ಬೆಂಗಳೂರಿನಲ್ಲಿ ಭೂಮಿ ಬೆಲೆ ನ್ಯೂಯಾರ್ಕ್‍ಗಿಂತ ಹೆಚ್ಚಾಗಿದೆ : ಸಚಿವ ಟಿ.ಬಿ.ಜಯಚಂದ್ರ

Kannada News

03-05-2017 219

ಬೆಂಗಳೂರು : ಭೂ ಮಾಫೀಯವನ್ನು ಹತ್ತಿಕ್ಕಲು ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಅಕ್ರಮಗಳನ್ನು ತಡೆಗಟ್ಟಲು ಸೂಕ್ತ ಪ್ರಾಧಿಕಾರ ರಚಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಇಂದಿಲ್ಲಿ ತಿಳಿಸಿದರು.

ಪ್ರಾಧಿಕಾರ ರಚನೆ ಸಂಬಂಧ ಸಧ್ಯದಲ್ಲೇ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳ ಜತೆ ಚರ್ಚಿಸಿ ಜನರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಉದ್ದೇಶಿಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಭೂಮಿ ಬೆಲೆ ನ್ಯೂಯಾರ್ಕ್‍ಗಿಂತ ಹೆಚ್ಚಾಗಿದೆ. ಇಲ್ಲಿ ಜನ ಸಾಮಾನ್ಯರು, ಬಡವರು, ಗ್ರಾಹಕರ ಹಿತ ರಕ್ಷಣೆಗೆ ಒತ್ತು ನೀಡಲಾಗುವುದು ಎಂದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ಬೇಕಾಬಿಟ್ಟಿ ಅಪಾರ್ಟ್‍ಮೆಂಟ್‍ಗಳನ್ನು ಕಟ್ಟಿ ಜನರಿಗೆ ತೊಂದರೆ ಕೊಡುತ್ತಿದ್ದ ಬಿಲ್ಡರುಗಳಿಂದ ಹಿಡಿದು ಭೂ ಮಾಫಿಯಾ ತನಕ ಎಲ್ಲವೂ ಇನ್ನು ಮುಂದೆ ನಿಯಂತ್ರಣಕ್ಕೆ ಬರಲಿದೆ. ದೇಶದಲ್ಲೇ ಅತ್ಯಂತ ಹೆಚ್ಚಿನ ಪ್ರಮಾಣದಲ್ಲ ಅಪಾರ್ಟ್‍ಮೆಂಟ್‍ಗಳನ್ನು ಕಟ್ಟುತ್ತಿರುವ ನಗರ ಬೆಂಗಳೂರು. ಇದೇ ರೀತಿ ರಾಜ್ಯದ ಹಲವು ನಗರಗಳಲ್ಲಿ ಅಪಾರ್ಟ್‍ಮೆಂಟ್‍ಗಳನ್ನು ಕಟ್ಟುವ ಚಟುವಟಿಕೆ ಹೆಚ್ಚಾಗುತ್ತಿದೆ ಎಂದರು.

ಅಪಾರ್ಟ್‍ಮೆಂಟ್‍ಗಳನ್ನು ಕಟ್ಟುವ ಬಹುತೇಕ ಬಿಲ್ಡರುಗಳು ನೋಂದಣಿಯನ್ನೇ ಮಾಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇನ್ನು ಮುಂದೆ ಬಿಲ್ಡರುಗಳು ನೋಂದಣಿ ಮಾಡಿಕೊಳ್ಳುವುದು ಕಡ್ಡಾಯ ಎಂದ ಅವರು,ಉಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗರು ಹಾಗೂ ವಸತಿ, ಕಾನೂನು ಇಲಾಖೆ ಉನ್ನತಾಧಿಕಾರಿಗಳ ಜತೆ ಚರ್ಚಿಸಿ ಪ್ರಾಧಿಕಾರ ರಚಿಸಲಾಗುವುದು ಎಂದರು.

ಇನ್ನು ಮುಂದೆ ಅಪಾರ್ಟ್‍ಮೆಂಟ್‍ಗಳನ್ನು ಕಟ್ಟಲು, ನಿವೇಶನಗಳನ್ನು ರೂಪಿಸಲು ಪ್ರಾಧಿಕಾರದ ಒಪ್ಪಿಗೆ ಪಡೆಯುವ ಅನಿವಾರ್ಯತೆ ಇರುತ್ತದೆ.ಹೀಗಾಗಿ ಅಪಾರ್ಟ್‍ಮೆಂಟ್ ತೆಗೆದುಕೊಳ್ಳಲು ಮುಂದಾಗುವ, ನಿವೇಶನ ಪಡೆಯಲು ಮುಂದಾಗುವ ಜನರಿಗೆ ಮೋಸವಾಗುವುದಿಲ್ಲ ಎಂದರು.

ಯಾಕೆಂದರೆ ಅಪಾರ್ಟ್‍ಮೆಂಟ್, ನಿವೇಶನಗಳನ್ನು ರೂಪಿಸುವುದು ಯಾವ ಭೂಮಿಯಲ್ಲಿ ಎಂಬುದನ್ನು ಪ್ರಾಧಿಕಾರವೇ ಅಂತಿಮಗೊಳಿಸುತ್ತದೆ ಎಂದ ಅವರು, ಪ್ರಾಧಿಕಾರದ ಅಧ್ಯಕ್ಷರಾಗಿರುವವರು ಕಾನೂನು,ವಸತಿ,ಭೂ ವ್ಯವಹಾರಗಳು,ತಾಂತ್ರಿಕತೆಯಿಂದ ಹಿಡಿದು ಹಲವು ವಿಷಯಗಳಲ್ಲಿ 25 ವರ್ಷದ ಅನುಭವ ಹೊಂದಿರಬೇಕಾಗುತ್ತದೆ.

ಇದೇ ರೀತಿ ಪ್ರಾಧಿಕಾರದ ಸದಸ್ಯರಾಗುವವರು ಇಂತಹ ವಿಷಯಗಳಲ್ಲಿ ಕನಿಷ್ಟ ಪಕ್ಷ ಹದಿನೈದು ವರ್ಷಗಳ ಸೇವಾನುಭವ ಹೊಂದಿರಬೇಕಾಗುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ಭೂ ವ್ಯವಹಾರಗಳಲ್ಲಿ ಯಾವುದೇ ತೊಂದರೆ ಜನಸಾಮಾನ್ಯರಿಗೆ ಆಗುವುದಿಲ್ಲ ಎಂದರು.

ಕೇಂದ್ರದ ರಿಯಲ್ ಎಸ್ಟೇಟ್ ಕಾಯ್ದೆಗಿಂತ ಮುಂಚೆ ನಾವು ಎರಡು ಕಾಯ್ದೆಗಳನ್ನು ಜಾರಿಗೆ ತಂದಿದ್ದೆವು. ಆದರೆ ಇನ್ನು ಕೇಂದ್ರದ ಕಾಯ್ದೆಯನ್ನು ಜಾರಿಗೆ ತರುವುದು ಅನಿವಾರ್ಯ. ಹೀಗಾಗಿ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗುವುದು ಎಂದರು.

ರಾಜ್ಯದಲ್ಲಿರುವ ಮರಳು ಬ್ಲಾಕ್‍ಗಳನ್ನು ಏಪ್ರಿಲ್ 30 ರೊಳಗೆ ಹರಾಜು ಮೂಲಕ ಹಂಚಿಕೆ ಮಾಡಲು ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶ ನೀಡಲಾಗಿತ್ತು. ಅದರನುಸಾರ ಪ್ರಕ್ರಿಯೆ ಬಹುತೇಕ ಪೂರ್ಣಗೊಂಡಿದ್ದು ಜನರಿಗೆ ಅಗತ್ಯ ಪ್ರಮಾಣದ ಮರಳು ಲಭ್ಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಹಸಿರು ನ್ಯಾಯಾಧಿಕರಣ ಈಗಾಗಲೇ ಅವೈಜ್ಞಾನಿಕವಾಗಿ ಮರಳು ತೆಗೆಯಬಾರದು ಎಂದು ಆದೇಶ ನೀಡಿರುವುದರಿಂದ ಈ ವಿಷಯದಲ್ಲಿ ನಾವು ಪಾರದರ್ಶಕವಾಗಿ ಕೆಲಸ ಮಾಡುವುದು ಅನಿವಾರ್ಯವಾಗಿದೆ. ಬೇಡಿಕೆ ಪ್ರಮಾಣದ ಮರಳು ಪೂರೈಕೆ ಮಾಡಲಾಗದಿದ್ದರೂ ಪರ್ಯಾಯವಾಗಿ ಎಂ.ಸ್ಯಾಂಡ್ ಪೂರೈಕೆ ಮಾಡುತ್ತೇವೆ ಎಂದರು.

ಈಗಾಗಲೇ ಹೊರರಾಜ್ಯಗಳಿಗೆ ಮರಳು ಸಾಗಾಟವನ್ನು ನಿರ್ಭಂಧಿಸಲಾಗಿದ್ದು ಅದೇ ರೀತಿ ಅಂತರ್‍ಜಿಲ್ಲಾ ಮರಳು ಸಾಗಣೆಗೆ ಅನುಮತಿ ನೀಡಲಾಗಿದೆ. ಹೀಗಾಗಿ ಯಾವುದೇ ಜಿಲ್ಲೆಗಳಲ್ಲಿ ಮರಳಿನ ಕೊರತೆಯಾದರೂ ಬೇರೆ ಜಿಲ್ಲೆಗಳಿಂದ ಮರಳನ್ನು ತರಿಸಲು ಅವಕಾಶವಿದೆ.

ದಕ್ಷಿಣ ಕನ್ನಡ,ಉಡುಪಿ ಸೇರಿದಂತೆ ಕರಾವಳಿ ಭಾಗದಲ್ಲಿ ಮರಳು ಹೇರಳವಾಗಿ ಲಭ್ಯವಿದ್ದು ಇದೇ ಕಾರಣಕ್ಕಾಗಿ ಅಲ್ಲಿ ಮರಳು ಹಂಚಿಕೆಗೆ ಪ್ರತ್ಯೇಕ ನೀತಿಯನ್ನು ಮಾಡಲಾಗಿದೆ.ಈ ಸಂಬಂಧ ರಚಿಸಲಾಗಿದ್ದ ಸಂಪುಟ ಉಪಸಮಿತಿ ಈಗಾಗಲೇ ವರದಿ ನೀಡಿದ್ದು ಸಚಿವ ಸಂಪುಟ ಸಭೆಯಲ್ಲಿ ಅದನ್ನು ಅಂತಿಮಗೊಳಿಸಲಾಗುವುದು ಎಂದರು.

ಬೆಳ್ಳಂದೂರು ಕೆರೆಗೆ ತ್ಯಾಜ್ಯ ಬಿಡುವ ಕೈಗಾರಿಕೆಗಳನ್ನು ಮುಚ್ಚಿಸಬೇಕು ಎಂಬುದು ಸೇರಿದಂತೆ ಕೆರೆಯ ಪರಿಸರವನ್ನು ರಕ್ಷಿಸಲು ಹಸಿರು ನ್ಯಾಯಪೀಠ ಆದೇಶ ನೀಡಿದೆ.ಒಂದು ತಿಂಗಳಲ್ಲಿ ಈ ಕೆಲಸವಾಗಬೇಕು ಎಂದು ಅದು ಹೇಳಿದ್ದು ಹೀಗಾಗಿ ನಾವು ಅದರ ಆದೇಶವನ್ನು ಪಾಲನೆ ಮಾಡಲೇಬೇಕಾಗುತ್ತದೆ.

ಬೆಳ್ಳಂದೂರು ಕೆರೆಯ ಆಸುಪಾಸಿನಲ್ಲಿ ಐನೂರರಿಂದ ಆರು ನೂರು ಕಾರ್ಖಾನೆಗಳಿದ್ದು ಇವುಗಳಿಂದ ತ್ಯಾಜ್ಯವೇನಾದರೂ ಕೆರೆಗೆ ಬಂದರೆ ಒಂದು ಸಲಕ್ಕೆ ಲಕ್ಷ ರೂ ದಂಡ ವಿಧಿಸಲಾಗುತ್ತದೆ ಎಂದ ಅವರು,ಒಂದೋ ಆ ಕಾರ್ಖಾನೆಗಳು ತ್ಯಾಜ್ಯ ಬೆಳ್ಳಂದೂರು ಕೆರೆಗೆ ಸೇರದಂತೆ ನೋಡಿಕೊಳ್ಳಬೇಕು.ಇಲ್ಲವೇ ಬಾಗಿಲು ಮುಚ್ಚಬೇಕು ಎಂದರು.

ಅಲ್ಲಿ ಪ್ರೆಸ್ಟೀಜ್ ಗ್ರೂಪ್ ಭೂಮಿಯನ್ನು ಒತ್ತುವರಿ ಮಾಡಿದ್ದು ಸ್ಪಷ್ಟವಾಗಿದೆ ಎಂದ ಅವರು ಕಾರ್ಖಾನೆಗಳಂತೆ ಅಪಾರ್ಟ್‍ಮೆಂಟ್‍ಗಳು, ಮನೆಗಳಿಂದಲೂ ತ್ಯಾಜ್ಯ ಬರುತ್ತಿದೆ. ಇದನ್ನು ತಡೆಗಟ್ಟುವುದು ಅನಿವಾರ್ಯ. ಹೀಗಾಗಿ ಸ್ಥಳ ಭೇಟಿಗಾಗಿ ನಾನೇ ಖುದ್ದಾಗಿ ಹೋಗುತ್ತಿದ್ದೇನೆ ಎಂದು ಅವರು ವಿವರಿಸಿದರು.

ಬಡ್ತಿ ಮೀಸಲಾತಿಯ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಗಿದೆ.ಈ ಸಂಬಂಧ ಸವೋಚ್ಚ ನ್ಯಾಯಾಲಯ ಏನು ತೀರ್ಪು ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ಲೋಕೋಪಯೋಗಿ ಹಾಗೂ ಇಂಧನ ಇಲಾಖೆಯ ವ್ಯಾಪ್ತಿಗೆ ಸೇರಿದ ಬಡ್ತಿ ಪ್ರಕರಣಗಳನ್ನು ಮುಖ್ಯವಾಗಿಟ್ಟುಕೊಂಡು ಸವೋಚ್ಚ ನ್ಯಾಯಾಲಯ ಈ ತೀರ್ಪು ನೀಡಿರುವುದರಿಂದ ನಮ್ಮ ಪುನರ್‍ಪರಿಶೀಲನಾ ಅರ್ಜಿಯ ನಂತರ ಅದು ನೀಡುವ ತೀರ್ಪ ಯಾವ ರೀತಿ ಇದ್ದರೂ ಅದನ್ನು ಪರಿಪಾಲಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ಕಾವೇರಿ ನದಿಗೆ ಅಡ್ಡಲಾಗಿ 6000 ಕೋಟಿ ರೂ ವೆಚ್ಚದಲ್ಲಿ ಮೇಕೆದಾಟು ಸಮೀಪ ಕಟ್ಟಲಾಗುವ ಆಣೆಕಟ್ಟಿನಿಂದ ವಿದ್ಯುತ್ ಉತ್ಪಾದಿಸುವುದಲ್ಲದೆ ರಾಜಧಾನಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಗೆ ಸಂಬಂಧಿಸಿದಂತೆ ಮುಂದಿನ ಹದಿನೈದು ದಿನಗಳಲ್ಲಿ ಸಮಗ್ರ ಯೋಜನಾ ವರದಿ ಲಭ್ಯವಾಗಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಸಮಗ್ರ ಯೋಜನಾ ವರದಿಯನ್ನು ಸಿದ್ದಗೊಳಿಸಲಾಗುತ್ತಿದ್ದು ಹದಿನೈದು ದಿನಗಳ ಒಳಗಾಗಿ ಅದು ನಮ್ಮ ಕೈ ಸೇರಲಿದೆ ಎಂದು ಸ್ಪಷ್ಟ ಪಡಿಸಿದರು.

ಸಮಗ್ರ ಯೋಜನಾ ವರದಿ ನಮ್ಮ ಕೈ ಸೇರಿದ ಕೂಡಲೇ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಸಲ್ಲಿಸುವುದಾಗಿ ನುಡಿದ ಅವರು,ಕಾವೇರಿ ನ್ಯಾಯಮಂಡಳಿ ತೀರ್ಪಿನ ಪ್ರಕಾರ ತಮಿಳ್ನಾಡಿಗೆ ನಾವು 192 ಟಿಎಂಸಿ ನೀರು ಒದಗಿಸಿದ ಮೇಲೆ ಸರಾಸರಿ 80 ಟಿಎಂಸಿ ನೀರು ಉಳಿಯುತ್ತದೆ.

ಹೀಗಾಗಿ ಈ ನೀರನ್ನು ಬಳಸಲು ಮೇಕೆದಾಟಿನ ಸಮೀಪ ಆಣೆಕಟ್ಟನ್ನು ಕಟ್ಟಿ ವಿದ್ಯುತ್ ತಯಾರಿಸಲು,ರಾಜಧಾನಿಯಲ್ಲಿರುವ  ಕುಡಿಯುವ ನೀರಿನ ಕೊರತೆಯನ್ನು ನಿವಾರಿಸಲು  ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.

ವಿದ್ಯುತ್ ಉತ್ಪಾದಿಸುವುದರಿಂದ ಮತ್ತು ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವುದರಿಂದ ಏಕಕಾಲಕ್ಕೆ ಯೋಜನೆಗೆ ತಗಲುವ ವೆಚ್ಚವನ್ನು ಇಂಧನ ಇಲಾಖೆ ಹಾಗೂ ಬೆಂಗಳೂರು ಜಲಮಂಡಳಿ ವಹಿಸಿಕೊಳ್ಳುವುದು ಅನಿವಾರ್ಯ ಎಂದು ಅವರು ವಿವರಿಸಿದರು.

ಭೂಮಿಯಿಂದ ಮುನ್ನೂರು-ನಾಲ್ಕು ನೂರು ಅಡಿಗಳಷ್ಟು ಆಳ ಕೊರೆದು ಕುಡಿಯುವ ನೀರು ಒದಗಿಸುವ ಪಾತಾಳ ಗಂಗೆ ಯೋಜನೆಯ ಕುರಿತು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು,ಈಗಾಗಲೇ ಹತ್ತತ್ತಿರ 1800-2000 ಅಡಿಗಳಷ್ಟು ಆಳ ಕೊರೆದರೂ ನೀರು ಸಿಗುತ್ತಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಮಾರ್ಮಿಕವಾಗಿ ನುಡಿದರು.

ಪಾತಾಳ ಗಂಗೆ ಯೋಜನೆಯಡಿ ಒಂದು ಬೋರ್‍ವೆಲ್ ಕೊರೆಯಲು  ಹತ್ತು ಕೋಟಿ ರೂಪಾಯಿ ಬೇಕಾಗುತ್ತದೆ.ಒಂದು ಬೋರ್‍ವೆಲ್ ತೆಗೆದರೆ ಒಂದು ತಾಲ್ಲೂಕಿಗೆ ಸಾಲುವಷ್ಟು ನೀರು ಸಿಗುತ್ತದೆ ಎಂದು ಹೇಳುತ್ತಿದ್ದಾರೆ.ಆದರೆ ಇದರ ಸಾಧಕ ಬಾಧಕಗಳ ಕುರಿತು ಯೋಚಿಸಬೇಕು ಎಂದು ವಿವರಿಸಿದರು.

ಭೂಮಿಯಿಂದ ಮೂವತ್ತು ಕಿಲೋಮೀಟರ್ ಆಳದಲ್ಲೂ ನೀರು ಹರಿಯುತ್ತಿದೆ.ಆದರೆ ಅದು ಲಾವಾರಸದ ರೂಪದಲ್ಲಿದೆ.ನಾಲ್ಕು ಸಾವಿರ ಡಿಗ್ರಿ ಸೆಂಟಿಗ್ರೇಡುಗಳಷ್ಟು ತಾಪಮಾನವಿರುವ ಅದನ್ನು ತಣಿಸಿಕೊಡಲು ಸಾಧ್ಯವೇ?ಎಂದು ಅವರು ವ್ಯಂಗ್ಯವಾಡಿದರು.

ಈಗ ನಾವು ಬಳಸುತ್ತಿರುವ ಅಂತರ್ಜಲ ಇನ್ನೂರು-ಮುನ್ನೂರು ವರ್ಷಗಳ ಹಿಂದೆ ಸಂಗ್ರಹವಾಗಿದ್ದು.ಇದನ್ನು ಗರಿಷ್ಟ ಪ್ರಮಾಣದಲ್ಲಿ ನಾವು ಬಳಕೆ ಮಾಡಿರುವುದರಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ನುಡಿದರು.

ಮುಂದಿನ ಹತ್ತು,ಹದಿನೈದು ವರ್ಷಗಳ ಕಾಲ ಮಳೆ ನೀರನ್ನು ಇಂಗಿಸುವ,ಬ್ಯಾರೇಜುಗಳ ಮೂಲಕ ನೀರನ್ನು ತಡೆಹಿಡಿದಿಡುವ ಕೆಲಸವನ್ನು ಮಾಡದಿದ್ದರೆ ಕರ್ನಾಟಕ ಮತ್ತೊಂದು ರಾಜಸ್ತಾನವಾಗಲಿದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ತೊಗರಿ ಬೇಳೆ ಖರೀದಿ ಪ್ರಕ್ರಿಯೆ ಬಹುತೇಕ ಮುಗಿದಿದ್ದು 1.26 ಲಕ್ಷ ರೈತರಿಂದ ಮೂವತ್ತೊಂದು ಲಕ್ಷ ಕ್ವಿಂಟಾಲ್‍ಗಳಷ್ಟು ತೊಗರಿಬೇಳೆಯನ್ನು ಖರೀದಿ ಮಾಡಲಾಗಿದೆ.ಆದರೆ ಇನ್ನೂ 52 ಸಾವಿರ ಮಂದಿ ರೈತರಿಂದ ತೊಗರಿಬೇಳೆ ಖರೀದಿಸಬೇಕು ಎಂಬ ಬೇಡಿಕೆ ಬಂದಿದೆ.

ಹೀಗಾಗಿ ಕೇಂದ್ರದ ನೆರವಿನೊಂದಿಗೆ ಇದನ್ನು ಖರೀದಿ ಮಾಡಲು ನಿರ್ಧರಿಸಿ ಮನವಿ ಸಲ್ಲಿಸಲಾಗಿದೆ.ಅದೇ ರೀತಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ಶೇಕಡಾ ನಲವತ್ತರಷ್ಟು ರಿಯಾಯ್ತಿ ದರದಲ್ಲಿ ಅದನ್ನು ಫಲಾನುಭವಿಗಳಿಗೆ ಒದಗಿಸಲು ಚಿಂತನೆ ನಡೆಸಲಾಗಿದೆ ಎಂದರು.

ನೈಸ್ ಯೋಜನೆಗೆ ಸಂಬಂಧಿಸಿದ ವರದಿಯ ಕುರಿತು ಕೇಳಿದ ಪ್ರಶ್ನೆಗೆ ನಿಖರವಾದ ಉತ್ತರ ನೀಡದ ಅವರು,ಈ ಕುರಿತು ಪರಿಶೀಲನೆ ನಡೆಸಿ ಒಂದು ನಿರ್ಧಾರಕ್ಕೆ ಬರುವುದಾಗಿ ಅವರು ವಿವರಿಸಿದರು.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ