ಸಾಧನೆಯೋ..? ವೇದನೆಯೋ..?

Kannada News

12-05-2017 802

ನಾಲ್ಕು ವರ್ಷದ ಹಿಂದೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದ ಜನಸಮೂಹದ ಹರ್ಷೋದ್ಗಾರಗಳ ನಡುವೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಿದ್ದರಾಮಯ್ಯ ನಾಲ್ಕು ವರ್ಷ ಅಧಿಕಾರಾವಧಿ ಪೂರ್ಣಗೊಳಿಸಿ 5ನೇ ವರ್ಷಕ್ಕೆ ಕಾಲಿರಿಸಿದ್ದಾರೆ.
ಉಪಮುಖ್ಯಮಂತ್ರಿಯಾಗಿ, ಹಣಕಾಸು ಮಂತ್ರಿಯಾಗಿ, ಪ್ರತಿಪಕ್ಷ ನಾಯಕನಾಗಿ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುತ್ತಲೇ ಅಕ್ರಮದ ವಿರುದ್ಧ ತೊಡೆತಟ್ಟಿ ಪಾದಯಾತ್ರೆ ನಡೆಸಿ, ಬೃಹತ್ ಸಮಾವೇಶಗಳ ಮೂಲಕ ಅವಕಾಶ ವಂಚಿತರಲ್ಲಿ ಭರವಸೆ ಮೂಡಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುತ್ತಿದ್ದಂತೆ ಲಕ್ಷಾಂತರ ನಿರೀಕ್ಷೆಯ ಕಂಗಳು ಆನಂದ ಭಾಷ್ಪ ಸುರಿಸಿದ್ದವು. ಲಕ್ಷಾಂತರ ಜನರ ಮನಸ್ಸಿನಲ್ಲಿ ದೊಡ್ಡ ಭರವಸೆಯ ಗೋಪುರಗಳು ನಿರ್ಮಾಣಗೊಂಡಿದ್ದವು.
ಇಂತಹ ಭಾರೀ ಭರವಸೆಯೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದ ಹಲವು ಏಳು-ಬೀಳುಗಳ ನಡುವೆ ನಾಲ್ಕು ವರ್ಷ ಪೂರ್ಣಗೊಳಿಸಿರುವ ಸಿದ್ದರಾಮಯ್ಯ, ಇದೀಗ 5ನೇ ವರ್ಷಕ್ಕೆ ದಾಪುಗಾಲಿಟ್ಟಿದ್ದಾರೆ. ಅದು ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಧೃಡ ಸಂಕಲ್ಪದೊಂದಿಗೆ ಈ ಮೂಲಕ ದೇಶದ ರಾಜಕೀಯ ಭೂಪಟದಲ್ಲಿ ಕಂಡು ಕಾಣದಂತಿರುವ ಕಾಂಗ್ರೆಸ್‍ಗೆ ಈ ಗೆಲುವಿನ ಮೂಲಕ ಭರ್ಜರಿ ಶಕ್ತಿ ತಂದು ಕೊಡುವ ಉಮೇದಿನಲ್ಲಿದ್ದಾರೆ.
ನಾಲ್ಕು ವರ್ಷದ ಅವಧಿಯಲ್ಲಿ ತಮ್ಮ ಸರ್ಕಾರ ಮಾಡಿರುವ ಸಾಧನೆಯನ್ನು ಜನರ ಮುಂದಿಡುತ್ತಲೇ ಮುಂದೇನು ಮಾಡುತ್ತೇವೆಂದು ಹೇಳಿ ಮತಯಾಚಿಸಬೇಕಿದೆ. ಈಗಾಗಲೇ ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿರುವ ಸಿಎಂ, ತಾವು ಜನರಿಗಾಗಿ ನಾಲ್ಕು ವರ್ಷದ ಅವಧಿಯಲ್ಲಿ ಕೆಲಸ ಮಾಡಿದ್ದೇವೆ, ಈ ಕೆಲಸಕ್ಕೆ ಕೂಲಿ ಕೊಡಿ ಎಂದು ಮತದಾರರನ್ನು ಕೇಳುತ್ತಿದ್ದೇವೆ, ಅವರು ತಮಗೆ ಕೂಲಿ ಕೊಡುವ ಮೂಲಕ ಆಶೀರ್ವದಿಸಲಿದ್ದಾರೆಂದು ವಿಶ್ವಾಸವಿದೆ ಎಂದು ಹೆಳಿದ್ದಾರೆ. 
ಆದರೆ ಈ ವಿಶ್ವಾಸ ಮತಗಳಾಗಿ ಪರಿವರ್ತನೆಯಾಗಲಿದೆಯಾ, ಸಿದ್ದರಾಮಯ್ಯ ಮತ್ತೆ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಿದ್ದಾರೆಯೇ ಎಂಬ ಚರ್ಚೆ ಮತ್ತು ಅವಲೋಕನ ಎಲ್ಲಾ ಕಡೆ ಕೇಳಿಬರುತ್ತಿದೆ. ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಅವರಷ್ಟು ಅದೃಷ್ಟವಂತ ರಾಜಕಾರಣಿ ಮತ್ತೊಬ್ಬರಿಲ್ಲ ಎಂದೇ ಹೇಳಬಹುದು. ಇವರು ಮುಖ್ಯಮಂತ್ರಿಯಾದಾಗಿನಿಂದ ಇವರ ಕಾಲೆಳೆಯುವ ಪ್ರಯತ್ನಗಳು ಹಲವು ಬಾರಿ ನಡೆದರೂ ಆ ಯಾವ ಪ್ರಯತ್ನ ಕೂಡಾ ಇವರನ್ನು ಅಲುಗಾಡಿಸಲು ಸಾಧ್ಯವಾಗಲಿಲ್ಲ. ಹೈಕಮಾಂಡ್ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಂತಂತೆ ಹಿಂದೆ ಯಾವ ನಾಯಕರ ಬೆನ್ನಿಗೂ ನಿಂತಿರಲಿಲ್ಲ. ಇಂತಹ ಶ್ರೀರಕ್ಷೆ ಇರುವ ಸಿದ್ದರಾಮಯ್ಯ ತಾವು ಮಾಡಿದ ಕೆಲಸಕ್ಕೆ ಜನರಿಂದ ಹೇಗೆ ಕೂಲಿಯನ್ನು ನಿರೀಕ್ಷಿಸುತ್ತಿದ್ದಾರೋ ಅದೇ ರೀತಿ ಹೈಕಮಾಂಡ್ ಕೂಡ ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕೆನ್ನುವ ಕೂಲಿಯನ್ನ ಸಿದ್ದರಾಮಯ್ಯ ಅವರಿಂದ ನಿರೀಕ್ಷಿಸುತ್ತಿದೆ. 
ಹೈಕಮಾಂಡ್ ಇಂತಹ ಅಪಾರ ನಿರೀಕ್ಷೆ ಹೊಂದಿರುವ ಸಿದ್ದರಾಮಯ್ಯ ಹೆಸರು ಈ ಹಿಂದೆ ಅಹಿಂದ ಸಮುದಾಯಗಳ ಪುರೋಗಾಮಿ ಎಂದೇ ಕೇಳಿ ಬರುತ್ತಿತ್ತು. ಆದರೆ ಇಂದು ಇವರೊಂದಿಗಿದ್ದ ಹಲವು ಮಂದಿ ಅಹಿಂದ ನಾಯಕರೇ ದೂರವಾಗಿದ್ದಾರೆ, ದೂರವಾಗಲು ಮುಂದಾಗಿದ್ದಾರೆ. ಹೀಗಾಗಿ ತಮ್ಮಿಂದ ದೂರವಾದವರನ್ನು ಮತ್ತೆ ತರುವ ಇಲ್ಲವೇ ತಮ್ಮೊಂದಿಗಿದ್ದು ದೂರವಾಗುವ ಯತ್ನದಲ್ಲಿರುವರ ಮನವೋಲಿಸಿ ತಮ್ಮೊಂದಿಗಿಟ್ಟುಕೊಳ್ಳುವ ಸವಾಲು ಇವರ ಮುಂದಿದೆ. ಚುನಾವಣೆಯಲ್ಲಿ ಇದು ಅತ್ಯಂತ ಅನಿವಾರ್ಯ ಕೂಡಾ ಹೀಗಾಗಿ ಸಿದ್ದರಾಮಯ್ಯ ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದ್ದಾರೆನ್ನುವುದನ್ನು ನೋಡಬೇಕು.
ಇತ್ತಿಚಿನವರೆಗೂ ಸಿದ್ದರಾಮಯ್ಯ ಒರ್ವ ದಕ್ಷ ಆಡಳಿತಗಾರ ಸಾಮಾಜಿಕ ಕಳಕಳಿಯುಳ್ಳ ನಾಯಕ ಕಳಂಕರಹಿತ ಆಡಳಿತ ನೀಡುವ ವ್ಯಕ್ತಿ ಎಂದೇ ಬಣ್ಣಿಸಲಾಗುತ್ತಿತ್ತು. ಆದರೆ ಸಿಎಂ ಆಗಿ ಅವರು ನಾಲ್ಕು ವರ್ಷ ಪೂರ್ಣಗೊಳಿಸಿರುವ ಈ ಅವಧಿಯಲ್ಲಿ ಈ ಮಾತನ್ನು ಯಾರೂ ಕೂಡಾ ಗಟ್ಟಿಧ್ವನಿಯಲ್ಲಿ ಹೇಳಲು ಸಾಧ್ಯವಿಲ್ಲ. ಈ ನಾಲ್ಕು ವರ್ಷಗಳ ಅವಧಿಯಲ್ಲಿ ಇವರ ವಿರುದ್ಧ ಯಾವುದೇ ಗಂಭೀರ ಸ್ವರೂಪದ ಭ್ರಷ್ಟಾಚಾರ ಆರೋಪ ಮೆತ್ತಿಕೊಳ್ಳದೇ ಹೋದರೂ, ಪೊಲೀಸ್ ಅಧಿಕಾರಿಗಳ ವರ್ಗಾವಣೆ, ಭೂಪರಿವರ್ತನೆ, ಕಾಮಗಾರಿಗಳ ಅನುಮೋದನೆ ವಿಷಯದಲ್ಲಿ ಸಿಎಂ ಅವರದ್ದು ಕಳಂಕ ರಹಿತ ನಡೆ ಎಂದು ಅವರ ಅತ್ಯಾಪ್ತ ವಲಯದವರೂ ಹೇಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. 
ಇನ್ನೂ ರಾಜ್ಯದಲ್ಲಿ ಕಾಣಿಸಿಕೊಂಡ ಸತತ ಬರಗಾಲ, ಹಲವೆಡೆ ಉಂಟಾಗಿರುವ ಕುಡಿಯುವ ನೀರಿನ ಅಭಾವ, ಬೆಂಗಳೂರಿನಲ್ಲಿ ಬೆಟ್ಟದಂತಿರುವ ಮೂಲಭೂತ ಸಮಸ್ಯೆಗಳ ನಿವಾರಣೆ ದೃಷ್ಟಿಯಿಂದ ಸಿಎಂ ಕ್ಷೀಪ್ರಗತಿಯ ಪರಿಣಾಮಕಾರಿ ನಿರ್ಧಾರಗಳನ್ನು ಕೈಗೊಳ್ಳಲಿಲ್ಲ, ರೈತರ ಆತ್ಮಹತ್ಯೆ ತಡೆಗೆ ಯಾವುದೇ ಕ್ರಿಯಾ ಯೋಜನೆ ಪ್ರಕಟಿಸಲಿಲ್ಲ ಎಂಬ ಆರೋಪ ಇವರೊಬ್ಬ ದಕ್ಷ ಆಡಳಿತಗಾರ ಎಂಬ ವಿಶೇಷಣಕ್ಕೆ ಕಪ್ಪುಚುಕ್ಕೆಯಾಗಿ ಪರಿಣಮಿಸಿದೆ. ಆದರೆ ಸರ್ಕಾರಕ್ಕೆ ಇನ್ನು ಒಂದು ವರ್ಷ ಅವಧಿಯಿರುವುದರಿಂದ ಚುರುಕಾದ ಆಡಳಿತದ ಮೂಲಕ ಈ ಅಪವಾದ ನಿವಾರಿಸಬಹುದು. ಬರಗಾಲ ನಿವಾರಣೆಯ ಪ್ಯಾಕೇಜ್, ರೈತರ ಕೃಷಿ ಸಾಲ ಮನ್ನಾದಂತಹ ಬೇಡಿಕೆ ಈಡೇರಿಸಿ ತಮ್ಮ ವರ್ಚಸ್ಸು ವೃದ್ಧಿಸಿಕೊಳ್ಳುವ ಜತೆಗೆ ಪಕ್ಷಕ್ಕೂ ಜನಪ್ರಿಯತೆ ತಂದು ಕೊಡಬಹುದು. 
ಉತ್ತಮ ಆಡಳಿತ ನೀಡಲು ತಮಗೆ ಬೇಕಾದ ಟೀಮ್ ಇರಬೇಕೆಂದು ವರಿಷ್ಠರನ್ನು ಒಪ್ಪಿಸಿ ತಮಗೆ ಬೇಕಾದವರನ್ನೇ ಮಂತ್ರಿ ಮಂಡಲಕ್ಕೆ ಸೇರಿಸಿಕೊಂಡ ಸಿಎಂ, ಅದೇ ರೀತಿಯಲ್ಲಿ ಎಲ್ಲಾ ಮಂತ್ರಿಗಳಿಂದ ಕೆಲಸ ತೆಗೆಸಲು ಸಾಧ್ಯವಾಗಿಲ್ಲ, ತಮ್ಮ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿಲ್ಲ ಎಂದು ಮಂತ್ರಿ ಮಂಡಲದಿಂದ  ಶ್ರೀನಿವಾಸ್ ಪ್ರಸಾದ್, ಕಿಮ್ಮನೆ ರತ್ನಾಕರ್, ಅಂಬರೀಷ್, ಖಮರುಲ್ಲಾ ಇಸ್ಲಾಂ, ಎಸ್.ಆರ್. ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರನ್ನು ಮಂತ್ರಿಮಂಡಲದಿಂದ ತೆಗೆದು ಹಾಕಿದರೂ ಹೊಸದಾಗಿ ಬಂದವರು ಮಾಡಿದ್ದೇನು ಎಂದು ಪ್ರಶ್ನಿಸಿದರೆ ಅದಕ್ಕೆ ಸ್ಪಷ್ಟ ಉತ್ತರ ಸಿಗುತ್ತಿಲ್ಲ. ಇಂತಹ ಸ್ಥಿತಿಯಲ್ಲಿ ಚುನಾವಣೆ ಎದುರಿಸಲು ಸಜ್ಜುಗೊಳ್ಳುತ್ತಿರುವ ಸಿಎಂ ಇದೀಗ ತಮ್ಮೊಂದಿಗೆ ಸರ್ಕಾರದ ವರ್ಚಸ್ಸನ್ನು ವೃದ್ಧಿಸಿ ಪಕ್ಷಕ್ಕೆ ಮತ ತಂದು ಕೊಡುವ ಮಂತ್ರ ದಂಡವಾಗಬೇಕಿದೆ.
ಇಂತಹ ಮಂತ್ರದಂಡವಾಗಬೇಕಿರುವ ಸಿಎಂ ವಿರುದ್ಧ ಕೇಳಿಬರುವ ಅರ್ಕಾವತಿ ಡಿನೋಟಿಫಿಕೇಶನ್ ಆರೋಪದ ವಿಚಾರಣೆ ಇನ್ನೂ ಬಾಲ್ಯಾವಸ್ಥೆಯಲ್ಲಿದ್ದು ಪ್ರತಿಪಕ್ಷಗಳ ಆರೋಪಗಳ ಅಸ್ತ್ರವಾಗಿದೆ. ಭ್ರಷ್ಟಾಚಾರ ತಡೆಯುವ ದೃಷ್ಟಿಯಿಂದ ಲೋಕಾಯುಕ್ತರನ್ನು ಹಲ್ಲುಕಿತ್ತ ಹಾವಿನಂತೆ ಮಾಡಿ ಭ್ರಷ್ಟಾಚಾರ ನಿಗ್ರಹ ದಳ ಸೃಷ್ಟಿಸಿದರೂ ಮಾಡಿದ ಸಾಧನೆ ಏನು ಎಂಬ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಚುನಾವಣೆಯ ಸಮಯದಲ್ಲಿ ಜನರಿಗೆ ಉತ್ತರಿಸಲೇ ಬೇಕಾದ ಅನಿವಾರ್ಯತೆ ಉಂಟಾಗಿದೆ. ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಬಿಜೆಪಿಗಿಂತ ತಾನು ಭಿನ್ನ ಎಂದು ಗಟ್ಟಿಯಾಗಿ ತೋರಿಸಿಕೊಳ್ಳಬೇಕಾದ ಅನಿವಾರ್ಯತೆ ಈಗ ಬಂದೊದಗಿದೆ. ತಮ್ಮ ಮೇಲಿನ ಆರೋಪಗಳೆಲ್ಲಾ ಕೇವಲ ರಾಜಕೀಯ ಪ್ರೇರಿತ ಎಂದು ಜನರ ಮುಂದೆ ವಾದ ಮಂಡಿಸಲೇ ಬೇಕಾಗಿದೆ. ಆದರೆ ಇಂತಹ ಸಮಯದಲ್ಲಿ ಸಿಎಂ ತಮ್ಮ ಬೆನ್ನನ್ನು ತಾವು ನೋಡಿಕೊಳ್ಳಲೇ ಬೇಕಾಗಿದೆ. 
ಸಿದ್ದರಾಮಯ್ಯ ಅವರ ನಾಲ್ಕು ವರ್ಷಗಳ ಅಧಿಕಾರವಧಿಯಲ್ಲಿ ಇವರ ವಿರುದ್ಧ ಪ್ರತಿಪಕ್ಷಗಳಿಗಿಂತ ದೊಡ್ಡ ರೀತಿಯಲ್ಲಿ ಧ್ವನಿ ಎತ್ತಿದವರು ಪಕ್ಷದ ಕಾರ್ಯಕರ್ತರು ಮತ್ತು ಹಿರಿಯ ನಾಯಕರು. ಸಿಎಂ ಕಾರ್ಯಕರ್ತರನ್ನು ಕೇಳುತ್ತಿಲ್ಲ, ಹಿರಿಯ ನಾಯಕರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ತಮ್ಮ ಸುತ್ತಲೂ ಒಂದು ಕೋಟೆಯನ್ನು ಕಟ್ಟಿಕೊಂಡಿದ್ದಾರೆ, ಆಡಳಿತ ನಿರ್ವಹಣೆ ಹಾಗೂ ಪಕ್ಷ ಸಂಘಟನೆ ವಿಷಯದಲ್ಲಿ ಹಿರಿಯರು ಮತ್ತು ಅನುಭವಿಗಳ ಸಲಹೆ ಕೇಳುವ ಪರಿಪಾಟಲನ್ನೇ ಬೆಳೆಸಿಕೊಳ್ಳಲಿಲ್ಲ ಎಂಬ ಅಸಮಾಧಾನ ಹೊರಹಾಕುತ್ತಿದ್ದಾರೆ. ನಿಗಮ-ಮಂಡಳಿ ಸೇರಿದಂತೆ ವಿವಿಧ ವಲಯಗಳಲ್ಲಿ ಅಧಿಕಾರ ಹಂಚಿಕೆ ಮಾಡುವ ವೇಳೆ ಸಿಎಂ ಪಕ್ಷಪಾತಿಯಾದರು, ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಬೇಕೆಂದು ಶ್ರಮಿಸಿದ ಕಾರ್ಯಕರ್ತರಿಗೆ ಆದ್ಯತೆಯು ನೀಡಲಿಲ್ಲ ಎಂಬ ಕೊರಗು ಇದೀಗ ಅಸಮದಾನವಾಗಿ ಪರಿಣಮಿಸಿದೆ. ಇವೆಲ್ಲಾ ಮುಂದಿನ ಚುನಾವಣೆಯನ್ನ ತಮ್ಮ ನಾಯಕತ್ವದಲ್ಲೇ ಎದುರಿಸಲಾಗುವುದು ಎಂಬ ಸಿಎಂ ಹೇಳಿಕೆಯನ್ನು ವಿರೋಧಿಸುವ ಹಂತಕ್ಕೆ ತಲುಪಿದೆ. ಹೀಗಾಗಿ 5ನೇ ವರ್ಷಕ್ಕೆ ಕಾಲಿಟ್ಟಿರುವ ಸಿದ್ದರಾಮಯ್ಯ ಈ ವಿಷಯದಲ್ಲಿ ಅತ್ಯಂತ ನಾಜುಕಾದ ಎಚ್ಚರಿಕೆಯ ನಿಲುವು ತೆಗೆದುಕೊಳ್ಳಬೇಕಾದ ಅವಶ್ಯಕತೆಯಿದೆ. 
ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ತರುತ್ತೇನೆಂದು ಹೊರಟವರಿಗೆ ಕಾರ್ಯಕರ್ತರ ಬೆಂಗಾವಲು ಪಡೆಯ ದೊಡ್ಡ ಪ್ರಮಾಣದಲ್ಲಿ ಅಗತ್ಯವಿದೆ. ಇದರ ಜೊತೆಗೆ ಹಿರಿಯ ನಾಯಕರ ಆಶೀರ್ವಾದವೂ ಬೇಕಿದೆ. ಇದನ್ನು ಬಿಟ್ಟು ಕೇವಲ ಹೈಕಮಾಂಡ್ ನಮ್ಮ ಜತೆ ಇದೆ ಎಂದು ಹೊರಟರೆ ಮುಗ್ಗರಿಸುವುದು ಗ್ಯಾರಂಟಿ ಹೀಗಾಗಿ 5ನೇ ವರ್ಷದ ಸಂಭ್ರಮದಲ್ಲಿ ಎಲ್ಲರನ್ನೂ ಭಾಗಿದಾರರನ್ನಾಗಿಸಿಕೊಳ್ಳುವ ಮೂಲಕ ಒಟ್ಟಿಗೆ ಕೊಂಡೊಯ್ಯೊ ಬೇಕಾದ ಅನಿವಾರ್ಯತೆ ಇದ್ದು, ಅದು ಯಶಸ್ಸಿನ ಗುಟ್ಟು ಕೂಡಾ ಆಗಿದೆ. 
ಅಧಿಕಾರಕ್ಕೆ ಬಂದ ನಂತರ ಸಿದ್ದರಾಮಯ್ಯ ತಮ್ಮದು ಶೋಷಿತರ ಮತ್ತು ಅಹಿಂದ ಪರವಾದ ಸರ್ಕಾರ ಎಂದು ಹೇಳುತ್ತಲೇ ಅನ್ನಭಾಗ್ಯ, ಕ್ಷಿರಭಾಗ್ಯ, ಕೃಷಿ ಭಾಗ್ಯದಂತಹ ಯೋಜನೆಗಳನ್ನು ಪ್ರಕಟಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಇದಾದ ನಂತರ ಐಶಾರಾಮಿ ಮತ್ತು ಆಡಂಬರದ ಮದುವೆಗಳ ನಿಯಂತ್ರಣಕ್ಕೆ ಕಾನೂನು, ಮೌಡ್ಯ ಪ್ರತಿಬಂಧಕ ಕಾಯಿದೆ, ಕೆಂಡ ಹಾಯುವ ಪದ್ಧತಿ ನಿಷೇಧದ ನಿರ್ಧಾರ ಪ್ರಕಟಿಸಿ ಒಂದು ವರ್ಗದವರ ಮೆಚ್ಚುಗೆ ಪಡೆದುಕೊಂಡು ಬಹುದೊಡ್ಡ ವರ್ಗ ಇದನ್ನು ವಿರೋಧಿಸತೊಡಗಿತು.
ಇದನ್ನು ಅಸ್ತ್ರವಾಗಿಸಿಕೊಳ್ಳಲು ಹೊರಟ ಬಿಜೆಪಿ ರಾಜ್ಯದಲ್ಲಿ ಬಹು ಸಂಖ್ಯಾತರ ವಿರೋಧಿ ಸರ್ಕಾರವಿದು ಎಂಬ ಹಣೆಪಟ್ಟಿ ಕಟ್ಟಿ ಅದರ ಲಾಭ ಪಡೆಯಲು ಯತ್ನಿಸಿತು. ಇದರ ಬೆನ್ನಿಗೆ ಹೊರಬಿದ್ದ ಸಿದ್ದರಾಮಯ್ಯ ಸರ್ಕಾರದ ಮತ್ತೊಂದು ಕೊಡಗೆ ಶಾದಿಭಾಗ್ಯ ಎಲ್ಲರ ಕಣ್ಣನ್ನು ಕೆಂಪಗಾಗುವಂತೆ ಮಾಡಿತು. ಮುಸ್ಲಿಂ ಕುಟುಂಬದ ಬಡ ಹೆಣ್ಣುಮಕ್ಕಳ ಮದುವೆಗೆ ನೆರವು ನೀಡಲು ರೂಪಿಸಿರುವ ಈ ಯೋಜನೆಯನ್ನು ತಮ್ಮ ಸಮುದಾಯಗಳ ಬಡಕುಟುಂಬ ಹೆಣ್ಣುಮಕ್ಕಳಿಗೂ ನೀಡಿ ಎಂದು ಎಲ್ಲರೂ ಕೇಳುವಂತಾಯಿತು, ಅಷ್ಟೇ ಅಲ್ಲ ಈ ಸರ್ಕಾರ ಮತಬ್ಯಾಂಕ್‍ಗಾಗಿ ಅಲ್ಪ ಸಂಖ್ಯಾತರನ್ನು ಒಲೈಸುತ್ತಿದೆ ಎಂಬ ಆರೋಪವನ್ನೂ ಎದುರಿಸಬೇಕಾಯಿತು.
ಸರ್ಕಾರದ ವಿರುದ್ಧ ಕೇಳಿಬಂದ ಇಂತಹ ಅಪವಾದದಿಂದಾಗಿ ಸಾಮಾಜಿಕ ಸುಧಾರಣೆ ಎಂದೇ ಬಣ್ಣಿಸಲಾಗುತ್ತಿದ್ದ ಮೌಡ್ಯ ಪ್ರತಿಬಂಧಕ ಕಾಯಿದೆ, ಐಶಾರಾಮಿ ಹಾಗೂ ಆಡಂಬರದ ಮದುವೆ ನಿಯಂತ್ರಣ ಮತ್ತು ಕೆಂಡ ಹಾಯುವ ಪದ್ಧತಿಯನ್ನು ನಿಷೇಧಿಸುವ ನಿರ್ಧಾರಗಳಿಂದ ಸರ್ಕಾರ ಹೊರಬರಬೇಕಾಯಿತು. ಇದು ಸಿದ್ದರಾಮಯ್ಯ ಸರ್ಕಾರದ ದೊಡ್ಡ ಹಿನ್ನೆಡೆ ಎಂದೇ ಭಾವಿಸಲಾಗುತ್ತಿದೆ. 
ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆಯಾದರೂ ಅವುಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಸಮಯಕ್ಕೆ ಸರಿಯಾಗಿ ಅವುಗಳು ಫಲಾನುಭವಿಗಳಿಗೆ ತಲುಪುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಶಾಸಕಾಂಗ ಮತ್ತು ಕಾರ್ಯಾಂಗದ ನಡುವಿನ ಸಮನ್ವಯದ ಕೊರತೆ. ರಾಜ್ಯವನ್ನು ಕಾಡುತ್ತಿರುವ ಬರಗಾಲ ಪರಿಸ್ಥಿತಿಯಲ್ಲಿ ಕೈಗೊಂಡಿರುವ ಪರಿಹಾರ ಕಾಮಗಾರಿಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಇದಕ್ಕೆ ಮೇಲಿನ ಹಂತದಿಂದ ಹಿಡಿದು ಕೆಳ ಹಂತಹ ಅಧಿಕಾರಿಗಳ ನಿರ್ಲಕ್ಷ್ಯ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಈ ನಿರ್ಲಕ್ಷ್ಯದ ವಿರುದ್ಧ ಸಿಎಂ ಹಲವು ಬಾರಿ ಮಾತಿನ ಚಾಟಿ ಬೀಸಿದ್ದರೂ ಅದು ನಿರೀಕ್ಷಿತ ಫಲಿತಾಂಶ ನೀಡಿಲ್ಲ.
ಇದಕ್ಕೆ ಪ್ರಮುಖ ಕಾರಣ  ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂಬ ಕೊರಗು ಅಧಿಕಾರಿಗಳ ವಲಯದಲ್ಲಿದೆ. ಅದರಲ್ಲೂ ಪ್ರಮುಖವಾಗಿ ಕೇಂದ್ರ ಸರ್ಕಾರ ತನ್ನ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರುತ್ತಿದೆ, ಆದರೆ ರಾಜ್ಯ ಸರ್ಕಾರ ಈಗಷ್ಟೇ 7ನೇ ವೇತನ ಆಯೋಗ ರಚನೆಯ ಘೋಷಣೆ ಮಾಡಿದೆ, ಆಯೋಗಕ್ಕೆ ಇನ್ನು ಅಧ್ಯಕ್ಷರ ನೇಮಕ ಮಾಡಿಲ್ಲ, ಯಾವಾಗ ಆಯೋಗಕ್ಕೆ ಅಧ್ಯಕ್ಷರನ್ನು ನೇಮಕ ಮಾಡುತ್ತಾರೆ, ಅವರು ಅಧ್ಯಯನ ಪೂರ್ಣಗೊಳಿಸಿ ಯಾವಾಗ ವರದಿ ನೀಡುತ್ತಾರೆ, ಇನ್ನು ಅದರ ಅನುಷ್ಠಾನ ಯಾವಾಗ, ತಮ್ಮ ವೇತನ ಪರಿಷ್ಕರಣೆಗೆ ಕಾಲ ಕೂಡಿ ಬರುವುದು ಯಾವಾಗ ಎಂಬ ಪ್ರಶ್ನೆಗಳು ಸರ್ಕಾರಿ ನೌಕರರ ವಲಯದಲ್ಲಿ ಮೂಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಆಗ್ರಹಿಸಿ ಒಂದು ಸಂಘಟನೆಗೆ ಸೇರಿದ ನೌಕರರು ಪ್ರತಿಭಟನೆಯ ಮೂಲಕ ಸರ್ಕಾರಕ್ಕೆ ಬಿಸಿಯನ್ನೂ ಮುಟ್ಟಿಸಿದ್ದಾರೆ. ಹೀಗಾಗಿ ಸರ್ಕಾರ ತನ್ನ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾದ ಅಗತ್ಯತೆ ಎದುರಾಗಿದೆ. 

ಚುನಾವಣಾ ವರ್ಷದಲ್ಲಿ ಸರ್ಕಾರದ ಜನಪ್ರಿಯ ಯೋಜನೆಗಳು ಅತ್ಯಂತ ವೇಗವಾಗಿ ಮತದಾರರನ್ನು ತಲಪಬೇಕು ಇದಕ್ಕೆ ಸರ್ಕಾರಿ ನೌಕರರು ಹೆಚ್ಚು ಆಸಕ್ತಿಯಿಂದ ಕೆಲಸ ಮಾಡಬೇಕು, ಇಂತಹ ವಾತಾವರಣ ಸೃಷ್ಠಿಯಾಗಬೇಕಾದರೆ ಸರ್ಕಾರಿ ನೌಕರರು ಕೇಳುತ್ತಿರುವ ವೇತನ ಆಯೋಗ ರಚನೆಗೂ ಮುನ್ನ ಮದ್ಯಂತರ ಪರಿಹಾರದ ಬೇಡಿಕೆ ಈಡೇರಿಸಬೇಕು, ಹಾಗಾದರೆ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೌಕರರ ಪ್ರೀತಿಗೆ ಪಾತ್ರವಾಗಲಿದೆ. ಜೊತೆಗೆ ಆಡಳಿತ ಯಂತ್ರಕ್ಕೆ ಚುರುಕು ಸಿಗಲಿದೆ. ಇದು ಹಣಕಾಸು ಇಲಾಖೆ ಜವಾಬ್ದಾರಿ ಹೊಂದಿರುವ ಸಿಎಂ ಅವರಿಗೆ ಸವಾಲಿನ ಸಂಗತಿ.
ಎಲ್ಲಾ ಜಾತಿಯವರ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯನ್ನು ತಿಳಿದು ನಿಜವಾಗಿಯೂ ಹಿಂದುಳಿದವರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸುವ ದೃಷ್ಠಿಯಿಂದ ಸರ್ಕಾರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ನಡೆಸಿದೆ. ಇನ್ನು ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಕಾಂಗ್ರೆಸ್, ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗಲೇ ಸಿದ್ದರಾಮಯ್ಯ ಈ ಯೋಜನೆಗೆ ಆರ್ಥಿಕ ನೆರವು ಬಿಡುಗಡೆ ಮಾಡಿದ್ದರು. ಆ ನಂತರದಲ್ಲಿ ಯೋಜನೆ ಗ್ರಹಣ ಹಿಡಿದಿತ್ತು. 
ನಂತರ ಸಿದ್ದರಾಮಯ್ಯ ಸಿಎಂ ಆಗಿ ಬಂದ ನಂತರ ವಿವಿಧ ಜಾತಿಗಳ ನಿಖರ ಜನಸಂಖ್ಯೆ ತಿಳಿದು, ಆ ಜಾತಿಗಳ ಸಾಮಾಜಕ ಮತ್ತು ಆರ್ಥಿಕ ಸ್ಥಿತಿ-ಗತಿ ಆಧರಿಸಿ ಯೋಜನೆ ರೂಪಿಸಿ ಹಣ ಬಿಡುಗಡೆ ಮಾಡಿದರೆ, ಸರ್ಕಾರದ ಯೋಜನೆ ಕಟ್ಟಕಡೆಯ ವ್ಯಕ್ತಿಗೂ ತಲಪುತ್ತದೆ ಎಂದು ಪ್ರತಿಪಾದಿಸಿ ಜಾತಿ, ಜನಗಣತಿಗೆ ಒತ್ತು ನೀಡಲಾಯಿತು. ಸದ್ಯ ಗಣತಿ ಕಾರ್ಯ ಪೂರ್ಣಗೊಂಡಿದ್ದು ಅಂತಿಮ ವರದಿ ಸಿದ್ದಗೊಳ್ಳುತ್ತಿದೆ. ಆದರೆ ಇದು ವಿವಾದವಾಗಿ ಮಾರ್ಪಟ್ಟು ಸರ್ಕಾರದ ವಿರುದ್ದ ಜನಾಕ್ರೋಶಕ್ಕೆ ಕಾರಣವಾಗುವ ಲಕ್ಷಣ ಗೋಚರಿಸುತ್ತಿದೆ. ಈಗಾಗಲೇ ಅದರ ಬಿಸಿ ಸರ್ಕಾರವನ್ನು ತಟ್ಟಿದೆ. ಹೀಗಾಗಿ ವಿವಾದ ಉದ್ಬವವಾಗದಂತೆ ನೋಡಿಕೊಳ್ಳಬೇಕಾಗಿದೆ. 
ಸರ್ಕಾರ ಜಾತಿ-ಜಾತಿಗಳ, ಧರ್ಮ-ಧರ್ಮಗಳ ನಡುವೆ ಬಿರುಕು ಮೂಡಿಸಲೆಂದೇ ಜಾತಿಗಣತಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಈಗಾಗಲೆ ಇದರ ಕೆಲ ಮಾಹಿತಿಗಳು ಸೋರಿಕೆಯಾಗಿದ್ದು, ಪ್ರಮುಖ ಸಮುದಾಯಗಳಲ್ಲಿ ವಿವರಗಳ ಬಗ್ಗೆ ಅಸಮದಾನ ಉಂಟಾಗಿದೆ. ಅದರಲ್ಲೂ ಪ್ರಮುಖವಾಗಿ ಲಿಂಗಾಯಿತ, ಒಕ್ಕಲಿಗ ಸಮುದಾಯಗಳು ಸರ್ಕಾರಕ್ಕೆ ಬಹಿರಂಗವಾಗಿಯೇ ಸವಾಲೆಸಿದಿವೆ. ಇದರ ನಡುವೆ ದಲಿತ ಸಮುದಾಯದಲ್ಲಿ ಎಡಗೈ ಮತ್ತು ಬಲಗೈ ಜನಸಂಖ್ಯೆ ವಿವರ ಬಹಿರಂಗಗೊಂಡರೆ ಸರ್ಕಾರ ಮತ್ತಷ್ಟು ಪ್ರತಿರೋಧ ಎದುರಿಸಬೇಕಾಗುತ್ತದೆ, ಇಂತಹ ಜಾತಿಯ ಜನಸಂಖ್ಯೆ ಇಂತಿಷ್ಟು ಇದೆ ಎಂದು ಗೊತ್ತಾದರೆ ಕಡಿಮೆ ಜನಸಂಖ್ಯೆಯಿರುವ ಜಾತಿಗಳು ತಮ್ಮ ವಿರುದ್ದ ತಿರುಗಿ ಬೀಳುವ ಪರಿಸ್ಥಿತಿಯನ್ನು ತಡೆಗಟ್ಟಲು ಸಿದ್ದರಾಮಯ್ಯ ಕಸರತ್ತು ನಡೆಸಬೇಕಾಗಿದೆ. ಸರ್ಕಾರದ ಅವಧಿ ಇನ್ನೊಂದು ವರ್ಷ ಬಾಕಿಯಿರುವಾಗ ಇದನ್ನು ಬಹಿರಂಗ ಪಡಿಸುವುದೇ ಅಥವಾ ಬೇಡವೆ ಎಂಬ ದ್ವಂದ್ವದಲ್ಲಿದ್ದಾರೆ. ಆದರೂ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಜನಸಂಖ್ಯೆಯ ಪ್ರಮಾಣ ಹೆಚ್ಚಿದೆ ಎಂಬ ಮಾಹಿತಿಯಿರುವುದರಿಂದ ಇದರ ವಿವರಗಳನ್ನು ಬಹಿರಂಗಪಡಿಸಿ ಅದರ ಲಾಭ ಪಡೆಯಲು ಪ್ರಯತ್ನಿಸಬಹುದಾಗಿದೆ.
ಕಾಂಗ್ರೆಸ್ ಮಟ್ಟಿಗೆ ಇಡೀ ದೇಶಕ್ಕೆ ಶೋಕೇಶ್ ಆಗಬೇಕಾದ ಸರ್ಕಾರ ಇದಾಗಿದೆ. ಆದರೆ ಇದೊಂದು ಮಾಮೂಲಿ ಸರ್ಕಾರ ಎಂಬ ಅಭಿಪ್ರಾಯ ಜನರ ಮನಸ್ಸಿನಲ್ಲಿ ಮೂಡುವಂತಾಗಿದೆ. ಇಂತಹ ಇಮೇಜನ್ನು ದೂರ ಮಾಡಬೇಕಾಗಿರುವುದು ಸಿದ್ದರಾಮಯ್ಯ ಅವರ ಮುಂದಿರುವ ದೊಡ್ಡ ಸವಾಲು. ಆದೆ ಇದಕ್ಕಿರುವ ಸಮಯ ಕೂಡ ಅತ್ಯಂತ ಕಡಿಮೆ. 
ಅಧಿಕಾರಕ್ಕೆ ಬಂದ ಆರಂಭದಲ್ಲಿ ಸಿದ್ದರಾಮಯ್ಯ ಮಾಡಿದ ಘೋಷಣೆಗಳು ಘೋಷಣೆಗಳಾಗಿಯೇ ಇವೆ. ನೀರು, ವಿದ್ಯುತ್, ವಸತಿ, ಆರೋಗ್ಯ, ರಸ್ತೆ ಮೊದಲಾದ ವಲಯದಲ್ಲಿ ಈ ಸರ್ಕಾರಕ್ಕೆ ದೂರ ದೃಷ್ಠಿಯೇ ಇಲ್ಲ ಎಂದು ಪ್ರತಿಪಕ್ಷಗಳು ಸತತವಾಗಿ ಆರೋಪ ಮಾಡುತ್ತಿವೆ. ಇದಕ್ಕೆ ಪ್ರಮುಖ ಕಾರಣ ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಚಾರದ ಕೊರತೆ. ಅನ್ನಭಾಗ್ಯ, ಕ್ಷೀರ ಭಾಗ್ಯದಂತಹ ಜನಪ್ರಿಯ ಯೋಜನೆಗಳು ಕೆಲವನ್ನು ಬಿಟ್ಟರೆ ಈ ಸರ್ಕಾರ ಯಾವುದೇ ಸಾಧನೆ ಮಾಡಿಲ್ಲ ಎಂದು ಪ್ರತಿಪಕ್ಷಗಳು ದೊಡ್ಡ ರೀತಿಯಲ್ಲಿ ಜನರ ಮುಂದೆ ಬಿಂಬಿಸಲು ಹೊರಟಿವೆ. 
ಆದರೆ ವಾಸ್ತವ ಸ್ಥಿತಿಯೇ ಬೇರೆ. ಸರ್ಕಾರ ಹಲವಾರು ವಲಯದಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿದೆ. ಆದರೆ ಅವುಗಳ ಬಗ್ಗೆ ಜನರಿಗೆ ಅರಿವು ಮೂಡಿಸಿ, ಇದು ಕಾಂಗ್ರೆಸ್ ಸರ್ಕಾರದ ಯೋಜನೆಗಳು ಎಂದು ಬಿಂಬಿಸಲು ಸಾದ್ಯವಾಗಿಲ್ಲ. ಈ ಸಂಬಂಧ ವಾರ್ತಾ ಇಲಾಖೆ ಹಲವು ಯೋಜನೆ ರೂಪಿಸಿದರೂ ಅವು ಸಮರ್ಪಕವಾಗಿ ಅನುಷ್ಟಾನಗೊಂಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳ ಸಾಧನೆ ಬಿಂಬಿಸುಬ ಕಿರು ಹೊತ್ತಿಗೆ ಲಕ್ಷಾಂತರ ಸಂಖ್ಯೆಯಲ್ಲಿ ಮುದ್ರಣಗೊಂಡು ಗೋದಾಮಿನಲ್ಲಿ ಕೊಳೆಯುತ್ತಿವೆ. ಈ ಕಿರು ಹೊತ್ತಿಗೆ ಮುದ್ರಿಸಲು ಸಾರ್ವಜನಿಕರ ತೆರಿಗೆಯ ಹಣ ಕೆಲವು ಮುದ್ರಣ ಸಂಸ್ಥೆಗಳ ಪಾಲಾಯಿತೇ ಹೊರತು, ಯಾವುದೇ ಪುಸ್ತಕಗಳು ಜನರಿಗಿರಲಿ ಕಾಂಗ್ರೆಸ್ ಕಾರ್ಯಕರ್ತರನ್ನೇ ತಲುಪಿಲ್ಲ. ಪುಸ್ತಕಗಳನ್ನು ಪಕ್ಷದ ಕಾರ್ಯಕರ್ತರ ಮೂಲಕ ಮತದಾರರನ್ನು ತಲುಪಿಸಲು ಸಿಎಂ ಮತ್ತವರ ತಂಡ ಯೋಜನೆ ರೂಪಿಸಿತ್ತು. ಆದರೆ ಈ ಯೋಜನೆ ಇದೀಗ ಹಳ್ಳ ಹಿಡಿದಿದೆ. ಕೆಲವು ಮುದ್ರಕರು ಇದರಿಂದ ಲಾಭ ಮಾಡಿಕೊಂಡಿದ್ದಾರೆ. ಯೋಜನೆ ನಿರ್ವಹಣೆ ಮಾಡಿದ ವಾರ್ತಾ ಇಲಾಖೆ ತನಗೇನು ಗೊತ್ತಿಲ್ಲದಿರುವಂತೆ ತಣ್ಣಗೆ ಕುಳಿತಿದೆ.
ದೇಶದ ಬಹುತೇಕ ರಾಜ್ಯಗಳು ಬಿಜೆಪಿ ಆಡಳಿತಗೊಳಪಟ್ಟಿದೆ. ಅಲ್ಲೆಲ್ಲಾ ಒಂದಲ್ಲಾ ಒಂದು ವಿನೂತನ ಯೋಜನೆಗಳ ಮೂಲಕ ಆ ಸರ್ಕಾರಗಳು ದೇಶಾದ್ಯಂತ ದೊಡ್ಡ ಮಟ್ಟದ ಸುದ್ದಿಯನ್ನೂ ಮಾಡುತ್ತಿವೆ. ಇವುಗಳನ್ನು ಮೀರಿಸುವ ರೀತಿಯಲ್ಲಿ ಕೆಲಸ ಮಾಡುವ ಮೂಲಕ ಕಾಂಗ್ರೆಸ್ ನೇತೃತ್ವದ ಸರ್ಕಾರ ಇಂತಹ ಯೋಜನೆ ರೂಪಿಸಿದೆ ಎಂಬ ಹೆಗ್ಗಳಿಕೆಯನ್ನೂ ಸಿದ್ದರಾಮಯ್ಯ ಸರ್ಕಾರ ಪಡೆದುಕೊಳ್ಳಬಹುದಿತ್ತು. ಅದರಲ್ಲೂ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿಯ ಬ್ರಹ್ಮಾಂಡ ಬ್ರಷ್ಟಾಚಾರದಿಂದ ರೋಸಿದ ಜನತೆ ಬಾರಿ ನಿರೀಕ್ಷೆಯೊಂದಿಗೆ ಕಾಂಗ್ರೆಸ್‍ನ್ನು ಆಯ್ಕೆ ಮಾಡಿದ್ದರು. ಆದರೆ ನಾಲ್ಕು ವರ್ಷದ ಆಡಳಿತವನ್ನೂ ಗಮನಿಸಿದಾಗ ಹಲವಾರು ನಿರ್ಧಾರಗಳಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ.
ನೀರಾವರಿ ಯೋಜನೆಗಳ ಅನುಷ್ಟಾನ ಹಾಗು ಹಲವು ಯೋಜನೆಗಳ ಕಾಮಗಾರಿ ಗುತ್ತಿಗೆ, ರಸ್ತೆ ನಿರ್ಮಾಣ ಗುತ್ತಿಗೆಯಲ್ಲಿ ಬ್ರಷ್ಟಾಚಾರದ ವಾಸನೆ ಹೊಡೆಯುತ್ತಿದೆ. ಕೆಳಹಂತದಿಂದ ಹಿಡಿದು ಮೇಲುಹಂತದವರೆಗೆ ಬ್ರಷ್ಟಾಚಾರವನ್ನು ನಿಯಂತ್ರಸಲು ಸಿದ್ದರಾಮಯ್ಯ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ, ದುಬಾರಿ ಬೆಲೆಯ ಹುಬ್ಲೋಟ್ ವಾಚ್ ಉಡುಗೊರೆ ಸ್ವೀಕಾರ ಪ್ರಕರಣದಲ್ಲಿ ಹಲವು ರೀತಿಯ ಕಸರತ್ತು ನಡೆಸಿ ಸಿದ್ದರಾಮಯ್ಯ ಶುದ್ದಹಸ್ತದ ಪ್ರಮಾಣ ಪತ್ರ ಪಡೆದರೂ ಜನರ ಮನಸ್ಸಿನಲ್ಲಿ ಅದರ ಹಿಂದೆ ಉದ್ಭವಿಸಿದ ಅನುಮಾನಗಳು ದೂರವಾಗಿಲ್ಲ. ಬೆಂಗಳೂರು ಸುತ್ತಮುತ್ತ ನಡೆದಿರುವ ಭೂ ಪರಿವರ್ತನೆಯ ಪ್ರಕ್ರಿಯೆ ಸಿದ್ದರಾಮಯ್ಯ ಅವರ ಪ್ರಾಮಾಣಿಕತೆಯ ಪ್ರಶ್ನೆಗಳು ಏಳುವಂತೆ ಮಾಡಿದರೆ, ರಾಜಕಾಲುವೆಯ ಒತ್ತುವರಿ ತೆರವು ಹೆಸರಲ್ಲಿ ನಡೆದ ಕಾರ್ಯಚರಣೆ ಆನಂತರದಲ್ಲಿ ಇಡಿ ಪ್ರಕ್ರಿಯೆ ಏಕಾಏಕಿ ಸ್ಥಗಿತಗೊಂಡಿದ್ದನ್ನು ಕಂಡಾಗ ಸರ್ಕಾರದ ಆಡಳಿತ ನಿರ್ವಹಣೆಯಲ್ಲಿನ ಪಾರದರ್ಶಕತೆ ಅನುಮಾನಗಳನ್ನು ಹುಟ್ಟುಹಾಕಿದೆ.
ಸಿದ್ದರಾಮಯ್ಯ ಓರ್ವ ನುರಿತ ಆರ್ಥಿಕ ತಜ್ಞ, ಸಾಮಾಜಕ ಸಮತೋಲನ ಕಾಪಾಡುವ ಹರಿಕಾರ ಎಂದೆಲ್ಲಾ ವಿಶ್ವಾಸವಿಟ್ಟ ಜನತೆ ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ ಸರ್ಕಾರವನ್ನ ಅಸ್ಥಿತ್ವಕ್ಕೆ ತಂದರು. ಆರಂಭದಲ್ಲಿ ಹತ್ತಾರು ಘೋಷಣೆ ಹೊರಡಿಸಿ ಜನಪ್ರಿಯತೆ ಗಳಿಸಿದ ಸಿದ್ದರಾಮಯ್ಯ ನಂತರದ ದಿನಗಳಲ್ಲಿ ಆಡಳಿತದ ಮೇಲಿನ ನಿಯಂತ್ರಣ ಕಳೆದುಕೊಂಡರು. ಮುತ್ಸದ್ಧಿ ಆರ್ಥಿಕ ತಜ್ಞರಂತೆ ಕಾಣಿಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಹಣಕಾಸು ಇಲಾಖೆ ನಿರ್ವಹಿಸಲಾರಂಭಿಸಿದಾಗ ಹಾದಿ ತಪ್ಪಿದರೇನೋ ಎಂಬ ಟೀಕೆಗಳು ಕೇಳಿಬರುತ್ತಿವೆ. ಇದಕ್ಕೆ ಪ್ರಮುಖ ಕಾರಣ ರಾಜ್ಯದ ಜನರ ಮೇಲೆ ಹೊರಿಸಿದ ಸಾಲದ ಭಾರ. ಹಿಂದಿನ ಬಿಜೆಪಿ ಸರ್ಕಾರ ಐದು ವರ್ಷದಲ್ಲಿ 5474 ಕೋಟಿರೂಪಾಯಿ ಸಾಲ ಮಾಡಿದರೆ, ಸಿದ್ದರಾಮಯ್ಯ ಎರಡೇ ವರ್ಷದಲ್ಲಿ ಈ ದಾಖಲೆ ಅಳಿಸಿ ಹಾಕಿದರು. ನಾಲ್ಕು ವರ್ಷದ ಆಡಳಿತಾವಧಿಯಲ್ಲಿ ಸುಮಾರು 80 ಸಾವಿರ ಕೋಟಿ ಸಾಲ ಸಮೀಪಿಸಿದೆ. ಬರಗಾಲ ನಿರ್ವಹಣೆಗೆ ಕೇಂದ್ರ ಸರ್ಕಾರ ನೀಡಿದ 2200 ಕೋಟಿ ರೂಪಾಯಿ ಸಮರ್ಪಕ ಬಳಕೆಯಾಗಿಲ್ಲ ಎಂಬ ಪ್ರತಿಪಕ್ಷದ ಆರೋಪಕ್ಕೆ ರಾಜಕೀಯ ಉತ್ತವನ್ನು ನೀಡುವುದನ್ನು ಬಿಟ್ಟರೆ ಇಲ್ಲಿಯವರೆಗೆ ಅಂಕಿ-ಆಂಶಗಳನ್ನೊಳಗೊಂಡ ವಿವರಣೆ ನೀಡಿಲ್ಲ. 
ಕರ್ನಾಟಕವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಘೋಷಣೆ ನಾಲ್ಕು ವರ್ಷಗಳಿಂದ ಕೇಳಿ ಅದೊಂದು ಸವಕಲು ನಾಣ್ಯ ಎಂಬಂತಾಗಿದೆ. ನಾಲ್ಕು ವಷ್ ಅವಧಿಯಲ್ಲಿ ಎಷ್ಟು ಮನೆಗಳಿಗೆ ಬೇಡಿಕೆ ಇತ್ತು, ಅದರಲ್ಲಿ ಎಷ್ಟು ಈಡೇರಿಸಲಾಗಿದೆ ಎಂಬ ವಿವರ ನೋಡಿದರೆ ಎಂತವರಲ್ಲೂ ಈ ಸರ್ಕಾರದ ಬಗ್ಗೆ ನಿರಾಶೆ ಆವರಿಸುತ್ತದೆ. ಅದರಲ್ಲೂ ಅರಣ್ಯ ಹಕ್ಕು ಕಾಯಿದೆ ಬಗ್ಗೆ ಉಂಟಾದ ಗೊಂದಲ ಇತ್ಯರ್ಥ ಪಡಿಸದ ಪರಿಣಾಮ ಅರಣ್ಯ ಪ್ರದೇಶದಲ್ಲಿ ತಲತಲಾಂತರದಿಂದ ವಾಸಿಸುತ್ತಿದ್ದ ಗಿರಿಜನ ವಾಸಿಗಳು ಬೀದಿಗೆ ಬೀಳುವ ಆತಂಕ ಎದುರಿಸುತ್ತಿದ್ದಾರೆ. 
ಸಿದ್ದರಾಮಯ್ಯ ಸಿಎಂ ಆಗಿ ಮೊದಲ ವರ್ಷ ಪೂರ್ಣಗೊಳಿಸಿದಾಗ, ಸಾಧನೆಯ ಪಟ್ಟಿಮಾಡಿದಾಗ ಹೇಳುವ ಅನ್ನಭಾಗ್ಯ, ಕ್ಷೀರಭಾಗ್ಯ, ಮೈತ್ರಿ, ಮನಸ್ವಿನಿ, ವಿದ್ಯಾಸಿರಿ, ಕೃಷಿಭಾಗ್ಯದಂತಹ ಯೋಜನೆಗಳನ್ನು ಹೇಳಲಾಗಿತ್ತು. ಈಗ ನಾಲ್ಕು ವರ್ಷ ಪೂರ್ಣಗೊಂಡಾಗಲೂ ಇದೇ ಯೋಜನೆಗಳನ್ನು ಸಾಧನೆ ಎಂದು ಪಟ್ಟಿ ಮಾಡಲಾಗುತ್ತಿದೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳ ಪೈಕಿ 135 ಭರವಸೆ ಈಡೇರಿಸಿದ್ದು ಉಳಿದ 35 ಭರವಸೆಗಳನ್ನು ಈ ವರ್ಷ ಈಡೇರಿಸುವುದಾಗಿ ಪ್ರಕಟಿಸಲಾಗುತ್ತಿದೆ.

ಅನ್ನಭಾಗ್ಯ ಯೋಜನೆಗಳ ಮೂಲಕ ರಾಜ್ಯದ ಒಂದೂ ಕಾಲು ಕೋಟಿ ಕುಟುಂಬಗಳಿಗೆ ಉಚಿತ ಪಡಿತರ ನೀಡಲಾಗುತ್ತಿದೆ. ಪರಿಶಿಷ್ಟ ಜಾತಿ ಮತ್ತು ವರ್ಗ ಮತ್ತು ಹಿಂದುಳಿದ ಸಮುದಾಯದ ಮಕ್ಕಳಿಗೂ ವಿದ್ಯಾಸಿರಿ ಯೋಜನೆಯ ಮೂಲಕ ಉಚಿತ ಪಠ್ಯ ಪುಸ್ತಕ, ಸೈಕಲ್, ಲ್ಯಾಪ್‍ಟಾಪ್, ಸಮವಸ್ತ್ರ, ಶೂ ವಿತರಿಸಲಾಗಿದೆ. ಸ್ವ ಉದ್ಯೋಗ ಯೋಜನೆಗಳ ಅಡಿ ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜು ಅರಸು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ನಿಗಮಗಳಿಂದ ಪಡೆದಿದ್ದ ಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ. ನೇಕಾರರ, ಮೀನುಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡಲಾಗಿದೆ.  ರೈತರಿಗೆ ಮೂರುಲಕ್ಷದವರೆಗೆ ಬಡ್ಡಿ ರಹಿತ ಕೃಷಿ ಸಾಲ, ಕಾವೇರಿ-ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳಿಗಾಗಿ ನಾಲ್ಕು ವರ್ಷದಲ್ಲಿ 35 ಸಾವಿ ಕೋಟಿ ವೆಚ್ಚಮಾಡಲಾಗಿದೆ. ಬಯಲು ಬಹಿರ್ದೆಸೆ ಮುಕ್ತ ಕರ್ನಾಟಕ ಘೋಷಣೆಯಡಿ 30ಲಕ್ಷ ಗ್ರಾಮೀಣ ಶೌಚಾಲಯ ನಿರ್ಮಾಣ, ಹೊಗೆ ರಹಿತ ಒಲೆ ಯೋಜನೆ ಅಡಿ ಕಡು ಬಡವರಿಗೆ ಉಚಿತ ಅಡುಗೆ ಅನಿಲ ಸಂಪರ್ಕ ಸ್ಟೌವ್ ವಿತರಣೆ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನಗದು ರಹಿತ ಆರೋಗ್ಯ ಸೌಲಭ್ಯ ನೀಡುವ ರಾಜೀವ್ ಆರೋಗ್ಯ ಭಾಗ್ಯ, ಶುದ್ದ ಕುಡಿಯುವ ನೀರು ಪೂರೈಕೆಗಾಗಿ ರಾಜ್ಯಾದ್ಯಂತ 5 ಸಾವಿರ ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೀಗೆ ಸಾಧನೆಗಳ ಪಟ್ಟಿಯನ್ನೇನೊ ಮಾಡುತ್ತಾರೆ. ಆದರೆ ಈ ಎಲ್ಲವೂ ಮೊದಲ ವರ್ಷ ಘೋಷಣೆ ಮಾಡಿ ಅವನ್ನು ಪ್ರತಿ ವರ್ಷ ವಿಸ್ತರಣೆ ಮಾಡಿದ ಯೋಜನೆಗಳೇ ಹೊರತು, ವರ್ಷದಿಂದ ವರ್ಷಕ್ಕೆ ಪ್ರಕಟವಾದ ವಿನೂತನ ಯೋಜನೆಗಳೇನು ಎಂದು ಹುಡುಕಿದರೆ ವಿವರ ಸಿಗುವುದು ಕಷ್ಟ.
ಆದರೆ ಆರೋಪಗಳ ಬಗ್ಗೆ ಗಮನ ಹರಿಸುವುದಾದರೆ ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣ ಆರೋಪ ಇನ್ನೂ ಹಾಗೇ ಇದೆ. ಬಿಬಿಎಂಪಿಗೆ ಸೇರಿದ ಹಲವು ಕಡತಗಳು ಆಡಳಿತ ಪಕ್ಷದ ಶಾಸಕರ  ಮನೆಯಲ್ಲಿ ಸಿಕ್ಕ ಪ್ರಕರಣ ಏನಾಯಿತು ಎಂದು ಯಾರಿಗೂ ಮಾಹಿತಿ ನೀಡಿಲ್ಲ. ಬಿಬಿಎಂಪಿಯಲ್ಲಿ 100 ವಾರ್ಡ್‍ಗಳಿಗೆ ಕುಡಿಯುವ ನೀರು ಪೂರೈಸಲು 1000 ಕೋಟಿ ಬಿಡುಗಡೆ ಮಾಡಿದರೂ ಎಷ್ಟೊ ಹಣ ಯಶವಂತಪುರ, ಕೆ.ಆರ್. ಪುರ ಮತ್ತು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಯಾಕೆ ಬಿಡುಗಡೆ ಆಯಿತು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. 
ಐಪಿಎಲ್ ಬೆಟ್ಟಿಂಗ್ ದಂದೆಯಲ್ಲಿ, ಒಂದಂಕಿ ಲಾಟರಿಯಲ್ಲಿ ಹಲವು ಮಂದಿ ಹಿರಿಯ ಪೋಲಿಸ್ ಅಧಿಕಾರಿಗಳು ಶಾಮೀಲು ಎಂಬ ವರದಿಗಳಿದ್ದರೂ ಯಾವ ಅಧಿಕಾರಿಗಳ ಮೇಲೂ ಕ್ರಮ ಜರುಗಿಸಿಲ್ಲ. ಅವರಿಗೆ ಕೆಲವು ಕಾಲ ಅಮಾನತ್ತಿನ ಶಿಕ್ಷೆ ನೀಡಿ, ಮತ್ತೆ ಆ ಅಧಿಕಾರಿಗಳನ್ನು ಆಯಕಟ್ಟಿನ ಜಾಗಗಳಿಗೆ ವರ್ಗಾವಣೆ ಮಾಡಲಾಗಿದೆ. ರಾಜ್ಯದ ಹಲವೆಡೆ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಹತ್ಯೆಗೆ ಈ ದಂಧೆಕೋರರು ಯತ್ನ ನಡೆಸಿದರೂ ಈ ದಂಧೆಯ ವಿರುದ್ದ ಸರ್ಕಾರ ಸಮರ ಸಾರಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ರೀತಿ ಸರ್ಕಾರದ ವಿರುದ್ದ ಇರುವ ಆರೋಪಗಳ ಪಟ್ಟಿ ಮಾಡುತ್ತಾಹೋದರೆ ಅವೆಲ್ಲಾ ಒಂದಲ್ಲಾ ಒಂದು ಕಡೆಯಿಂದ ಸಿದ್ದರಾಮಯ್ಯ ಅವರತ್ತಲೇ ಬೊಟ್ಟು ಮಾಡುವಂತಾಗುತ್ತಿದೆ.

ಇಂತಹ ಎಲ್ಲಾ ಅಪವಾದ, ವೈರುದ್ಯಗಳಿದ್ದರೂ ಸಿದ್ದರಾಮಯ್ಯ ಅವರಿಗೆ ಅದೃಷ್ಟದ ಬಲವಿದೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗುತ್ತಿದ್ದಂತೆ ಭರ್ಜರಿ ಸ್ವಾಗತ ಪಡೆಯುವ ಮೂಲಕ ಸಂಚಲನ ಮೂಡಿಸಿದ ಯಡಿಯೂರಪ್ಪ ಇದೀಗ ತಮ್ಮ ವಿರುದ್ದ ಕೇಳಿ ಬಂದಿರುವ ಬಿನ್ನಮತದಿಂದ ತತ್ತರಿಸಿ ಹೋಗಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ವೈಪಲ್ಯಗಳನ್ನು ಜನರ ಮುಂದಿಟ್ಟು ಪಕ್ಷ ಸಂಘಟನೆಯ ಮೂಲಕ ಚುನಾವಣೆ ಎದುರಿಸಲು ಸಜ್ಜಾಗಬೇಕಿದ್ದ ಯಡಿಯೂರಪ್ಪ ತಮ್ಮ ವಿರುದ್ದ ಈಶ್ವರಪ್ಪ ಬಣ ಮಾಡುತ್ತಿರುವ ತಂತ್ರ ಪ್ರತಿತಂತ್ರವನ್ನು ಹತ್ತಿಕ್ಕುವುದರಲ್ಲೇ ಕಾಲಕಳೆಯ ಬೇಕಾಗಿದೆ. ಹೀಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದ ಲಿಂಗಾಯಿತ ಸಮುದಾಯ ಕೂಡ ಇವರ ಆಂತರಿಕ ಕಲಹದಿಂದ ಬೇಸತ್ತಿದೆ, ಇದರ ಪರಿಣಾಮವೇ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಫಲಿತಾಂಶ ಎಂದು ವ್ಯಾಖ್ಯಾನಿಸಲಾಗುತ್ತಿದೆ. 
ಇನ್ನೂ ಜೆಡಿಎಸ್‍ನಲ್ಲೂ ಇದೇ ಸ್ಥಿತಿ. ಆ ಪಕ್ಷದ ಹಲವಾರು ಮಂದಿ ಈಗಾಗಲೇ ಕಾಂಗ್ರೆಸ್ ಕದ ತಟ್ಟಿದರೆ, ಮತ್ತೆ ಕೆಲವರು ಬಿಜೆಪಿಯತ್ತ ಮುಖ ಮಾಡುತ್ತಿದ್ದಾರೆ. ಮತ್ತೆ ಸಿಎಂ ಆಗುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಅದಕ್ಕಾಗಿ ಅಷ್ಟೇ ಉತ್ಸಾಹದಿಂದ ಪಕ್ಷ ಕಟ್ಟಲು ಮುಂದಾಗಲಿರುವುದು, ಈ ಹಿಂದಿನ ಬಿಜೆಪಿ ಸರ್ಕಾರದ ವಿರುದ್ದ ಸಾರಿದ್ದ ಸಮರದಂತೆ ಈಗಿನ ಸರ್ಕಾರದ ವಿರುದ್ದ ಸಾರದೇ ಇರುವುದು ಸಿದ್ದರಾಮಯ್ಯ ಅವರಿಗೆ ವರದಾನವಾಗಿದೆ. 
ಹೀಗಾಗಿ ಇಷ್ಟೆಲ್ಲಾ ವೈರುದ್ಯಗಳ ನಡುವೆಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿತ್ವಕ್ಕೆ ತರುತ್ತೇನೆಂದು ಅತ್ಯಂತ ಆತ್ಮ ವಿಶ್ವಾಸದಿಂದ ಹೇಳುವಂತೆ ಮಾಡಿದರೆ, ಹೈಕಮಾಂಡ್ ಕೂಡ ಅವರ ಬೆನ್ನಿಗೆ ನಿಂತಿರುವುದು ಅಚ್ಚರಿ ಎನಿಸುತ್ತಿಲ್ಲ. ಆದರೆ ಈ ಆತ್ಮವಿಶ್ವಾಸ ಈಡೇರುವುದೇ ಎಂಬುದು ಚುನಾವಣೆ ನಂತರವಷ್ಟೇ ತಿಳಿಯಲಿದೆ.


    


 

Links :ಟಾಪ್ ಪ್ರತಿಕ್ರಿಯೆಗಳು


Good covering of news writing of article is also fine go ahead
  • Ananad Bidarkundi
  • retaired