ನಾಲ್ಕು ಸ್ಥಾನಗಳಿಗೆ ಐವರಿಂದ ನಾಮಪತ್ರ ಸಲ್ಲಿಕೆ

Nomination filed by 5 candidates for 4 seats of rajya sabha: karnataka

12-03-2018

ಬೆಂಗಳೂರು: ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ವಿಧಾನಸಭೆಯಿಂದ ಮಾರ್ಚ್ 23ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನಿಂದ ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ, ಸಯ್ಯದ್ ನಾಸೀರ್ ಹುಸೇನ್ ಹಾಗೂ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದೇ ರೀತಿ ಜೆಡಿಎಸ್‍ನಿಂದ ಬಿ.ಎಂ.ಫಾರೂಕ್ ಅವರು ಇನ್ನೆರಡು ಸೆಟ್ ನಾಮಪತ್ರಗಳನ್ನು ಸಲ್ಲಿಸಿದ್ದು, ಸಧ್ಯದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಗೆಲ್ಲುವುದು ಬಹುತೇಕ ನಿಶ್ಚಿತವಾಗಿದೆ.

ಮಂಗಳವಾರ ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದ್ದು ಬುಧವಾರ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಈ ಮಧ್ಯೆ ಇಂದು ಬೆಳಿಗ್ಗೆ ಬಿಜೆಪಿ ಅಭ್ಯರ್ಥಿ ರಾಜೀವ್ ಚಂದ್ರಶೇಖರ್ ಅವರು ವಿಧಾನಸೌಧದ ಮೊದಲ ಅಂತಸ್ತಿಗೆ ಬಂದು ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿದರು. ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಅಚ್ಚ ಕನ್ನಡಿಗ, ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡಲು ಬಯಸಿದ್ದೇನೆ. ಅದಕ್ಕಾಗಿ ದುಡಿಯಲು ಸಜ್ಜಾಗಿದ್ದೇನೆ ಎಂದು ಹೇಳಿದರು. ಬಿಜೆಪಿ ವರಿಷ್ಟರು ನನ್ನನ್ನು ಗುರುತಿಸಿ ಟಿಕೆಟ್ ನೀಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ರಾಜ್ಯದ ಜನರ ಪರವಾಗಿ ನನ್ನ ಕೆಲಸ ನಿರಂತವಾಗಿ ಮುಂದುವರಿಯಲಿದೆ ಎಂದು ನುಡಿದರು.

ತದ ನಂತರ ಚುನಾವಣಾಧಿಕಾರಿಗಳನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ಜಿ.ಸಿ.ಚಂದ್ರಶೇಖರ್, ಎಲ್.ಹನುಮಂತಯ್ಯ ಹಾಗೂ ಸಯ್ಯದ್ ನಾಸೀರ್ ಹುಸೇನ್ ಅವರು ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅಭ್ಯರ್ಥಿಗಳು ಕಾಂಗ್ರೆಸ್ ತಮಗೆ ಟಿಕೇಟ್ ನೀಡಿದ ಹೈಕಮಾಂಡ್ ವರಿಷ್ಠರಿಗೆ, ಪಕ್ಷದ ನಾಯಕರಿಗೆ ಧನ್ಯವಾದಗಳನ್ನು ಸಲ್ಲಿಸಿದ ಅವರು,ರಾಜ್ಯದ ಹಿತದೃಷ್ಟಿಯನ್ನು ಮುಖ್ಯವಾಗಿಟ್ಟುಕೊಂಡು ಕೆಲಸ ಮಾಡುವುದಾಗಿ ಹೇಳಿದರು. ಸದ್ಯದ ಪರಿಸ್ಥಿತಿಯಲ್ಲಿ 122 ಸದಸ್ಯ ಬಲದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್‍ನ ಭಿನ್ನರು, ಪಕ್ಷೇತರರು ಸೇರಿದಂತೆ ಒಟ್ಟಾರೆಯಾಗಿ ನೂರಾ ಮೂವತ್ತೈದು ಮಂದಿ ಶಾಸಕರ ಬಲವಿದ್ದು ಬಿಜೆಪಿಗೆ ನಲವತ್ನಾಲ್ಕು ಶಾಸಕರ ಜತೆ ಎರಡು ದ್ವಿತೀಯ ಪ್ರಾಶಸ್ತ್ರದ ಮತಗಳಿವೆ.

ಹಾಲಿ ವಿಧಾನಸಭೆಯ ಸದಸ್ಯರಾಗಿದ್ದ ಪುಟ್ಟಣ್ಣಯ್ಯ, ಚಿಕ್ಕಮಾದು, ಖಮರುಲ್ ಇಸ್ಲಾಂ ಅವರು ತೀರಿಕೊಂಡಿದ್ದು ಉಳಿದಂತೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರೂ ಸೇರಿದಂತೆ ಒಟ್ಟಾರೆ ಸದಸ್ಯ ಬಲ 217 ರಷ್ಟಿದೆ. ಹೀಗಾಗಿ ಒಬ್ಬ ಅಭ್ಯರ್ಥಿಯ ಗೆಲುವಿಗೆ 44.1 ಮತಗಳು ಬೇಕಿದ್ದು ಸಧ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ನಿರಾಯಾಸವಾಗಿ ಗೆಲುವು ಗಳಿಸಲಿದ್ದಾರೆ. ಆದರೂ ಜೆಡಿಎಸ್ ಕಣದಲ್ಲಿರುವುದರಿಂದ ಕುತೂಹಲ ಉಳಿದಿದೆ.

ಒಂದು ವೇಳೆ ಬುಧವಾರ ಜೆಡಿಎಸ್ ಅಭ್ಯರ್ಥಿ ಬಿ.ಎಂ.ಫಾರೂಕ್ ಅವರು ತಮ್ಮ ನಾಮಪತ್ರ ಹಿಂಪಡೆದರೆ ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿಯ ಮೂವರು ಅಭ್ಯರ್ಥಿಗಳ ಆಯ್ಕೆ ಅವಿರೋಧವಾಗಿ ನಡೆಯಲಿದೆ. ಒಂದು ವೇಳೆ ಬಿ.ಎಂ.ಫಾರೂಕ್ ಅವರು ತಮ್ಮ ನಾಮಪತ್ರವನ್ನು ಹಿಂಪಡೆಯದೆ ಹೋದರೆ ಚುನಾವಣೆ ನಡೆಯಲಿದ್ದು ಆಯಾರಾಂ-ಗಯಾರಾಂ ಮತಗಳೇನಾದರೂ ಕೆಲಸ ಮಾಡಿದರೆ ಇದ್ದಕ್ಕಿದ್ದಂತೆ ಚುನಾವಣಾ ಅಖಾಡ ರಂಗೇರುವುದು ನಿಶ್ಚಿತ.


ಸಂಬಂಧಿತ ಟ್ಯಾಗ್ಗಳು

rajay sabha election Rajeev Chandrasekhar kpcc


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ