ಬೆಂಗಳೂರು ಆರೋಗ್ಯ ಉತ್ಸವಕ್ಕೆ ಸಿಎಂ ರಿಂದ ಅದ್ದೂರಿ ಚಾಲನೆ.. ಎರಡನೇ ದಿನಕ್ಕೆ ಕಾಲಿಟ್ಟ ಆರೋಗ್ಯ ಉತ್ಸವ

Kannada News

05-05-2017

ಬೆಂಗಳೂರು : ಆರೋಗ್ಯ ಹಾಗೂ ವೈದ್ಯಕೀಯ ಕ್ಷೇತ್ರಗಳ ವಿವಿಧ ವಿಚಾರಗಳ ಕಣಜವನ್ನು ಸಾರ್ವಜನಿಕರ ಮುಂದಿಡಲು ರಾಜಧಾನಿಯಲ್ಲಿ ಸಜ್ಜಾಗಿರುವ ವೇದಿಕೆ ಬೆಂಗಳೂರು ಆರೋಗ್ಯ ಉತ್ಸವ. ಮೇ 4 ಗುರುವಾರದಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಸಚಿವರಿಂದ ಅದ್ದೂರಿ ಚಾಲನೆ ದೊರೆತ ಬೆಂಗಳೂರು ಆರೋಗ್ಯ ಉತ್ಸವ ಇಂದು ಎರಡನೇ ದಿನಕ್ಕೆ ಕಾಲಿರಿಸಿದೆ. ನಗರದ ಅರಮನೆ ಮೈದಾನದ ತ್ರಿಪುರವಾಸಿನಿ ಸಂಭಾಗಣದಲ್ಲಿ ಇಂದು ಕೂಡ ಆರೋಗ್ಯ ಹವಾ ಜೋರಾಗಿತ್ತು.
ನಗರದ ಜನರನ್ನು ಆಕರ್ಷಿಸುತ್ತಿರುವ ಆರೋಗ್ಯ ಉತ್ಸವ ಇವತ್ತು ಗ್ರಾಮೀಣ ಭಾಗದ ಜನರನ್ನು ಆಕರ್ಷಿಸಿದ್ದು ವಿಶೇಷವಾಗಿತ್ತು. ನಗರದ ಸುತ್ತ-ಮುತ್ತಲಿನ ಗ್ರಾಮೀಣ ಭಾಗದ ಜನರು ಉಚಿತ ಆರೋಗ್ಯ ಸೇವೆ ಮತ್ತು ವಿವಿಧ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 
ಆರ್ಥಿಕ ಮಟ್ಟಸುಧಾರಿಸದ, ಚಿಕಿತ್ಸೆಗೆಂದು ಹಣ ವ್ಯಯಿಸಲಾಗದ, ಆಸ್ಪತ್ರೆಗಳ ಬಗ್ಗೆ ಮಾಹಿತಿ ತಿಳಿಯದ ಜನಸಾಮಾನ್ಯರು ಕಣ್ಣು, ಕಿವಿ, ಸಕ್ಕರೆ ಕಾಯಿಲೆ, ಬಿಪಿ ಹೀಗೆ ನಾನಾ ಕಾಯಿಲೆಗಳಿಗೆ ಉಚಿತ ಚಿಕಿತ್ಸೆ ಮತ್ತು ಮಾಹಿತಿ ಪಡೆದುಗೊಂಡು ಬೆಂಗಳೂರು ಆರೋಗ್ಯ ಉತ್ಸವದ ಬಗ್ಗೆ ಸಂತಸ ವ್ಯಕ್ತ ಪಡಿಸಿದರು. 
ನೆನ್ನೆ ಕಾಲೇಜು ವಿದ್ಯಾರ್ಥಿಗಳ ಭಾಗವಹಿಸುವಿಕೆಯಿಂದ ಕಂಗೊಳಿಸುತ್ತಿದ್ದ ಬೆಂಗಳೂರು ಆರೋಗ್ಯ ಉತ್ಸವ ಇಂದು ಗ್ರಾಮೀಣ ಜನರ ಚಿಕಿತ್ಸೆ ಮತ್ತು ಮಾರ್ಗದರ್ಶನಕ್ಕೆ ಸಾಕ್ಷಿಯಾಗಿತ್ತು. ಉತ್ಸವದ ಎರಡನೆ ದಿನ ಕೂಡ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. 
ದೊಡ್ಡಬಳ್ಳಾಪುರ, ಸಕಲೇಶ್‍ಪುರ ಸೇರಿದಂತೆ ನಾನಾ ಸ್ಥಳಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರೀಕರು, ಮಧ್ಯಮ ವರ್ಗದವರು ನಾನಾ ಕಾಯಿಲೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಹೆಚ್ಚುವರಿ ಚಿಕಿತ್ಸೆಗೆ ಆಸ್ಪತ್ರೆಗಳ ಸಲಹೆ ಪಡೆದುಕೊಳ್ಳುತ್ತಿದ್ದು ಎಲ್ಲೆಡೆ ಕಂಡುಬಂತು. 
ಸಾಮಾನ್ಯವಾಗಿ ವಯಸ್ಸಾದ ಮೇಲೆ ಕಂಡುಬರುವ ಮಂಡಿ ನೋವು, ಮೂಳೆ ಸವೆತ, ದೃಷ್ಟಿ ಹೀನತೆ ಇತ್ಯಾದಿ ಆರೋಗ್ಯ ಸಮಸ್ಯೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾಹಿತಿ ಪಡೆದುಕೊಂಡರು.  
ಮೈಕ್ರೋ ಲ್ಯಾಬ್ಸ್ ವೈದ್ಯರೊಂದಿಗೆ ‘ಫೀವರ್- ಸ್ನೇಹಿತ ಅಥವಾ ಶತ್ರು..?’ ಎನ್ನುವ ವಿಚಾರದ ಬಗ್ಗೆ ಉತ್ಸವದ ಆಯೋಜಕರಾದ ಹಾಗೂ ಹಿರಿಯ ಪತ್ರಕರ್ತರಾದ ದೀಪಕ್ ತಿಮ್ಮಯ ಅವರು ಪ್ಯಾನಲ್ ಡಿಸ್ಕಷನ್ ಮಾಡಿದರು. 
ಉತ್ಸವದಲ್ಲಿ ಭಾಗವಹಿಸಿದ್ದ ಗಣ್ಯರು ಬೆಂಗಳೂರು ಆರೋಗ್ಯ ಉತ್ಸವದ ಸದುಪಯೋಗ ಸಾರ್ವಜನಿಕರೆಲ್ಲರೂ ಪಡೆದುಕೊಳ್ಳಬೇಕೆಂಬ ಕಿವಿ ಮಾತು ಹೇಳಿದರು. 
ಈ ನಡುವೆ ಜನಪದ ಕಲೆಗಳಲ್ಲಿ ತನ್ನದೇ ಆದ ಹಿರಿಮೆ ಹೊಂದಿದ ಕಂಸಾಳೆ, ಆರೋಗ್ಯ ಕುರಿತು ಜಾಗೃತಿ ಮೂಡಿಸುವ ದೃಶ್ಯವಳಿಗಳ ಪ್ರದರ್ಶನ ಮಾಡಲಾಯಿತು. 
ಬೆಂಗಳೂರು ಆರೋಗ್ಯ ಉತ್ಸವ ಒಂದು ಅಭೂತಪೂರ್ವವಾದ ಕಾರ್ಯಕ್ರಮ. ಆರೋಗ್ಯಾಸಕ್ತರೆಲ್ಲ ತಪ್ಪದೇ ಭಾಗವಹಿಸಬಹುದಾದ ಒಂದು ಅದ್ವಿತಿಯ ಉತ್ಸವ. ಭಾರತಕ್ಕೆ ಬೆಂಗಳೂರಿನ ಕೊಡುಗೆಯಾಗಬಹುದಾದ ಈ ಆರೋಗ್ಯ ಉತ್ಸವದಲ್ಲಿ ಭಾಗವಹಿಸಲು ಬಿಡುವು ಮಾಡಿಕೊಳ್ಳಿ. ಬೆಂಗಳೂರು ಆರೋಗ್ಯ ಉತ್ಸವದಲ್ಲಿ ಒಳ್ಳೆಯ ಆರೋಗ್ಯವನ್ನು ನಾವೆಲ್ಲರು ಕೂಡಿ ಆಚರಿಸೋಣ. 

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ