ನಾಡ ಧ್ವಜ: ಗೊಂದಲದಲ್ಲಿ ರಾಜ್ಯ ಬಿಜೆಪಿ!

state flag: State BJP in chaos..!

08-03-2018

ಬೆಂಗಳೂರು: ಪ್ರತ್ಯೇಕ ಧರ್ಮದ ವಿಚಾರದಲ್ಲಿ ಅಂತರ ಕಾಯ್ದುಕೊಂಡಿರುವ ಬಿಜೆಪಿ ಇದೀಗ ಪ್ರತ್ಯೇಕ ಧ್ವಜದ ಬಗ್ಗೆಯೂ ಅಂತರ ಕಾಯ್ದುಕೊಳ್ಳಲು ತೀರ್ಮಾನಿಸಿದೆ. ಇದೇ ಕಾಲಕ್ಕೆ ಕನ್ನಡ ನಾಡು ಮತ್ತು ಭಾಷೆಗಾಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲು ನಾಲ್ಕನೇ ರಂಗವನ್ನು ರಚಿಸಿ ಮುಂದಿನ ವಿಧಾನಸಭಾ ಚುನಾವಣೆಯ ಕಣಕ್ಕಿಳಿಯಲು ಕನ್ನಡ ಪರ ಹೋರಾಟಗಾರರನೇಕರು ನಿರ್ಧರಿಸಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಒಂದು ದೇಶ, ಒಂದು ಧ್ವಜ ಎನ್ನುವ ಸಿದ್ಧಾಂತಕ್ಕೆ ಕಟ್ಟು ಬಿದ್ದಿರುವ ಬಿಜೆಪಿ ಇದೀಗ, ಪ್ರತ್ಯೇಕ ಧ್ವಜವನ್ನು ಒಪ್ಪಿಕೊಳ್ಳಬೇಕೋ, ಬೇಡವೋ ಎನ್ನುವ ಗೊಂದಲಕ್ಕೆ ಸಿಲುಕಿದೆ. ಪ್ರತ್ಯೇಕ ಧ್ವಜ ಒಪ್ಪಿಕೊಂಡರೆ ಬಿಜೆಪಿ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ. ವಿರೋಧಿಸಿದರೆ ಕನ್ನಡಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಎಚ್ಚರಿಕೆ ಹೆಜ್ಜೆ ಇಡಲು ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಕೆಂಪು, ಬಿಳಿ, ಹಳದಿ ಬಣ್ಣದ ನಾಡಧ್ವಜ ಬಿಡುಗಡೆಯಾಗುತ್ತಿದ್ದಂತೆಯೇ ಇಂದು ಕನ್ನಡ ಪರ ಹೋರಾಟಗಾರರನೇಕರ ಚರ್ಚೆ ಆರಂಭವಾಗಿದ್ದು ಮುಂದಿನ ವಾರ ಸಮಾನ ಮನಸ್ಕರ ಸಭೆ ಸೇರಿ ರಾಜಕೀಯವಾಗಿ ಹೋರಾಟ ನಡೆಸಲು ಉದ್ದೇಶಿಸಿದ್ದಾರೆ. ಕನ್ನಡ ನಾಡಿಗೆ ಮೇಲಿಂದ ಮೇಲೆ ಅನ್ಯಾಯವಾಗುತ್ತಲೇ ಇದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲದಿಂದ ಹಾರಾಡುತ್ತಿರುವ ನಾಡಧ್ವಜವನ್ನು ಇತಿಹಾಸ ಗೊತ್ತಿಲ್ಲದವರು ಏಕಾಏಕಿ ಬದಲಿಸಿದ್ದಾರೆ.

ಇದೇ ರೀತಿ ಕಾವೇರಿ ನದಿ ನೀರಿನ ವಿವಾದದ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಶತಮಾನಗಳ ಕಾಲದಿಂದ ಕಾವೇರಿ ನದಿ ನೀರಿನ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪಿನಲ್ಲೂ ನಮಗೆ ಅನ್ಯಾಯವಾಯಿತು. ಸುಪ್ರೀಂಕೋರ್ಟ್ ತೀರ್ಪಿನ ಮೂಲಕವೂ ನಮ್ಮ ಅಭಿಪ್ರಾಯಗಳಿಗೆ ಮನ್ನಣೆ ದೊರೆಯಲೇ ಇಲ್ಲ.

ಮಹದಾಯಿ ನದಿ ನೀರಿನ ವಿವಾದದ ವಿಷಯದಲ್ಲೂ ಇದು ಮುಂದುವರಿದಿದೆ. ಸಾವಿರಾರು ದಿನಗಳಿಂದ ಆ ಭಾಗದ ರೈತರು, ಜನರು ಹೋರಾಟ ಮಾಡಿದರೂ ಅದನ್ನು ಪರಿಹರಿಸುವ ಕೆಲಸ ರಾಷ್ಟ್ರೀಯ ಪಕ್ಷಗಳಿಂದ ಸಾಧ್ಯವಾಗಿಲ್ಲ. ಅದರ ಬದಲು ಬಿಜೆಪಿ ಹಾಗೂ ಕಾಂಗ್ರಸ್ ವಿನಾಕಾರಣ ರಾಜಕೀಯ ಮಾಡುತ್ತಾ ಕುಳಿತಿವೆ. ಹೀಗೆ ನಾಡು,ನುಡಿಗಾಗುತ್ತಿರುವ ಅನ್ಯಾಯವನ್ನು ಪರಿಹರಿಸಲು ರಾಜಕೀಯ ಪಕ್ಷಗಳಿಗೆ ಸಾಧ್ಯವಾಗದೇ ಇರುವ ಹಿನ್ನೆಲೆಯಲ್ಲಿ ನಾಲ್ಕನೇ ಶಕ್ತಿಯನ್ನು ರಾಜ್ಯದಲ್ಲಿ ಅಸ್ತಿತ್ವಕ್ಕೆ ತರಬೇಕು ಎಂಬುದು ಬಹುತೇಕ ಕನ್ನಡ ಪರ ಹೋರಾಟಗಾರರ ನಿಲುವು. ಈ ಕುರಿತು ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲು ಮುಂದಿನ ವಾರ ಸಮಾನ ಮನಸ್ಕರ ಸಭೆ ಕರೆಯಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

 


ಸಂಬಂಧಿತ ಟ್ಯಾಗ್ಗಳು

state flag one nation ತೀರ್ಮಾನ ಹೋರಾಟ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ