ಜೆಡಿಎಸ್ ಶಾಸಕರ ಅನರ್ಹತೆ: ನಾಳೆ ತೀರ್ಪು ಪ್ರಕಟಿಸುವಂತೆ ಸೂಚನೆ

Disqualification of JD (S) MLAs: high court instructed speaker K.B.Koliwad to announce verdict tomorrow

20-03-2018

ಬೆಂಗಳೂರು: ಕಳೆದ ರಾಜ್ಯ ಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡ ಮತದಾನ ಮಾಡಿದ ಆರೋಪ ಎದುರಿಸುತ್ತಿರುವ ಜೆಡಿಎಸ್‍ನ ಬಂಡಾಯ ಶಾಸಕರ ಸದಸ್ಯತ್ವ ಅನರ್ಹತೆಯ ವಿಷಯದಲ್ಲಿ ನಾಳೆಯೊಳಗಾಗಿ ತೀರ್ಪು ನೀಡುವುದು ಸೂಕ್ತ ಎಂದು ರಾಜ್ಯ ಹೈಕೋರ್ಟ್ ವಿಧಾನ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಸೂಚಿಸಿದೆ.

ಈ ವಿಷಯದಲ್ಲಿ ಹೈಕೋರ್ಟ್ ಮಧ್ಯೆ ಪ್ರವೇಶಿಸುವುದು ಸೂಕ್ತವಲ್ಲ. ಹೀಗಾಗಿ ನೀವೇ ಸೂಕ್ತ ತೀರ್ಮಾನ ಕೈಗೊಳ್ಳಿ ಎಂದು ಹೈಕೋರ್ಟ್‍ನ ಏಕಸದಸ್ಯ ನ್ಯಾಯಪೀಠ ಹೇಳಿದೆ. ಇದೇ ತಿಂಗಳ 23ರಂದು ರಾಜ್ಯಸಭೆಗೆ ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ, ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕದಂತೆ ತಡೆಯಲು ಹಾಗೂ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮೇಲೆ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಜೆಡಿಎಸ್, ಸ್ಪೀಕರ್ ಅವರಿಗೆ ದೂರು ಸಲ್ಲಿಸಿತ್ತು. ಸ್ಪೀಕರ್ ತೀರ್ಪನ್ನು ಕಾಯ್ದಿರಿಸಿದ ಕಾರಣಕ್ಕಾಗಿ ಜೆಡಿಎಸ್ ಹೈಕೋರ್ಟ್ ಮೊರೆ ಹೋಗಿತ್ತು.

ಬಂಡಾಯ ಶಾಸಕರಾದ ಜಮೀರ್ ಅಹಮದ್ ಖಾನ್, ಎಚ್.ಸಿ.ಬಾಲಕೃಷ್ಣ, ಚೆಲುವರಾಯಸ್ವಾಮಿ, ರಮೇಶ್ ಬಂಡಿ ಸಿದ್ದೇಗೌಡ, ಭೀಮಾ ನಾಯಕ್, ಅಖಂಡ ಶ್ರೀನಿವಾಸ ಮೂರ್ತಿ, ಇಕ್ಬಾಲ್ ಅನ್ಸಾರಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಜೆಡಿಎಸ್ ಶಾಸಕರಾದ ಡಾ.ಸಿ.ಎನ್.ಬಾಲಕೃಷ್ಣ ಹಾಗೂ ಬಿ.ಬಿ.ನಿಂಗಯ್ಯ ದೂರು ನೀಡಿದ್ದರು.

ನಿನ್ನೆ ಬಂಡಾಯ ಶಾಸಕರು ಮತ್ತು ಜೆಡಿಎಸ್ ಶಾಸಕರ ಅಭಿಪ್ರಾಯವನ್ನು ಆಲಿಸಿ ಸ್ಪೀಕರ್ ಕೆ.ಬಿ.ಕೋಳಿವಾಡ ತೀರ್ಪು ಕಾಯ್ದಿರಿಸಿದರು. ಇಂದೇ ತೀರ್ಪು ಪ್ರಕಟಿಸುವಂತೆ ಜೆಡಿಎಸ್ ಶಾಸಕರು ಆಗ್ರಹಿಸಿದರು. ಅಲ್ಲದೇ ಈ ಸಂಬಂಧ ಸ್ಪೀಕರ್ ಗೆ ನಿರ್ಧಾರ ಕೈಗೊಳ್ಳಲು ಅನುಮತಿ ನೀಡುವಂತೆ ಹೈ ಕೋರ್ಟ್ ಮೆಟ್ಟಿಲೇರಿದರು. ಹೈಕೋರ್ಟ್ ನ ನಿಲುವನ್ನು ಮಧ್ಯಾಹ್ನದೊಳಗೆ ಸ್ಪೀಕರ್ ಅವರಿಗೆ ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಶಾಸಕ ಅನರ್ಹತೆಯ ವಿಚಾರವಾಗಿ ಸ್ಪೀಕರ್ ನಾಳೆ ಏನು ನಿರ್ಧಾರ ಕೈಗೊಳ್ಳುತ್ತಾರೆ ಸದ್ಯಕ್ಕಿರುವ ಕುತೂಹಲ.


ಸಂಬಂಧಿತ ಟ್ಯಾಗ್ಗಳು

K.B.Koliwad speaker ಹೈಕೋರ್ಟ್ ಅನರ್ಹತೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ