ಹುಡುಗಿ ಜುಟ್ಟು ಹಿಡಿದು ಎಳೆದಾಟ: ಜೆಡಿಎಸ್ ಮುಖಂಡನ ಬಂಧನ

Jds leader arrasted in bengaluru

14-03-2018

ಬೆಂಗಳೂರು: ಯುವತಿಯ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಜೆಡಿಎಸ್ ಪಕ್ಷದ ಹಿಂದುಳಿದ ವಿಭಾಗದ ಮಹಾಪ್ರಧಾನ ಕಾರ್ಯದರ್ಶಿ ನಾರಾಯಣ್ ಮತ್ತು ಆತನ ಮಗನನ್ನು ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ರೌಡಿಶೀಟರ್ ಆಗಿರುವ ನಾರಾಯಣ್ ಮತ್ತು ಆತನ ಮಗ ನವೀನ್ ಇಬ್ಬರನ್ನೂ ಬಂಧಿಸಿ ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ನಾರಾಯಣ್ ಮತ್ತು ಆತನ ಮಗ ನವೀನ್ ಹಾಗೂ ಸಹಚರರು ಕಳೆದ ಫೆ.16 ರಂದು ಸಂಜೆ 7.30 ರ ವೇಳೆಗೆ ಲಗ್ಗೆರೆಯಲ್ಲಿ ಟ್ಯೂಷನ್ ಮುಗಿಸಿ ಕೊಂಡು ಹೋಗುತ್ತಿದ್ದ ಯುವತಿಯನ್ನು ಇನೋವಾ ಕಾರಿನಲ್ಲಿ ಬಂದು ಅಡ್ಡಗಟ್ಟಿ ಬೆದರಿಕೆ ಹಾಕಿದ್ದರು.

ಲಗ್ಗೆರೆ ಬ್ರಿಡ್ಜ್ ಬಳಿಯ ಸರ್ವೀಸ್ ರಸ್ತೆಯ ಬಳಿ ಯುವತಿ ಹೋಗುತ್ತಿದ್ದಾಗ ಯುವತಿಯನ್ನು ಕರೆದುಕೊಂಡು ಹೋಗಲು ಹೋಗಿದ್ದ ಆಕೆಯ ತಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ನಿನ್ನ ತಮ್ಮನನ್ನು ಮುಗಿಸಿಬಿಡುತ್ತೇವೆ ಎಂದು ಯುವತಿಯ ಜುಟ್ಟು ಹಿಡಿದು ನಾರಾಯಣ್ ಮತ್ತು ನವೀನ್ ಹೆದರಿಸಿದ್ದರು.

ಈ ಸಂಬಂಧ ಯುವತಿ ಫೆಬ್ರವರಿ 17ರಂದು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಳು. ದೂರಿನ ಆಧಾರದ ಮೇಲೆ ಹಲ್ಲೆ, ದೌರ್ಜನ್ಯ, ಕೊಲೆ ಬೆದರಿಕೆ ಮತ್ತು ಅವಾಚ್ಯ ಪದಗಳಿಂದ ನಿಂದನೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ನಾರಾಯಣ ಮತ್ತು ಆತನ ಮಗ ನವೀನ್‍ನನ್ನು ಬಂಧಿಸಿದ್ದಾರೆ. ಯುವತಿಯ ತಮ್ಮನ ಮೇಲಿದ್ದ ದ್ವೇಷಕ್ಕೆ ಆಕೆಯ ಜುಟ್ಟು ಹಿಡಿದು ಎಳೆದಾಡಿ ದೌರ್ಜನ್ಯ ನಡೆಸಲಾಗಿತ್ತು ಬಂಧಿತ ನಾರಾಯಣ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯ ರೌಡಿಪಟ್ಟಿಯಲ್ಲಿದ್ದಾನೆ ಎಂದು ಉತ್ತರ ವಿಭಾಗದ ಡಿಸಿಪಿ ಚೇತನ್‍ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

JDS General Secretary ರೌಡಿಶೀಟರ್ ದೌರ್ಜನ್ಯ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ