ಪ್ರತಿಪಕ್ಷ ಬಿಜೆಪಿಯಿಂದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನೊಳಗೊಂಡ ಆರೋಪಪಟ್ಟಿ ಬಿಡುಗಡೆ

Kannada News

11-05-2017 272

ಬೆಂಗಳೂರು : ಕಳೆದ ನಾಲ್ಕು ವರ್ಷಗಳ ಅವಧಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಒಳಗೊಂಡ ಆರೋಪಪಟ್ಟಿ (ಚಾರ್ಜ್‍ಶೀಟ್)ಯನ್ನು ಪ್ರತಿಪಕ್ಷ ಬಿಜೆಪಿ ಇಂದು ಬಿಡುಗಡೆ ಮಾಡಿದೆ.   ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ , ವಿಧಾನಸಭೆಯ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಉಪನಾಯಕ ಆರ್.ಅಶೋಕ್ ಸೇರಿದಂತೆ ಮತ್ತಿತರ ಮುಖಂಡರು ಸರ್ಕಾರದ ವೈಫಲ್ಯಗಳ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ.

ತೋರಿಸಿದ್ದು ಭರವಸೆಯ ಬೆಟ್ಟ . ಜನರಿಗೆ ಸಿಕ್ಕಿದ್ದು ಬರೀ ಕಷ್ಟ ಎಂಬ 64 ಪುಟಗಳ ಕಿರುಹೊತ್ತಿಗೆಯಲ್ಲಿ 2013 ಮೇ 13ರಿಂದ ಈವರೆಗೂ ಯಾವ ಯಾವ ಕ್ಷೇತ್ರಗಳಲ್ಲಿ ವಿಫಲವಾಗಿದೆ. ಬರಗಾಲ, ಕುಡಿಯುವ ನೀರು, ರೈತರ ಆತ್ಮಹತ್ಯೆ, ಬೆಳೆನಷ್ಟ ಸೇರಿದಂತೆ ಸರ್ಕಾರದ ವೈಫಲ್ಯಗಳ ಬಗ್ಗೆ ಬೊಟ್ಟು ಮಾಡಲಾಗಿದೆ.

ಪ್ರಮುಖವಾಗಿ ನಾಲ್ಕು ದಶಕಗಳ ನಂತರ ರಾಜ್ಯದಲ್ಲಿ ಆವರಿಸಿರುವ ಭೀಕರ ಬರಗಾಲದಿಂದ ಅನ್ನದಾತನ ಆತ್ಮಹತ್ಯೆ, ರೈತರ ಸಾಲ ಮನ್ನಾ ಮಾಡದಿರುವುದು, ರೈತರಿಗೆ ಪರಿಹಾರ ನೀಡುವಲ್ಲಿ ವಿಳಂಬ, ಸಚಿವರು, ಶಾಸಕರ ನಿರ್ಲಕ್ಷ್ಯ ಸರ್ಕಾರದ ಉದಾಸೀನತೆ ಸೇರಿದಂತೆ ಸಿದ್ದರಾಮಯ್ಯ ಸರ್ಕಾರದ ಧೋರಣೆ ವಿರುದ್ಧ ಅಂಕಿಅಂಶಗಳ ಸಮೇತ ಜಗಜ್ಜಾಹೀರು ಮಾಡಿದೆ.

ರಾಜ್ಯದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆ , ಕೊಲೆ, ಸುಲಿಗೆ, ಮಹಿಳೆಯರ ಅಸುರಕ್ಷತೆ, ಅತ್ಯಾಚಾರ, ಲೈಂಗಿಕ ಕಿರುಕುಳ, ರೌಡಿಗಳ ಅಟ್ಟಹಾಸ, ಗೃಹ ಇಲಾಖೆಯಲ್ಲಿ ಮೇಲಧಿಕಾರಿಗಳ ಹಸ್ತಕ್ಷೇಪ, ಲಂಚಗುಳಿತನ ಹೀಗೆ ಇಲಾಖೆಯ ವೈಫಲ್ಯಗಳನ್ನು ಎತ್ತಿ ಹಿಡಿಯಲಾಗಿದೆ. ಒಂದು ಕಾಲದಲ್ಲಿ ಬೆಂಗಳೂರು ದೇಶದಲ್ಲಿ ಸುರಕ್ಷಿತ ತಾಣ ಎಂಬ ಖ್ಯಾತಿಯನ್ನು ಪಡೆದಿತ್ತು. ಆದರೆ ಇಂದು ಸರ್ಕಾರದ ನಿರ್ಲಕ್ಷತೆಯಿಂದಾಗಿ ಮಹಿಳೆಯರು, ವೃದ್ಧರು , ಮಕ್ಕಳು, ವಿದ್ಯಾರ್ಥಿಗಳಿಗೆ ಸುರಕ್ಷತೆಯೇ ಇಲ್ಲ.  ರಾಜ್ಯಾದ್ಯಂತ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 1,24,653 ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. 3,102 ಅತ್ಯಾಚಾರ, 2,534 ಲೂಟಿ ಪ್ರಕರಣ, 420 ಅಪಹರಣ, 1283 ಸರಗಳ್ಳತನವಾಗಿದೆ. ಸರ್ಕಾರ ಜನರ ಪಾಲಿಗೆ ಇದ್ದು ಇಲ್ಲದಂತಾಗಿದೆ ಎಂದು ಕಿಡಿಕಾರಲಾಗಿದೆ.

ಸತತ ಹನ್ನೆರಡು ಬಜೆಟ್ ಮಂಡಿಸಿದ್ದೇವೆ ಎಂದು ಹೋದ ಬಂದ ಕಡೆಯೆಲ್ಲ ಬೊಬ್ಬೆ ಹಾಕುವ ಸಿದ್ದರಾಮಯ್ಯನವರು ಅನೇಕ ಭಾಗ್ಯಗಳ ಜೊತೆಗೆ ಸಾಲ ಭಾಗ್ಯವನ್ನು ದಯಪಾಲಿಸಿದ್ದಾರೆ.   ಕಾಂಗ್ರೆಸ್ ಅವಧಿಯಲ್ಲಿ ಒಟ್ಟು 91,269.78 ಕೋಟಿ ಸಾಲ ಮಾಡಲಾಗಿದೆ. ನಮ್ಮ ಅವಧಿಯಲ್ಲಿ 1,28,361 ಕೋಟಿ ಇದ್ದ ಸಾಲ ಈಗ 2,42,420 ಕೋಟಿ ಸಾಲ ಏರಿಕೆಯಾಗಿದೆ. ಅನ್ನಭಾಗ್ಯ , ಶಾದಿಭಾಗ್ಯ, ಕ್ಷೀರ ಭಾಗ್ಯದ ಜೊತೆಗೆ ಸಾಲ ಭಾಗ್ಯ ಮಾಡಿರುವುದು ಸಿದ್ದರಾಮಯ್ಯನವರ ದೌರ್ಭಾಗ್ಯವೆಂದು ವ್ಯಂಗ್ಯವಾಡಿದೆ.

ಬಜೆಟ್‍ನಲ್ಲಿ ಘೋಷಿಸಿದ ಯಾವ ಕಾರ್ಯಕ್ರಮಗಳು ಅನುಷ್ಠಾನವಾಗಿಲ್ಲ. ಕೇವಲ ಪೊಳ್ಳು ಭರವಸೆಗಳನ್ನು ನೀಡಿ ಜನರ ಮೂಗಿಗೆ ತುಪ್ಪ ಸವರಲಾಗಿದೆ. ಕಾಲ ಮಿತಿಯೊಳಗೆ ಅನುಷ್ಠಾನವಾಗಬೇಕಾದ ಯೋಜನೆಗಳು ಕೂಡ ಪೂರ್ಣಗೊಂಡಿಲ್ಲ. ಸಚಿವರು ಮತ್ತು ಮುಖ್ಯಮಂತ್ರಿಗಳ ನಡುವೆ ಸಮನ್ವಯ ಕೊರತೆ ಇದೆ ಎಂದು ಪ್ರಸ್ತಾಪಿಸಲಾಗಿದೆ.

ಡೈರಿ ಪ್ರಸ್ತಾಪ: ಆರೋಪ ಪಟ್ಟಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರಮಾಪ್ತ ಹಾಗೂ ವಿಧಾನಪರಿಷತ್ ಸದಸ್ಯ ಗೋವಿಂದರಾಜು ನಿವಾಸದಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದ ಡೈರಿಯನ್ನು ಪ್ರಸ್ತಾಪಿಸಲಾಗಿದೆ.   ಭ್ರಷ್ಟಾಚಾರದ ವಿರುದ್ಧ ತೊಡೆ ತಟ್ಟಿ ಅಧಿಕಾರಕ್ಕೆ ಬಂದಿದ್ದ ಸಿದ್ದರಾಮಯ್ಯ ಕುರ್ಚಿ ಉಳಿಸಿಕೊಳ್ಳಲು ಕಾಲ ಕಾಲಕ್ಕೆ ಹೈಕಮಾಂಡ್‍ಗೆ ಯಾವ ಯಾವ ಸಮಯದಲ್ಲಿ ಯಾವ ಯಾವ ಸಚಿವರಿಂದ ಎಷ್ಟೆಷ್ಟು ನೀಡಿದ್ದಾರೆಂಬ ವಿಷಯ ಡೈರಿಯಲ್ಲಿ ಜಗಜ್ಜಾಹೀರವಾಗಿದೆ.  ಅನೇಕ ಸಚಿವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಲ ಕಾಲಕ್ಕೆ ಹೈಕಮಾಂಡ್‍ಗೆ ಕಪ್ಪ ಕಾಣಿಕೆ ನೀಡಿದ್ದಾರೆ. ಡೈರಿಯಲ್ಲಿ ಇಂತಹ ಅನೇಕ ವಿಷಯಗಳು ಬಹಿರಂಗಗೊಂಡಿದ್ದು , ಸಿದ್ದರಾಮಯ್ಯ ಕುರ್ಚಿಗಾಗಿ ಏನನ್ನೂ ಮಾಡಲು ಸಿದ್ಧ ಎಂಬುದನ್ನು ಇದು ಸಾಬೀತು ಮಾಡಿದೆ ಎಂದು ಬಿಜೆಪಿಮುಖಂಡರು ಆರೋಪಿಸಿದ್ದಾರೆ.

ಮರಳು ಮಾಫಿಯಾ:

ಇನ್ನು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮರಳು ಮಾಫಿಯಾ ವ್ಯವಸ್ಥಿತವಾಗಿ ನಡೆದುಕೊಂಡು ಬಂದೇ ಇದೆ. ಜನಸಾಮಾನ್ಯರು ಮನೆ ಕಟ್ಟಿಸಲು ಸಾಧ್ಯವಾಗ ಸ್ಥಿತಿಯಲ್ಲಿ ಬೆಲೆ ಗಗನಕ್ಕೇರಿದೆ. ಶಾಸಕರು, ಸಚಿವರು ಅಧಿಕಾರಿಗಳ ಜೊತೆ ಶಾಮೀಲಾಗಿ ಮರಳನ್ನು ಹೊರ ರಾಜ್ಯಗಳಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಇಂದು ಒಂದು ಲೋಡ್‍ನ ಬೆಲೆ 40ರಿಂದ 50 ಸಾವಿರಕ್ಕೆ ಏರಿಕೆಯಾಗಿದೆ. ಮರಳು ಮಾಫಿಯಾಕ್ಕೆ ಕಡಿವಾಣ ಹಾಕಬೇಕಿದ್ದ ಸರ್ಕಾರ ಮಧ್ಯವರ್ತಿಗಳ ಲಾಬಿಗೆ ಮಣಿದಿದೆ ಎಂದು ದೂರಲಾಗಿದೆ.  ಇದೇ ರೀತಿ ಆರೋಪ ಪಟ್ಟಿಯಲ್ಲಿ ಲೋಕೋಪಯೋಗಿ, ಜಲಸಂಪನ್ಮೂಲ, ಶಿಕ್ಷಣ , ಸಮಾಜ ಕಲ್ಯಾಣ, ಸಹಕಾರ, ಮಹಿಳಾ ಮತ್ತು ಮಕ್ಕಳು, ಕಾರ್ಮಿಕ, ಕೃಷಿ, ಆರೋಗ್ಯ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿದಂತೆ ಬಹುತೇಕ ಎಲ್ಲ ಇಲಾಖೆಗಳ ವೈಫಲ್ಯಗಳ ಪಟ್ಟಿಯನ್ನು ಹೊರತರಲಾಗಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ