‘ಕೈ ಅಭ್ಯರ್ಥಿಗಳ ಆಯ್ಕೆಗೆ ವರದಿಗಳ ಅವಲೋಕನ’16-03-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಗಳ್ಯಾರು ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮೀಕ್ಷೆ ನಡೆಸಿದ್ದು, ಈ ವರದಿಯನ್ನು ಜಿಲ್ಲಾ ಉಸ್ತುವಾರಿ ಸಚಿವರ ವರದಿಗಳ ಜತೆ ತಾಳೆ ನೋಡಲು ನಿರ್ಧರಿಸಿದ್ದಾರೆ. ಸೋಮವಾರದಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲು ಉದ್ದೇಶಿಸಿರುವ ಸಿದ್ದರಾಮಯ್ಯ, ಅಭ್ಯರ್ಥಿಗಳ ಗೆಲ್ಲುವ ಸಾಮರ್ಥ್ಯದ ಬಗ್ಗೆ ಅವಲೋಕನ ನಡೆಸಲಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮೀಕ್ಷಾ ವರದಿ ತರಿಸಿದ್ದು, ಇದಕ್ಕೆ ಪೂರಕವಾಗಿ ಸಚಿವರು ತಮ್ಮ ತಮ್ಮ ಜಿಲ್ಲೆಗಳಲ್ಲಿ ನಡೆಸಿದ ಅಧ್ಯಯನ ವರದಿಗಳನ್ನು ತರಿಸಿಕೊಳ್ಳಲಿದ್ದಾರೆ. ನಾನು ನಡೆಸುವ ಸರ್ವೇಯೇ ಬೇರೆ. ನೀವು ನಿಮ್ಮ ನಿಮ್ಮ ಮೂಲಗಳಿಂದ ಸರ್ವೇ ವರದಿ ತರಿಸಿಕೊಳ್ಳಿ. ಪರಸ್ಪರ ಹೋಲಿಕೆ ಮಾಡಿ ನೋಡೋಣ ಎಂದು ಮುಖ್ಯಮಂತ್ರಿಗಳು ಈ ಹಿಂದೆಯ ತಮ್ಮ ಸಚಿವ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸೂಚನೆಯನುಸಾರ ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಸಚಿವರುಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ಪಕ್ಷದ ಪರಿಸ್ಥಿತಿ, ಗೆಲ್ಲುವ ಕ್ಯಾಂಡಿಡೇಟುಗಳು, ಸ್ವಲ್ಪ ಬಲ ಹಾಕಿದರೆ ಗೆಲ್ಲಬಲ್ಲ ಅಭ್ಯರ್ಥಿಗಳು, ಯಾವ ಕಾರಣಕ್ಕೂ ಗೆಲ್ಲಲಾಗದ ಕ್ಷೇತ್ರಗಳ ಪಟ್ಟಿ ತಯಾರಿಸಿಕೊಂಡಿದ್ದಾರೆ. ಹೀಗೆ ತಾವು ತರಿಸಿಕೊಂಡ ಸರ್ವೇ ವರದಿಯ ಜತೆ ಸಚಿವರು ರೆಡಿ ಮಾಡಿಟ್ಟುಕೊಂಡ ಸರ್ವೇ ವರದಿಗಳನ್ನು ಹೋಲಿಸಿ ನೋಡಲಿರುವ ಮುಖ್ಯಮಂತ್ರಿಗಳು ಗೆದ್ದೇ ಗೆಲ್ಲುವ ಅಭ್ಯರ್ಥಿಗಳು, ಗೆಲ್ಲಬಲ್ಲ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಾಥಮಿಕವಾಗಿ ಸಿದ್ಧಪಡಿಸಲಿದ್ದಾರೆ.

ಆನಂತರ ಮಾರ್ಚ್ ಇಪ್ಪತ್ತಾರರಂದು ನಡೆಯಲಿರುವ ರಾಜ್ಯ ಚುನಾವಣಾ ಸಮಿತಿ ಸಭೆಯಲ್ಲಿ ಇದನ್ನು ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ ಮೊದಲ ಕಂತಿನ ತೊಂಭತ್ತು ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲು ರಾಜ್ಯ ಚುನಾವಣಾ ಸಮಿತಿಗೆ ನೆರವು ನೀಡಲಿದ್ದಾರೆ. ಈಗಾಗಲೇ ರಾಜ್ಯ ಚುನಾವಣಾ ಸಮಿತಿ ಕಳೆದ ಚುನಾವಣೆಯಲ್ಲಿ ಸೋತ ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವವರು ಯಾರಾಗಬೇಕು?ಎಂಬ ಕುರಿತು ಇಬ್ಬರು, ಮೂವರ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ. ಆನಂತರ ಸಿದ್ಧರಾಮಯ್ಯ ಅವರು ನೀಡುವ ಸಲಹೆ,ಪಕ್ಷ ನೀಡುವ ಸಲಹೆಗಳೆಲ್ಲವನ್ನೂ ಪರಿಗಣಿಸಿ ತೊಂಭತ್ತು ಕ್ಷೇತ್ರಗಳ ಅಭ್ಯರ್ಥಿಗಳು ಯಾರಾಗಬೇಕು ಎಂಬ ಪಟ್ಟಿಯನ್ನು ರಾಜ್ಯ ಚುನಾವಣಾ ಸಮಿತಿ, ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ