ದೆಹಲಿ: ಶಾಸಕರ ಅನರ್ಹತೆ ಆದೇಶ ರದ್ದು

Office-of-profit case: ‘Truth Wins,’ Said Kejriwal

23-03-2018

ಬೆಂಗಳೂರು: ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ನಡೆಸಿದ ಕುತಂತ್ರಕ್ಕೆ ಇಂದು ದೆಹಲಿ ಹೈಕೋರ್ಟ್ ಸರಿಯಾದ ತಪರಾಕಿ ಕೊಟ್ಟಿದೆ. ಆಮ್ ಆದ್ಮಿ ಪಕ್ಷದ 20 ಮಂದಿ ದೆಹಲಿಯ ಶಾಸಕರನ್ನು ಲಾಭದಾಯಕ ಹುದ್ದೆಯ ನೆಪವೊಡ್ಡಿ ಅನರ್ಹಗೊಳಿಸಿದ ಚುನಾವಣಾ ಆಯೋಗದ ಆದೇಶವನ್ನು ದೆಹಲಿ ಹೈಕೋರ್ಟ್‌ ರದ್ದುಗೊಳಿಸಿದೆ.

ದೆಹಲಿಯ ಮತದಾರರು ಕೊಟ್ಟ ಫಲಿತಾಂಶವನ್ನು ಅರಗಿಸಿಕೊಳ್ಳಲಾಗದ ಬಿಜೆಪಿಯ ಕೇಂದ್ರ ಸರ್ಕಾರ ವಾಮಮಾರ್ಗಗಳ ಮೂಲಕ ದೆಹಲಿಯ ಜನಪ್ರಿಯ ಸರ್ಕಾರವನ್ನು ಹಣಿಯಲು ಹೊರಟಿತ್ತು. ಸತತವಾಗಿ ಕಿರುಕುಳ ಕೊಡುವುದು, ಲೆಫ್ಟಿನೆಂಟ್ ಗವರ್ನರ್ ಮೂಲಕ ದೆಹಲಿ ಸರಕಾರದ ಕೆಲಸಗಳಿಗೆ ತಡೆಯೊಡ್ಡುವುದು, ಅಧಿಕಾರವನ್ನು ಕಿತ್ತುಕೊಳ್ಳಲು ಪ್ರಯತ್ನಿಸುವುದು ಮಾತ್ರವಲ್ಲದೇ ವಿವಿಧ ಸರಕಾರಿ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಪೊಲೀಸರಿಂದ ಸುಳ್ಳು ದೂರು ದಾಖಲಿಸುವುದು, ಸಿಬಿಐ ದಾಳಿ ನಡೆಸಿ ಬೇರೇನೂ ಸಿಗದಿದ್ದಾಗ ಕಸದ ಬುಟ್ಟಿ ಹಾಗೂ ಮಫ್ಲರ್‌ಗಳನ್ನು ಕೊಂಡೊಯ್ದ ಘಟನೆಗಳೂ ನಡೆದಿವೆ.

ಇವೆಲ್ಲಾ ಉಪಟಳಗಳಿಗೆ ಕಿರೀಟವಿಟ್ಟಂತೆ ಜನಾದೇಶವನ್ನೇ ಕೆಡಿಸಲು ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಪ್ರಜಾಪ್ರಭುತ್ವ ವಿರೋಧಿ ನಡೆಯನ್ನು ತೋರುತ್ತಾ ಒಕ್ಕೂಟ ವ್ಯವಸ್ಥೆಯನ್ನು ಹಾಳುಗೆಡವಲು ಹೊರಟಿದ್ದ ಬಿಜೆಪಿಯ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಸರಿಯಾದ ಗೂಸಾ ಕೊಟ್ಟಿದೆ.

ಗುಜರಾತ್ ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿದ್ದ, ಅಂದಿನ ಚುನಾವಣಾ ಆಯೋಗದ ಮುಖ್ಯಸ್ಥ ಎ.ಕೆ ಜ್ಯೋತಿ ತನ್ನ ಅಧಿಕಾರವಧಿ ಮುಗಿಯಲು ಎರಡೇ ದಿನಗಳಿರುವಾಗ ಸಂಶಯಾಸ್ಪದವಾಗಿ ಆಮ್ ಆದ್ಮಿ ಪಕ್ಷದ 20 ಶಾಸಕರನ್ನು ಅನರ್ಹಗೊಳಿಸುವ ಏಕಪಕ್ಷೀಯ ನಿರ್ಧಾರ ಕೈಗೊಂಡರು. ಆದರೆ ಆಮ್ ಆದ್ಮಿ ಪಕ್ಷದ ಶಾಸಕರನ್ನು ಅನರ್ಹತೆಗೆ ಒಳಪಡಿಸುವ ಸಮಯದಲ್ಲಿ ಸಹಜ ನ್ಯಾಯತತ್ವಗಳನ್ನು ಪಾಲಿಸದೇ, ದುರುದ್ದೇಶದ ಕ್ರಮ ಕೈಗೊಂಡಿರುವುದನ್ನು ಹೈಕೋರ್ಟ್ ಸ್ಪಷ್ಟವಾಗಿ ಉಲ್ಲೇಖಿಸಿದೆ. ಇದು ಕೇಂದ್ರದ ಬಿಜೆಪಿ ಸರ್ಕಾರದ ಕುತಂತ್ರವನ್ನು ಮತ್ತು ನಿಜಬಣ್ಣವನ್ನು ಬಯಲು ಮಾಡಿದೆ.


ಸಂಬಂಧಿತ ಟ್ಯಾಗ್ಗಳು

delhi high court ಕಾರ್ಯದರ್ಶಿ ಹೈಕೋರ್ಟ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ