ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ವಂಚಕರ ಜಾಲ ಪತ್ತೆ

Kannada News

05-05-2017

ಬೆಂಗಳೂರು, ಮೇ 5- ದೇಶದ ಎಲ್ಲಾ ರಾಜ್ಯಗಳಲ್ಲಿ 180 ಏಜೆಂಟರನ್ನಿಟ್ಟುಕೊಂಡು 38ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಅಂತರಾಜ್ಯ ವಂಚಕರ ಜಾಲವನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಪತ್ತೆಹಚ್ಚಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಎಲ್ಲಾ ರಾಜ್ಯಗಳಲ್ಲಿ ಸುಮಾರು 180ಕ್ಕೂ ಹೆಚ್ಚು ಏಜೆಂಟರ ಮೂಲಕ ನಕಲಿ ಸ್ನಾತಕೋತ್ತರ ಪದವಿ ಸೇರಿದಂತೆ ವಿವಿಧ ಕೋರ್ಸ್‍ಗಳ ಅಂಕಪಟ್ಟಿಗಳನ್ನು ಮಾರಾಟ ಮಾಡಲಾಗುತ್ತಿರುವುದು ಜಾಳದ ಪತ್ತೆಯಿಂದ ಬೆಳಕಿಗೆ ಬಂದಿದೆ ಎಂದು ಸಿಸಿಬಿಯ ಡಿಸಿಪಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಜಾಲದಲ್ಲಿ ಭಾಗಿಯಾಗಿದ್ದ ನಗರದ ಜಾಯಿನಾಸ್ ಫಾರ್ ಎಜುಕೇಷನ್ ಸಂಸ್ಥೆಯ ಕುನಾಲ್ ಕುಮಾರ್ ಮಂಡಲ್, ದೀಪಾಂಕರ್ ಸೇನ್, ಉತ್ತರ ಪ್ರದೇಶದ ನಾರಂಗ್ ಪುರದ ಸೌರಭ್ ಕುಮಾರ್ ಶರ್ಮಾ ಅಲಿಯಾಸ್ ಗೌರವ್ ಕುಮಾರ್, ನವದೆಹಲಿಯ ಪೀತಂಪುರ್‍ನ ಸಂದೇಶ್ ಅಗರ್ವಾಲ್, ನಗರದ ಫಾಚ್ರ್ಯೂನ್ ಇನ್ಸಿಟಿಟ್ಯೂನ ಅರುಣಾಳನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ
ಆರೋಪಿಗಳು ಕಳೆದ ನಾಲ್ಕೈದು ವರ್ಷಗಳಿಂದ ಈ ದಂಧೆಯಲ್ಲಿ ತೊಡಗಿದ್ದು, ಕಳೆದ 2-3 ವರ್ಷಗಳಲ್ಲಿ 1 ಲಕ್ಷ 60 ಸಾವಿರಕ್ಕೂ ಹೆಚ್ಚು ನಕಲಿ ಅಂಕಪಟ್ಟಿಗಳನ್ನು ಮಾರಾಟ ಮಾಡಿದ್ದಾರೆ. ಸ್ನಾತಕೋತ್ತರ ಪದವಿಗೆ ವಿದ್ಯಾರ್ಥಿಗಳ ಬೇಡಿಕೆಯಾಧರಿಸಿ 1 ಲಕ್ಷ ಪದವಿಗಳನ್ನು 50 ಸಾವಿರದವರೆಗೆ ವಸೂಲಿ ಮಾಡುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ನಗರದ ಮಣಿಪಾಲ್ ಸೆಂಟರ್ನ ನಾರ್ಥ್ ಬ್ಲಾಕ್‍ನ ಜೀನಿಯಸ್ ಫಾರ್ ಎಜುಕೇಷನ್‍ನಲ್ಲಿ ನಕಲಿ ಅಂಕಪಟ್ಟಿ ಮಾರಾಟ ಮಾಡಿದ ಜಾಡು ಹಿಡಿದು ಕಾರ್ಯಾಚರಣೆ ನಡೆಸಿದ ವಿಶೇಷ ಪೊಲೀಸ್ ತಂಡ ಮೊದಲಿಗೆ ಖಾಸಗಿ ಕಾಲೇಜಿನ ಉದ್ಯೋಗಿ ದೀಪಾಂಕರ್ ಸೇನ್‍ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿತು. ಆತ ನೀಡಿದ ಮಾಹಿತಿಯಾಧರಿಸಿ ಉತ್ತರ ಪ್ರದೇಶದ ಗಾಜಿಯಾಬಾದ್ನ ಆರ್‍ಪಿಎಸ್ ಸ್ಕೂಲ್‍ನ ಗೌರವ್ ಕುಮಾರ್ನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ಆತನ ಮೂಲ ಹೆಸರು ಸೌರಭ್ ಕುಮಾರ್ ಶರ್ಮಾ ಎನ್ನುವುದು ಪತ್ತೆಯಾಯಿತು. ಆತ ನಕಲಿ ಹೆಸರಿನಲ್ಲಿ ಈ ಕೃತ್ಯ ನಡೆಸುತ್ತಿದ್ದ. ಆತನನ್ನು ತೀವ್ರ ವಿಚಾರಣೆಗೊಳಪಡಿಸಿ ದೆಹಲಿಯ ವರ್ಧಮಾನ್ ಮಾಲ್ನಲ್ಲಿ ಕಚೇರಿ ತೆರೆದು ದೇಶಾದ್ಯಂತ ನಕಲಿ ಅಂಕಪಟ್ಟಿಗಳನ್ನು ಪೂರೈಸುತ್ತಿದ್ದ ಮತ್ತೊಬ್ಬ ಆರೋಪಿ ಸಂದೇಶ್ ಅಗರ್ವಾಲ್‍ನನ್ನುಬಂಧಿಸಲಾಯಿತು ಎಂದು ವಿವರಿಸಿದರು.
ಆರೋಪಿ ಸಂದೇಶ್ ಅಗರ್ವಾಲ್, ದೇಶಾದ್ಯಂತ 180 ಏಜೆಂಟ್‍ಗಳನ್ನಿಟ್ಟುಕೊಂಡು ಅವರುಗಳ ಮೂಲಕ 38 ವಿಶ್ವವಿದ್ಯಾನಿಲಯಕ್ಕೆ ಸೇರಿದ ನಕಲಿ ಅಂಕಪಟ್ಟಿಗಳನ್ನು ಪೂರೈಸಿರುವುದು ಪತ್ತೆಯಾಗಿದೆ. ಬಂಧಿತ ಆರೋಪಿಗಳನ್ನೆಲ್ಲ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.
ಆಂಧ್ರದ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ನ 100, ತಿರುವಳ್ಳುವರ್ ವಿವಿಯ 19, ಕರ್ನಾಟಕ ರಾಜ್ಯಮುಕ್ತ ವಿಶ್ವವಿದ್ಯಾನಿಲಯ 38 ಸೇರಿದಂತೆ ವಿವಿಧ ವಿಶ್ವವಿದ್ಯಾನಿಲಯಗಳ 836 ನಕಲಿ ಅಂಕಪಟ್ಟಿಗಳು, ಫೇಸ್ಮೇಕರ್ ಸಹಿಯ ಸೀಲು, ಆಲೋಗ್ರಾಂ ಖಾಲಿಪತ್ರಗಳು ಸೇರಿದಂತೆ 836ರ ದಾಖಲಾತಿಗಳು, ಕಂಪ್ಯೂಟರ್ ಪ್ರಿಂಟರ್, ಲ್ಯಾಪ್ಟಾಪ್, ಮೊಬೈಲ್ ಫೋನ್ ಗಳು, ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕೃತ್ಯದಲ್ಲಿ ಭಾಗಿಯಾಗಿರುವ 180 ಏಜೆಂಟರುಗಳ ಪತ್ತೆಗೆ ಆಯಾ ರಾಜ್ಯಗಳ ಪೊಲೀಸರು ಸಂಪರ್ಕಿಸಿದರೆ ಎಲ್ಲ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ ಇಂತಹ ಕೃತ್ಯದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ಶೋಧ ನಡೆಸಲಾಗಿದೆ ಎಂದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ