ಕಾಮುಕರ ಕಾಲಿಗೆ ಗುಂಡೇಟು: ಇಬ್ಬರ ಬಂಧನ

police arrested 2 in a sexula harrasement case

26-03-2018

ಬೆಂಗಳೂರು: ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳನ್ನು ಕಾರಿನಲ್ಲಿ ಅಪಹರಿಸಿ ಹಿಂಸಿಸಿ ಸೀಟಿನಡಿ ನೂಕಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ  ತಮಿಳುನಾಡಿನ ಧರ್ಮಪುರಿ ಮೂಲದ ಇಬ್ಬರು ಕಾಮುಕರ ಕಾಲಿಗೆ ನಗರ ಪೊಲೀಸರು ಗುಂಡು ಹೊಡೆದು ವಶಕ್ಕೆ ತೆಗೆದುಕೊಂಡಿದ್ದಾರೆ.

ಧರ್ಮಪುರಿಯ ಶಂಕರ್(25)ಮತ್ತು ಸೆಲ್ವ ಕುಮಾರ್(26) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರಿಂದ ಚಾಕು ಇರಿತಕ್ಕೊಳಗಾದ ಪೇದೆ ಮಹಾಂತೇಶ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಮುಕರನ್ನು ಬಂಧಿಸುವಲ್ಲಿ ಯಶಸ್ವಿ ಕಾರ್ಯಾಚರಣೆ ನಡೆಸಿರುವ ಬೆಳಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ನೇತೃತ್ವದ ತಂಡವನ್ನು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್‍ ಕುಮಾರ್ ಅಭಿನಂಧಿಸಿದ್ದಾರೆ.

ಕಸವನಹಳ್ಳಿ ರಸ್ತೆಯಲ್ಲಿ ಕಳೆದ ಮಾ.18ರ ತಡರಾತ್ರಿ ಸುಮಾರು 26 ವರ್ಷ ವಯಸ್ಸಿನ ಯುವತಿಯನ್ನು ತಮಿಳುನಾಡು ನೊಂದಣಿಯ ಕಾರಿನಲ್ಲಿ ಬಂದಿದ್ದ ಗುಂಡೇಟು ತಗುಲಿರುವ ಆರೋಪಿಗಳಾದ ಶಂಕರ್ ಹಾಗೂ ಸೆಲ್ವಕುಮಾರ್ ಅಪಹರಿಸಿ ಕರೆದೊಯ್ದು ಹಲ್ಲೆ ನಡೆಸಿ ಕಾರಿನ ಸೀಟಿನ ನೂಕಿ ಹಿಂಸಿಸಿ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾರೆ.

ಯುವತಿಯು ಪ್ರತಿರೋಧ ತೋರಿದ್ದರಿಂದ ಮಾರ್ಗ ಮಧ್ಯೆ ಬಿಟ್ಟು ಹೋಗಿದ್ದು ಅಸ್ವಸ್ಥಗೊಂಡ ಯುವತಿಯು ಮರುದಿನ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸುದ್ದಿ ತಿಳಿದ ಬೆಳ್ಳಂದೂರು ಪೊಲೀಸರು ಆಸ್ಪತ್ರೆಗೆ ಧಾವಿಸಿ ಯುವತಿಯಿಂದ ಮಾಹಿತಿ ಪಡೆದುಕೊಂಡು ಕಾರ್ಯಾಚರಣೆ ನಡೆಸಿದ್ದರು.

ಸರ್ಜಾಪುರ ಮುಖ್ಯರಸ್ತೆಯ ಕೊಡತಿ ಬಳಿ ಹೀನಕೃತ್ಯ ಎಸಗಿದ್ದ ಆರೋಪಿಗಳು ನಿನ್ನೆ ಮಧ್ಯರಾತ್ರಿ ಇರುವ ಖಚಿತ ಮಾಹಿತಿ ಆಧರಿಸಿ ಬೆಳಂದೂರು ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ನೇತೃತ್ವದ ವೈಟ್‍ಫೀಲ್ಡ್ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ತಂಡ ಮುಂಜಾನೆ 3.45ರ ವೇಳೆ ಕೊಡತಿ ಬಳಿಯ ಬಿಎಂಟಿಎಸ್ ವಸತಿ ನಿಲಯದ ಬಳಿ ಇಬ್ಬರು ಇಂಡಿಕಾ ಕಾರಿನಲ್ಲಿ ಹೋಗುತ್ತಿದ್ದನ್ನು ಪತ್ತೆಹಚ್ಚಿ ಬಂಧಿಸಲು ಮುಂದಾಗಿದೆ.

ಪೊಲೀಸರ ಜೀಪ್ ನೋಡಿದ ತಕ್ಷಣ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಹೋಗಿದ್ದು ಬೆನ್ನಟ್ಟಿದ ಪೊಲೀಸರು ಹಿಂಬಾಲಿಸಿದಾಗ ಬಿಎಂಟಿಎಸ್ ವಸತಿನಿಲಯದ ಬಳಿ ಪೊಲೀಸ್ ಜೀಪ್ ಕಾರಿಗೆ ಡಿಕ್ಕಿ ಹೊಡೆದಿದೆ. ಶರಣಾಗುವಂತೆ ಸೂಚಿಸಿದರೂ ಕಾರು ಬಿಟ್ಟು ಆರೋಪಿಗಳಿಬ್ಬರು ಪರಾರಿಯಾಗಲೆತ್ನಿಸಿ ಪೊಲೀಸ್ ಪೇದೆ ಮಹಾಂತೇಶ್‍ಗೆ ಚಾಕುವಿನಿಂದ ಹೊಟ್ಟೆಗೆ ಇರಿದು ಇತರ ಸಿಬ್ಬಂದಿಯತ್ತ ಚಾಕು ಹಿಡಿದು ಬಂದಿದ್ದಾರೆ.

ಈ ವೇಳೆ ಸ್ವಯಂ ರಕ್ಷಣೆಗಾಗಿ ಇನ್ಸ್ಪೆಕ್ಟರ್ ವಿಕ್ಟರ್ ಸೈಮನ್ ಹಾಗೂ ಸಬ್ ಇನ್ಸ್ಪೆಕ್ಟರ್ ಸೋಮಶೇಖರ್ ತಮ್ಮ ಸರ್ವಿಸ್ ರಿವಾಲ್ವರ್ ನಿಂದ ತಲಾ ಎರಡು ಸುತ್ತು ಗುಂಡು ಹಾರಿಸಿದ್ದು ಎರಡು ಗಾಳಿಯಲ್ಲಿ ಇನ್ನೆರಡು ಶಂಕರ್ ಹಾಗೂ ಸೆಲ್ವಕುಮಾರ್ ಕಾಲಿಗೆ ತಗುಲಿ ಗಾಯಗೊಂಡು ಇಬ್ಬರು ಸ್ಥಳದಲ್ಲೇ ಕುಸಿದು ಬಿದಿದ್ದಾರೆ. ಕೂಡಲೇ ಅವರನ್ನು ವಶಕ್ಕೆ ತೆಗೆದುಕೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದು ಗುಣಮುಖರಾದ ನಂತರ ಬಂಧಿಸಿ ವಿಚಾರಣೆಗೊಳಪಡಿಸಲಾಗುವುದು ಎಂದು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Kidnap arrested ವಿಚಾರಣೆ ಪರಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ