ನಗರದಲ್ಲಿ ಮತ್ತೆ ಮೂರು ಕಡೆ ಸರಗಳ್ಳತನ

again 3 chain snatch incidents in bengaluru

21-03-2018

ಬೆಂಗಳೂರು: ನಗರ ಹಾಗೂ ಹೊರವಲಯದಲ್ಲಿ ಸರಣಿ ಸರಗಳ್ಳತನಗಳು ನಡೆದಿದ್ದು ಸೋಲದೇವನಹಳ್ಳಿ, ವಿದ್ಯಾರಣ್ಯಪುರ ಹಾಗೂ ಹೊರವಲಯದ ಮಾದನಾಯ್ಕನಹಳ್ಳಿ, ದೊಡ್ಡಬಳ್ಳಾಪುರ ಸೇರಿ ಪ್ರತ್ಯೇಕ ನಾಲ್ವರು ಮಹಿಳೆಯರ ಸರ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ವಾಯು ವಿಹಾರ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದ ಮಹಿಳೆಯೊಬ್ಬರ ಮಾಂಗಲ್ಯಸರವನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ  ಬೆಳಿಗ್ಗೆ ಸೋಲದೇವನಹಳ್ಳಿಯ ಲೇಕ್ ವೀವ್ ಗಾರ್ಡನ್ ಲೇಔಟ್‍ನಲ್ಲಿ ನಡೆದಿದೆ.

ಲೇಕ್ ವೀವ್ ಗಾರ್ಡನ್ ಲೇಔಟ್‍ನ ಚಿಕ್ಕತಾಯಮ್ಮ ಅವರ ಬೆಳಿಗ್ಗೆ 7.50ರ ವೇಳೆ ಮನೆಯ ಹತ್ತಿರದಲ್ಲಿ ವಾಯು ವಿಹಾರ ಮುಗಿಸಿ ನಡೆದುಕೊಂಡು ಬರುತ್ತಿದ್ದಾಗ ಹಿಂದಿನಿಂದ ಪಲ್ಸರ್ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ 40ಗ್ರಾಂ ತೂಕದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸೋಲದೇವನಹಳ್ಳಿ ಪೊಲೀಸರು ಹತ್ತಿರದ ಸಿಸಿ ಕ್ಯಾಮಾರದಲ್ಲಿನ ದೃಶ್ಯಾವಳಿಯನ್ನು ಪರಿಶೀಲಿಸಿ ಸರಗಳ್ಳರ ಪತ್ತೆಗೆ ಶೋಧ ನಡೆಸಿದ್ದಾರೆ.

ಈ ಕೃತ್ಯ ನಡೆದ ಕೇವಲ 10 ನಿಮಿಷಗಳಲ್ಲಿ ವಿದ್ಯಾರಣ್ಯಪುರದ ವಡೇರಹಳ್ಳಿಯ ನೇತಾಜಿ ಲೇಔಟ್‍ನಲ್ಲಿ ವಾಯುವಿಹಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಗಂಗಮ್ಮ ಅವರ 80ಗ್ರಾಂ ತೂಕದ ಮಾಂಗಲ್ಯಸರವನ್ನು ದುಷ್ಕರ್ಮಿಗಳು ದೋಚಿ ಪರಾರಿಯಾಗಿದ್ದಾರೆ. ನಗರದ ಹೊರವಲಯದ ಮಾದನಾಯ್ಕನಹಳ್ಳಿಯ ತೋಟದಗುಡ್ಡದಹಳ್ಳಿಯ ಬಳಿ ಮಕ್ಕಳನ್ನು ಶಾಲೆ ಬಸ್‍ಗೆ ಹತ್ತಿಸಿ ಹತ್ತಿರದ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಪದ್ಮಾ ಅವರ ಕತ್ತಿನಲ್ಲಿದ್ದ 45ಗ್ರಾಂ ತೂಕದ ಮಾಂಗಲ್ಯರಸವನ್ನು ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ.

ಇನ್ನು ದೊಡ್ಡಬಳ್ಳಾಪುರದಲ್ಲಿವಾಯು ವಿಹಾರಕ್ಕೆ ತೆರಳಿ ಮನೆಗೆ ವಾಪಸ್ಸಾಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಸರವನ್ನು ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಕಸಿದು ಪರಾರಿಯಾಗಿದ್ದಾರೆ. ಈ ನಾಲ್ಕೂ ಕೃತ್ಯಗಳನ್ನು ಒಂದೇ ಗ್ಯಾಂಗ್ ನಡೆಸಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

chain snatch gang ಶಂಕೆ ಹೊರವಲಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ