ರಾಷ್ಟ್ರಪತಿ ಚುನಾವಣೆ - ಮೋದಿ,ಅಮಿತ್ ಶಾ ಜೂಟಾಟ; ಪ್ರತಿ ಪಕ್ಷ ಬೊಂಬಾಟ್ ಆಟ

Kannada News

05-05-2017 419

ದೇಶದಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಕದನಕ್ಕೆ ವೇದಿಕೆ ಸಜ್ಜುಗೊಳ್ಳುತ್ತಿದೆ. ಈ ರಾಜಕೀಯ ಸಮರದ ಫಲಿತಾಂಶ ಜಗತ್ತಿನಾದ್ಯಂತ ಕುತೂಹಲ ಕೆರಳಿಸಿದೆ. ಈ ಸಮರದ ಫಲಿತಾಂಶದಿಂದ ಯಾವುದೇ ಸರ್ಕಾರ ಪತನ ಹೊಂದುವುದಿಲ್ಲ ಅಥವಾ ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವುದಿಲ್ಲ. ಈ ಮತಸಮರದಲ್ಲಿ ಜನಸಾಮಾನ್ಯರ ಯಾವುದೇ ಪಾತ್ರ ಇರುವುದಿಲ್ಲ. ರಾಜಕೀಯ ಪಕ್ಷಗಳ ಅಬ್ಬರದ ಪ್ರಚಾರ, ಭರಾಟೆಯ ರೋಡ್ ಶೋ, ನಾಯಕರ ನಡುವಿನ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಯಾವುದೂ ಇರುವುದಿಲ್ಲ. ಹಾಗಾದರೆ ಈ ಸಮರದಲ್ಲಿ ಮತದಾರರು ಯಾರೆಂದರೆ ನಾವು-ನೀವು ಆಯ್ಕೆ ಮಾಡಿರುವ ಸಂಸದರು ಮತ್ತು ಶಾಸಕರು ಮಾತ್ರ. ಇವರು ಆಯ್ಕೆ ಮಾಡಿರುವ ಸಂಸದರು ಮತ್ತು ಶಾಸಕರು ಮಾತ್ರ ಇವರು ಆಯ್ಕೆ ಮಾಡುವುದು ನಮ್ಮ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿಗಳನ್ನು. 
ಈ ರಾಷ್ಟ್ರಪತಿಗಳ ಆಯ್ಕೆ ಇದೀಗ ದೇಶದ ರಾಜಕಾರಣದಲ್ಲಿ ಹೊಸದೊಂದು ಪ್ರಯೋಗಕ್ಕೆ ವೇದಿಕೆಯಾಗಲು ಹೊರಟಿದೆ. ಇಂತಹ ಪ್ರಯತ್ನ ಇದೇ ಮೊದಲೇನಲ್ಲ. ಈ ಹಿಂದೆ ಎನ್‍ಡಿಎ ಸರ್ಕಾರ ಆಡಳಿತದ ಅವಧಿಯಲ್ಲಿ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಜಗತ್ತಿನ ಅತ್ಯಂತ ಶ್ರೇಷ್ಠ ಅಣುವಿಜ್ಞಾನಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕಣಕ್ಕಿಳಿಸಿದರೂ ಈ ಆಯ್ಕೆ ಸರ್ವ ಸಮ್ಮತವಾಗಲಿಲ್ಲ. ಬಿಜೆಪಿಯ ವಿಚಾರಧಾರೆ, ತತ್ವ ಸಿದ್ಧಾಂತವನ್ನೂ ಪ್ರಬಲವಾಗಿ ವಿರೋಧಿಸುವ ಎಡಪಕ್ಷಗಳು ಶ್ರೇಷ್ಠ ಅಣುವಿಜ್ಞಾನಿಯನ್ನು ಸರ್ವಾನುಮತದಿಂದ ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಎನ್‍ಡಿಎ ಪ್ರಸ್ತಾಪವನ್ನು ತಿರಸ್ಕರಿಸಿದವು. 
ಎಡಪಕ್ಷಗಳು ಅಂದು ರಾಜಕೀಯವಾಗಿ ಅಷ್ಟೇನೂ ಪ್ರಭಾವಿಯಲ್ಲದ ತೃತೀಯ ರಂಗವನ್ನು ಮುಂದಿಟ್ಟುಕೊಂಡು ರಾಷ್ಟ್ರಪತಿ ಚುನಾವಣೆಗೆ ಪ್ರತಿತಂತ್ರವನ್ನು ರೂಪಿಸಿದವು. ರಾಷ್ಟ್ರೀಯ ಜನತಾದಳ, ಲೋಕದಳ,ಸಮಾಜವಾದಿ ಪಕ್ಷ, ಫಾರ್ವಡ್ ಬ್ಲಾಕ್  ರಾಷ್ಟ್ರೀಯ ಲೋಕದಳ, ಬಿಜು ಜನತಾದಳ ಸೇರಿದಂತೆ ಸಮಾಜವಾದಿ ಹಿನ್ನೆಲೆಯ ಹಲವು ಪಕ್ಷಗಳ ಸಹಯೋಗದೊಂದಿಗೆ ಪ್ರತ್ಯೇಕ ರಂಗವೊಂದನ್ನು ರಚಿಸಿಕೊಂಡು ರಾಷ್ಟ್ರಪತಿ ಚುನಾವಣೆಗೆ ತಮ್ಮ ಅಭ್ಯರ್ಥಿಯಾಗಿ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಅವರನ್ನು ಕಣಕ್ಕಿಳಿಸಿದವು. 
ವೀರ ಸೇನಾನಿ ಸುಭಾಷ್ ಚಂದ್ರಬೋಸ್ ಅವರ ಒಡನಾಡಿಯಾಗಿದ್ದ ಕ್ಯಾಪ್ಟನ್ ಲಕ್ಷ್ಮೀ ಸೆಹಗಲ್ ಗೆಲ್ಲುವುದಿಲ್ಲ ಎಂಬ ವಿಷಯ ಖಾತ್ರಿಯಾಗಿತ್ತು. ಆದರೂ ಕೂಡಾ ತಮ್ಮದು ಸೈದ್ದಾಂತಿಕ ಹೋರಾಟ ಎಂದು ಘೋಷಿಸಿ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದವು. ನಿರೀಕ್ಷೆಯಂತೆ ಭಾರತ ರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗಿ ಆಯ್ಕೆಯಾದರು. 
ಇದೇ ರೀತಿ ಶ್ರೀಮತಿ ಪ್ರತಿಭಾ ಪಾಟೀಲ್ ಸೇರಿದಂತೆ ಹಲವರು ರಾಷ್ಟ್ರಪತಿಗಳಾಗಿ ಆಯ್ಕೆಯಾಗುವ ಸಮಯದಲ್ಲಿ ಇಂತಹ ರಾಜಕೀಯ ಲೆಕ್ಕಾಚಾರಗಳು ನಡೆದಿದೆ. ಆದರೆ ಈ ಎಲ್ಲಾ ಲೆಕ್ಕಾಚಾರ ಅಂದಿನ ಕಾಲಸ್ಥಿತಿಗೆ ಅನುಗುಣವಾಗಿ ಕೇವಲ ಆ ಹೊತ್ತಿನ ಸಂದರ್ಭಕ್ಕೆ ಮಾತ್ರ ನಡೆದ ಪ್ರಕ್ರಿಯೆಗಳಾಗಿದ್ದವು. ಅಂದು ನಡೆದ ಪ್ರಯೋಗವನ್ನು ಮುಂದಿನ ಯಾವುದೇ ಚುನಾವಣೆಯಲ್ಲೂ ಮುಂದುವರೆಸುವುದಿಲ್ಲ ಎಂಬ ಸ್ಪಷ್ಟ ಚಿತ್ರಣ ಎಲ್ಲರಲ್ಲೂ ಇತ್ತು.
ಆದರೆ ಈಗಿನ ಪರಿಸ್ಥಿತಿಯಲ್ಲಿ ಅಂತಹ ತಾತ್ಕಾಲಿಕ ರಾಜಕೀಯ ಲೆಕ್ಕಾಚಾರವಿಲ್ಲ. ಬದಲಿಗೆ ಸುದೀರ್ಘ ಅವಧಿಯ ರಾಜಕೀಯ ತಂತ್ರಗಾರಿಕೆಯ ಪ್ರಯೋಗ ನಡೆದಿದೆ. 
ಸದ್ಯ ದೇಶಕಂಡ ಅತ್ಯಂತ ಮುತ್ಸದ್ಧಿ ರಾಜಕಾರಣಿ ಪ್ರಣಬ್ ಮುಖರ್ಜಿ ರಾಷ್ಟ್ರಾಧ್ಯಕ್ಷರಾಗಿದ್ದಾರೆ. ತಮ್ಮ ಅಧಿಕಾರದುದ್ದಕ್ಕೂ ಯಾವುದೇ ಸಂಘರ್ಷಕ್ಕೆ ಅವಕಾಶವಿಲ್ಲದೇ ಕಾರ್ಯ ನಿರ್ವಹಿಸುವ ಮೂಲಕ ಸರ್ಕಾರ ಎಡವಿದಾಗ ಹಿರಿಯಣ್ಣನಂತೆ ಎಚ್ಚರಿಕೆ ನೀಡುವ ಮೂಲಕ ಸಶಕ್ತ ಆಡಳಿತ ನಡೆಸುತ್ತಿರುವ ಎನ್‍ಡಿಎ ಮೈತ್ರಿ ಕೂಟ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಗೌರವಕ್ಕೆ ಪಾತ್ರರಾಗಿದ್ದಾರೆ.
ಜುಲೈ 25ಕ್ಕೆ ಇವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಹೀಗಾಗಿ ಇವರ ನಿವೃತ್ತಿಯಿಂದ ತೆರವಾಗುವ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಲಾಗುವುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಯಾವುದೇ ವಿಚಾರ ಗೊಂದಲಗಳಿಗೆ ಅವಕಾಶವಿಲ್ಲದೆ ಅಧಿಕಾರಾವಧಿ ಪೂರ್ಣಗೊಳಿಸಿರುವ ಪ್ರಣಬ್ ಮುಖರ್ಜಿ ಅವರನ್ನೇ ಮತ್ತೊಂದು ಅವಧಿಗೆ ಸರ್ವಾನುಮತದಿಂದ ಆಯ್ಕೆ ಮಾಡಬಹುದು ಎಂಬ ಅಭಿಪ್ರಾಯಗಳು ಕೇಳಿ ಬಂದಿದೆಯಾದರೂ ಕೇಂದ್ರ ಸರ್ಕಾರದ ಕೀಲಿಕೈ ಸಂಘ ಪರಿವಾರದ ಬಳಿ ಇದೆ. ಸಂಘ ಪರಿವಾರ ಕಾಂಗ್ರೆಸ್ ಮೂಲದ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಮತ್ತೊಂದು ಅವಧಿಗೆ ಆಯ್ಕೆ ಮಾಡುವ ಉದಾರ ಮನಸು ಹೊಂದಿಲ್ಲ. 
ಸಾಲದಕ್ಕೆ ರಾಷ್ಟ್ರಪತಿ ಪ್ರಣಬ್‍ಮುಖರ್ಜಿ ಅವರೂ ಕೂಡಾ ಅವಕಾಶ ಸಿಕ್ಕಾಗೆಲ್ಲ ತಾವೊಬ್ಬ ಅಪ್ಪಟ ಕಾಂಗ್ರೆಸ್ಸಿಗ ತಮ್ಮ ಮೈಯಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿವೆ ಎಂದು ಘೋಷಿಸಿದ್ದಾರೆ. ಸೈದ್ಧಾಂತಿಕ ಮತ್ತು ತಾತ್ವಿಕವಾಗಿ ಕಾಂಗ್ರೆಸ್ ಪಕ್ಷವನ್ನು ಪ್ರಬಲವಾಗಿ ವಿರೋಧಿಸುವ ಸಂಘ ಪರಿವಾರ ಎಂದಿಗೂ ಕೂಡಾ ಇಂತಹ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಬಿಡುವುದಿಲ್ಲ ಎನ್ನುವುದು ಸರ್ಕಾರದ ನಡೆಯಿಂದ ಈಗಾಗಲೇ ಸ್ಪಷ್ಟವಾಗಿದೆ. 
ಇನ್ನು ಬಿಜೆಪಿ ನೇತೃತ್ವದ ಎನ್‍ಡಿಎ ಮೈತ್ರಿಕೂಟದಿಂದ ರಾಷ್ಟ್ರಪತಿ ಅಭ್ಯರ್ಥಿ ಯಾರಾಗಲಿದ್ದಾರೆ? ಎನ್ನುವುದು ಕೂಡಾ ತೀವ್ರ ಕುತೂಹಲ ಮೂಡಿಸಿರುವ ಸಂಗತಿಯಾಗಿದೆ. ರಾಷ್ಟ್ರಪತಿ ಯಾರಾಗಲಿದ್ದಾರೆಂಬ ಪ್ರಶ್ನೆಗೆ ಬಿಜೆಪಿ ಪಾಳಯದಲ್ಲಿ ಮೊಟ್ಟ ಮೊದಲಿಗೆ ಧುತ್ತೆಂದು ಕೇಳಿ ಬರುತ್ತಿದ್ದ ಹೆಸರು ಪಕ್ಷದ ಹಿರಿಯ ನಾಯಕ ಲಾಲ್‍ಕೃಷ್ಣ ಅಡ್ವಾಣಿ. ಇವರ ನಂತರದಲ್ಲಿ ಮತ್ತೊಬ್ಬ ಹಿರಿಯ ನಾಯಕ ಮುರುಳಿ ಮನೋಹರ ಜೋಷಿ ಅವರದ್ದು, ಸದ್ಯ ಈ ಇಬ್ಬರು ಬಿಜೆಪಿಯ ಮಾರ್ಗದರ್ಶಕ ಮಂಡಳಿಯ ಸದಸ್ಯರು.
ಹಿರಿಯ ನಾಯಕ ಅಡ್ವಾಣಿ ಅವರೊಂದಿಗೆ ಪ್ರಧಾನಿ ಮೋದಿ ಹೊಂದಿರುವ ಭಿನ್ನಮತ ಈಗ ಗುಟ್ಟಾಗೇನು ಉಳಿದಿಲ್ಲ. ಪ್ರಧಾನಿ ಹುದ್ದೆ ಅಲಂಕರಿಸಬೇಕೆಂದು ಅಡ್ವಾಣಿ ದಶಕಗಳ ಕಾಲ ಕಂಡಿದ್ದ ಕನಸನ್ನು ಕೆಲವೇ ಗಂಟೆಗಳಲ್ಲಿ ನುಚ್ಚು ನೂರಾಗಿಸಿ ಅವರಿಗೆ ಒಲಿಯ ಬೇಕಾದ ಪಟ್ಟವನ್ನು ಅಲಂಕರಿಸುವಲ್ಲಿ ಯಶಸ್ವಿಯಾದವರು ನರೇಂದ್ರ ಮೋದಿ. ಗುಜರಾತ್ ಸಿಎಂ ಆಗಿ ಅತ್ಯಂತ ಮಹತ್ವಾಕಾಂಕ್ಷೆಯಿಂದ ರಾಜಕಾರಣ ಮಾಡುತ್ತಿದ್ದ ಮೋದಿ ತಮಗೆ ಎದುರಾಳಿ ಎಂದೇ ಭಾವಿಸಿದ್ದ ಅಡ್ವಾಣಿ ಸಹಜವಾಗಿ ಮೋದಿ ರಾಷ್ಟ್ರ ರಾಜಕಾರಣದಲ್ಲಿ ನೆಲೆಯೂರಲು ಬಿಡಲಿಲ. ಆದರೆ ಬದಲಾದ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿ ಅಡ್ವಾಣಿ ವಲ್ಲದ ಮನಸ್ಸಿನಿಂದಲೇ ಮೋದಿ ಅವರಿಗೆ ರಾಷ್ಟ್ರ ರಾಜಕಾರಣ ಪ್ರವೇಶಿಸಲು ಬಿಟ್ಟಿದ್ದು, ಆನಂತರ ಅವರಿಗೆ ವಿರುದ್ಧವಾಗಿ ನಿಂತಿದ್ದು ತಮ್ಮದೇ ಆದ ಬೆಂಬಲಿಗರ ಪಡೆ ಕಟ್ಟಿಕೊಂಡಿದ್ದು, ನಂತರದಲ್ಲಿ ನಡೆದ ಚುನಾವಣೆಯಲ್ಲಿ ಮೋದಿ ನಾಯಕತ್ವಕ್ಕೆ ಸಿಕ್ಕ ಪ್ರಚಂಡ ಜಯ. ಅವರ ಬಳಿಕ ನಡೆದ ಪ್ರಧಾನಿ ಆಯ್ಕೆ ನಂತರದಲ್ಲಿ ರಚನೆಯಾದ ಮಾರ್ಗದರ್ಶಕ ಮಂಡಳಿ ಎಲ್ಲವೂ ಇದೀಗ ಇತಿಹಾಸ ಪುಟದಲ್ಲಿ ಸೇರಿ ಹೋಗಿವೆ.
ಪ್ರಧಾನಿ ಹುದ್ದೆಗೇರಿದ ಮೋದಿ ಸಂಘ ಪರಿವಾರದ ಬೆಂಬಲದಿಂದಲೇ ಅಡ್ವಾಣಿ ಅವರನ್ನು ಮೂಲೆಗುಂಪು ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಪಾಕಿಸ್ತಾನದ ಮಹಮ್ಮದ್ ಅಲಿ ಜಿನ್ನಾರನ್ನು ಹೊಗಳಿ ಸಂಘ ಪರಿವಾರದ ಹಲವರ ಅಸಮಾಧಾನಕ್ಕೆ ಕಾರಣವಾಗಿರುವ ಹಿರಿಯ ನಾಯಕ ಅಡ್ವಾಣಿ ಎಂದಿಗೂ ರಾಷ್ಟ್ರಪತಿ ಹುದ್ದೆಗೇರುವ ಸಂಗತಿ ಮೋದಿ ಅವರಿಗೆ ಇಷ್ಟವಿಲ್ಲ, ಇದಕ್ಕಾಗಿಯೇ ಅವರು ಬೇರೊಂದು ಕಾರ್ಯತಂತ್ರ ರೂಪಿಸುತ್ತಿದ್ದರು.
ಈ ಬಾರಿ ರಾಷ್ಟ್ರಪತಿ ಹುದ್ದೆಯನ್ನು ಮಹಿಳೆಯರಿಗೆ ನೀಡಬೇಕು ಎನ್ನುವುದು ತಮ್ಮ ಇಂಗಿತ ಎಂದು ಪ್ರಧಾನಿ ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯ ಪಡುತ್ತಿದ್ದಂತೆ ಅಡ್ವಾಣಿ ಬಣ ತಮ್ಮ ಆಪ್ತ ವಲಯದಲ್ಲಿಯೇ ಗುರುತಿಸಿಕೊಂಡ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಹೆಸರನ್ನು ತೇಲಿ ಬಿಟ್ಟಿತು. ಇಂತಹದರ ನಿರೀಕ್ಷೆ ಮಾಡಿದ್ದು ಪ್ರಧಾನಿ ಮೋದಿ ಗುಡ್ಡಗಾಡು ಪ್ರದೇಶಕ್ಕೆ ಸೇರಿದ ಗಿರಿಜನ ಮಹಿಳೆಯನ್ನು ದೇಶದ ಪ್ರಥಮ ಪ್ರಜೆಯನ್ನಾಗಿಸಬೇಕು ಎನ್ನುವುದು ತಮ್ಮ ಇಂಗಿತವಾಗಿದೆ ಎಂದು ಹೇಳಿದರು. ಸದ್ಯ ಜಾರ್ಖಂಡ್ ರಾಜ್ಯಪಾಲರಾಗಿರುವ ಬಿಜೆಪಿ ನಾಯಕಿ ದ್ರೌಪದಿ ಮುಮುಗೆ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಸದ್ಯದಲ್ಲೇ ಚುನಾವಣೆ ಎದುರಿಸುತ್ತಿರುವ ಒಡಿಶಾದ ಮಯೂರ್ ಬಂಜ್ ಜಿಲ್ಲೆಗೆ ಸೇರಿರುವ ಇವರು ಜಾರ್ಖಂಡ್ ರಾಜ್ಯಪಾಲರಾಗುವ ಮುನ್ನ ಎರಡು ಬಾರಿ ಒಡಿಶಾ ವಿಧಾನಸಭೆಗೆ ಆಯ್ಕೆಯಾಗಿದ್ದರು. ಮಯೂರ್ ಬಂಜ್ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಸಾಕಷ್ಟು ಶ್ರಮಿಸಿದ್ದರು. ಇವರನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡುವ ಮೂಲಕ ಮಹಿಳೆಯರಿಗೆ ಅದರಲ್ಲೂ ಆದಿವಾಸಿ ಮಹಿಳೆಗೆ ಉನ್ನತ ಹುದ್ದೆ ನೀಡಲಾಯಿತು ಎಂಬ ಪ್ರಶಂಸೆ ಗಿಟ್ಟಿಸುವುದು ಒಂದು ಲೆಕ್ಕಾಚಾರವಾದರೆ ಮತ್ತೊಂದು ರಾಜಕೀಯ ಲೆಕ್ಕಾಚಾರವೂ ಇದೆ. 
ಒಡಿಶಾದಲ್ಲಿ ಕಾಂಗ್ರೆಸ್ ಆಳ್ವಿಕೆಯನ್ನು ಅಂತ್ಯಗೊಳಿಸಿದ ಬ್ರಹ್ಮಚಾರಿ ನಾಯಕ ನವೀನ್ ಪಟ್ನಾಯಕ್. ತಮ್ಮ ಚಾಣಾಕ್ಷ ರಾಜಕೀಯ ನಡೆಯ ಮೂಲಕ ಒಡಿಶಾದಲ್ಲಿ ಕಾಂಗ್ರೆಸ್ ಬಲ ಕ್ಷೀಣಿಸುವಂತೆ ಮಾಡಿದರೆ ಸಾಕಷ್ಟು ತಿಪ್ಪರಲಾಗ ಹಾಕಿದರೂ ಬಿಜೆಪಿಯ ಕಮಲ ಅರಳಲು ಬಿಟ್ಟಿಲ್ಲ. ಹಿಂದೊಮ್ಮೆ ಎನ್‍ಡಿಎ ಮೈತ್ರಿಕೂಟದಲ್ಲಿದ್ದ ನವೀನ್ ಪಟ್ನಾಯಕ್ ಹಲವು ಕಾರಣಗಳಿಂದಾಗಿ ಮತ್ತೆ ಎನ್‍ಡಿಎ ಮೈತ್ರಿಕೂಟ ಸೇರಲಿಲ್ಲ. ಪ್ರಧಾನಿ ಮೋದಿ ಅವರನ್ನೂ ಎನ್‍ಡಿಎ ತೆಕ್ಕೆಗೆ ಸೆಳೆಯಲು ನಡೆಸಿದ ಯಾವುದೇ ಪ್ರಯತ್ನ ಯಶಸ್ವಿಯಾಗಲಿಲ್ಲ. 
ಹೀಗಾಗಿ ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜು ಜನತಾದಳವನ್ನು ಸೋಲಿಸಿ ಕಮಲ ಪತಾಕೆ ಹಾರಿಸಲು ಕಾರ್ಯತಂತ್ರ ರೂಪಿಸುತ್ತಿರುವ ಮೋದಿ-ಅಮಿತ್ ಶಾ ಜೋಡಿ ಒಡಿಶಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಿರಿಜನರ ಮತಗಳನ್ನು ಸೆಳೆಯಲು ದ್ರೌಪದಿ ಮುಮು ಅವರಿಗೆ ರಾಷ್ಟ್ರಪತಿ ಹುದ್ದೆ ನೀಡುವ ಲೆಕ್ಕಾಚಾರ ಹಾಕುತ್ತಿದ್ದಾರೆ. 
ಮೋದಿ ಪಾಳಯದಲ್ಲಿ ಇಂತಹ ಲೆಕ್ಕಾಚಾರ ನಡೆದಿರುವ ಬೆನ್ನಲ್ಲೇ ಮತ್ತೊಂದು ಪಾಳಯ ಗುಜರಾತ್‍ನ ಮಾಜಿ ಸಿಎಂ ಆನಂದಿ ಬೇನ್ ಪಟೇಲ್ ಅವರನ್ನು ಈ ಹುದ್ದೆಗೆ ತರುವ ಲೆಕ್ಕಾಚಾರ ನಡೆಸಿದೆ. ಗುಜರಾತ್‍ನಲ್ಲೂ ಸಹ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಅಲ್ಲಿ ನಡೆದಿರುವ ಪಟೇಲ್ ಮೀಸಲಾತಿ ಹೋರಾಟ ಬಿಜೆಪಿಗೆ ದೊಡ್ಡ ಹೊಡೆತ ನೀಡುವ ಸೂಚನೆಗಳು ಗೋಚರಿಸುತ್ತಿವೆ. ಹೀಗಾಗಿ ಇಂತಹ ಹೊಡೆತದಿಂದ ಪಾರಾಗಲು ಪಟೇಲ್ ಸಮುದಾಯಕ್ಕೆ ಸೇರಿದ ಆನಂದಿ ಬೇನ್ ಪಟೇಲ್ ಅವರನ್ನು ಈ ಹುದ್ದೆಗೆ ತರುವ ಲೆಕ್ಕಾಚಾರ ಹಾಕಲಾಗುತ್ತಿದೆ.
ಅಡ್ವಾಣಿ ಪಾಳಯವಂತೂ ಈ ಹುದ್ದೆಗಾಗಿ ತನ್ನದೇ ಆದ ಲಾಭಿ ನಡೆಸುತ್ತಿತ್ತು. ಆದರೆ ಬಾಬ್ರಿ ಮಸೀದಿ ನೆಲೆಸಮ ಪ್ರಕರಣ ಕುರಿತಂತೆ ನೀಡಿದ ತೀರ್ಪು ಅಡ್ವಾಣಿ ಮುರಳಿ ಮನೋಹರ ಜೋಶಿ ಅವರು ಉನ್ನತ ಹುದ್ದೇಗೇರುವ ಕನಸನ್ನು ನುಚ್ಚು ನೂರಾಗಿಸಿದೆ ಜೊತೆ ಪ್ರಧಾನಿ ಮೋದಿಯವರ ಹಾದಿಯನ್ನು ಸುಗಮಗೊಳಿಸಿದೆ.
ಆದರೆ ಮತ್ತೊಂದೆಡೆ ಮಾರ್ಗದರ್ಶಿ ಮಂಡಳಿಯ ಮತ್ತೊಬ್ಬ ಸದಸ್ಯ ಯಶವಂತ ಸಿನ್ಹಾ ಅವರನ್ನು ಈ ಹುದ್ದೇಗೇರಿಸುವ ಪ್ರಯತ್ನ ನಡೆದಿದೆ. ಬಿಹಾರ, ಉತ್ತರ ಪ್ರದೇಶ ಹಾಗೂ ಮಧ್ಯ ಪ್ರದೇಶ ಬಿಜೆಪಿ ವಲಯದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಯಶವಂತ ಸಿನ್ಹಾ ಅವರಿಗೆ ಸಂಘ ಪರಿವಾರದ ಹಲವು ನಾಯಕರ ಶ್ರೀ ರಕ್ಷೆಯೂ ಇರುವುದು ಈಗ ಗುಟ್ಟಾಗೇನೂ ಉಳಿದಿಲ್ಲ. ಹೀಗಾಗಿ ಯಶವಂತ ಸಿನ್ಹಾ ಅವರನ್ನು ಆಯ್ಕೆ ಮಾಡಲು ಪ್ರಧಾನಿ ಮೋದಿ ಸಮ್ಮತಿಸುತ್ತಾರೆಯೋ ಇಲ್ಲವೋ ಎನ್ನುವುದು ಕೂತೂಹಲದ ಪ್ರಶ್ನೆಯಾಗಿದೆ. 

ಈ ನಡುವೆ ಕೇಂದ್ರ ಮಂತ್ರಿ ಮಂಡಲದಲ್ಲಿ ತಮ್ಮದೇ ಪ್ರಭಾವ ಇರಬೇಕು ಎಂದು ಬಯಸುತ್ತಿರುವ ಪ್ರಧಾನಿ ಮೋದಿ ಸದ್ಯ ತಮ್ಮ ವ್ಯಾಪ್ತಿಯಿಂದ ದೂರ ಇರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಕಣಕ್ಕಿಳಿಸುವ ಕುರಿತಂತೆಯೂ ಆಲೋಚಿಸುತ್ತಿದ್ದಾರೆ. ಸುಷ್ಮಾ ಸ್ವರಾಜ್ ಈ ಹುದ್ದೆಗೆ ಆಯ್ಕೆಯಾದರೆ ಸರ್ಕಾರ ಮತ್ತು ಪಕ್ಷ ಸಂಪೂರ್ಣ ಅಡ್ವಾಣಿ ಮುಕ್ತವಾಗಲಿದೆ. ಅಡ್ವಾಣಿ ಪರವಾಗಿ ಲಾಭಿ ಮಾಡುವ ಯಾವ ನಾಯಕರೂ ಬಿಜೆಪಿ ಮತ್ತು ಸರ್ಕಾರದಲ್ಲಿರುವುದಿಲ್ಲ ಎನ್ನುವುದು ಒಂದು ಲೆಕ್ಕಾಚಾರ, ಸದ್ಯ  ಅಡ್ವಾಣಿ ಬಣದಲ್ಲಿ ಪ್ರಬಲವಾಗಿ ಗುರುತಿಸಿಕೊಂಡಿದ್ದು ಅನಂತ್‍ಕುಮಾರ್ ಮತ್ತು ರವಿಶಂಕರ್ ಪ್ರಸಾದ್ ನಿಷ್ಠೆ ಬದಲಾಯಿಸಿ ಹಲವು ದಿನಗಳೇ ಕಳೆದು ಹೋಗಿವೆ. ಈಗ ಉಳಿದಿರುವುದು ಸುಷ್ಮಾ ಸ್ವರಾಜ್ ಮಾತ್ರ, ಅವರನ್ನು ಈ ಮೂಲಕ ನಿವಾರಿಸಿದರೆ ಪಕ್ಷ ಮತ್ತು ಸರ್ಕಾರ ಅಡ್ವಾಣಿ ಮುಕ್ತವಾಗಲಿದೆ.
ಪ್ರಧಾನಿ ಮೋದಿ ಮತ್ತು ಅಮಿತ್ ಶಾರಂತಹ ಎಲ್ಲಾ ಲೆಕ್ಕಾಚಾರ ಅಳೆದು ತೂಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕಾರ್ಯತಂತ್ರದಲ್ಲಿ ನಿರತವಾಗಿದ್ದರೆ ಬಿಜೆಪಿ ಪ್ರಬಲ ಮಿತ್ರ ಪಕ್ಷ ಶಿವಸೇನೆ ಈಗಾಗಲೇ ತಕರಾರು ತೆಗೆದಿದೆ. ರಾಷ್ಟ್ರಪತಿ ಚುನಾವಣೆ ನಡೆದಾಗಲೆಲ್ಲಾ ಬಿಜೆಪಿಯ ನಿಲುವನ್ನು ವಿರೋಧಿಸುವ ಶಿವಸೇನೆ ಈ ಹಿಂದೆ ತನ್ನ ಅಭ್ಯರ್ಥಿ ಮನೋಹರ್ ಜೋಶಿ ಅವರನ್ನು ಕಣಕ್ಕಿಳಿಸಿ ಸೆಡ್ಡುಹೊಡೆದಿತ್ತು.
ಇದೀಗ ಶಿವಸೇನೆ ರಾಷ್ಟ್ರಪತಿ ಹುದ್ದೆಗೆ ಪರಸಂಘಚಾಲಕ ಮೋಹನ್ ಭಾಗವತ್ ಆಯ್ಕೆಯನ್ನು ಪ್ರತಿಪಾದಿಸುತ್ತಿದೆ. ಶಿವಸೇನೆಯಿಂದ ಬಂದ ಈ ಪ್ರಸ್ತಾವನೆ ಬಿಜೆಪಿ ಪಾಳಯದಲ್ಲಿ ಸಂಚಲನವನ್ನೇ ಮೂಡಿಸಿತು. ಸಂಘ ಪರಿವಾರದ ನಾಯಕರೂ ಕೂಡಾ ಅಚ್ಚರಿಗೆ ಒಳಗಾದರೂ ಅವರು ಇವರು ಅಂತಾ ಹುಡುಕುವ ಬದಲಿಗೆ ಮೋಹನ್ ಭಾಗವತ್ ಯಾಕಾಗಬಾರದು ಎಂದು ತಮ್ಮ-ತಮ್ಮಲ್ಲಿಯೇ ಪ್ರಶ್ನಿಸಿಕೊಳ್ಳುತ್ತಿರುವಾಗಲೇ ಕಾಂಗ್ರೆಸ್ ನಾಯಕ ಜಾಫರ್ ಶರೀಫ್ ಕೂಡಾ ಮೋಹನ್ ಭಾಗವತ್ ಪರ ವಾದ ಮಂಡಿಸಿ ಮತ್ತಷ್ಟು ಅಚ್ಚರಿ ಮೂಡಿಸಿದರು.
ಈ ರೀತಿ ಎಲ್ಲಾ ವಲಯಗಳಿಂದಲೂ ಮೋಹನ್ ಭಾಗವತ್ ಪರವಾಗಿ ಅಭಿಪ್ರಾಯ ವ್ಯಕ್ತವಾಗ ತೊಡಗುತ್ತಿದ್ದಂತೆ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಜೋಡಿ ಕೊಂಚ ಗಲಿಬಿಲಿಗೆ ಒಳಗಾಯಿತು. ಈ ಗೊಂದಲದಿಂದ ಹೇಗೆ ಪರಾಗುವುದು ಎಂದು ಯೋಚಿಸುತ್ತಿರುವಾಗಲೇ ಸ್ವತಃ ಮೋಹನ್ ಭಾಗವತ್ ತಮಗೆ ರಾಷ್ಟ್ರಪತಿಯೂ ಸೇರಿದಂತೆ ಯಾವ ಹುದ್ದೆಯ ಮೇಲೆ ಆಸೆ ಇಲ್ಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ದೇಶಸೇವೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇಲ್ಲಿಗೆ ಕೊಂಚ ಮಟ್ಟಿಗೆ ಗೊಂದಲ ಬಗೆಹರಿದಂತಾಗಿದೆಯಾದರೂ ಇವರ ಸ್ಪರ್ಧೆಯ ಕುರಿತಂತೆ ಆಯ್ಕೆ ಇನ್ನೂ ಮುಕ್ತವಾಗಿಯೇ ಇದೆ.
ರಾಷ್ಟ್ರಪತಿ ಆಯ್ಕೆ ಸರ್ವಸಮ್ಮತವಾಗಿರಬೇಕು. ತಾವು ಬಯಸುವ ವ್ಯಕ್ತಿ ದೇಶದ ಪ್ರಥಮ ಪ್ರಜೆಯಾಗಬೇಕೆಂದು ರಣತಂತ್ರ ರೂಪಿಸುತ್ತಿರುವ ಪ್ರಧಾನಿಗೆ ಸ್ವಪಕ್ಷದಲ್ಲಿ ಉಂಟಾಗಿರುವ ಅಡ್ಡಿ-ಆತಂಕ ಒಂದಾದರೆ ಮಿತ್ರ ಪಕ್ಷಗಳಲ್ಲಿ ಉಂಟಾಗಿರುವ ಗೊಂದಲ ಮತ್ತೊಂದು ರೀತಿಯಿದ್ದು ರಾಷ್ಟ್ರಪತಿ ಚುನಾವಣೆ ವಿಷಯದಲ್ಲಿ ಬಿಜೆಪಿ ಕೈಗೊಳ್ಳುವ ನಿಲುವಿಗೆ ಶಿವಸೇನೆ ಸದಾ ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಬಿಜೆಪಿಯ ನಿಲುವನ್ನು ವಿರೋಧಿಸಿ ಈ ಹಿಂದೆ ರಾಷ್ಟ್ರಪತಿ ಹುದ್ದೆಗೆ ಮನೋಹರ ಜೋಶಿ ಅವರನ್ನು ಕಣಕ್ಕಿಳಿಸಿತ್ತು. ಇದೀಗ ಈ ಹುದ್ದೆಗೆ ಪರಸಂಘಚಾಲಕ ಮೋಹನ್ ಭಾಗವತ್ ಹೆಸರು ಪ್ರಸ್ತಾಪಿಸುವ ಮೂಲಕ ದೊಡ್ಡ ಆಘಾತ ನೀಡಿದೆ. ಮತ್ತೊಂದು ಶಿರೋಮಣಿ ಅಕಾಲಿದಳ ಬಾದಲ್ ಅವರನ್ನೂ ಈ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡುವಂತೆ ಮನವಿ ಮಾಡುತ್ತಿದೆ. ಹೀಗಾಗಿ ಪ್ರಧಾನಿಗೆ ತನ್ನ ಮಿತ್ರ ಪಕ್ಷಗಳಾದ ಶಿವಸೇನೆ ಅಕಾಲಿದಳ ಎಲ್‍ಜೆಪಿ, ಬಿಜೆಪಿ ಸೇರಿದಂತೆ ಹಲವು ಪಕ್ಷಗಳ ವಿಶ್ವಾಸ ಗಳಿಸಿ ಎಲ್ಲರನ್ನೂ ಒಟ್ಟಿಗೆ ಕೊಂಡೊಯ್ಯುವುದು ಸವಾಲಾಗಿದೆ.
ಬಿಜೆಪಿ ಪಾಳಯದಲ್ಲಿ ಇಂತಹ ಚಟುವಟಿಕೆ ನಡೆದಿದ್ದರೆ, ಪ್ರತಿಪಕ್ಷಗಳ ಪಾಳಯದಲ್ಲಿ ನಡೆದಿರುವ ಲೆಕ್ಕಾಚಾರವಂತೂ ರೋಚಕತೆಯಿಂದ ಕೂಡಿದೆ. ಬಿಜೆಪಿ ಮತ್ತು ಪ್ರಧಾನಿ ಮೋದಿ ಅವರನ್ನೂ ಕಟ್ಟಿಹಾಕಲು ಎಲ್ಲಾ ಪ್ರತಿಪಕ್ಷಗಳು ಒಂದಾಗಬೇಕೆಂಬ ಪ್ರಬಲ ಕೂಗು ಕೇಳಿ ಬರುತ್ತಿದೆ. ಬಿಹಾರದಲ್ಲಿ ನಡೆದ ಪ್ರಯೋಗ ಈಗಾಗಲೇ ಯಶಸ್ವಿಯಾಗಿದೆ. ಈ ಪ್ರಯೋಗದ ಆಧಾರದಲ್ಲಿ ರಾಷ್ಟ್ರಪತಿ ಚುನಾವಣೆಗೆ ಪ್ರತಿಪಕ್ಷಗಳೆಲ್ಲಾ ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು ಈ ಮೈತ್ರಿಕೂಟ ಕೇವಲ ರಾಷ್ಟ್ರಪತಿ ಚುನಾವಣೆಗೆ ಮಾತ್ರ ಸೀಮಿತವಾಗಬಾರದು. ಇದರ ಉದ್ದೇಶ ಮತ್ತು ಗುರಿ 2019ರ ಲೋಕಸಭಾ ಚುನಾವಣೆಯಾಗಬೇಕು ಎಂದು ಪ್ರತಿಪಾದಿಸುತ್ತಿದ್ದಾರೆ.
ರಾಷ್ಟ್ರಪತಿ ಚುನಾವಣೆಯನ್ನು ವೇದಿಕೆಯಾಗಿಟ್ಟುಕೊಂಡು ರಚನೆಯಾಗುವ ಮೈತ್ರಿಕೂಟ 2019ರಲ್ಲಿ ಬರುವ ಲೋಕಸಭಾ ಚುನಾವಣೆಗೆ ಮೊದಲು ಹಲವು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿಯೂ ಇದೇ ರೀತಿಯ ಮೈತ್ರಿಕೂಟ ಮುಂದುವರೆಯಬೇಕು ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶ ಆಧರಿಸಿ ಕಾರ್ಯತಂತ್ರ ರೂಪಿಸಬೇಕು. ಇಲ್ಲದೇ ಹೋದರೆ ನಾಗಾಲೋಟದಲ್ಲಿ ಓಡುತ್ತಿರುವ ನರೇಂದ್ರಮೋದಿ ಮತ್ತು ಬಿಜೆಪಿಯನ್ನು ಕಟ್ಟಿಹಾಕಲು ಸಾಧ್ಯವಿಲ್ಲ. ಪ್ರತಿಪಕ್ಷಗಳ ಒಡಕಿನ ಲಾಭ ಇವರಿಗೆ ಸಿಗಲಿದೆ. ಇದನ್ನು ತಪ್ಪಿಸುವ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕೆಂಬ ವಾದ ಮಂಡಿಸುತ್ತಿದ್ದಾರೆ. ಎಡಪಕ್ಷಗಳನ್ನು ಪ್ರಬಲವಾಗಿ ವಿರೋಧಿಸುವ ತೃಣಮೂಲ ಸಮಾಜವಾದಿ ಪಕ್ಷವನ್ನು ವಿರೋಧಿಸುವ ಬಿಎಸ್‍ಪಿ ಕೂಡಾ ಇಂತಹ ಕಾರ್ಯತಂತ್ರಕ್ಕೆ ಓಗೊಟ್ಟಿರುವುದು ಕುತೂಹಲಕರ ಸಂಗತಿಯಾಗಿದೆ.
ಬಿಜೆಪಿ ಮತ್ತು ಮೋದಿಯನ್ನು ಮಣಿಸುವ ದೃಷ್ಟಿಯಿಂದ ಎಲ್ಲರೂ ಒಂದಾಗಬೇಕೆಂದು ಬಯಸುತ್ತಿರುವ ಪಕ್ಷಗಳು ಸೋನಿಯಾ, ರಾಹುಲ್, ಸೀತಾರಾಂ ಯಡೂರಿ ನೇತೃತ್ವದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿದೆ. ಈಗ ಈ ಪಾಳಯದಲ್ಲೂ ರಾಷ್ಟ್ರಪತಿ ಅಭ್ಯರ್ಥಿಯಾರಾಗಬೇಕೆನ್ನುವ ಕುರಿತಂತೆ ಭಿನ್ನ ವಿಭಿನ್ನ ಅಭಿಪ್ರಾಯಗಳು ಕೇಳಿ ಬರುತ್ತಿದೆ.
ಅತಿದೊಡ್ಡ ಪಕ್ಷವಾಗಿರುವ ಕಾಂಗ್ರೆಸ್ ಈ ಹುದ್ದೆಗೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನೂ ಕಣಕ್ಕಿಳಿಸುವ ಸಂಬಂಧ ಚರ್ಚೆ ನಡೆಸಿವೆ. ಇದಕ್ಕೂ ಮುನ್ನ ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಮತ್ತೊಂದು ಅವಕಧಿಗೆ ಕಣಕ್ಕಿಳಿಸುವ ಸಂಬಂಧ ಎನ್‍ಡಿಎ ಜೊತೆ ಮಾತುಕತೆ ನಡೆಸಿ ಸರ್ವಾನುಮತದ ಆಯ್ಕೆಗೆ ಪ್ರಯತ್ನಿಸುವುದು. ಇದು ಸಾಧ್ಯವಾಗದೇ ಹೋದರೆ ಹಮೀದ್ ಅನ್ಸಾರಿ ಅವರನ್ನು ಕಣಕ್ಕಿಳಿಸುವುದು ಎಂಬ ಚಿಂತನೆ ಆರಂಭಿಸಿದ್ದು ಈ ಬಗ್ಗೆ ಎಡ ಪಕ್ಷಗಳ ಮುಖಂಡರೊಂದಿಗೆ ಅಭಿಪ್ರಾಯ ಹಂಚಿಕೊಂಡಿದೆ.
ಮತ್ತೊಂದೆಡೆ ಬಿಎಸ್‍ಪಿ, ಆರ್‍ಜೆಡಿ ಮತ್ತು ಜೆಡಿಯು ಸೇರಿದಂತೆ ಹಲವು ಪಕ್ಷಗಳು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶಂಕರ್ ಯಾದವ್ ಅವರನ್ನು ಕಣಕ್ಕಿಳಿಸುವ ಪ್ರಸ್ತಾಪ ಮಾಡಿದರೆ. ಎನ್‍ಸಿಪಿ ತನ್ನ ಪಕ್ಷದ ಹಿರಿಯ ನಾಯಕ ಶರತ್ ಪವಾರ್ ಅವರನ್ನು ಕಣಕ್ಕಿಳಿಸುವ ಕುರಿತಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ಇದರ ನಡುವೆ ಎಡ ಪಕ್ಷಗಳು ಮಾಜಿ ಪ್ರಧಾನಿ ದೇವೇಗೌಡ ಅವರನ್ನೂ ಈ ಹುದ್ದೆಗೆ ಸ್ಪರ್ಧಿಸುವಂತೆ ಮಾಡುವುದು ಸೂಕ್ತ ಎಂಬ ವಾದ ಮಂಡಿಸುತ್ತಿವೆ. ಹೀಗಾಗಿ ಪ್ರತಿಪಕ್ಷಗಳ ಒಕ್ಕೂಟದಲ್ಲಿ ಇನ್ನು ಈ ವಿಷಯವಾಗಿ ಒಮ್ಮತ ಮೂಡಿಬಂದಿಲ್ಲ. ಹೀಗಾಗಿ ಈ ಕೂಟದ ಆಯ್ಕೆ ಅತ್ಯಂತ ರೋಚಕತೆಯಿಂದ ಕೂಡಿದೆ.
ಇನ್ನು ಈ ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ ಎನ್ನುವುದು ಮತ್ತಷ್ಟು ಕುತೂಹಲ. ಈ ಚುನಾವಣೆಯಲ್ಲಿ ಲೋಕಸಭೆಯ 551 ಮತ್ತು ರಾಜ್ಯಸಭೆಯ 225 ಮಂದಿ ಸದಸ್ಯರು ಸೇರಿ ಒಟ್ಟು 776 ಮಂದಿ ಸಂಸದರು ಮತ ಚಲಾಯಿಸಲಿದ್ದಾರೆ. ಈ ಎಲ್ಲಾ ಮತಗಳ ಮೌಲ್ಯ 10 ಲಕ್ಷದ 98 ಸಾವಿರದ 882 ಮತಗಳು ಅಂದರೆ ಪ್ರತಿಯೊಂದು ಮತದ ಮೌಲ್ಯ 708. ಈ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಮತದಾರರಾಗಿರುವ ಹಿನ್ನೆಲೆಯಲ್ಲಿ ದೇಶದ ಒಟ್ಟು ಜನಸಂಖ್ಯೆಯನ್ನು ಆಧರಿಸಿ ಸಂಸದ ಮತ್ತು ಶಾಸಕರ ಮತಗಳ ಮೌಲ್ಯ ನಿರ್ಧರಿಸಲಾಗುತ್ತದೆ. ಹೀಗಾಗಿ ಪ್ರತಿರಾಜ್ಯದ ಶಾಸಕರ ಮತ ಆ ರಾಜ್ಯದ ಒಟ್ಟು ಜನಸಂಖ್ಯೆಗೆ ಸಮವಾಗಿರುತ್ತದೆ. ಈ ಮೂಲಕ ದೇಶದ ಪ್ರಥಮ ಪ್ರಜೆಯ ಆಯ್ಕೆಯಲ್ಲಿ ಎಲ್ಲರೂ ಪಾಲ್ಗೊಂಡರು ಎನ್ನುವುದು ಒಂದು ಲೆಕ್ಕಾಚಾರ. 
ಸಂಸದರ ಮತದ ಮೌಲ್ಯವÀನ್ನು ನಿಗದಿಪಡಿಸುವಾಗ ದೇಶದ ಒಟ್ಟು ಜನಸಂಖ್ಯೆಯನ್ನು ಸಂಸದರ ಸಂಖ್ಯೆಯೊಂದಿಗೆ ವಿಭಾಗಿಸಿ ಆನಂತರ ಸಾವಿರದಿಂದ ಭಾಗಿಸಿದಾಗ ದೊರೆಯುವ ಭಾಗಾಂಶವನ್ನು ಒಟ್ಟು ಮೌಲ್ಯ ಎಂದು ಗುರುತಿಸಲಾಗುತ್ತದೆ.
ಅದೇ ರೀತಿ ಈ ಚುನಾವಣೆಯಲ್ಲಿ ನಾಲ್ಕು ಸಾವಿರದ 120 ಮಂದಿ ಶಾಸಕರು ತಮ್ಮ ಹಕ್ಕು ಚಲಾಯಿಸುತ್ತಾರೆ. ಈ ಶಾಸಕರ ಮತಗಳ ಮೌಲ್ಯವನ್ನು ಇದೇ ರೀತಿ ವಿಭಜಿಸಲಾಗುತ್ತದೆ. ಇದೀಗ ಕರ್ನಾಟಕದ ಒಟ್ಟು ಜನಸಂಖ್ಯೆಯನ್ನು 225 ಮಂದಿ ಶಾಸಕರಿಗೆ ವಿಭಜಿಸಿ ಆನಂತರ ಒಂದು ಸಾವಿರದಿಂದ ಅದನ್ನು ಭಾಗಿಸಿದಾಗ ಭಾಗಾಂಶ 131 ಎಂದು ಬರಲಿದೆ. ಹೀಗಾಗಿ ಕರ್ನಾಟಕದ ಒಟ್ಟು ಶಾಸಕನ ಮತದ 131 ಆಗಿರಲಿದೆ. ಅದೇ ರೀತಿ ತಮ್ಮ ರಾಜ್ಯಗಳಿಗೂ ನಡೆಯಲಿದೆ.
ಉತ್ತರ ಪ್ರದೇಶವು ದೇಶದಲ್ಲಿ ದೊಡ್ಡ ರಾಜ್ಯವಾಗಿದ್ದು 400ಜನ ಶಾಸಕರನ್ನು ಹೊಂದಿದೆ.ಇಲ್ಲಿನ ಶಾಸಕರ ಪ್ರತಿ ಮತದ ಮೌಲ್ಯ 208 ಆಗಿದ್ದು ಇಡೀ ದೇಶದಲ್ಲೇ ಅತ್ಯಧಿಕ ಮೌಲ್ಯ ಹೊಂದಿದೆ. ಅಸ್ಸಾಂನಲ್ಲಿ ಅತಿಕಡಿಮೆ ಜನಸಂಖ್ಯೆಯಿದೆ. ಹೀಗಾಗಿ ಇಲ್ಲಿಯ ಪ್ರತಿ ಶಾಸಕರ ಮತದ ಮೌಲ್ಯ ಕೇವಲ 7 ಮಾತ್ರ.
ಹೀಗಾಗಿ 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯ ಎಲ್ಲಾ ಸದಸ್ಯರ ಒಟ್ಟು ಮತಗಳ ಮೌಲ್ಯ 29 ಸಾವಿರದ 334  ಆಗಲಿದೆ. ಈ ಲೆಕ್ಕಾಚಾರ ಆಧರಿಸಿ ರಾಷ್ಟ್ರಪತಿ ಚುನಾವಣೆಗೆ 10 ಲಕ್ಷದ 98 ಸಾವಿರದ 882  ಮತ ಎಂದು ನಿಗಧಿ ಪಡಿಸಲಾಗಿದೆ. ಆಯ್ಕೆಯಾಗಲು 5 ಲಕ್ಷದ 49 ಸಾವಿರದ 442 ಮತಗಳು ಬೇಕು ಎಂದು ಲೆಕ್ಕಾಚಾರ ಮಾಡಲಾಗಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಪರಿಸ್ಥಿತಿ ಬೇರೆಯಾಗಿತ್ತು. ರಾಷ್ಟ್ರಪತಿ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳ್ಳಲು ಎನ್‍ಡಿಎ ಸಾಕಷ್ಟು ಕಸರತ್ತು ನಡೆಸಬೇಕಾಗಿತ್ತು. ಹೀಗಾಗಿ ತಮಿಳುನಾಡು ರಾಜಕಾರಣದ ಹೈಡ್ರಾಮದಲ್ಲಿ ಪ್ರಧಾನಿ ಪಾತ್ರ ಗಮನಾರ್ಹವಾಗಿತ್ತು. ತಮಿಳುನಾಡು ವಿದ್ಯುನ್ಮಾನ ಸಮಯದಲ್ಲಿ ಕೇಂದ್ರ ಸರ್ಕಾರ ಮುಂಬರುವ ರಾಷ್ಟ್ರಪತಿ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೆ ನಿರ್ಧಾರ ಕೈಗೊಂಡಿತ್ತು ಎನ್ನುವುದು ಇದೀಗ ಜಗಜ್ಜಾಹೀರಾಗಿದೆ. ಈಗ ಉತ್ತರಪ್ರದೇಶ ಫಲಿತಾಂಶದ ನಂತರ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಸುಧಾರಿಸಿವೆ.
ಆದರೂ ಕೂಡಾ ಈ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಸುಲಭವಾಗಿ ಆಯ್ಕೆಯಾಗಲಿದ್ದಾರೆಂದು ಹೇಳಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಎನ್‍ಡಿಎ ಮೈತ್ರಿಕೂಟದ ಶಾಸಕರು, ಸಂಸದರ ಸಂಖ್ಯೆ ಹಾಗೂ ಅವರು ಹೊಂದಿರುವ ಮನೆಗಳ ಮೌಲ್ಯದ ಬಗ್ಗೆ ಅಂದಾಜು ಮಾಡಿ ಹೇಳುವುದಾದರೆ ಎನ್‍ಡಿಎ ಅಭ್ಯರ್ಥಿ ಆಯ್ಕೆ ಸುಲಭ ಎನ್ನಬಹುದು. ಆದರೆ ಲೆಕ್ಕಾಚಾರವೇ ಬೇರೆ ರೀತಿ ಇದೆ.
ಇದಕ್ಕಾಗಿಯೇ ಪ್ರತಿಪಕ್ಷಗಳೆಲ್ಲಾ ಸೇರಿ ಒಗ್ಗಟ್ಟು ಪ್ರದರ್ಶಿಸಲು ಮುಂದಾಗಿವೆ. ಇಂತಹ ಒಗ್ಗಟ್ಟಿನಲ್ಲಿ ಎಲ್ಲಾ ಅಂದುಕೊಂಡಂತೆ ನಡೆದು ಹೋದರೆ ಎನ್‍ಡಿಎ ಅಭ್ಯರ್ಥಿ ರಾಷ್ಟ್ರಪತಿಯಾಗುವುದು ಕಷ್ಟ ಸಾಧ್ಯ ಎಂದೇ ಹೇಳಲಾಗುತ್ತಿದೆ. ಈ ಲೆಕ್ಕಾಚಾರ ಇಟ್ಟುಕೊಂಡೆ ಬಿಜೆಪಿ ಉತ್ತರಪ್ರದೇಶ ಸಿಎಂ ಆಗಿರುವ ಯೋಗಿ ಆದಿತ್ಯಾನಾಥ್, ಗೋವಾ ಸಿಎಂ ಆಗಿರುವ ಮನೋಹರ್ ಪರಿಕ್ಕರ್ ಅವರಿಗೆ ಸಂಸತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಎಂದು ಸೂಚಿಸಿಲ್ಲ. ಸಂಸದರ ಕೋಟಾದಲ್ಲಿ ಈ ಇಬ್ಬರು ಮತಹಾಕಿದರೆ ಎಲ್ಲರ ಮತಕ್ಕೆ 702 ಮತ ಮೌಲ್ಯವಿದೆ. ಹೀಗಾಗಿ ಅವರ ರಾಜೀನಾಮೆ ನಿರ್ಧಾರ ಕೈಗೊಂಡಿಲ್ಲ.
ಈ ಲೆಕ್ಕಾಚಾರ ಏನೇ ಮಾಡಿದರೂ ಬಿಜೆಪಿ ಅವರ ಅಂಗಪಕ್ಷಗಳ ಒಟ್ಟು ಮೌಲ್ಯವನ್ನು ಅವಲೋಕಿಸಿದಾಗ ಅವರ ಪ್ರಮಾಣ ಶೇ47.5 ರಷ್ಟು ಆಗಲಿದೆ. ಇನ್ನು ಅಣ್ಣಾಡಿಎಂಕೆಯ ಶಾಸಕರು ಮತ್ತು ಸಂಸದರ ಮತಗಳ ಮೌಲ್ಯ ಶೇ 5.4ರಷ್ಟಿದ್ದಲ್ಲಿ ಇವರ ಕೈಗೊಳ್ಳುವ ನಿರ್ಧಾರ ಫಲಿತಾಂಶ ದಿಕ್ಕು, ದಿಸೆಯನ್ನು ಬದಲಾಯಿಸಲಿದೆ.
ಸದ್ಯದ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿ ಕೂಟದ ಬಲ ಶೇ 25ರಷ್ಟಿದೆ, ಸಮಾಜವಾದಿ ಪಕ್ಷ ಶೇ6.2 ಎಡಪಕ್ಷಗಳ ಮೌಲ್ಯ ಶೇ 4.7, ತೃಣಮೂಲ ಕಾಂಗ್ರೆಸ್ ಶೇ 4.4, ಬಿಜು ಜನತಾದಳ ಶೇ3.4, ವೈ.ಎಸ್.ಆರ್ ಕಾಂಗ್ರೆಸ್ ಶೇ 2 ಮತ್ತು ತೆಲಂಗಾಣ ರಾಷ್ಟ್ರ ಸಮಿತಿ ಶೇ1.4 ಆಗಲಿದೆ. ಇದಕ್ಕೆ ಅಣ್ಣಾಡಿಎಂಕೆಯು ಶೇ5.4 ಸೇರ್ಪಡೆಯಾದರೆ ಪ್ರತಿಪಕ್ಷಗಳ ಪ್ರಮಾಣ ಶೇ52.5ರಷ್ಟು ಆಗಲಿದೆ. ಹೀಗಾಗಿ ಪ್ರತಿಪಕ್ಷಗಳ ಅಭ್ಯರ್ಥಿ ಸುಲಭವಾಗಿ ರಾಷ್ಟ್ರಪತಿ ಹುದ್ದೆ ಅಲಂಕರಿಸಬಹುದು. ಇದರಿಂದಾಗಿ ರಾಷ್ಟ್ರಪತಿ ಚುನಾವಣೆಯ ಲೆಕ್ಕಾಚಾರ ರಾಜಕೀಯ ಕಾರ್ಯತಂತ್ರ ತೀವ್ರ ಕುತೂಹಲಕರ ಘಟ್ಟದಲ್ಲಿದೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ