ಪ್ರತೀಕಾರಕ್ಕಾಗಿ ವ್ಯಕ್ತಿ ಅಪಹರಣ

For the revenge a gang kidnapped a man and assault

21-03-2018

ಬೆಂಗಳೂರು: ಕೈ-ಕಾಲು ಒತ್ತಿಸಿಕೊಂಡು ಅವಮಾನ ಮಾಡುತ್ತಿದ್ದಕ್ಕೆ, ಪ್ರತಿಕಾರ ತೀರಿಸಿಕೊಳ್ಳಲು ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರದ ಮಾಲೀಕ ಶೇಖರ್ ಎಂಬಾತನನ್ನು ಅಪಹರಿಸಿ ಅವರಿಂದ ಕಾಲು ಒತ್ತಿಸಿಕೊಂಡು ಸುಲಿಗೆ ಮಾಡಲು ಮುಂದಾಗಿದ್ದ ಕಾರು ಚಾಲಕ ಸೇರಿ ಐವರನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟರಾಯನಪುರದ ಶಿವಕುಮಾರ್ ಅಲಿಯಾಸ್ ಶಿವು (24), ಆವಲಹಳ್ಳಿಯ ಮಂಜೇಶ್ ಅಲಿಯಾಸ್ ಮಂಜ (24), ಶ್ರೀನಿವಾಸ್ ಅಲಿಯಾಸ್ ಸೀನ (24), ನಾಗರಾಜ್ ಅಲಿಯಾಸ್ ನಾಗ (24), ಹನುಮಂತ ನಗರದ ಶಶಿಕುಮಾರ್ ಅಲಿಯಾಸ್ ಶಶಿ (24) ಬಂಧಿತ ಆರೋಪಿಗಳಾಗಿದ್ದಾರೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಡಾ. ಶರಣಪ್ಪ ತಿಳಿಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಶಿವು ಎಂಬಾತನಿಗಾಗಿ ತೀವ್ರ ಶೋಧ ನಡೆಸಲಾಗಿದ್ದು, ಆರೋಪಿಗಳಿಂದ ಇಟಿಯೋಸ್ ಕಾರು, 2 ಸಾವಿರ ನಗದು, ಮಚ್ಚು, ಲಾಂಗ್‍ನ್ನು ವಶಪಡಿಸಿಕೊಳ್ಳಲಾಗಿದೆ.

ಗಿರಿನಗರದಲ್ಲಿ ಮಾದಕ, ಮದ್ಯ ವ್ಯಸನಿಗಳ ಪುನರ್ ವಸತಿ ಕೇಂದ್ರ ನಡೆಸುತ್ತಿದ್ದ ಶೇಖರ್, ಅವರ ಬಳಿ ಮದ್ಯಪಾನ ಬಿಡಲು ಸೇರಿಕೊಂಡಿದ್ದ ಆರೋಪಿ, ಶಿವಕುಮಾರ್ಗೆ ಚಿಕಿತ್ಸೆ ಕೊಡಿಸಿದ್ದ ಶೇಖರ್ ಅವರು, ತಮ್ಮ ಬಳಿಯೇ ಕೆಲಸಕ್ಕಿಟ್ಟುಕೊಂಡಿದ್ದರು. ಶಿವಕುಮಾರ್ ನಿಂದ ಆಗಾಗ ಕೈ-ಕಾಲು ಒತ್ತಿಸಿಕೊಳ್ಳುವುದು, ಇನ್ನಿತರ ಅವಮಾನವುಂಟಾಗುವ ಕೆಲಸವನ್ನು ಶೇಖರ್ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಶಿವಕುಮಾರ್, ಶೇಖರ್ ಅವರನ್ನು ಅಪಹರಿಸಿ ತಾನು ಅವರಿಂದ ಕಾಲು ಒತ್ತಿಸಿಕೊಳ್ಳಬೇಕು, ಅಲ್ಲದೆ ಅವರ ಬಳಿ ಇರುವ ಹಣವನ್ನು ದೋಚುವ ಉದ್ದೇಶದಿಂದ ಸಂಚು ರೂಪಿಸಿ ಇತರ ಸ್ನೇಹಿತರ ಗ್ಯಾಂಗ್ ಕಟ್ಟಿಕೊಂಡಿದ್ದ.

ಗ್ಯಾಂಗ್‍ನ ಆರೋಪಿಗಳು ಕಳೆದ ಮಾ.8 ರಂದು ರಾತ್ರಿ 11ರ ವೇಳೆ ಬೈಕ್‍ನಲ್ಲಿ ಹೋಗುತ್ತಿದ್ದ ಶೇಖರ್ ಅವರನ್ನು ಅಡ್ಡಗಟ್ಟಿ  ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಹಲ್ಲೆ ಮಾಡಿ, 10 ಸಾವಿರ ನಗದು ಕಸಿದು ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿದ ಗಿರಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದು, ವಿಚಾರಣೆ ವೇಳೆ ಪ್ರತೀಕಾರವಾಗಿ ಅಪಹರಣ ಮಾಡಿದ್ದಾಗಿ ಶಿವಕುಮಾರ್ ಬಾಯ್ಬಿಟ್ಟಿದ್ದಾರೆ. ಆರೋಪಿಗಳನ್ನು ಪೊಲೀಸ್ ಇನ್ಸ್ಪೆಕ್ಟರ್ಗಳಾದ ಕೊಟ್ರೇಶಿ, ಚೆನ್ನೇಗೌಡ ಮತ್ತವರ ವಿಶೇಷ ತಂಡ ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

kidnap assault ಅವಮಾನ ಉದ್ದೇಶ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ