ಜೆಡಿಎಸ್ 'ಬಿ'ಟೀಂ: ರಾಹುಲ್ ಗಾಂಧಿ ಹೇಳಿಕೆಗೆ ಎಚ್ಡಿಕೆ ಕೆಂಡ

H.D.kumara swamy v/s rahul gandhi

22-03-2018

ಬೆಂಗಳೂರು: ಜೆಡಿಎಸ್ ಬಿಜೆಪಿಯ 'ಬಿ' ಟೀಂ ಎಂದು ಹೇಳುವಾಗ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಕರ್ನಾಟಕದ ಕಾಂಗ್ರೆಸ್ ಜೆಡಿಎಸ್ ನ 'ಬಿ' ಟೀಂ ಎಂಬುದೇ ಮರೆತು ಹೋಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರ ಸ್ವಾಮಿ ಗೇಲಿ ಮಾಡಿದ್ದಾರೆ.

ಈ ವಾಸ್ತವನ್ನು ಅರಿಯದೇ ಹೋದರೇ ರಾಹುಲ್ ಗಾಂಧಿ ಎಂದು ಕುಮಾರ ಸ್ವಾಮಿ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಈ ಹೇಳಿಕೆಯನ್ನುವಿವೇಚನಾ ಪೂರ್ವಕವಾಗಿ ಹೇಳಿದರೋ, ಇಲ್ಲ ಯಾರಾದರೂ ಬರೆದುಕೊಟ್ಟರೋ ಗೊತ್ತಿಲ್ಲ‌. ಆದರೆ ರಾಹುಲ್ ಅವರ ಅಪ್ರಬುದ್ಧತೆಯ ಬಗ್ಗೆ ನನಗಂತೂ ಮರುಕವಿದೆ ಎಂದು ಕುಮಾರ ಸ್ವಾಮಿ ಲೇವಡಿ ಮಾಡಿದ್ದಾರೆ.

ಯೋಗ್ಯತೆಯಿಂದಲೋ ಅಥವಾ ಯೋಗದಿಂದಲೋ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರು ಕರ್ನಾಟಕ ಕಾಂಗ್ರೆಸ್ನ ಈಗಿನ ಸ್ವರೂಪದ ಬಗ್ಗೆ ಒಮ್ಮೆ ಅವಲೋಕಿಸಿದ್ದರೆ ಅವರಿಂದ ಇಂಥ ಬಾಲಿಶ ಹೇಳಿಕೆ ಬರುತ್ತಿರಲಿಲ್ಲ. ಈಗಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯ ಮೂಲ ನಿಮಗೆ ಗೊತ್ತೇ ರಾಹುಲ್ ಗಾಂಧಿ ಅವರೇ? ಅವರು ನಮ್ಮ ಪಕ್ಷದಲ್ಲಿ ವಿದ್ಯೆ ಕಲಿತು ಹೋದವರು? ಅವರ ಸಂಪುಟದಲ್ಲಿರುವ ಅರ್ಧಕ್ಕರ್ಧ ಮಂದಿ ದೇವೇಗೌಡರ ಗರಡಿಯಲ್ಲಿ ಅಭ್ಯಾಸ ಮಾಡಿದವರು‌. ಇನ್ನು ನಿಮ್ಮ ಪಕ್ಷದ ಶಾಸಕರಲ್ಲಿ ಎಷ್ಟು ಮಂದಿ ಮೂಲ ಜನತಾದಳದವರು ಎಂಬುದು ನಿಮಗೆ ಗೊತ್ತಿದೆಯೇ ರಾಹುಲ್ ಗಾಂಧಿ ಅವರೇ? ಗೊತ್ತಿಲ್ಲ ಎನ್ನುವುದಾದರೆ ನಿಮ್ಮ ಪಕ್ಷದ ಬಗ್ಗೆ ನಿಮಗಿರುವ ಅರಿವು, ಜ್ಙಾನ ಎಂಥದ್ದು. ಮೊದಲು ರಾಜಕೀಯದ ವಾಸ್ತವಗಳನ್ನು ಅರ್ಥ ಮಾಡಿಕೊಳ್ಳಿ‌‌. ನಂತರ ರಾಜಕೀಯ ಮಾಡುವಿರಂತೆ ಎಂದು ಕುಮಾರ ಸ್ವಾಮಿ ಕಿವಿ ಮಾತು ಹೇಳಿದ್ದಾರೆ.

ಜೆಡಿಎಸ್ ಅನ್ನು ಬಿಜೆಪಿಯೊಂದಿಗೆ ತಳಕುಹಾಕಿ ನೀವು ಇಲ್ಲಿ ತತ್ವ ಸಿದ್ದಾಂತಗಳ ಪ್ರಶ್ನೆ ಎತ್ತಿದ್ದೀರಿ. ಜೆಡಿಎಸ್ ಜ್ಯಾತ್ಯತೀತ ಪಕ್ಷ ಅಲ್ಲ ಎಂದು ಜನರಿಗೆ ಸುಳ್ಳು ಹೇಳಲು ನೀವು ಹೊರಟಿದ್ದೀರಿ‌. ಬಿಜೆಪಿ ಒಂದು ಮಾದರಿಯ ಮೂಲಭೂತವಾದವನ್ನು ಪ್ರತಿಪಾದಿಸುತ್ತಿದ್ದರೆ, ನೀವು ಅಲ್ಪ ಸಂಖ್ಯಾತರ ರಕ್ಷಣೆಯ ಹೆಸರಲ್ಲಿ ದೇಶದಲ್ಲಿ ಡೋಂಗಿ ಜ್ಯಾತ್ಯತೀತತೆಯನ್ನು ಪ್ರತಿಪಾದಿಸುತ್ತಿದ್ದೀರಿ‌. ನಿಮ್ಮಿಬ್ಬರದ್ದೂ ಓಲೈಕೆಯೇ ಹೊರತು ಜ್ಯಾತ್ಯತೀತತೆಯಲ್ಲ. ಎಲ್ಲರನ್ನೂ ಒಳಗೊಳ್ಳುವಿಕೆಯ ಮೂಲಕ ಭವಿಷ್ಯದತ್ತ ಹೆಜ್ಜೆ ಹಾಕುವುದು ಜಾತ್ಯತೀತತೆ, ಪ್ರಗತಿಪರತತೆ‌‌. ಜೆಡಿಎಸ್ ಆ ಹಾದಿಯಲ್ಲಿ ನಡೆಯುತ್ತಿದೆ. ನಮ್ಮ ಪಕ್ಷದ ಸಿದ್ದಾಂತಗಳ ವಿಚಾರದಲ್ಲಿ ಕಾಳಜಿಯೂ ಬೇಡ, ಅನುಮಾನವೂ ಬೇಡ ಎಂದು ಕುಮಾರ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ನಿಮ್ಮೊಂದಿಗೆ ಅಧಿಕಾರ ಹಂಚಿಕೊಂಡರೆ, ನೀವು ನಮ್ಮ ಪಕ್ಷವನ್ನು ಒಡೆದಾಗೆಲ್ಲ ಒಡೆಸಿಕೊಂಡು ನಮ್ಮವರನ್ನು ನಿಮ್ಮ ತೆಕ್ಕೆಗೆ ಹಾಕಿದರೆ ನಾವು ಜಾತ್ಯತೀತರು? ನಿಮ್ಮ ಒಡೆದು ಆಳುವ ನೀತಿ ವಿರುದ್ಧ ಸೆಟೆದರೆ ನಾವು ಬಿಜೆಪಿಯವರು. ಒಂದಂತೂ ಸ್ಪಷ್ಟಪಡಿಸುತ್ತೇನೆ‌. ನಿಮ್ಮ ಡೋಂಗಿ ಜಾತ್ಯತೀತೆಯ ಸಖ್ಯವೂ ಬೇಡ. ಮೂಲಭೂತವಾದಿಗಳ ಸಖ್ಯವೂ ನಮಗೆ ಬೇಕಿಲ್ಲ. ನಮಗೆ ಬೇಕಿರುವುದು ಕನ್ನಡಿಗರ ಮನ್ನಣೆಯಷ್ಟೆ ಎಂದು ಕುಮಾರ ಸ್ವಾಮಿ ಕಿಡಿಕಾರಿದ್ದಾರೆ.

ಇನ್ನು ದೇಶಾದ್ಯಂತ ನಿಮ್ಮ 'ಎ' ಟೀಂ ಬಿಜೆಪಿಯೊಂದಿಗೆ ವಿಲೀನವಾಗುತ್ತಿದೆ. ಕರ್ನಾಟಕದ ಮಟ್ಟಿಗೆ ಎಸ್.ಎಂ ಕೃಷ್ಣ, ಶ್ರೀನಿವಾಸಪ್ರಸಾದ್ ಅವರಂಥವರನ್ನೇ ಉಳಿಸಿಕೊಳ್ಳಲಾಗದ ನಿಮ್ಮ ಕಾಂಗ್ರೆಸ್ ನಿಜವಾಗಿಯೂ ಕಾಂಗ್ರೆಸ್ ಆಗಿ ಉಳಿದಿದೆಯೆ? ಒಮ್ಮೆ ಯೋಚಿಸಿ. ಆಮೆಲೆ ಜೆಡಿಎಸ್ ವಿಚಾರಕ್ಕೆ ಬನ್ನಿ ಎಂದು ಕುಮಾರ ಸ್ವಾಮಿ ಟೀಕಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.d kumara swamy rahul gandhi ಮೂಲಭೂತವಾದ ಮನ್ನಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ