ದೆಹಲಿಯಲ್ಲಿ ಎಐಸಿಸಿ ಮಹಾ ಅಧಿವೇಶನ

AICC Great Convention in delhi

13-03-2018

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರ ತಂತ್ರಗಳಿಗೆ ಪ್ರತಿತಂತ್ರ ರೂಪಿಸುತ್ತಿರುವ ಕಾಂಗ್ರೆಸ್, ನವದೆಹಲಿಯಲ್ಲಿ ಎಐಸಿಸಿ ಮಹಾ ಅಧಿವೇಶನ ನಡೆಸಲು ತೀರ್ಮಾನಿಸಿದೆ.

ಕರ್ನಾಟಕ ಸೇರಿದಂತೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯನ್ನು ಹಣಿಯಲು ರಣತಂತ್ರ ರೂಪಿಸುವ ಉದ್ದೇಶದಿಂದ ಇದೇ 16ರಿಂದ 18ರವರೆಗೆ ಎಐಸಿಸಿ ಮಹಾಧಿವೇಶನ ನಡೆಯಲಿದೆ. ಈ ಅಧಿವೇಶನದ ನಂತರ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಅತ್ಯಂತ ನಿರ್ಣಾಯಕವಾಗಿದ್ದು, ಇದು ದೇಶದ ರಾಜಕೀಯ ಚಿತ್ರಣವನ್ನೇ ಬದಲಿಸುವ ನಿರೀಕ್ಷೆ ಹೊಂದಿದೆ.

ಇಂತಹ ಮಹತ್ವದ ಅಧಿವೇಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚೇದಿನ್, ನೋಟ್ ಬ್ಯಾನ್, ಅಸಮರ್ಪಕವಾಗಿ ಅನುಷ್ಠಾನಗೊಳಿಸಿದ ಜಿ.ಎಸ್.ಟಿ ಮತ್ತಿತರ ಅಂಶಗಳ ಬಗ್ಗೆ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ. ಯುಪಿಎ ಮತ್ತು  ಎನ್.ಡಿ.ಎ. ಕಾಲದಲ್ಲಿ ಜನರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಹೇಗಿತ್ತು. ಈಗ ಹೇಗಿದೆ. ಪೆಟ್ರೋಲ್, ಡೀಸೆಲ್ ಮತ್ತಿತರ ಅಗತ್ಯ ವಸ್ತುಗಳ ಬೆಲೆ ಏರಿಕೆ, ಜನ ಸಾಮಾನ್ಯರ ಪರಿಸ್ಥಿತಿ ಹೇಗಿದೆ ಎನ್ನುವ ಕುರಿತಂತೆ ಮಹತ್ವದ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಿದ್ದಾರೆ. ರಾಹುಲ್ ಗಾಂಧಿ ಅವರು ಎಐಸಿಸಿ ಅಧ್ಯಕ್ಷರಾದ ನಂತರ ನಡೆಯುತ್ತಿರುವ ಎಐಸಿಸಿಯ ಮೊದಲ ಮಹಾಧಿವೇಶನ ಇದಾಗಿದ್ದು, ರಾಜ್ಯದಿಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿ ಹಲ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.

ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಯಾವ ಕಾರಣಕ್ಕೂ ನಾವು ಸೋಲಬಾರದು. ಅತಂತ್ರ ವಿಧಾನಸಭೆ ಬರಲು ದಾರಿ ಮಾಡಿಕೊಡಬಾರದು. ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇದು ಅತ್ಯಂತ ಮಹತ್ವಪೂರ್ಣ ಚುನಾವಣೆ ಎಂದು ರಾಹುಲ್ ಗಾಂಧಿ ಈ ಅಧಿವೇಶನದಲ್ಲಿ ಪಕ್ಷಕ್ಕೆ ಕರೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಸ್ವಯಂಬಲದ ಮೇಲೆ ನಾವು ಅಧಿಕಾರಕ್ಕೆ ಬಂದರೆ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ  ಮಧ್ಯಪ್ರದೇಶ, ರಾಜಸ್ತಾನ ಹಾಗೂ ಛತ್ತೀಸ್ ಘಡ ರಾಜ್ಯಗಳ ವಿಧಾನಸಭಾ ಚುನಾವಣೆಗಳನ್ನು ಎದುರಿಸಲು ಹುಮ್ಮಸ್ಸು ದೊರೆತಂತಾಗುತ್ತದೆ.

ಈಗಾಗಲೇ ತಮಗಿರುವ ಮಾಹಿತಿಯ ಪ್ರಕಾರ, ರಾಜಸ್ತಾನ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ವಿರೋಧಿ ಗಾಳಿ ಬೀಸುತ್ತಿದ್ದು ಉಳಿದ ರಾಜ್ಯಗಳಲ್ಲಿ ಇನ್ನಷ್ಟು ಬಲ ಹಾಕಿದರೆ ಮುಂದಿನ ಲೋಕಸಭಾ ಚುನಾವಣೆಯ ವೇಳೆಗೆ ಕಾಂಗ್ರೆಸ್ ರಾಷ್ಟ್ರಮಟ್ಟದಲ್ಲಿ ಮೇಲೆದ್ದು ನಿಲ್ಲಲು, ಹೋರಾಡಲು ದಾರಿ ಸುಗಮವಾಗುತ್ತದೆ. ಯಾವ ರಾಜ್ಯಗಳಲ್ಲಿ ಬಿಜೆಪಿಯೇತರ ಶಕ್ತಿಗಳ ಜತೆ ಕೈಗೂಡಿಸುವುದು ಅನಿವಾರ್ಯ ಮತ್ತು ಯಾವ ಪಕ್ಷಗಳೊಂದಿಗೆ ಕೈ ಜೋಡಿಸಿದರೆ ಒಳ್ಳೆಯದು ಎಂಬ ಕುರಿತೂ ರಾಹುಲ್ ಗಾಂಧಿ ಅವರು ಈ ಮಹಾಧಿವೇಶನದ ಸಂದರ್ಭದಲ್ಲಿ ಆಯಾ ರಾಜ್ಯಗಳ ನಾಯಕರ ಬಳಿ ಕೇಳಲಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವಂತಾಗಬೇಕು ಎಂಬುದು ರಾಹುಲ್ ಗಾಂಧಿ ಅವರ ಸೂಚನೆ. ಈ ಎಲ್ಲ ಅಂಶಗಳ ಬೆನ್ನಲ್ಲೇ ಮಾರ್ಚ್ ಹದಿನಾರರಿಂದ ಹದಿನೆಂಟರವರೆಗೆ ಎಐಸಿಸಿ ಮಹಾಧಿವೇಶನ ನಡೆಯಲಿದ್ದು ಕರ್ನಾಟಕದ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರುವ ಬೆನ್ನಲ್ಲೇ ಕುತೂಹಲ ಕೆರಳಿಸಿದೆ.


ಸಂಬಂಧಿತ ಟ್ಯಾಗ್ಗಳು

AICC session ವಿಧಾನಸಭೆ ಚುನಾವಣೆ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ