ವಸತಿ ಸಚಿವ ಎಂ.ಕೃಷ್ಣಪ್ಪ ಅವರನ್ನು ವಜಾಗೊಳಿಸುವಂತೆ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

Kannada News

09-05-2017

ಬೆಂಗಳೂರು, ಮೇ 9 :  ರೈತರನ್ನು ವಂಚಿಸಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಜಮೀನಿನಲ್ಲಿ ಖಾಸಗಿ ಬಡಾವಣೆ ನಿರ್ಮಿಸಲು ಮುಂದಾಗಿರುವ ವಸತಿ ಸಚಿವ ಎಂ.ಕೃಷ್ಣಪ್ಪ  ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಬಿಜೆಪಿ ಮಹಾನಗರದ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಮೌರ್ಯ ವೃತ್ತದ ಬಳಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಭ್ರಷ್ಟಚಾರದಲ್ಲಿ ಪಾಲ್ಗೊಂಡಿರುವ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರ ರಾಜೀನಾಮೆಗೂ ಆಗ್ರಹಿಸಲಾಯಿತು ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಾಮಚಂದ್ರೇಗೌಡ ಅವರು ಎಂ.ಕೃಷ್ಣಪ್ಪ ಅವರ ವಿರುದ್ಧ ನ್ಯಾಯಾಲಯ ಕೂಡ ತೀರ್ಪು ನೀಡಿದೆ. ಆದರೂ ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸರಿಯಲ್ಲ. ಜನತಾ ನ್ಯಾಯಾಲಯದಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವಥ ನಾರಾಯಣ್ ಮಾತನಾಡಿ, ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ವಾಜನಹಳ್ಳಿ ಮತ್ತು ರಘುವನಹಳ್ಳಿ ಗ್ರಾಮಗಳ 126 ಮಂದಿ ಅಮಾಯಕ ರೈತರಿಗೆ ವಂಚಿಸಿ ಸುಮಾರು 3000 ಕೋಟಿ ರೂ.ಬೆಲೆ ಬಾಳುವ 189 ಎಕರೆಯಷ್ಟು ವಿಸ್ತೀರ್ಣದ ಜಮೀನನ್ನು ಎಂ.ಕೃಷ್ಣಪ್ಪ ಲಪಟಾಯಿಸಿದ್ದು, ರಾಜ್ಯ ಹೈಕೋರ್ಟ್ ಕೃಷ್ಣಪ್ಪ ಅವರನ್ನು ಪರಮ ವಂಚಕ ಎಂದು ಬಣ್ಣಿಸಿದೆ. ಕೂಡಲೇ ಸರ್ಕಾರ ಅಮಾಯಕ ರೈತರ ಭೂಮಿಯನ್ನು ವಾಪಾಸ್ ನೀಡಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ ಸರ್ಕಾರಿ ಸ್ವತ್ತನ್ನು ನಕಲಿ ದಾಖಲೆಗಳ ಸಹಾಯದಿಂದ ಕಬಳಿಸಿ ಖಾಸಗಿ ವಸತಿ ನಿವೇಶನಗಳ ಬಡಾವಣೆ ನಿರ್ಮಿಸಲು ಸಚಿವರು ಮುಂದಾಗಿದ್ದು, ಕೂಡಲೇ ಅದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಬಿಬಿಎಂಪಿ ಸದಸ್ಯ ಎನ್.ಆರ್. ರಮೇಶ್ ಮಾತನಾಡಿ, ಸಚಿವರ ಭೂ ಹಗರಣವನ್ನು ಬಯಲಿಗೆಳೆದ ಹಿನ್ನೆಲೆಯಲ್ಲಿ ಅವರ ಚೇಲಾಗಳು ಬೆದರಿಕೆ ಹಾಕುತ್ತಿದ್ದಾರೆ. ಸಚಿವರ ವಂಚನೆ ಪ್ರಕರಣ ರುಜುವಾತಾಗಿ ರಾಜ್ಯ ಉಚ್ಛ ನ್ಯಾಯಾಲಯ ಛೀಮಾರಿ ಹಾಕಿಸಿಕೊಂಡ ಕೃಷ್ಣಪ್ಪ ಅವರನ್ನು ತಕ್ಷಣ ಸಂಪುಟದಿಂದ ಕೈಬಿಡಬೇಕು. ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ನೈತಿಕತೆಗೆ ವಿರುದ್ಧವಾದುದು ಎಂದು ಹೇಳಿದ ಅವರು, ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಅವರ ವಿರುದ್ಧವೂ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸುವ ಮೂಲಕ ನನ್ನ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಲಾಯಿತು. ಬಳಿಕ ಸಾಮಾಜಿಕ ಜಾಲತಾಣದ ಮೂಲಕ ಬೆದರಿಕೆ ಹಾಕಲಾಯಿತು. ಇದು ಯಾವುದಕ್ಕೂ ತಾವು ಹೆದರುವುದಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸುವವರೆಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಾವರೆಕೆರೆ ಹೋಬಳಿಯ ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿಯ ದೇವಸ್ಥಾನಕ್ಕೆ ಸೇರಿದಂತಹ 897 ಎಕರೆಗಳಷ್ಟು ಪ್ರದೇಶದ ಪೈಕಿ 287 ಎಕರೆಗಳಷ್ಟು ದೇವಾಲಯದ ಸ್ವತ್ತನ್ನು ನಕಲಿ ದಾಖಲೆಗಳ ಸಹಾಯದಿಂದ ಕಬಳಿಸಿರುವ ವಸತಿ ಸಚಿವ ಎಂ.ಕೃಷ್ಣಪ್ಪರವರ ಮಗ ಶಾಸಕ ಪ್ರಿಯಾಕೃಷ್ಣ ಅವರ ವಿರುದ್ಧ ಭೂ ಕಬಳಿಕೆ ನಿಗ್ರಹ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ನಗರ ಅಧ್ಯಕ್ಷ ಪಿ.ಎನ್.ಸದಾಶಿವ, ಎಸ್.ಸುನಿಲ್, ಎಂ.ಶ್ರೀರಾಮ, ಎಸ್. ಮುನಿರಜು ಮತ್ತಿತರರು ಭಾಗವಹಿಸಿದ್ದರು.
 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ