ಬಿಜೆಪಿ ಸರ್ಕಾರಗಳ ವಿರುದ್ಧ ಗೃಹ ಸಚಿವರ ಆರೋಪ

Ramalinga Reddy allegation against  BJP governments

03-03-2018

ಮೈಸೂರು: ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪ್ರಗತಿ ಬಗ್ಗೆ ವಿಧಾನಸೌಧದಲ್ಲಿ ವಿವರಿಸಿದ್ದೇನೆ, ಸದ್ಯಕ್ಕೆ ಅದಕ್ಕಿಂತ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಉಳಿದ ಮಾಹಿತಿಯನ್ನು ಎಸ್ಐಟಿ ತಂಡ ಮುಂದಿನ ದಿನಗಳಲ್ಲಿ ತಿಳಿಸಲಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ಅಕ್ರಮ ಪಿಸ್ತೂಲ್ ಗಳು ರಾಜ್ಯಕ್ಕೆ ಮಧ್ಯಪ್ರದೇಶ, ಉತ್ತರ ಪ್ರದೇಶದಿಂದ ಬರುತ್ತಿವೆ, ಅಲ್ಲಿನ ಸರ್ಕಾರಗಳು ಈ ಮಾಫಿಯಾಕ್ಕೆ ಕಡಿವಾಣ ಹಾಕಬೇಕು. ಮೂಲದಲ್ಲೇ ಸಮಸ್ಯೆ ಬಗೆಹರಿಸಿದರೆ ಮಾತ್ರ ಇದನ್ನು ನಿಯಂತ್ರಿಸಲು ಸಾಧ್ಯ. ಮಧ್ಯಪ್ರದೇಶ, ಉತ್ತರ ಪ್ರದೇಶಗಳಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಸುಲಭವಾಗಿ ಸಿಗುತ್ತವೆ, ಆದರೆ ಅಲ್ಲಿನ ಬಿಜೆಪಿ ಮುಖಂಡರು ಇಲ್ಲಿಗೆ ಬಂದು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ ಎಂದು ಬಿಜೆಪಿ ಸರ್ಕಾರಗಳ ವಿರುದ್ಧ ರಾಮಲಿಂಗಾ ರೆಡ್ಡಿ ದೂರಿದರು. 
ಕೇಂದ್ರ ಗೃಹ ಸಚಿವರ ತವರು ರಾಜ್ಯದಲ್ಲೇ ಕ್ರೈಂ ರೇಟ್ ಜಾಸ್ತಿ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಕೊಲೆ ಆರೋಪ ಇದೆ. ನಮ್ಮಲ್ಲಿ ಭೂಗತ ವ್ಯಕ್ತಿಗಳು ಮಾತ್ರ ಅಕ್ರಮ ಶಸ್ತ್ರಾಸ್ತ್ರ ಹೊಂದಿರಬಹುದು, ಸಾಮಾನ್ಯರಿಗೆ ಸುಲಭವಾಗಿ ವೆಪನ್ ಗಳು ಸಿಗುವ ಪರಿಸ್ಥಿತಿ ಇಲ್ಲ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ನವರು ಸರ್ಕಾರದ ಮೇಲೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜಕೀಯಕ್ಕಾಗಿ ಯಾರ ಮೇಲೂ ಕೇಸ್ ಹಾಕಿಲ್ಲ. ಅದರ ಅಗತ್ಯವೂ ನಮಗೆ ಇಲ್ಲ. ಚುನಾವಣೆ ಹತ್ತಿರದಲ್ಲಿ ಇರುವುದರಿಂದ ಈ ರೀತಿಯ ಆರೋಪಗಳನ್ನು ಮಾಡಲಾಗುತ್ತಿದೆ. ಕೊಲೆ, ಕೊಲೆ ಯತ್ನ ಮುಂತಾದ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ರೌಡಿ ಶೀಟ್ ಓಪನ್ ಮಾಡಲಾಗಿದೆ. ವಯಸ್ಸಾದವರ ಮತ್ತು ಕ್ರಿಮಿನಲ್ ಅಪರಾಧಗಳಲ್ಲಿ ಭಾಗಿಯಾಗದ ವ್ಯಕ್ತಿಗಳ ಮೇಲೆ ಓಪನ್ ಆಗಿರುವ ರೌಡಿ ಶೀಟ್ ಗಳನ್ನು ಮುಚ್ಚುವಂತೆ ನಾನೇ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Ramalinga Reddy Gauri Lankesh ರೌಡಿ ಶೀಟ್ ಅಪರಾಧ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ