ನಾಳೆಯಿಂದ ಎರಡು ದಿನಗಳ ಕಾಲ ನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ

Kannada News

05-05-2017

– ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತದ ನಡುವೆ ನಾಳೆಯಿಂದ ಎರಡು ದಿನಗಳ ಕಾಲ ನಗರದಲ್ಲಿ ಬಿಜೆಪಿ ಕಾರ್ಯಕಾರಿಣಿ ನಡೆಯಲಿದೆ. ನಗರದ ರಾಮಾನುಜಾ ರಸ್ತೆಯಲ್ಲಿರುವ ರಾಜೇಂದ್ರ ಕಲಾ ಮಂದಿರದಲ್ಲಿ ನಾಳೆ ಮತ್ತು ಮೇ 7ರಂದು ಬಿಜೆಪಿ ಕಾರ್ಯಕಾರಿಣಿ ನಡೆಯಲಿದ್ದು, ನಾಳೆ ಬೆಳಗ್ಗೆ ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರ ರಾವ್ ಉದ್ಘಾಟಿಸಲಿದ್ದಾರೆ.   ಕಾರ್ಯಕಾರಿಣಿ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಾಮ್‍ದಾಸ್, 2018ರ ಸಾರ್ವತ್ರಿಕ ಚುನಾವಣೆ ಸಂಬಂಧ ಚರ್ಚಿಸಲು ಈ ಸಭೆ ಕರೆಯಲಾಗಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪರಿಷತ್ ವಿಪಕ್ಷ ನಾಯಕ ಈಶ್ವರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಸದಾನಂದಗೌಡ, ನಿರ್ಮಲಾ ಸೀತಾರಾಮ್, ಪುರಂದರೇಶ್ವರಿ, ಸಂಸದರಾದ ಶೋಭಾಕರಂದ್ಲಾಜೆ, ಪ್ರತಾಪ್‍ಸಿಂಹ, ರಮೇಶ್‍ಜಿಗಜಿಣಗಿ ಸೇರಿದಂತೆ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ 

ಕಾರ್ಯಕಾರಿಣಿಗೆ ಗೈರುಹಾಜರಾಗುವ ಮುಖಂಡರ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಪಕ್ಷದ ವರಿಷ್ಠರು ನೀಡಿದ್ದಾರೆ.ರಾಜ್ಯ ಬಿಜೆಪಿಯಲ್ಲಿನ ಬಿಕ್ಕಟ್ಟು ಶಮನವಾಗದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅತೃಪ್ತ ಮುಖಂಡರು ನಾಳಿನ ಕಾರ್ಯಕಾರಿಣಿ ಸಭೆಗೆ ಗೈರು ಹಾಜರಾಗಲು ನಿರ್ಧರಿಸಿದ್ದಾರೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ವರಿಷ್ಠರು, ಕಾರ್ಯಕಾರಿಣಿಗೆ ಹಾಜರಾಗದವರ ವಿರುದ್ಧ ಶಿಸ್ತು ಕ್ರಮದ ಸ್ಪಷ್ಟ ಸಂದೇಶವನ್ನು ರವಾನಿಸಿದೆ ಎಂದು ಪಕ್ಷದ ಉನ್ನತ ಮೂಲಗಳು ಹೇಳಿವೆ.

ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವದಲ್ಲೂ ಸಡ್ಡು ಹೊಡೆದಿರುವ ಈಶ್ವರಪ್ಪ ಸೇರಿದಂತೆ ಕೆಲ ಅತೃಪ್ತ ಮುಖಂಡರ ಕಾರ್ಯಕಾರಿಣಿಗೆ ಗೈರುಹಾಜರಾಗುವ ಮೂಲಕ ಪಕ್ಷದ ರಾಜ್ಯಾಧ್ಯಕ್ಷರಿಗೆ ತಿರುಗೇಟು ನೀ‌ಡುವ ತೀರ್ಮಾನಕ್ಕೂ ಬಂದಿದ್ದರು.

ಕಾರ್ಯಕಾರಿಣಿಗೆ ಕೆಲ ಮುಖಂಡರ ಗೈರು ಹಾಜರಿಯಿಂದ ಭಿನ್ನಮತ ಮತ್ತಷ್ಟು ಉಲ್ಬಣವಾಗಿ, ಪಕ್ಷದ ವರ್ಚಸ್ಸಿಗೆ ಮತ್ತಷ್ಟು ಧಕ್ಕೆಯಾಗುತ್ತದೆ ಎಂಬುದನ್ನು ಅರಿತ ಹೈಕಮಾಂಡ್ ಶಿಸ್ತು ಕ್ರಮದ ಎಚ್ಚರಿಕೆ ನೀಡುವ ಮೂಲಕ ಭಿನ್ನಮತ ಉಲ್ಬಣವಾಗದಂತೆ ತಡೆಯುವ ಪ್ರಯತ್ನ ನ‌ಡೆಸಿದೆ ಎನ್ನಲಾಗಿದೆ.

ರಾಜ್ಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ರಾಜ್ಯ ಬಿಜೆಪಿ ಉಸ್ತುವಾರಿ ನೋಡಿಕೊಳ್ಳುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳಧರರಾವ್‌ರವರು ಇಂದು ಮಧ್ಯಾಹ್ನ ನಗರಕ್ಕೆ ಆಗಮಿಸಿದ್ದು, ಪಕ್ಷದ ಬೆಳವಣಿಗೆಗಳ ಬಗ್ಗೆ ಕೆಲ ಮುಖಂಡರ ಜೊತೆ ಸಮಾಲೋಚನೆ ನ‌ಡೆಸಿದರು.

Links :
ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ