‘ಮಾತು ಕಡಿಮೆ ಹೆಚ್ಚು ಕೆಲಸ ಮಾಡಿದ್ದೇವೆ’-ರಾಹುಲ್21-03-2018

ಚಿಕ್ಕಮಗಳೂರು: ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಾಶೀರ್ವಾದ ಮಹಾ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಕೆ.ಸಿ.ವೇಣುಗೋಪಾಲ್,  ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಎಸ್.ಆರ್.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್, ವೀರಪ್ಪ ಮೊಯಿಲಿ, ಸಲೀಂ ಅಹಮದ್ ಭಾಗಿಯಾಗಿದ್ದರು.

ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ, ನಾವು ನಿಮಗೆ ಕಡಿಮೆ ಮಾತು ಕೊಟ್ಟಿದ್ದು, ಹೆಚ್ಚು ಕೆಲಸಗಳನ್ನು ಮಾಡಿ ತೋರಿಸಿದ್ದೇವೆ. ತಲಾ ವ್ಯಕ್ತಿಗೆ ಏಳು ಕೆಜಿ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದೇವೆ, ನೀವು ಗೆಲ್ಲಿಸಿದರೆ ಉಚಿತ ಅಕ್ಕಿ ಕೊಡುತ್ತೇವೆ ಎಂದು ನಾವು ಹೇಳಿರಲಿಲ್ಲ, ನಮ್ಮ ಕೈ ಹಿಡಿಯಿರಿ ನಾವು ನಿಮ್ಮ ಕೆಲಸ ಮಾಡುತ್ತೇವೆ ಎಂದು ಹೇಳಿದ್ದೆವು ಎಂದರು.

ಹೆಣ್ಣುಮಕ್ಕಳಿಗೆ ಪ್ರಾಥಮಿಕ ಹಂತದಿಂದ ಪಿಜಿವರೆಗೂ ಉಚಿತ ಶಿಕ್ಷಣ ಕೊಡಲಾಗುತ್ತಿದೆ, ಗುಜರಾತಿನಲ್ಲಿ ಶಿಕ್ಷಣ ದುಬಾರಿಯಾಗಿದೆ, ಖಾಸಗೀಕರಣವಾಗಿದೆ, 15ಲಕ್ಷ ಖರ್ಚು ಮಾಡಿದರೆ ಮಾತ್ರ ಗುಜರಾತಿನಲ್ಲಿ ಶಿಕ್ಷಣ ಸಿಗಲಿದೆ. ಆರೋಗ್ಯ, ಶಿಕ್ಷಣಕ್ಕೆ ಗುಜರಾತಿನಲ್ಲಿ ಲಕ್ಷಗಟ್ಟಲೆ ಹಣ ಸುರಿಯಬೇಕು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೋದಿಯವರು ನೋಟು ರದ್ದು ಮಾಡಿದರು ಇದರಿಂದ ದೇಶದ ಬಡವರು, ಮಧ್ಯಮ ವರ್ಗದವರು ಬ್ಯಾಂಕುಗಳ ಮುಂದೆ ಸರದಿಯಲ್ಲಿ ನಿಲ್ಲಬೇಕಾಯ್ತು, ಕಪ್ಪು ಕುಳದವರು ಹಿಂಬಾಗಿಲಿಂದ ಬಂದು ಕಪ್ಪು ಹಣ ಬಿಳಿ ಮಾಡಿಕೊಂಡರು ಎಂದು ದೂರಿದ್ದಾರೆ. ಜೈಷಾ ಕಂಪನಿ 50ಸಾವಿರದಿಂದ ಸುಮಾರು 80ಕೋಟಿ ಲಾಭ ಮಾಡಿತು, ಈ ಬಗ್ಗೆ ಮೋದಿಯವರು ಒಂದೇ ಒಂದು ಚಕಾರ ಎತ್ತಲಿಲ್ಲ. ಬ್ಯಾಂಕಿಗೆ ದ್ರೋಹ ಬಗೆದು ನೀರವ್ ಮೋದಿ ದೇಶ ಬಿಟ್ಟು ಓಡಿ ಹೋದರು ಆಗಲೂ ಮೋದಿಯವರು ಮಾತಾಡಲಿಲ್ಲ ಎಂದು ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಇದೇ ವೇಳೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಹೊಗಳಿದ ರಾಹುಲ್ ಗಾಂಧಿ, ವಾಜಪೇಯಿಯವರು ಯಾವತ್ತೂ ನಾನು ಬಂದ ಮೇಲೆ ಅಭಿವೃದ್ಧಿ ಆಗಿದೆ ಅನ್ನಲಿಲ್ಲ, ವಾಜಪೇಯಿಯವರು ದೇಶದ ಜನರನ್ನು ಗೌರವಿಸುತ್ತಿದ್ದರು. ಮೋದಿಯವರು ಕಳೆದ ನಾಲ್ಕು ವರ್ಷದಿಂದ ನಾನೇ ಎಲ್ಲ ಮಾಡಿದ್ದು ಅಂತ ಹೇಳಿಕೊಳ್ಳುತ್ತಾರೆ, ಆದರೆ ನಿಜವಾಗಿಯೂ ಮೋದಿಯವರು ಏನೂ ಮಾಡಿಲ್ಲ ಎಂದರು. ಕರ್ನಾಟಕದಲ್ಲಿ ಪಕ್ಷ ಮತ್ತು ನಾಯಕರು ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರ ಸಹಕಾರದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಸಂಬಂಧಿತ ಟ್ಯಾಗ್ಗಳು

Rahul gandhi K.C.Venugopal ಕೆಪಿಸಿಸಿ ವಾಜಪೇಯಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ