ಐಪಿಎಸ್ ಅಧಿಕಾರಿ ರೂಪಾ ತೀಕ್ಷ್ಣ ಪ್ರತಿಕ್ರಿಯೆ

ips ofiicer tweets on parappana agrahara

07-03-2018

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಅವರಿಗೆ ರಾಜಾತಿಥ್ಯ ನೀಡಿದ ವಿಚಾರಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರೂಪಾ ಟ್ವಿಟರ್ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ರೂಪಾ ಮೂರು ಸರಣಿ ಟ್ವೀಟ್‍ಗಳನ್ನು ಮಾಡಿದ್ದಾರೆ. ಶಶಿಕಲಾ ಅನಾರೋಗ್ಯದ ಸುದ್ದಿಯ ಬಗ್ಗೆ ನೀವು ಏನು ಪ್ರತಿಕ್ರಿಯಿಸುತ್ತೀರಾ ಎಂದು ಟ್ವೀಟರ್‍ ನಲ್ಲಿ ವ್ಯಕ್ತಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ ರೂಪಾ ಅವರು, ಯಾವುದೇ ಕಾರಣಕ್ಕೂ ವೈದ್ಯಕೀಯ ಚಿಕಿತ್ಸೆ ವಿಚಾರ ದುರುಪಯೋಗವಾಗಲೇಬಾರದು. ಅನಾರೋಗ್ಯ ವಿಚಾರವನ್ನು ಮುಂದಿಟ್ಟುಕೊಂಡು ಯಾರೂ ಅದನ್ನು ದುರುಪಯೋಗ ಪಡಿಸಿಕೊಳ್ಳಬಾರದು. ಕೆಲವು ಪ್ರಭಾವಿ ಕೈದಿಗಳು ವಿಶೇಷ ವೈದ್ಯರ ಬಳಿ ಚಿಕಿತ್ಸೆ ಅಗತ್ಯವಿದೆ ಎಂದು ಹೈಫೈ ಏರ್ ಮತ್ತು ಎಸಿ ಇರುವ ಆಸ್ಪತ್ರೆಗಳಿಗೆ ಅಡ್ಮಿಟ್ ಆಗುತ್ತಾರೆ. ಅಲ್ಲಿ ಅವರು ಹೇಗೆ ಬೇಕಾದರೂ ಇರಬಹುದು, ಯಾರನ್ನು ಬೇಕಾದರೂ ಭೇಟಿ ಮಾಡಬಹುದು. ತಮಗೆ ಬೇಕಾದ ಆಹಾರವನ್ನು ಸೇವಿಸಬಹುದು ಮತ್ತು ಟಿವಿ ನೋಡಬಹುದು. ಈ ಸೌಲಭ್ಯಕ್ಕಾಗಿಯೇ ಕೆಲವರು ಅನಾರೋಗ್ಯದ ನೆಪ ಮುಂದಿಡುತ್ತಾರೆ.

ಕೈದಿಗಳಿಗೂ ಮಾನವ ಹಕ್ಕುಗಳಿವೆ. ವೈದ್ಯಕೀಯ ಚಿಕಿತ್ಸೆಯೂ ಕೂಡ ಅದರಲ್ಲಿ ಒಂದು. ನಾನು ಬಂದೀಖಾನೆ ಡಿಐಜಿಯಾಗಿದ್ದಾಗ ಎಲ್ಲ ಕೈದಿಗಳಿಗೂ ಅವರು ಜೈಲಿಗೆ ಬಂದ ದಿನವೇ ಸಂಪೂರ್ಣ ವೈದ್ಯಕೀಯ ಪರೀಕ್ಷೆ ನಡೆಸಬೇಕೆಂಬ ನಿಯಮ ರೂಪಿಸಿದ್ದೆ. ಹೆಚ್‍ಐವಿ ಮತ್ತು ಟಿಬಿಯಂತಹ ಕಾಯಿಲೆಗಳನ್ನೂ ಪರೀಕ್ಷಿಸುವ ನಿಯಮ ರೂಪಿಸಲಾಗಿತ್ತು. ಕಾಯಿಲೆಗಳ ಬಗ್ಗೆ ಮೊದಲೇ ಪರೀಕ್ಷೆ ನಡೆಸಿದರೆ ಅದಕ್ಕೆ ಅಗತ್ಯವಾಗಿ ಮೊದಲೇ ಚಿಕಿತ್ಸೆ ನೀಡಬಹುದು.

ಕೆಲವರು ಜೈಲಿನ ವ್ಯವಸ್ಥೆಯನ್ನು ದುರುಪಯೋಗ ಮಾಡಿಕೊಂಡು ಹೆಚ್ಚು ವೆಚ್ಚದ ಸರ್ಜರಿಗಳನ್ನು ಸರ್ಕಾರಿ ಖರ್ಚಿನಲ್ಲಿ ಮಾಡಿಸಿಕೊಳ್ಳುತ್ತಾರೆ. ಆ ನಂತರ ಅದರ ಆಧಾರದ ಮೇಲೆ ಜಾಮೀನಿಗೆ ಅರ್ಜಿ ಸಲ್ಲಿಸುತ್ತಾರೆ. ಇಂತಹ ಹಲವು ಉದಾಹರಣೆಗಳಿವೆ. ಶಶಿಕಲಾ ಅನಾರೋಗ್ಯಕ್ಕೊಳಗಾಗಿ ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಬಹಿರಂಗವಾಗುತ್ತಿದ್ದಂತೆ ಐಪಿಎಸ್ ಅಧಿಕಾರಿ ರೂಪಾ ಈ ಟ್ವೀಟ್ಗಳನ್ನು ಮಾಡಿದ್ದಾರೆ. ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ಸೌಲಭ್ಯ ನೀಡಲು ಬಂದೀಖಾನೆಯ ಡಿಜಿಪಿಯಾಗಿದ್ದ ಸತ್ಯನಾರಾಯಣರಾವ್ ಲಂಚ ಪಡೆದಿದ್ದರು ಎಂಬ ಆರೋಪವನ್ನು ಈ ಹಿಂದೆ ರೂಪಾ ಮಾಡಿದ್ದರು.


ಸಂಬಂಧಿತ ಟ್ಯಾಗ್ಗಳು

DIG Roopa V.K.Sasikala ಉದಾಹರಣೆ ಐಷಾರಾಮಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ