ಚಿನ್ನದಂಗಡಿಯಲ್ಲಿ ಭಯಾನಕ ಕೃತ್ಯ

Horror incident in jewellery shop

06-03-2018

ಬೆಂಗಳೂರು: ಮಾಗಡಿ ರಸ್ತೆಯ ಮಾಚೋಹಳ್ಳಿಯ ಚಿನ್ನಾಭರಣ ಅಂಗಡಿಯೊಂದಕ್ಕೆ ಸಿನಿಮೀಯ ರೀತಿಯಲ್ಲಿ ಮಚ್ಚು, ಲಾಂಗ್ ಹಿಡಿದು ನುಗ್ಗಿದ ದರೋಡೆಕೋರರು ಮಾಲೀಕನ ಮೇಲೆ ಹಲ್ಲೆ ನಡೆಸಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.

ಕೃತ್ಯದಲ್ಲಿ ದುಷ್ಕರ್ಮಿಗಳ ಮಚ್ಚಿನೇಟಿನಿಂದ ಕೈ ಕತ್ತರಿಸಿ ಗಂಭೀರವಾಗಿ ಗಾಯಗೊಂಡಿರುವ ಚಿನ್ನಾಭರಣ ಅಂಗಡಿ ಮಾಲೀಕ ಚಾನ್‍ರಾಮ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಚೋಹಳ್ಳಿಯ ಚಾನ್‍ರಾಮ್ ಅವರು ರಾತ್ರಿ 9ರ ವೇಳೆ ಅಂಗಡಿಯನ್ನು ಬಾಗಿಲು ಹಾಕಲು ಮುಂದಾಗುತ್ತಿದ್ದಾಗ ಮಚ್ಚು, ಲಾಂಗ್ ಹಿಡಿದು ಹೆಲ್ಮೆಟ್, ಜರ್ಕಿನ್ ಧರಿಸಿದ್ದ 6 ಮಂದಿ ದುಷ್ಕರ್ಮಿಗಳು ಏಕಾಏಕಿ ಅಂಗಡಿಯೊಳಗೆ ನುಗ್ಗಿದ್ದಾರೆ.

ಅಂಗಡಿಯಲ್ಲಿದ್ದ ಸಿಬ್ಬಂದಿಯನ್ನು ಬೆದರಿಸಿ ಚಿನ್ನಾಭರಣ ಲೂಟಿ ಮಾಡಲು ಹೋದಾಗ ಕೂಗಿಕೊಂಡ ಚಾನ್‍ರಾಮ್ ಕೈಗೆ ಮಚ್ಚಿನಿಂದ ಹೊಡೆದು ಬೆದರಿಸಿ, ಚಿನ್ನಾಭರಣಗಳನ್ನು ಬ್ಯಾಗ್‍ಗಳಿಗೆ ತುಂಬಿಕೊಳ್ಳತೊಡಗಿದ್ದಾಗ ಅಷ್ಟರಲ್ಲಿ ಸಿಬ್ಬಂದಿಯೊಬ್ಬ ಸಹಾಯಕ್ಕಾಗಿ ಕೂಗಿಕೊಂಡಾಗ ಅಕ್ಕಪಕ್ಕದವರು ಸಹಾಯಕ್ಕೆ ಬಂದಿದ್ದು, ಅವರ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ಸಾರ್ವಜನಿಕರಿಂದ ಹೆದರಿದ ದರೋಡೆಕೋರರು, ಚೀಲದಲ್ಲಿ ತುಂಬಿದ್ದ ಚಿನ್ನಾಭರಣಗಳನ್ನು ಕಾರಿನಲ್ಲಿಟ್ಟುಕೊಂಡು ಪರಾರಿಯಾಗಲು, ಯತ್ನಿಸಿದಾಗ ಬೆನ್ನಟ್ಟಿದ ಸಾರ್ವಜನಿಕರು ಓರ್ವನನ್ನು ಹಿಡಿದುಕೊಂಡಿದ್ದು, ಉಳಿದೆಲ್ಲರೂ ಕತ್ತಲಲ್ಲಿ ಪರಾರಿಯಾಗಿದ್ದಾರೆ.

ಹಿಡಿದುಕೊಂಡವನಿಗೆ ಧರ್ಮದೇಟು ನೀಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಮಾದನಾಯಕನಹಳ್ಳಿ ಪೊಲೀಸರು, ಸಾರ್ವಜನಿಕರು ಹಿಡಿದಿದ್ದ ದರೋಡೆಕೋರನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತನ ಹೆಸರು ಮಧು ಎಂದು ಪತ್ತೆಯಾಗಿದೆ. ಸುಮಾರು 6 ಮಂದಿ ದರೋಡೆಕೋರರ ತಂಡ ನಿನ್ನೆ ರಾತ್ರಿ ನಡೆಸಿದ ಈ ಕೃತ್ಯದಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ದುಷ್ಕರ್ಮಿಗಳ ಕೃತ್ಯವು ಅಂಗಡಿಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ದೃಶ್ಯಗಳು ಭಯಾನಕವಾಗಿವೆ. ಬಂಧಿಸಿರುವ ಮಧುನಿಂದ ಮಾಹಿತಿ ಪಡೆದು ಇತರ ದರೋಡೆಕೋರರಿಗಾಗಿ ತೀವ್ರ ಶೋಧ ನಡೆಸಲಾಗಿದೆ ಎಂದು ಗ್ರಾಮಾಂತರ ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Robbery jewellery shop ದರೋಡೆಕೋರ ಸಾರ್ವಜನಿಕ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ