ಚಾನಲ್ ಗಳಲ್ಲಿ ಪೋಲಿ ಶೋ..

comedy showes and adult jokes

20-03-2018

ಕನ್ನಡ ಕಲರ್ಸ್‍ನಲ್ಲಿ ಮಜಾ ಟಾಕೀಸ್ ಯಶಸ್ಸು ಕಂಡ ಬೆನ್ನಲ್ಲೇ ಈಗ ಎಲ್ಲಾ ಚಾನೆಲ್‍ನಲ್ಲೂ ಪ್ರತಿ ಶನಿವಾರ ಮತ್ತು ಭಾನುವಾರ ಒಂದಷ್ಟು ಕಾಮಿಡಿಯನ್ನು ನೋಡಬಹುದು. ಈ ಕಾಮಿಡಿ ಶೋಗಳ ಬಗ್ಗೆ ಅವನ್ನು ಯಾಕೆ ಕಾಮಿಡಿ ಶೋ ಎಂದು ಕರೆಯುತ್ತಾರೆ ಎಂದು ಕೇಳಿ ಒಂದು ಕುಚೋದ್ಯದ ಸ್ಪರ್ಧೆಯನ್ನು ನಡೆಸಬಹುದು. ಬಹುಶಃ ಅಂತಹ ಸ್ಪರ್ಧೆಯನ್ನು ನಡೆಸಿದರೆ ಅದು ಕಾಮಿಡಿಯೇ ಅಲ್ಲ ಎಂದು ಬಹುತೇಕ ಮಂದಿ ಹೇಳಬಹುದು. ಕುಣಿದಾಟ, ಹಾರಾಟ, ಅರಚಾಟ, ಬೀಳಾಟ, ಒದ್ದಾಟ ಇದನ್ನೇ ಕಾಮಿಡಿ ಎಂದು ಕರೆದು ಶೋ ಮಾಡಿದ್ದರೂ ಅದನ್ನೂ ಒಪ್ಪಿಕೊಳ್ಳಬಹುದಿತ್ತೇನೋ. ಆದರೆ ಅದರ ಸಮಸ್ಯೆ ಇರುವುದು ಅಲ್ಲಿ ಅಲ್ಲ. ಜನರ ರೂಪದ ಬಗ್ಗೆ ಗೇಲಿ ಮಾಡುವುದು, ದೇಹದ ಆಕಾರದ ಬಗ್ಗೆ ಲೇವಡಿ ಮಾಡುವುದು, ದ್ವಂದ್ವಾರ್ಥದ ಸಂಭಾಷಣೆಗಳನ್ನು ಉದುರಿಸುವುದು, ಪೋಲಿ ಹಾವಭಾವ, ಕುಟುಕುವುದು, ಚುಡಾಯಿಸುವುದು, ಮಕ್ಕಳು-ದೊಡ್ಡವರನ್ನು ಅಪ್ಪಿಕೊಳ್ಳುವುದು, ಮುತ್ತುಕೊಡುವುದು, ಕೆನ್ನೆ ಸವರುವುದು, ಲೈಂಗಿಕ ಸಂಜ್ಞೆಗಳನ್ನು ತೋರಿಸುವುದು ಇವೇ ಈ ಕಾಮಿಡಿ ಶೋಗಳ ಬಂಡವಾಳ. ಇನ್ನು ಎಳೆಹುಡುಗನಂತೆ ಮಾತನಾಡುವ ವಿಜಯ್‍ಸೂರ್ಯ, ವಿಕಾರವಾಗಿ ಬಾಯಿ ತೆರೆದು ನಗುವ ರಚಿತಾರಾಮ್ ಇವರಿಬ್ಬರ ಮಧ್ಯೆ ಒಂದಷ್ಟು ಸಭ್ಯನಂತೆ ಕಂಡುಬರುವ ಸೃಜನ್ ಮುಂದೆ ನಡೆಯುವ ಒಂದಷ್ಟು ಕಾಮಿಡಿ ಪ್ರಹಸನಗಳು ದೇವರಿಗೇ ಪ್ರೀತಿ. ಒಂದು ಗಂಟೆ ನಡೆಯುವ ಕಾಮಿಡಿ ಶೋನಲ್ಲೇ ಹೆಚ್ಚೆಂದರೆ 2 ನಿಮಿಷ ನಗಬಹುದಾದ ಕಾಮಿಡಿ ಇರಬಹುದು. ಇನ್ನುಳಿದಿದ್ದೆಲ್ಲಾ ಹಾಸ್ಯಾಸ್ಪದ, ಅಸಭ್ಯ ವರ್ತನೆ.

ಅದೇ ರೀತಿ ದೊಡ್ಡಣ್ಣ, ರಾಗಿಣಿ ದ್ವಿವೇದಿ ಮತ್ತು ಗುರುಪ್ರಸಾದ್ ಸಮ್ಮುಖದಲ್ಲಿ ನಡೆಯುವ ಸುವರ್ಣ ಚಾನೆಲ್‍ನ ಭರ್ಜರಿ ಕಾಮಿಡಿ ಇನ್ನೊಂದು ನೆಗೆಪಾಟಲು ಕಾರ್ಯಕ್ರಮ. ಭರ್ಜರಿಯಾಗಿ ಸೆಕ್ಸ್ ಜೋಕುಗಳನ್ನು ಹೇಳಿಕೊಂಡು ಯಾವುದೇ ಹಳ್ಳಿಯ ಮೂಲೆಯಲ್ಲಿ ನಡೆಯುವ ಪೋಲಿ ನಾಟಕದ ತುಣುಕುಗಳಂತೆ ಪ್ರದರ್ಶಿಸುವ ಸುವರ್ಣ ಚಾನೆಲ್‍ನ ಅನಾಗರೀಕ ವ್ಯಂಗಗಳು ಅಸಹನೀಯ. ಹಾಗೆ ಬೇರೆ ಚಾನೆಲ್‍ನಲ್ಲೂ ಬರುವ ಈ ಕಾಮಿಡಿ ಕಾರ್ಯಕ್ರಮಗಳು ಸಭ್ಯ ಕನ್ನಡಿಗರ ಅಭಿರುಚಿಯನ್ನೇ ಹಾಳು ಮಾಡುವಂತಿರುವ ಈ ಕಾಮಿಡಿ ಹೆಸರಿನ ಆವಾಂತರಗಳು ವೀಕ್ಷಕರ ಮನರಂಜನಾ ಪ್ರಜ್ಞೆಯನ್ನೇ ಹಾಳು ಮಾಡುವಂತಿವೆ. ಬಾಲಿಶಃ ಅಪ್ರಬುದ್ಧ ಮತ್ತು ದಡ್ಡತನದಿಂದ ಕೂಡಿದ ಈ ಕಾಮಿಡಿ ಶೋಗಳು ಯಾವಾಗ ಜನರಿಂದ ಕೇಸ್ ಹಾಕಿಸಿಕೊಂಡು ಚಾನೆಲ್‍ಗಳಿಂದ ಹೊರದಬ್ಬಲ್ಪಡುತ್ತವೆಯೋ ಎಂದು ಕಾದು ನೋಡುತ್ತಿವೆ.


ಸಂಬಂಧಿತ ಟ್ಯಾಗ್ಗಳು

Bharjari comedy comedy show ಬಾಲಿಶಃ ಅಪ್ರಬುದ್ಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ