ಬಿಜೆಪಿ ನಾಯಕರಲ್ಲಿ ಆತಂಕ..!

state BJP leaders are worried ..!

07-03-2018

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ತಪ್ಪು ನಡೆಗಳಿಂದಾಗಿ ಗೆಲ್ಲುವ ಸಾಮರ್ಥ್ಯವಿರುವ ಹತ್ತಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋಲುವ ಆತಂಕ ವ್ಯಕ್ತವಾಗಿದೆ. ಈ ಕುರಿತು ಪಕ್ಷದ ಕೆಲ ನಾಯಕರು, ಬಿಜೆಪಿ ವರಿಷ್ಠರಿಗೆ ದೂರು ನೀಡಿದ್ದು, ಯಡಿಯೂರಪ್ಪ ಅವರಿಗೆ ಬುದ್ದಿ ಹೇಳುವಂತೆ ಕೋರಿದ್ದಾರೆ. ಅದರಲ್ಲೂ ಪ್ರಮುಖವಾಗಿ, ಈಡಿಗ ಸಮುದಾಯದ ರಾಜಕೀಯ ಒಳ ಸುಳಿಗಳನ್ನು ಅರಿಯದ ಯಡಿಯೂರಪ್ಪನವರು, ಮೇಲಿಂದ ಮೇಲೆ ತಪ್ಪು ಹೆಜ್ಜೆಗಳನ್ನು ಇಡಲು ಹೊರಟಿದ್ದಾರೆ. ಇದರಿಂದ, ವಿನಾಕಾರಣ ಹಲವು ಕ್ಷೇತ್ರಗಳಲ್ಲಿ ಪಕ್ಷ ಸೋಲುವ ಭೀತಿ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈಡಿಗ ಮತದಾರರ ಸಮಾಜ ಹಿಂದಿನಿಂದಲೂ ಬಂಗಾರಪ್ಪ ಪರ ಹಾಗೂ ಬಂಗಾರಪ್ಪ ಅವರ ವಿರುದ್ಧದ ನೆಲೆಯಲ್ಲಿ ನಡೆಯುತ್ತಾ ಬಂದಿದೆ. ಈ ಅಂಶವನ್ನು ಅರ್ಥ ಮಾಡಿಕೊಳ್ಳದ ಯಡಿಯೂರಪ್ಪ, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸುವ ಆತುರದಲ್ಲಿ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದಾರೆ.

ಯಡಿಯೂರಪ್ಪ ಅವರು ಬಂಗಾರಪ್ಪ ಮಗ ಕುಮಾರ್ ಬಂಗಾರಪ್ಪ ಅವರಿಗೆ ಸೊರಬ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡುವುದಾಗಿ ಭರವಸೆ ನೀಡಿರುವುದು ಕಮಲ ಪಾಳೆಯ ಮುಂದಿನ ದಿನಗಳಲ್ಲಿ ಎದುರಿಸಲಿರುವ ಅಪಾಯದ ಸಂಕೇತ ಎಂದು ಈ ನಾಯಕರು ವರಿಷ್ಠರಿಗೆ ವಿವರಿಸಿದ್ದಾರೆ. ಬಂಗಾರಪ್ಪ ಅವರ ನಿಧನದ ನಂತರ ಈಡಿಗ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಸಾಗರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಬೇಳೂರು ಗೋಪಾಲಕೃಷ್ಣ ಹಾಗೂ ಜೆಡಿಎಸ್ ನ ಮಧು ಬಂಗಾರಪ್ಪ ನಡುವೆ ಪೈಪೋಟಿ ಇದೆ.

ಇಂಥ ಹೊತ್ತಿನಲ್ಲಿ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ನೆಲೆ ಕಳೆದುಕೊಂಡಿರುವ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ನೀಡಿ, ಅಲ್ಲಿಂದ ಶಾಸಕರಾಗಿದ್ದ ಹರತಾಳು ಹಾಲಪ್ಪ ಅವರಿಗೆ ಸಾಗರದಲ್ಲಿ ಟಿಕೆಟ್ ನೀಡಲು ಹೊರಟಿರುವ ಯಡಿಯೂರಪ್ಪ ಲೆಕ್ಕಾಚಾರ ಬಿಜೆಪಿಗೆ ಹೊಡೆತ ಆಗಲಿದೆ.
ಯಾಕೆಂದರೆ, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ ಜನಪ್ರಿಯ ನಾಯಕ. ಕಳೆದ ಚುನಾವಣೆಯಲ್ಲಿ ಈಡಿಗ ಸಮುದಾಯದ ಹಿರಿಯರಾದ ಕಾಗೋಡು ತಿಮ್ಮಪ್ಪ ಅವರನ್ನು ಕೊನೆಯ ಬಾರಿ ಬೆಂಬಲಿಸೋಣ ಎಂದು ಆ ಸಮುದಾಯ ನಿರ್ಧರಿಸಿದ ಪರಿಣಾಮವಾಗಿ ಅವರು ಗೆದ್ದಿದ್ದರು. ಅದೇ ಕಾಲಕ್ಕೆ ಬಿಜೆಪಿ ಒಡೆದ ಪರಿಣಾಮವಾಗಿ ಕಾಗೋಡು ತಿಮ್ಮಪ್ಪ ಅವರಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಬಾರಿ ಸಾಗರ ಮಾತ್ರವಲ್ಲದೆ ಸುತ್ತ ಮುತ್ತಲ ಜಿಲ್ಲೆಗಳ ಹಲವು ಕ್ಷೇತ್ರಗಳಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಬಿಜೆಪಿಗೆ ಗಣನೀಯ ಮತಗಳನ್ನು ತಂದುಕೊಡುವ ಶಕ್ತಿ ಬೆಳೆಸಿಕೊಂಡಿದ್ದಾರೆ. ಆದರೆ, ಅವರಿಗೆ ಸಾಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ತಪ್ಪಿಸಿ ಸೊರಬದಿಂದ ಹರತಾಳು ಹಾಲಪ್ಪ ಅವರನ್ನು ತಂದು ನಿಲ್ಲಿಸುವ ಯಡಿಯೂರಪ್ಪ ಅವರ ಯೋಚನೆ ಕಾಂಗ್ರೆಸ್ ಪಕ್ಷಕ್ಕೆ ಅನುಕೂಲಕರವಾಗಲಿದೆ.

ಅದೇ ರೀತಿ, ಸೊರಬ ವಿಧಾನಸಭಾ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಅವರ ಗೆಲುವಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಈ ಮಧ್ಯೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿದಂತೆ ಹಲವು ಜಿಲ್ಲೆಗಳ ಕ್ಷೇತ್ರಗಳಲ್ಲಿ ಬೇಳೂರು ಗೋಪಾಲಕೃಷ್ಣ ವರ್ಚಸ್ಸು ವೃದ್ಧಿಸಿದ್ದು ಅವರ ಶಕ್ತಿಯನ್ನು ಬೆಳೆಸಿದರೆ ಸಹಜವಾಗಿಯೇ ಮುಂದಿನ ದಿನಗಳಲ್ಲಿ ಬಿಜೆಪಿಗೆ ಹೆಚ್ಚಿನ ಲಾಭವಾಗುತ್ತದೆ.
ಒಂದು ವೇಳೆ ಯಡಿಯೂರಪ್ಪ ಅವರು ಹಠ ಹಿಡಿದು, ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಕುಮಾರ್ ಬಂಗಾರಪ್ಪ ಅವರಿಗೆ ಟಿಕೆಟ್ ಕೊಟ್ಟು, ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಹರತಾಳು ಹಾಲಪ್ಪ ಅವರಿಗೆ ಟಿಕೆಟ್ ಕೊಟ್ಟರೆ, ಈಡಿಗ ಮತಬ್ಯಾಂಕ್ ಅನ್ನು ದೊಡ್ಡ ಮಟ್ಟದಲ್ಲಿ ವಶಪಡಿಸಿಕೊಳ್ಳುವ ಬಿಜೆಪಿ ಯತ್ನ ಸಂಪೂರ್ಣ ವಿಫಲವಾಗಲಿದೆ ಎಂಬುದು ಬಿಜೆಪಿಯ ಕೆಲ ನಾಯಕರ ವಾದ.

ಬಂಗಾರಪ್ಪ ನಂತರ ಬೇಳೂರು ಗೋಪಾಲಕೃಷ್ಣ ಅವರೇ ಈಡಿಗ ಸಮುದಾಯದ ನಾಯಕರಾಗಿದ್ದು, ಮಧು ಬಂಗಾರಪ್ಪ ಅವರೂ ಈಡಿಗ ನಾಯಕರಾಗಲು ಹರಸಾಹಸ ನಡೆಸುತ್ತಿದ್ದಾರೆ. ಹೀಗಿರುವಾಗ ಮಧು ಬಂಗಾರಪ್ಪ ಕನಸನ್ನು ಭಗ್ನಗೊಳಿಸಿ ಬೇಳೂರು ಗೋಪಾಲಕೃಷ್ಣ ಮೇಲೆದ್ದು ನಿಲ್ಲುವಂತೆ ಮಾಡಿದರೆ ಸುಧೀರ್ಘ ಅವಧಿಯಲ್ಲಿ ಬಿಜೆಪಿಗೆ ಲಾಭವಾಗಲಿದೆ. ಇದನ್ನು ನಿರ್ಲಕ್ಷಿಸಿದರೆ, ಈಡಿಗ ಮತಬ್ಯಾಂಕ್ ಜೆಡಿಎಸ್ ಪಾಲಾಗಲಿದೆ ಎಂದು ಈ ನಾಯಕರು ವಾದಿಸಿದ್ದಾರೆ.

ಇದೇ ರೀತಿ, ಹರತಾಳು ಹಾಲಪ್ಪ ಅವರಿಗೆ ಸೊರಬ ಕ್ಷೇತ್ರ ಬಿಟ್ಟು ಸಾಗರದಿಂದ ಸ್ಪರ್ಧಿಸುವ ಆಸೆ ಇಲ್ಲ. ಆದರೆ, ಸಾಗರದಿಂದಲೇ ಸ್ಪರ್ಧಿಸುವಂತೆ ಯಡಿಯೂರಪ್ಪ ಒತ್ತಡ ಹೇರುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ,  ಇದೆಲ್ಲವನ್ನೂ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿ, ಎಚ್ಚರಿಕೆಯ ಹೆಜ್ಜೆ ಇಡುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಬೇಕು ಎಂದು ಈ ನಾಯಕರು ಪಕ್ಷದ ವರಿಷ್ಠರಿಗೆ ವಿವರಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ಸೂಪರ್ ಸುದ್ದಿಗೆ ತಿಳಿದು ಬಂದಿದೆ.ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ