ಚುನಾವಣೆಗೆ ಜೆಡಿಎಸ್ ಪಂಚಸೂತ್ರ

JDS election strategy

20-03-2018

ಬೆಂಗಳೂರು: ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿಗಿಂತ ಗೆಲ್ಲುವ ಅನಿವಾರ್ಯತೆ ಇರೋದು ಜೆಡಿಎಸ್‌ಗೆ ಹೆಚ್ಚು. ಕಳೆದ 10 ವರ್ಷಗಳಿಂದ ಜೆಡಿಎಸ್ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಅಲ್ಲದೆ, 2018ರ ಕದನ ಜೆಡಿಎಸ್‌ಗೆ ಅಳಿವು ಉಳಿವಿನ ಹೋರಾಟವೂ ಹೌದು. ಈ ಹಿನ್ನೆಲೆಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಡಿ.ಕುಮಾರಸ್ವಾಮಿ ಒಂದೊಂದೇ ರಾಜಕೀಯ ದಾಳಗಳನ್ನ ಉರುಳಿಸುತ್ತಿದ್ದಾರೆ. ದೇವೇಗೌಡರು ಕೂಡ ವಿನ್ನಿಂಗ್ ಸ್ಟ್ರಾಟೆಜಿ ರೂಪಿಸುವಲ್ಲಿ ನಿರತರಾಗಿದ್ದಾರೆ. ಇದಕ್ಕಾಗಿ ಜೆಡಿಎಸ್ ಪಂಚ ಸೂತ್ರಗಳನ್ನ ರೆಡಿ ಮಾಡಿದೆ. ಅದರಲ್ಲೂ ಆ ಪಂಚಸೂತ್ರಗಳು ಜೆಡಿಎಸ್​ನ ಬ್ರಹ್ಮಾಸ್ತ್ರ ಅಂತಾನೇ ಬಣ್ಣಿಸಲಾಗುತ್ತಿದೆ. ಅಷ್ಟಕ್ಕೂ ಕುಮಾರಸ್ವಾಮಿ ರೂಪಿಸಿರೋ ಆ ಪಂಚಸೂತ್ರಗಳು ಯಾವುವು?

ಏನಿದು ಹೆಚ್​ಡಿಕೆ ಪಂಚಸೂತ್ರ?: ತೆನೆಹೊತ್ತ ಮಹಿಳೆಯ ಚುನಾವಣಾ ತಂತ್ರ ರಾಷ್ಟ್ರೀಯ ಪಕ್ಷಗಳಿಗಿಂತಲೂ ಭಿನ್ನವಾಗಿವೆ. ಚುನಾವಣೆ ಗೆಲ್ಲಲು ಹೆಚ್.ಡಿ.ಕುಮಾರಸ್ವಾಮಿ ಪಂಚಸೂತ್ರಗಳ ಮೊರೆ ಹೋಗಿದ್ದಾರೆ. ಹಾಗಾದ್ರೆ, ಏನದು ಪಂಚಸೂತ್ರ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡಿದೆ ಅಲ್ವಾ? ನಾವೀಗ ಒಂದೊಂದೇ ಸೂತ್ರಗಳನ್ನ ವಿವರಿಸುತ್ತೀವಿ ಓದಿ.

1.ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್ ವೇರ್: ಇದು ಜೆಡಿಎಸ್‌ನ ಪ್ರಮುಖ ಅಸ್ತ್ರ. ಡಿಜಿಟಲ್‌ ಯುಗದಲ್ಲಿ ಭಿನ್ನ ಮಾರ್ಗದಲ್ಲಿ ಮತದಾರರ ಮನ ಗೆಲ್ಲಬೇಕು ಅನ್ನೋದನ್ನ ಮನಗಂಡಿರುವ ಜೆಡಿಎಸ್‌ ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ ವೇರ್‌ ಮೊರೆ ಹೋಗಿದೆ. ಈ ಮೂಲಕ ಚುನಾವಣೆಗೆ ಸಂಬಂಧಿಸಿದಂತೆ ಡಿಜಿಟಲ್ ಮಾಹಿತಿ ಸಂಗ್ರಹಿಸುತ್ತಿದೆ. ಇಂಟಲಿಜೆನ್ಸ್ ಸಾಫ್ಟ್ ವೇರ್‌ನಲ್ಲಿ ಕಳೆದ 4 ವಿಧಾನಸಭಾ ಚುನಾವಣೆಗಳ ರಿಸಲ್ಟ್ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗ್ತಿದೆ. ಯಾವ್ಯಾವ ವಿಧಾನಸಭಾ ಕ್ಷೇತ್ರಗಳಲ್ಲಿ ಯಾರ್ಯಾರು ಅಭ್ಯರ್ಥಿಗಳಾಗಿದ್ದರು? ಜೆಡಿಎಸ್ ಅಭ್ಯರ್ಥಿಗೆ ಬಿದ್ದ ಮತಗಳೆಷ್ಟು? ಚುನಾವಣೆಯಿಂದ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಹೆಚ್ಚಾದ ಮತಗಳ ಸಂಖ್ಯೆಯೆಷ್ಟು? ಎಲ್ಲೆಲ್ಲಿ ಜೆಡಿಎಸ್ ಪಕ್ಷ ವೀಕ್ ಇದೆ? ಯಾವ್ಯಾವ ಕ್ಷೇತ್ರಗಳಲ್ಲಿ ಶಕ್ತಿಶಾಲಿಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಪ್ರತ್ಯೇಕವಾಗಿ ಕಲೆಹಾಕಿ ವಿಶ್ಲೇಷಿಸಲಾಗುತ್ತೆ. ಆ ಲೆಕ್ಕಾಚಾರದ ಮೇಲೆ ಚುನಾವಣಾ ತಂತ್ರಗಳನ್ನು ರೂಪಿಸಲಾಗುತ್ತೆ.

ಇದೊಂದೇ ಅಲ್ಲ, ಪ್ರತಿ ಬೂತ್ ಮಟ್ಟದಲ್ಲೂ ಜೆಡಿಎಸ್ ಕಾರ್ಯಕರ್ತರ ತಂಡ ರಚಿಸಲಾಗ್ತಿದೆ. ಪ್ರತಿ ಮನೆ ಮನೆಗೆ ಹೋಗಿ ಜೆಡಿಎಸ್ ಕಾರ್ಯಕರ್ತರು ಹೆಚ್.ಡಿ.ಕುಮಾರಸ್ವಾಮಿಯವರಿಗೆ ಮತ ನೀಡಿ ಎಂದು ಮನವಿ ಮಾಡಬೇಕು. ಪ್ರತಿ ಮತದಾರನಿಗೆ ಈ ಬಾರಿ ಕುಮಾರಣ್ಣನಿಗೆ ಒಂದು ಅವಕಾಶ ನೀಡಿ ಎಂದು ಕೇಳಬೇಕು. ಆಗ ಮತದಾರರು ಏನು ಹೇಳ್ತಾರೋ ಆ ವಿಚಾರವನ್ನು ಪಕ್ಷದ ಕೇಂದ್ರ ಕಚೇರಿಗೆ ತಲುಪಿಸಬೇಕು. ಇದಕ್ಕಾಗಿ ಒಂದು ವಿಶಿಷ್ಟ ಆ್ಯಪ್ ರೆಡಿ ಮಾಡಲಾಗಿದ್ದು, ಎಲ್ಲಾ ಕಾರ್ಯಕರ್ತರು ಮೊಬೈಲ್ ನಲ್ಲಿ ಇನ್ ಸ್ಟಾಲ್ ಮಾಡಿಕೊಂಡಿರಬೇಕು. ಆ್ಯಪ್ ಮೂಲಕ ಮತದಾರರ ಅಭಿಪ್ರಾಯ ತಲುಪಿಸಬೇಕು ಹಾಗೂ ಅವರ ಮೊಬೈಲ್ ನಂಬರ್ ಕೂಡಾ ಆ್ಯಪ್ ಮೂಲಕ ಕಳಿಸಬೇಕು. ಹೀಗೆ ಸಂಗ್ರಹಗೊಂಡ ಅಭಿಪ್ರಾಯ ಹಾಗೂ ಮೊಬೈಲ್ ನಂಬರ್‌ಗಳು ವೋಟರ್ಸ್ ಇಂಟಲಿಜೆನ್ಸ್ ಸಾಫ್ಟ್‌ ವೇರ್‌ಗೆ ಬಂದು ಸಂಗ್ರಹ ಆಗುತ್ತೆ. ಸಂಗ್ರಹಗೊಂಡ ಎಲ್ಲ ಮೊಬೈಲ್ ನಂಬರ್ ಗಳಿಗೆ ‘ಈ ಬಾರಿ ಕುಮಾರಣ್ಣ’ ಎಂಬ ಸಂದೇಶಗಳನ್ನು ಕಳಿಸಲಾಗುತ್ತೆ.

2.ಸ್ಕೈ ಬಲೂನ್: ಕುಮಾರಸ್ವಾಮಿಯವರ ಪಂಚಸೂತ್ರಗಳಲ್ಲಿ ಸ್ಕೈ ಬಲೂನ್‌ ಕೂಡ ಒಂದು. ವಿಧಾನಸಭಾ ಕ್ಷೇತ್ರಗಳ ಪ್ರಮುಖ ಗಲ್ಲಿಗಳು, ಆಟದ ಮೈದಾನಗಳಲ್ಲಿ ಹೆಚ್.ಡಿ.ದೇವೆಗೌಡ, ಕುಮಾರಸ್ವಾಮಿಯವರ ಭಾವಚಿತ್ರವಿರುವ ಸ್ಕೈ ಬಲೂನ್ ಹಾರಿ ಬಿಡಲಾಗುತ್ತೆ. ಈ ಮೂಲಕ ಜನರನ್ನು ಪಕ್ಷದತ್ತ ಸೆಳೆಯೋದು ಇದರ ಹಿಂದಿನ ಉದ್ದೇಶ.

3.ವಾಟ್ಸಾಪ್ ಗ್ರೂಪ್: ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ವಾಟ್ಸಾಪ್ ಕೂಡಾ ಕಾರಣ ಆಗಿತ್ತು. ಬಿಜೆಪಿ ಲಕ್ಷಾಂತರ ವಾಟ್ಸಾಪ್ ಗ್ರೂಪ್ಗಳನ್ನು ರಚಿಸೋ ಮೂಲಕ ವಾಟ್ಸಾಪ್ ಕ್ಯಾಂಪೇನ್ ಮಾಡಿತ್ತು. ಇದೇ ಮಾದರಿ ತಂತ್ರವನ್ನು ಜೆಡಿಎಸ್ ಕೂಡಾ ಅನುಸರಿಸಿದೆ. ಬೂತ್ ಮಟ್ಟದ ಕಾರ್ಯಕರ್ತರನ್ನೊಳಗೊಂಡು ರಾಜ್ಯ ಮಟ್ಟದವರೆಗೂ ಸುಮಾರು 25,000 ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಲಾಗ್ತಿದೆ. ರಾಜ್ಯದಲ್ಲಿ ಹೆಚ್.ಡಿ.ಕೆ ಸಿಎಂ ಆಗಿದ್ದಾಗ ತಂದಿದ್ದ ಯೋಜನೆಗಳು, ಪ್ರಧಾನಿಯಾಗಿ ದೇವೆಗೌಡರು ಮಾಡಿದ ಕಾರ್ಯಗಳನ್ನು ವಾಟ್ಸಾಪ್ ಗಳ ಮೂಲಕ ಜನರಿಗೆ ತಲುಪಿಸಲಾಗುತ್ತೆ. ವಿದ್ಯಾರ್ಥಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವೈದ್ಯರು, ವಕೀಲರು ಸೇರಿದಂತೆ ಸ್ಥಳೀಯ ಪ್ರಮುಖ ಮುಖಂಡರನ್ನು ವಾಟ್ಸಾಪ್ ಗ್ರೂಪ್ ಗಳಿಗೆ ಆ್ಯಡ್ ಮಾಡಲಾಗುತ್ತೆ.

4.ಎಸ್.ಎಂ.ಎಸ್ ಮತ್ತು ವಾಯ್ಸ್ ಎಸ್.ಎಂ.ಎಸ್: ಜೆಡಿಎಸ್ ಪಕ್ಷಕ್ಕೆ ಈ ಬಾರಿ ಮತ ನೀಡಿ ಎಂದು ಕುಮಾರಸ್ವಾಮಿ ವಿನಂತಿ ಮಾಡಿರುವ ಸಂದೇಶಗಳನ್ನು ಮತದಾರರ ಮೊಬೈಲ್ ಗಳಿಗೆ ಕಳಿಸಲಾಗುತ್ತೆ.

5.ಟಾಕಿಂಗ್ ಓಟರ್ ಸ್ಲಿಪ್: ಈ ಬಾರಿ ಜೆಡಿಎಸ್ ನ ಓಟರ್ ಸ್ಲಿಪ್ ಕೂಡಾ ಬಹಳ ಡಿಫರೆಂಟ್. ಓಟರ್ ಸ್ಲಿಪ್ ವಿಭಿನ್ನ ರೀತಿಯಲ್ಲಿ ಪ್ರಿಂಟ್ ಮಾಡಿಸಲಾಗುತ್ತೆ. ಸ್ಲಿಪ್‌ಗಳ ಮೇಲೆ ಕುಮಾರಸ್ವಾಮಿ ಮತ್ತು ದೇವೆಗೌಡರ ಸಾಧನೆಗಳ ಆಕರ್ಷಕ ವಾಕ್ಯಗಳಿರುತ್ತವೆ. ಇದು ಜೆಡಿಎಸ್‌ನ ಪಂಚಸೂತ್ರ. ಜೆಡಿಎಸ್‌ನ ಈ ಪಂಚಸೂತ್ರಕ್ಕೆ ಮತದಾರರು ಮಣೆ ಹಾಕುತ್ತಾರಾ ಅನ್ನೋದೆ ದೊಡ್ಡ ಪ್ರಶ್ನೆ.


ಸಂಬಂಧಿತ ಟ್ಯಾಗ್ಗಳು

JDS H.D.Kumaraswamy ಪಂಚಸೂತ್ರ ವೋಟರ್ಸ್


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ