಯ್‍ಸಿಂಗ್ ಅವರನ್ನು ಎತ್ತಂಗಡಿ ಮಾಡಿದರು. ಹಠಾತ್ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್ ಹಲವು ನಾಯಕರು ಅಚ್ಚರಿ ವ್ಯಕ್ತಪಡಿಸಿದರೆ ಬಹುತೇಕ ನಾಯಕರು, ಮಂತ್ರಿಗಳು ಇಡೀ ಬೆಳವಣಿಗೆ ಅತೀವ ಹರ್ಷ ವ್ಯಕ್ತಪಡಿಸಿದರು.
ದಿಗ್ವಿಜಯ್‍ಸಿಂಗ್ ಅವರಿಂದ ತೆರವಾದ ಸ್ಥಾನಕ್ಕೆ ಕೇರಳ ಕಾಂಗ್ರೆಸ್‍ನ ಯುವ ಮುಖಂಡ ಕೆ.ಸಿ. ವೇಣುಗೋಪಾಲ್ ಅವರನ್ನು ನೇಮಿಸಲಾಗಿದೆ. ದೇಶ ಕಂಡ ಅತ್ಯಂತ ಸಜ್ಜನ ಸರಳ ವ್ಯಕ್ತಿತ್ವದ ರಾಜಕಾರಣಿ ಎಂದೇ ಗೌರವಿಸಲ್ಪಡುವ ಎ.ಕೆ. ಆಂಟನಿ ಅವರ ಪರಮಾಪ್ತ ಕೆ.ಸಿ. ವೇಣುಗೋಪಾಲ್ ಬಗ್ಗೆ ರಾಜ್ಯ ಕಾಂಗ್ರೆಸ್ಸಿಗರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ವೇಣುಗೋಪಾಲ್ ಅವರ ಜತೆ ಇತರೆ ನಾಲ್ವರನ್ನು ಸಹ ಉಸ್ತುವಾರಿಗಳಾಗಿ ನೇಮಿಸಿರುವ ರಾಹುಲ್‍ಗಾಂಧಿ ಇವರಿಗೆ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲೇಬೇಕೆಂದು ಗುರಿ ನೀಡಿದ್ದಾರೆ. ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ಯಾವುದೇ ಗಮನಹರಿಸದೆ ಎಲ್ಲಾ ಜಿಲ್ಲೆಗಳಿಗೆ ತೆರಳಿ ಸಂಘಟನೆಯಲ್ಲಿ ತೊಡಗಬೇಕು ಕಾರ್ಯಕರ್ತರು ಮತ್ತು ಪಕ್ಷದ ನಡುವೆ ಸಂಪರ್ಕ ಕಡಿದು ಹೋದಂತಾಗಿದ್ದು ಅದನ್ನು ನಿವಾರಿಸಬೇಕು ಹೀಗಾದರೆ ಆಂತರಿಕ ವಿದ್ಯಮಾನಗಳು ತನ್ನಿಂತಾನೇ ಇತ್ಯರ್ಥಗೊಳ್ಳುತ್ತವೆ. ಆ ನಿಟ್ಟಿನಲ್ಲಿ ಗಮನ ಹರಿಸುವಂತೆ ಸಲಹೆ ಮಾಡಿದ್ದಾರೆ.
ಎ.ಕೆ. ಆಂಟನಿ ಅವರ ಗರಡಿಯಲ್ಲಿ ಪಳಗಿರುವ ವೇಣುಗೋಪಾಲ್ ಶುದ್ಧ ಚಾರಿತ್ರ್ಯವುಳ್ಳ ವ್ಯಕ್ತಿ. ಕೇರಳದಲ್ಲಿ ಮಂತ್ರಿಯಾಗಿಯೂ ಕೆಲಸ ಮಾಡಿರುವ ಇವರ ವಿರುದ್ಧ ಒಂದು ಸಣ್ಣ ಭ್ರಷ್ಟಾಚಾರದ ಆರೋಪ ಇಲ್ಲವೆನ್ನುವುದು ಗಮನಾರ್ಹ ಸಂಘಟನೆ ವಿಷಯದಲ್ಲೂ ಹಲವು ಹೆಗ್ಗಳಿಕೆ ಪಾತ್ರರಾಗಿರುವ ಇವರು ಹಠಮಾರಿ ಸ್ವಭಾವದವರು. ತಾವು ಹೇಳಿದಂತೆ ಎಲ್ಲವೂ ನಡೆಯಬೇಕು. ಎಂಬ ಧೋರಣೆಯುಳ್ಳವರು ತಮ್ಮ ಮಾತು ಕೇಳಲಿಲ್ಲ ಎಂದರೆ ಬೇಗ ಕೋಪ ಮಾಡಿಕೊಳ್ಳುತ್ತಾರೆ ಎನ್ನುವುದನ್ನು ಬಿಟ್ಟರೆ ಇವರ ನಾಯಕತ್ವ ಹಾಗೂ ವ್ಯಕ್ತಿತ್ವದ ಬಗ್ಗೆ ಯಾವುದೇ ಅಪಸ್ವರಗಳಿಲ್ಲ.
ವಿದ್ಯಾರ್ಥಿಯಾಗಿರುವಾಗಲೇ ರಾಜಕೀಯದತ್ತ ಆಕರ್ಷಿತರಾಗಿದ್ದ ಇವರು ಎನ್‍ಎಸ್‍ಯುಐ ನಲ್ಲಿ ಸಕ್ರಿಯರಾಗಿದ್ದರು. ಕೇರಳದಲ್ಲಿ ಅತ್ಯಂತ ಸಕ್ರಿಯವಾಗಿರುವ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‍ಎಫ್‍ಐಗೆ ಸೆಡ್ಡು ಹೊಡೆದು ರಾಜ್ಯದಲ್ಲಿ ಎನ್‍ಎಸ್‍ಯುಐ ಸಂಘಟಿಸುವಲ್ಲಿ ವಿಶೇಷ ಆಸಕ್ತಿ ವಹಿಸಿದರು. ಇವರ ಆಸಕ್ತಿ ಮತ್ತು ಉತ್ಸಾಹವನ್ನು ಗಮನಿಸಿದ ಕಾಂಗ್ರೆಸ್ ನಾಯಕತ್ವ ಇವರಿಗೆ ಎನ್‍ಎಸ್‍ಯುಐ ಕೇರಳ ಘಟಕದ ಅಧ್ಯಕ್ಷರನ್ನಾಗಿ ನೇಮಿಸಿತು.
ಎ.ಕೆ.ಆಂಟನಿ ಅವರ ರಾಜಕೀಯ ಗರಡಿಯಲ್ಲಿ ಪಳಗಿದರೂ ವೇಣುಗೋಪಾಲ್ ತಮ್ಮ ರಾಜಕೀಯ ಗುರುವನ್ನಾಗಿ ಪರಿಗಣಿಸುವುದು ಕರುಣಾಕರನ್ ಅವರನ್ನು. ಪಯನೂರು ಜಿಲ್ಲೆಯಲ್ಲಿ ತಮ್ಮದೇ ಪ್ರಭಾವ ಹೊಂದಿದ್ದು ವೇಣುಗೋಪಾಲ್ ತಮ್ಮ ರಾಜಕೀಯ ಜೀವನದಲ್ಲಿ ಗುರು ಕರುಣಾಕರನ್ ವಿರುದ್ದವೇ ತಿರುಗಿ ಬಿದ್ದು ಸ್ವಕ್ಷೇತ್ರ ಬಿಟ್ಟು ನೆರೆಯ ಅಲಪೂಜಾಕ್ಕೆ ಬಂದು ಅಲ್ಲಿಂದ ಶಾಸಕ, ಸಂಸದರಾಗಿ ಆಯ್ಕೆಯಾದರು.
ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅತ್ಯುತ್ತಮ ವಾಲಿಬಾಲ್ ಆಟಗಾರನಾಗಿದ್ದ ವೇಣುಗೋಪಾಲ್ ರಾಜಕೀಯದಲ್ಲೂ ವಾಲಿಬಾಲ್ ತತ್ವವನ್ನು ಅಳವಡಿಸಿಕೊಂಡು ಎಲ್ಲವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಾವು ಬೆಳೆಯುತ್ತಾ ಸಾಗಿದರು. ಸಾಮೂಹಿಕ ನಾಯಕತ್ವ ಎಂಬ ತತ್ವದಲ್ಲಿ ಅಚಲ ವಿಶ್ವಾಸ ಹೊಂದಿರುವ ಇವರಿಗೆ ಕರ್ನಾಟಕ ಹೊಸದೇನಲ್ಲ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೈಸೂರು ಲೋಕಸಭಾ ಕ್ಷೇತ್ರವ್ಯಾಪ್ತಿಯ 11 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಹೈಕಮಾಂಡ್‍ಗೆ ಕಷ್ಟದ ಸಂಗತಿಯಾಗಿತ್ತು. ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದರೂ ಅವರಿಗೆ ವಲಸಿಗ, ಮೂಲಕಾಂಗ್ರೆಸ್ ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿದ್ದಾರೆಂದು ಆರೋಪಿಸಿ ಹಲವು ಮಂದಿ ಹಿರಿಯ ನಾಯಕರು ಸಿದ್ದರಾಮಯ್ಯ ವಿರುದ್ಧ ಸೆಡ್ಡು ಹೊಡೆದಿದ್ದರು.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪರಿಗಣಿಸಲಾಗಿದೆ. ಆದರೆ ಅವರ ತವರು ಜಿಲ್ಲೆಯಲ್ಲಿ ಭಿನ್ನಮತ ಉಂಟಾಗಿದೆ ಎಂದು ತನ್ವಿರ್‍ಸೇಠ್, ಬಸವೇಗೌಡ ಸೇರಿದಂತೆ ಹಲವರು ಸಿದ್ದರಾಮಯ್ಯ ವಿರುದ್ಧ ತಿರುಗಿ ಬಿದ್ದಿದ್ದಾರೆಂಬ ವರದಿ ಬಂದ ಹಿನ್ನೆಲೆಯಲ್ಲಿ ರಾಹುಲ್‍ಗಾಂಧಿ ತಡಮಾಡದೇ ತಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ವೇಣುಗೋಪಾಲ್ ಅವರನ್ನು ಮೈಸೂರಿಗೆ ವೀಕ್ಷಕರಾಗಿ ಹೋಗುವಂತೆ ಸೂಚಿಸಿದರು. ಅದರಂತೆ ಮೈಸೂರಿಗೆ ಬಂದ ವೇಣುಗೋಪಾಲ್ ಎಲ್ಲಾ ನಾಯಕರೊಂದಿಗೆ ಸಮಾಲೋಚನೆ ನಡೆಸಿ ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಗಮನ ಹರಿಸಿದರು. ಇದರ ಪರಿಣಾಮವಾಗಿ ಬಿಕ್ಕಟ್ಟು ಇತ್ಯರ್ಥಗೊಂಡು ಎಲ್ಲಾ ನಾಯಕರು ಒಟ್ಟಾಗಿ ಚುನಾವಣೆ ಎದುರಿಸಿದರು.
ಕೇರಳ ಸರ್ಕಾರದಲ್ಲಿ ಮಂತ್ರಿಯಾಗಿದ್ದ ವೇಣುಗೋಪಾಲ್ ಸಂಸದರಾಗಿ ಆಯ್ಕೆಯಾಗಿ ವಿವಿಧ ಸ್ಥಾಯಿ ಸಮಿತಿಗಳಲ್ಲಿ ಕಾರ್ಯ ನಿರ್ವಹಣೆ ಮಾಡಿದ್ದರು. ಕೇರಳದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಇವರು ರೂಪಿಸಿದ ಹಲವು ಯೋಜನೆಗಳು ಇಂದಿಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿ ಕೇಂದ್ರ ವಿಮಾನಯಾನ ಖಾತೆ ರಾಜ್ಯಸಚಿವರಾಗಿದ್ದ ವೇಳೆ ಏರ್ ಇಂಡಿಯಾ ವಿಮಾನ ಸಂಸ್ಥೆಯ ಕೆಲ ಅಧಿಕಾರಿಗಳು ಖಾಸಗಿ ವಿಮಾನಯಾನ ಸಂಸ್ಥೆ ಜೊತೆ ಸೇರಿಕೊಂಡು ನಡೆಸುತ್ತಿದ್ದ ಅಕ್ರಮವನ್ನು ಪತ್ತೆ ಹಚ್ಚಿದರು. 
ಮಂತ್ರಿಯಾಗಿದ್ದರೂ ಕೇರಳದ ಕೊಚ್ಚಿಯಿಂದ ದೆಹಲಿಗೆ ತೆರಳಲು ಏರ್‍ಇಂಡಿಯಾದ ವಿಮಾನದಲ್ಲಿ ಸೀಟು ಕಾಯ್ದಿರಿಸಲು ತಮ್ಮ ಆಪ್ತ ಸಿಬ್ಬಂದಿಗೆ ಸೂಚಿಸದರು. ಆಗ ಏರ್ ಇಂಡಿಯಾ ಸಿಬ್ಬಂದಿ ವಿಮಾನದಲ್ಲಿ ಎಲ್ಲಾ ಸೀಟುಗಳು ಭರ್ತಿಯಾಗಿದೆ. ಯಾವುದೇ ಟಿಕೆಟ್ ಖಾಲಿ ಉಳಿದಿಲ್ಲ ಎಂಬ ಉತ್ತರ ನೀಡಿದರು. ಇದರಿಂದ ಅಚ್ಚರಿಗೊಳಗಾದ ವೇಣುಗೋಪಾಲ್ ಮಂತ್ರಿ ಅಧಿಕಾರ ಬಳಸಿ ಅಧಿಕಾರಿಗಳನ್ನು ಸಂಪರ್ಕಿಸಿದರು. ತಾವು ಸಾಮಾನ್ಯ ವ್ಯಕ್ತಿಯಾಗಿ ಟಿಕೆಟ್ ಕಾಯ್ದಿರಿಸಲು ಸೂಚಿಸಿದ್ದ ವಿಮಾನದಲ್ಲಿಯ ಸೀಟುಗಳನ್ನು ಕಾಯ್ದಿರಿಸುವವರ ವಿವರ ನೀಡುವಂತೆ ಸೂಚಿಸಿದರು. ಆಗ ಅಧಿಕಾರಿಗಳು ವಿಮಾನದಲ್ಲಿ ಕೆಲವೇ ಸೀಟುಗಳು ಮಾತ್ರ ಭರ್ತಿಯಾಗಿವೆ, 25 ಸೀಟುಗಳು ಖಾಲಿ ಇದ್ದು ಯಾರೂ ಕೂಡಾ ಸೀಟು ಕಾಯ್ದಿರಿಸಲು ಬಂದಿಲ್ಲ ಎಂಬ ಲಿಖಿತ ಮಾಹಿತಿ ನೀಡಿದರು. ಈ ಮಾಹಿತಿ ಆಧರಿಸಿ ವೇಣುಗೋಪಾಲ್ ತನಿಖೆಗೆ ಆದೇಶಿಸಿದಾಗ ಕರ್ಮಕಾಂಡ ಬಯಲಾಗಿತ್ತು. 
ಈ ರೀತಿ ಆಡಳಿತ ನಿರ್ವಹಣೆ ಮತ್ತು ಪಕ್ಷ ಸಂಘಟನೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ವೇಣುಗೋಪಾಲ ಸದ್ಯ ಲೋಕಸಭೆಯಲ್ಲಿ ಪ್ರತಿಪಕ್ಷದ ಸಚೇತಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಹುಲ್ ಗಾಂಧಿಯವರ ಪರಮಾಪ್ತರಾಗಿರುವ ಇವರಿಂದ ವರಿಷ್ಠರು ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇವರ ಸಂಘಟನಾ ಚಾತುರ್ಯ ಪಕ್ಷದಲ್ಲಿನ ಗೊಂದಲ ಇತ್ಯರ್ಥ ಪಡಿಸಿ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ತರಲಿದೆ ಎಂಬ ವಿಶ್ವಾಸದಲ್ಲಿದ್ದು ಇದಕ್ಕಾಗಿ ಕಾದು ನೋಡಬೇಕು.

   
 

Links :

ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ