ಆಚಾರವಿಲ್ಲದ ನಾಲಗೆ?

Cm siddaramaiah v/s BJP

07-03-2018

ಬೆಂಗಳೂರು: ನನಗೂ ಮಾತನಾಡಲು ಬರುತ್ತದೆ ಆದರೆ, ಬಿಜೆಪಿಯವರ ಮಟ್ಟಕ್ಕೆ ಇಳಿದು ನಾನು ಮಾತನಾಡಲಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮುಖ್ಯಮಂತ್ರಿ  ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದರು. ನಾನು ನಲವತ್ತು ವರ್ಷದಿಂದ ರಾಜಕಾರಣದಲ್ಲಿದ್ದೇನೆ. ಆದರೆ, ಯಾವತ್ತೂ ಈ ರೀತಿ ಕೆಳಮಟ್ಟಕ್ಕಿಳಿದು ಮಾತನಾಡಿಲ್ಲ. ಬಿಜೆಪಿ ನಾಯಕರ ಟೀಕೆಗಳನ್ನು ಗಮನಿಸಿದ್ದೇನೆ. ಅದು ಅವರ ಸಂಸ್ಕೃತಿ ತೋರಿಸುತ್ತದೆ. ಅವರಿಗೆ ಸಂಸ್ಕಾರ, ಮನುಷ್ಯತ್ವ ಯಾವುದೂ ಇಲ್ಲ ಎಂದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಟೀಕೆ ಮಾಡಿದ್ದಾರೆ, ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಕನ್ನಡಿಗರು ಇಂಥದ್ದನ್ನು ಸಹಿಸುವುದಿಲ್ಲ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸಿದ್ದರಾಮಯ್ಯ ಹೇಳಿದರು. ಉಡುಪಿಗೆ ಬಂದರೆ ಬಡಿಗೆ ತೆಗೆದುಕೊಂಡು ಹೊಡೆಯುವುದಾಗಿ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಒಬ್ಬ ರಾಜಕಾರಣಿಯಾಗಿ ಅವರು ಆ ರೀತಿ ಮಾತನಾಡುವುದು ಸರಿಯೇ? ಅವರಿಗೆ ಸಂಸ್ಕೃತಿ ಇದೆಯೇ ? ಇಂಥ ಹೇಳಿಕೆಗಳ ಮೂಲಕ ಅವರು ಪ್ರಚೋದನೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಶಾಸಕ ಅಶೋಕ್ ಖೇಣಿ ಅವರು ಕಾಂಗ್ರೆಸ್ ಸೇರಿರುವುದರಿಂದ ಯಾವುದೇ ಮುಜುಗರ ಆಗಿಲ್ಲ. ಇಷ್ಟಕ್ಕೂ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಕೊಡುವ ಬಗ್ಗೆ ನಾವು ಭರವಸೆ ನೀಡಿಲ್ಲ. ಅವರು ಬೇಷರತ್ ಆಗಿ ಪಕ್ಷ ಸೇರಿದ್ದಾರೆ. ಖೇಣಿ ಅವರಿಗೆ ಟಿಕೆಟ್ ಕೊಡುವುದು ಅಥವಾ ಬಿಡುವುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿದರು. 

ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮಾಡಿಕೊಂಡಿರುವ ಮೈತ್ರಿ ವಾಪಸ್ ಪಡೆಯುವುದಾಗಿ ಜೆಡಿಎಸ್ ನಾಯಕರು ಹೇಳಿದ್ದಾರೆ. ಆ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆಗಿರುವ ಒಪ್ಪಂದದ ಪ್ರಕಾರ ನಮ್ಮ ಪಕ್ಷದವರು ಮೇಯರ್ ಹಾಗೂ ಜೆಡಿಎಸ್ ನವರು ಉಪ ಮೇಯರ್ ಆಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಕಲ್ಲಡ್ಕ ಪ್ರಭಾಕರ್ ಭಟ್ ಅವರ ಶಾಲೆಗೆ ನೀಡುತ್ತಿದ್ದ ಅನುದಾನವನ್ನು ಕಾನೂನು ಪ್ರಕಾರವೇ ವಾಪಸ್ ಪಡೆಯಲಾಗಿದೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಇಂಥ ಕ್ಷುಲ್ಲಕ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯವರು ರಾಜಕೀಯ ಮಾಡುತ್ತಾರೆ. ಏಕೆಂದರೆ ಅವರಿಗೆ ಬೇರೆ ವಿಚಾರಗಳೇ ಇಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.


ಸಂಬಂಧಿತ ಟ್ಯಾಗ್ಗಳು

Siddaramaiah Mayor ಕಲ್ಲಡ್ಕ ಬಿಬಿಎಂಪಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ