ರಾಜ್ಯ ಸರ್ಕಾರದ ವಿರುದ್ಧ ದೇವೇಗೌಡರ ಗುಡುಗು16-03-2018

ಹಾಸನ: ಎನ್‌ಡಿಎ ಮೈತ್ರಿಕೂಟದಿಂದ ಟಿಡಿಪಿ ಹೊರಬಂದ ವಿಚಾರದ ಕುರಿತು, ಹಾಸನದಲ್ಲಿ ಮಾಜಿ ಪ್ರಧಾನಿ‌ ಹೆಚ್.ಡಿ.ದೇವೇಗೌಡರು ಪ್ರತಿಕ್ರಿಯಿಸಿದ್ದಾರೆ. ಆಂಧ್ರ ಪ್ರದೇಶ ವಿಭಜನೆಯಾದಾಗ ವಿಶೇಷ ಪ್ಯಾಕೇಜ್ ಕೊಡುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು. ಆದರೆ ಈ ವರೆಗೂ ಪ್ಯಾಕೇಜ್ ನೀಡಿಲ್ಲ. ಪ್ಯಾಕೇಜ್ ಬಗ್ಗೆ ಪ್ರಧಾನಿಯವರು ಯೂಟರ್ನ್ ತೆಗೆದುಕೊಂಡಿದ್ದಾರೆ. ಕೇಂದ್ರದ ನಡೆಯೇ ಇತ್ತೀಚಿನ ಈ ಹೊಸ ಬೆಳವಣಿಗೆಗೆ ಕಾರಣ ಇರಬಹುದು ಎಂದು ಅಭಿಪ್ರಾಯಪಟ್ಟರು.

ನೋಟ್ ಬ್ಯಾನ್, ಜಿ.ಎಸ್.ಟಿ ಕಪ್ಪುಹಣ ಬಡವರಿಗೆ ಹಂಚಿಕೆ ಭರವಸೆ ಹಾಗೂ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮೋದಿ ಅವರ ಜನಪ್ರಿಯತೆ ಕುಗ್ಗಿಸುತ್ತಿರುವುದು ಸತ್ಯ ಎಂದಿದ್ದಾರೆ. ಮಾಜಿ ಸಿಎಂ ವೀರಪ್ಪ ಮೊಯಿಲಿ ಟ್ವೀಟ್ ಕುರಿತು ಪ್ರತಿಕ್ರಿಯಿಸಿ, ಇದು ಒಂದಂಶ ಅಷ್ಟೆ, ಈ ರೀತಿ ಚಟುವಟಿಕೆ ಸಾಕಷ್ಟು ನಡೆಯುತ್ತಿವೆ. ಕಾಂಗ್ರೆಸ್ ಭ್ರಷ್ಟಾಚಾರದ ಬಗ್ಗೆ ಮೊಯಿಲಿಗಿಂತ ನಾನು‌ ಬೇರೆ ಹೇಳಬೇಕೆ? ? ಎಂದು ಮರು ಪ್ರಶ್ನಿಸಿದ್ದಾರೆ.

ಮುಂದಿನ ಕಾವೇರಿ ಕೊಳ್ಳದ ಸಂಸದರ ಸಭೆಯನ್ನು ಮುಂದೆ ಕರೆದರೂ ಭಾಗಿಯಾಗುವೆ. ಕಾವೇರಿ ವಿಚಾರದಲ್ಲಿ ನನ್ನ ನಿರ್ಧಾರ ಅಚಲ, ಯಾವುದೇ ಮುಜುಗರ ಇಲ್ಲ. ನಿರ್ವಹಣಾ ಮಂಡಳಿ ರಚನೆ ಬಗ್ಗೆ ನಾನು ಈಗಾಗಲೇ ಕೇಂದ್ರದ ಹಲವರಿಗೆ ಪತ್ರ ಬರೆದಿದ್ದೇನೆ ಎಂದರು.

ಚುನಾವಣೆ ಹೊಸ್ತಿಲಲ್ಲಿ ಸಾವಿರಾರು ಕೋಟಿ‌ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಕಿದರೆ ಜನ ನಂಬುತ್ತಾರಾ? ಜನರಿಗೆ ರಾಜಕೀಯ ಪ್ರಭುತ್ವ ಇಲ್ಲವೇ? ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.  ಖೇಣಿ  ಅಂಥವರನ್ನು ಪಕ್ಷಕ್ಕೆ ಸೇರಿಸಿಕೊಂಡು ‌ನಮ್ಮದು ಭ್ರಷ್ಟರಹಿತ ಸರಕಾರ ಅಂದರೆ ಜನ ಒಪ್ಪುತ್ತಾರಾ? ನೈಸ್ ಯೋಜನೆಯಿಂದ ತೊಂದರೆಗೀಡಾಗಿರುವ ರೈತರ ಸೇರಿಸಿ ಶೀಘ್ರ ರಾಜಭವನ ಚಲೋ ಮಾಡುವೆ ಎಂದು  ರಾಜ್ಯ ಸರ್ಕಾರದ ವಿರುದ್ಧ ಮತ್ತೆ ತೊಡೆ ತಟ್ಟಿದ್ದಾರೆ.


ಸಂಬಂಧಿತ ಟ್ಯಾಗ್ಗಳು

H.D.deve gowda press meet ಅಭಿವೃದ್ಧಿ ಅಡಿಗಲ್ಲು


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ