ಹೆಲಿ-ಟ್ಯಾಕ್ಸಿಗೆ ಮನ ಸೋತ ಸಿಲಿಕಾನ್ ಜನ

Silicon people happy to fly in heli taxi..

06-03-2018

ಬೆಂಗಳೂರು: ನಗರದಲ್ಲಿ ಮೊದಲ ಬಾರಿಗೆ ಬಹು ನಿರೀಕ್ಷಿತ ಹೆಲಿ-ಟ್ಯಾಕ್ಸಿ ಸೇವೆ ಪ್ರಾರಂಭವಾಗಿದ್ದು, ಎಲೆಕ್ಟ್ರಾನಿಕ್ ಸಿಟಿ ಹಾಗೂ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎ) ನಡುವೆ ಸಂಪರ್ಕ ಕಲ್ಪಿಸುವ ಹೆಲಿ-ಟ್ಯಾಕ್ಸಿಗೆ ಪ್ರಯಾಣಿಕರು ಮನಸೋತಿದ್ದಾರೆ. ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದರೊಂದಿಗೆ ಸಿಕಾನ್ ಸಿಟಿಯ ವೈಮಾನಿಕ ನೋಟ ನೋಡಲು ಸಿಗುವುದು ಹೆಲಿ-ಟ್ಯಾಕ್ಸಿ ಸೇವೆಯಿಂದ ಪ್ರಯಾಣಿಕರಿಗೆ ಸಿಗುವ ಮತ್ತೊಂದು ಆಹ್ಲಾದಕರ ಅನುಭವಾಗಿದೆ.

ತಂಬಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್ ಈ ಸೇವೆ ಒದಗಿಸುತ್ತಿದ್ದು, 3,500 ರೂಪಾಯಿಯೊಂದಿಗೆ  ಪ್ರತ್ಯೇಕವಾಗಿ ಜಿಎಸ್ ಟಿ ತೆರಿಗೆಯ ದರ ನಿಗದಿಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್‍ಎಎಲ್ ವಿಮಾನ ನಿಲ್ದಾಣದಿಂದ ಕೆಐಎಎಲ್ ಗೂ ಹೆಲಿ-ಟ್ಯಾಕ್ಸಿ ಸೇವೆ ಒದಗಿಸಲು ತಂಬಿ ಏವಿಯೇಷನ್ ಚಿಂತನೆ ನಡೆಸಿದೆ. ಎಲೆಕ್ಟ್ರಾನಿಕ್ ಸಿಟಿ-ಕೆಂಪೇಗೌಡ ವಿಮಾನ ನಿಲ್ದಾಣದ ನಡುವೆ ಸಂಚರಿಸಲು ಪ್ರಯಾಣಿಕರಿಗೆ 2.5 ಗಂಟೆ ಸಮಯ ತೆಗೆದುಕೊಳ್ಳುತ್ತಿತ್ತು. ಆದರೆ ಹೆಲಿ-ಟ್ಯಾಕ್ಸಿಯಿಂದಾಗಿ 15 ನಿಮಿಷಗಳಲ್ಲಿ ವಿಮಾನ ನಿಲ್ದಾಣ ತಲುಪಬಹುದಾಗಿದೆ.

ಕಳೆದ 17 ವರ್ಷಗಳಿಂದ ಬೆಂಗಳೂರಿನಲ್ಲೇ ಇದ್ದೇನೆ ಆದರೆ ನಮ್ಮ ನಗರದಲ್ಲಿ ಈ ಪ್ರಮಾಣದ ಹಸಿರು ಹಾಗೂ ಕೆರೆಗಳಿವೆ ಎಂದು ಗೊತ್ತಿರಲಿಲ್ಲ. ಹೆಲಿ-ಟ್ಯಾಕ್ಸಿ ಬಳಕೆ ಮಾಡಿದಾಗ ನಗರದ ವೈಮಾನಿಕ ನೋಟ ಸಿಕ್ಕಿತು ಎಂದು ಪ್ರಯಾಣಿಕರೊಬ್ಬರು ಅನುಭವ ಹಂಚಿಕೊಂಡಿದ್ದಾರೆ . ಹೆಲಿ-ಟ್ಯಾಕ್ಸಿ ಸೇವೆಯನ್ನು ಇನ್ನು ಮುಂದೆ ಆಗಾಗ್ಗೆ ಬಳಕೆ ಮಾಡುತ್ತೇನೆ ಎಂದು ಉದ್ಯಮಿಯೊಬ್ಬರು ಹೇಳಿದ್ದಾರೆ. ಪ್ರಯಾಣ ದರ ಸ್ವಲ್ಪ ಹೆಚ್ಚಾದರೂ ಮೌಲ್ಯಯುತವಾದದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಾರೆ ಬೆಂಗಳೂರಿಗೆ ಹೊಸದಾಗಿ ಪರಿಚಯವಾಗಿರುವ ಹೆಲಿ-ಟ್ಯಾಕ್ಸಿ ನಗರವಾಸಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ.



ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ