ಅಮಿತ್ ಷಾ ರಾಜ್ಯ ಪ್ರವಾಸ: ಲಿಂಗಾಯತ ಅಸ್ತ್ರಕ್ಕೆ ಪ್ರತ್ಯಾಸ್ತ್ರ

Election campaign: Amit Shah visits to shimoga

22-03-2018

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಚುನಾವಣಾ ಉದ್ದೇಶಿತ ರಾಜ್ಯ ಪ್ರವಾಸ ಆಯಿತು. ಈಗ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಸರದಿ. ವಿಧಾನ ಸಭೆ ಚುನಾವಣೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಹಾಗೂ ಅಮಿಷ್ ಷಾ ಅವರ ಇನ್ನಷ್ಟು ಭೇಟಿ ರಾಜ್ಯದ ಜನರಿಗೆ ಆಮಿಷ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸ್ವರ್ಗವನ್ನೇ ಧರೆಗಳಿಸುವ ಭರವಸೆಗಳ ಮಹಾಪೂರವೇ ಕೇಳಿಸಲಿವೆ.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಈ ತಿಂಗಳಾಂತ್ಯ 26 ಮತ್ತು 27 ಹಾಗೂ 30 ಮತ್ತು 31ರಂದು ರಾಜ್ಯ ಪ್ರವಾಸ ಕೈಗೊಳ್ಳುವರು. ಈ ವೇಳೆ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಲಿಂಗಾಯತ ಅಸ್ತ್ರಕ್ಕೆ ಪ್ರತಿಯಾಗಿ ಅಮಿತ ಷಾ ಅವರು ಲಿಂಗಾಯತ ಮಠಗಳಾದ ಸಿರಿಗೆರೆ, ಸಿದ್ದಗಂಗಾ ಮಠ ಹಾಗೂ ಮುರುಘಾ ಮಠಗಳಿಗೆ ಭೇಟಿ ನೀಡುವ ಕಾರ್ಯಕ್ರಮ ರೂಪಿಸಲಾಗಿದೆ. ರಾಷ್ಟ್ರಕವಿ ಕುವೆಂಪು ಅವರ ಕವಿಶೈಲ ಕುಪ್ಪಳಿಗೂ ಅಮಿತ್ ಷಾ ಭೇಟಿ ನೀಡುವರು.

ಬಿಜೆಪಿ ಅಧ್ಯಕ್ಷ ಅಮಿತ್ ಷಾ ಈ ತಿಂಗಳ 26ರಂದು ವಿಶೇಷವಾಗಿ ಮಲೆನಾಡು ಭಾಗದಲ್ಲಿ ಪ್ರವಾಸ ಕೈಗೊಂಡು ಚುನಾವಣಾ ತಂತ್ರ ಗಳನ್ನು ರೂಪಿಸುವುದಲ್ಲದೆ ಕಾರ್ಯಕರ್ತರಲ್ಲಿ ಹುರುಪು ತುಂಬಲಿದ್ದಾರೆ. ಈ ಬಾರಿ ಅಮಿತ್ ಷಾ ಮಲೆನಾಡ ಭೇಟಿ ಕುತೂಹಲ ಕೆರಳಿಸಿರುವುದು ಅವರ ಶಿವಮೊಗ್ಗ ಜಿಲ್ಲೆಯ ಭೇಟಿಯ ಕಾರಣಕ್ಕೆ. ಶಿವಮೊಗ್ಗ ಜಿಲ್ಲೆ ಬಿಜೆಪಿಯಲ್ಲಿನ ಗೊಂದಲ, ಭಿನ್ನಮತ ಬಗೆಹರಿಯದ ಕಗ್ಗಂಟು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ  ಗುಂಪು ಅವಕಾಶ ಸಿಕ್ಕಾಗಲೆಲ್ಲಾ ಬಹಿರಂಗವಾಗಿಯೇ ಒಬ್ಬರ ವಿರುದ್ಧ ಮತ್ತೊಬ್ಬರು ಮಾಡುವ ಟೀಕೆಗಳು ಆಗಾಗ ಕೇಳಿಬರುತ್ತಿರುತ್ತವೆ, ಕೆಲವೊಮ್ಮೆ ಬಹಿರಂಗವಾಗಿ ಹಲವೊಮ್ಮೆ ಮುಸುಕಿನ ಗುದ್ದಾಟದಲ್ಲಿ ಪರಸ್ಪರ ಮೇಲುಗೈ ಸಾಧಿಸುವ ಹರಸಾಹಸಗಳು ನಡದೇ ಇರುತ್ತವೆ.

ಶಿವಮೊಗ್ಗ ಜಿಲ್ಲೆಯ ಬಿಜೆಪಿ ಕಚ್ಚಾಟ-ರಂಪಾಟವನ್ನು ನಿಯಂತ್ರಿಸಲು ಸ್ವತಃ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಂದಲೇ ಸಾಧ್ಯವಾಗುತ್ತಿಲ್ಲ. ಈ ಹಿನ್ನಲೆಯಲ್ಲಿ ಈಗ ಶಿವಮೊಗ್ಗ ಜಿಲ್ಲೆಯ ಬಿಜೆಪಿ ಮುಖಂಡರಿಗೆ ಅಮಿತ್ ಷಾ ಅವರಿಗೆ ಮುಜುಗರವಾಗುವಂತಹ ಹೇಳಿಕೆಗಳನ್ನು ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಯಡಿಯೂರಪ್ಪ ಮುನಿಸಿಕೊಳ್ಳದಂತೆ, ಈಶ್ವರಪ್ಪಗೆ ಯಾವುದೇ ವಿವಾದಾತ್ಮಕ ಹೇಳಿಕೆ ನೀಡದಂತೆಯೂ ಸೂಚನೆಗಳು ಬಂದಿವೆ. ಅಮಿತ್ ಷಾ ಒಂದು ದಿನ ಶಿವಮೊಗ್ಗ ಜಿಲ್ಲೆಯಲ್ಲೇ ವಾಸ್ತವ್ಯ ಹೂಡಲಿದ್ದು, ಯಡಿಯೂರಪ್ಪ ಹಾಗೂ ಈಶ್ವರಪ್ಪ ಜೊತೆ ಡಿನ್ನರ್ ಮಾಡಿ ಅವರಿಬ್ಬರಲ್ಲೂ ಸೌಹಾರ್ದ ವಾತಾವರಣ ಉಂಟುಮಾಡುವಂತೆ ಕಾರ್ಯಕ್ರಮ ರೂಪಿಸಲಾಗಿದೆ.


ಸಂಬಂಧಿತ ಟ್ಯಾಗ್ಗಳು

Amita shah election ಡಿನ್ನರ್ ಸೌಹಾರ್ದ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ