‘ಜಿಲ್ಲಾಡಳಿತದ ನಡಿಗೆ ಜನರ ಬಳಿಗೆ’06-03-2018

ಬೆಂಗಳೂರು: ಸರ್ಕಾರದ 80 ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ, ಅರಿವು ಮೂಡಿಸುವ ‘ಜಿಲ್ಲಾಡಳಿತದ ನಡಿಗೆ ಜನರ ಬಳಿಗೆ’ ಅರಿವು ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜಾರ್ಜ್ ಅವರು ತಿಳಿಸಿದರು.

ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಜಿಲ್ಲಾಡಳಿತದ ನಡಿಗೆ ಜನರ ಬಳಿಗೆ’ ಎಂಬ ಸರ್ಕಾರದ ಕೈಪಿಡಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿ,  ಜಿಲ್ಲೆಯ ಎಲ್ಲಾ ಗ್ರಾಮ ಮತ್ತು ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ರಚಿಸಿದ್ದು, ಗ್ರಾಮಾಂತರ  ಪ್ರದೇಶದಲ್ಲಿ ಪಿ.ಡಿ.ಓ. ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು, ನಗರ ಪ್ರದೇಶದಲ್ಲಿ ಮುಖ್ಯಾಧಿಕಾರಿಗಳು, ರೆವಿನ್ಯೂ ಅಧಿಕಾರಿಗಳು ಪ್ರತಿ ಮನೆಗಳಿಗೂ ಭೇಟಿ ನೀಡಿ ಸರ್ಕಾರದ ಸವಲತ್ತುಗಳ ಬಗ್ಗೆ ಅರಿವು ಮೂಡಿಸಿ ಈ ಬಗ್ಗೆ ಮಾಹಿತಿ ನೀಡಿ ಯೋಜನೆ ಪ್ರಯೋಜನ ಪಡೆಯುವಂತೆ  ಹಾಗೂ ಯಾವೊಬ್ಬ ವ್ಯಕ್ತಿಯೂ ಯೋಜನೆಯಿಂದ ವಂಚಿತರಾಗದಂತೆ ಜಾಗ್ರತೆ ವಹಿಸುತ್ತಾರೆ ಎಂದರು.

ಉತ್ತಮ ಸೇವೆ ಸಲ್ಲಿಸದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದಲ್ಲದೆ ಉತ್ತಮ ಅಧಿಕಾರಿಗಳನ್ನು ಪುರಸ್ಕರಿಸಲಾಗುವುದು. ಆರ್ಥಿಕವಾಗಿ ಒಂದು ರಾಜ್ಯದ ಅಭಿವೃದ್ಧಿ ಹೊಂದಬೇಕಾದರೆ ಸರ್ಕಾರದ ಸವಲತ್ತುಗಳು ಕೆಳಮಟ್ಟದಿಂದ ಆರಂಭವಾಗಬೇಕು ಅಂದಾಗ ಮಾತ್ರ ಸಾಮಾಜಿಕ ಮತ್ತು ಆರ್ಥಿಕವಾಗಿ ಭದ್ರತೆ ದೊರೆಯಲು ಸಾಧ್ಯವಾಗುತ್ತದೆ ಎಂದರು. ಆರ್ಥಿಕವಾಗಿ ಹಿಂದುಳಿದ ಹಾಗೂ ಬಡವರಿಗೆ ಇಂದಿರಾ ಕ್ಯಾಂಟೀನ್ ಒಂದು ವರದಾನವಾಗಿದೆ ಹಾಗೂ  ರಾಜ್ಯದಲ್ಲಿ 1,20 ಲಕ್ಷ ಕುಟುಂಬಗಳು ಅನ್ನಭಾಗ್ಯ ಸೌಲಭ್ಯ ಪಡೆಯುತ್ತಿದ್ದು ಹಸಿವು ಮುಕ್ತ ರಾಜ್ಯದ ಮುನ್ನುಡಿಯಾಗಿದೆ ಎಂದರು.

ಜಿಲ್ಲಾಧಿಕಾರಿ ವಿ.ಶಂಕರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 18 ಇಲಾಖೆಗಳ 80 ಯೋಜನೆಗಳು ಜನವರಿಯಿಂದ ಜಾರಿಯಾಗಿದ್ದು, ಇಂದಿನಿಂದ ಯೋಜನೆಗಳ ಅನುಷ್ಠಾನವಾಗುತ್ತಿದೆಯೆಂದರು. ಪ್ರತಿಯೊಬ್ಬರಿಗೂ ಯೋಜನೆಗಳು ತಲುಪಬೇಕೆಂಬುದೇ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.  ಇದುವರೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ 11650 ಎಕರೆ ಭೂಮಿ  ತೆರವುಗೊಳಿಸಲಾಗಿದೆ.  ಬೆಂಗಳೂರು ನಗರ ಜಿಲ್ಲೆಯ 931 ಗ್ರಾಮಗಳಿದ್ದು, 780 ಹಳ್ಳಿಗಳಿಗೆ ಆದ್ಯತೆಯ ಮೇರೆಗೆ ಸುಮಾರು 3000 ಎಕರೆ ಭೂಮಿಯನ್ನು ಸ್ಮಶಾನದ ಉಪಯೋಗಕ್ಕೆ ನೀಡಲಾಗಿದೆ.  1616 ಎಕರೆ ಸರ್ಕಾರಿ ಕೆರೆ ಒತ್ತುವರಿ ಭೂಮಿಯಲ್ಲಿ 10 ಲಕ್ಷ ಸಸಿ ಬೆಳೆಸುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಒಂದು ಲಕ್ಷ ಬಡವರಿಗೆ ಮನೆ ಹಂಚಲು 1400 ಎಕರೆ ಭೂಮಿಯನ್ನು ನೀಡಲಾಗಿದೆ ಎಂದರು.


ಸಂಬಂಧಿತ ಟ್ಯಾಗ್ಗಳು

K.J.George development ಉದ್ದೇಶ ಜಿಲ್ಲಾಧಿಕಾರಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ