ಎಸಿಬಿ ಬಲೆಗೆ ಬಿದ್ದ ನಾಲ್ವರು ಭ್ರಷ್ಟ ಅಧಿಕಾರಿಗಳು

Kannada News

10-05-2017

ಬೆಂಗಳೂರು, ಮೇ.10- ಭ್ರಷ್ಟರ ಮೇಲಿನ ದಾಳಿಯನ್ನು ಮುಂದುವರೆಸಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಬಿಬಿಎಂಪಿ ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಡಾ.ಕೆ.ಸಿ.ಯತೀಶ್ ಕುಮಾರ್ ಜೈಲಿನಲ್ಲಿರುವ ರಾಮನಗರದ ತಹಶೀಲ್ದಾರ್ ರಘು ಮೂರ್ತಿ ಸೇರಿ ನಾಲ್ವರು ಭ್ರಷ್ಟ ಅಧಿಕಾರಿಗಳನ್ನು ಬಲೆಗೆ ಕೆಡವಿದ್ದಾರೆ.
ಡಾ.ಕೆ.ಸಿ.ಯತೀಶ್ ಕುಮಾರ್ ಅವರ ಜತೆಗೆ ರಾಮನಗರದ ತಹಶೀಲ್ದಾರ್ ರಘು ಮೂರ್ತಿ ಕೆಪಿಟಿಸಿಎಲ್‍ನ ನಿರ್ದೇಶಕ ಎಚ್. ನಾಗೇಶ್, ತಾಂತ್ರಿಕ ಶಿಕ್ಷಣ ಮಂಡಳಿಯ ಸೂಪರಿಡೆಂಟ್ ಡೈರೆಕ್ಟರ್ ರಾಮಕೃಷ್ಣ ರೆಡ್ಡಿ ಅವರ ಕಚೇರಿ ಹಾಗೂ ಮನೆಗಳ ಮೇಲೆ ಬುಧವಾರ ಮುಂಜಾನೆಯಿಂದಲೇ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳು ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿ ಪಾಸ್ತಿಯನ್ನು ಪತ್ತೆಹಚ್ಚಿದ್ದಾರೆ
ರಘುಮೂರ್ತಿ ಅವರ ರಾಮನಗರದ ಕಚೇರಿ, ನಾಗರಬಾವಿಯ ವಿನಾಯಕ ಬಡಾವಣೆಯ ಮನೆ, ಯತೀಶ್ ಕುಮಾರ್ ಅವರ ಮೇಯೋಹಾಲ್‍ನ ಕಚೇರಿ, ನಾಗರಬಾವಿಯ 10ನೇ ಬ್ಲಾಕ್‍ನ ಮನೆ, ನಾಗೇಶ್ ಅವರ ಕಾವೇರಿ ಭವನದ ಕಚೇರಿ, ಕೋರಮಂಗಲದ ನ್ಯಾಷನಲ್ ಗೇಮ್ಸ್ ವಿಲೇಜ್ ಬಳಿ ಇರುವ ಮನೆ ಹಾಗೂ ರಾಮಕೃಷ್ಣ ರೆಡ್ಡಿ ಅವರ ತಾಂತ್ರಿಕ ಶಿಕ್ಷಣ ಮಂಡಳಿಯ ಕಚೇರಿ,ಬ್ಯಾಟರಾಯನಪುರದ ವಿನಾಯಕ ಬಡಾವಣೆಯ ಮನೆಗಳ ಮೇಲೆ ದಾಳಿ ನಡೆಸಿ ಪತ್ತೆ ಹಚ್ಚಿರುವ ಅಕ್ರಮ ಆಸ್ತಿ ಪಾಸ್ತಿಯನ್ನು ಕಲೆಹಾಕಿದ್ದಾರೆ.
ಬಲೆಗೆ ಬಿದ್ದಿರುವ ನಾಲ್ವರು ಅಧಿಕಾರಿಗಳ ಅಕ್ರಮ ಆಸ್ತಿ ಪಾಸ್ತಿ ಗಳಿಸಿರುವುದು ಮತ್ತು ನಡೆಸಿರುವ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಈ ನಾಲ್ವರು ಅಧಿಕಾರಿಗಳ ಕಚೇರಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದಾಗ ಆದಾಯಕ್ಕೂ ಮೀರಿ ಕೋಟ್ಯಂತರ ರೂ.ಮೌಲ್ಯದ ಅಕ್ರಮ ಆಸ್ತಿಪಾಸ್ತಿ ಗಳಿಸಿರುವುದು ದಾಳಿಯಲ್ಲಿ ಬೆಳಕಿಗೆ ಬಂದಿದೆ.
ಅಧಿಕಾರಿಗಳ ಬಳಿ ಲಕ್ಷಾಂತರ ರೂ.ನಗದು, ಚಿನ್ನಾಭರಣ, ಐಷಾರಾಮಿ ವಸ್ತುಗಳು, ನಿವೇಶನ, ಮನೆ ಇನ್ನಿತರ ಆಸ್ತಿಪಾಸ್ತಿಯ ದಾಖಲೆ ಪತ್ರಗಳು ದೊರೆತಿದ್ದು, ಅವುಗಳನ್ನು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಪೊಲೀಸ್ ಮಹಾನಿರೀಕ್ಷಕ (ಐಜಿಪಿ) ಕೆ.ವಿ.ಶರತ್‍ಚಂದ್ರ ತಿಳಿಸಿದ್ದಾರೆ.
ಅಧಿಕಾರಿಗಳು ಮುಂಜಾನೆಯಿಂದಲೇ ದಾಳಿ ನಡೆಸಿ ಪತ್ತೆ ಹಚ್ಚಿರುವ ಅಕ್ರಮ ಆಸ್ತಿ ಪಾಸ್ತಿಗಳ ಒಟ್ಟಾರೆ ಮೌಲ್ಯ ಸಂಜೆ ವೇಳೆಗೆ ಗೊತ್ತಾಗಲಿದೆ. ನಾಲ್ವರು ಅಧಿಕಾರಿಗಳು ಸಂಬಂಧಿಕರ ಹೆಸರಿನಲ್ಲಿ ಹಾಗೂ ಬೇನಾಮಿಯಾಗಿ ಮಾಡಿರುವ ಆಸ್ತಿಪಾಸ್ತಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
1ಕೆಜಿ ಚಿನ್ನ 5ಕೆಜಿ ಬೆಳ್ಳಿ
ಕೆಪಿಟಿಸಿಎಲ್‍ನ ನಿರ್ದೇಶಕ ಎಚ್. ನಾಗೇಶ್ ಮನೆ ಕಚೇರಿ ಮೇಲೆ ನಡೆದ ಎಸಿಬಿ ದಾಳಿಯಲ್ಲಿ 1ಕೆಜಿ ಚಿನ್ನ 5ಕೆಜಿ ಬೆಳ್ಳಿ 2.5 ಲಕ್ಷ ಹೊಸನೋಟು ಹಳೆಯ 50 ಸಾವಿರ ಮುಖಬೆಲೆಯ ನೋಟುಗಳು ಅಲ್ಲದೇ ಪತ್ನಿ ಮಕ್ಕಳ ಹೆಸರಲ್ಲಿದ್ದ ನಿವೇಶನಗಳು ಪತ್ತೆಯಾಗಿವೆ
ಜೈಲಿನಲ್ಲಿದ್ದರೂ ದಾಳಿ
ಕಳೆದ 2011ರಲ್ಲಿ ಮೈಸೂರಿನ ಮಾದಹಳ್ಳಿಯಲ್ಲಿ ಶಿರಸ್ತೇದಾರರಾಗಿದ್ದ ರಾಮನಗರ ತಹಶೀಲ್ದಾರ್ ರಘುಮೂರ್ತಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿಕೊಡಲು 5 ಲಕ್ಷ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು ಸೆಷನ್ ನ್ಯಾಯಾಲಯ ಅವರಿಗೆ ನಾಲ್ಕು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ರಘುಮೂರ್ತಿ ಜೈಲಿನಲ್ಲಿದ್ದರೂ ಅವರ ವಿರುದ್ಧ ಸಾರ್ವಜನಿಕರು ನೀಡಿದ್ದ 20ಕ್ಕೂ ಹೆಚ್ಚು ದೂರುಗಳನ್ನಾಧರಿಸಿ ಕಾರ್ಯಾಚರಣೆಗಿಳಿದ ಎಸಿಬಿ ಪೊಲೀಸರು ನಾಗರಬಾವಿಯ ವಿನಾಯಕ ಬಡಾವಣೆಯಲ್ಲಿರುವ ಅವರ ನಿವಾಸ ಹಾಗೂ ತರೀಕೆರೆ ತಾಲೂಕಿನ ಗಡಿಹಳ್ಳಿಯಲ್ಲಿರುವ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಸಿಎಂ ಆಪ್ತ ವಲಯದಲ್ಲಿ ಪ್ರಭಾವಿ ಅಧಿಕಾರಿ ಎಂದೇ ಬಿಂಬಿಸಿಕೊಂಡಿರುವ ಬಿಬಿಎಂಪಿ ಜಂಟಿ ಆಯುಕ್ತ ಡಾ.ಕೆ.ಸಿ.ಯತೀಶ್ ಕುಮಾರ್ ಅವರಿಗೂ ಬಿಸಿ ಮುಟ್ಟಿಸಿರುವ ಪೊಲೀಸರು, ನಾವು ಯಾವುದೇ ಪ್ರಭಾವಕ್ಕೂ ಮಣಿಯುವುದಿಲ್ಲ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ