ಗುಡುಗಿದ ಗುಂಡೂರಾವ್…

Dinesh Gundu Rao press meet in kpcc

02-03-2018

ಬೆಂಗಳೂರು: ಬಿಜೆಪಿಯವರು ರಾಜ್ಯದಲ್ಲಿ ಮತ್ತು ಬೆಂಗಳೂರಿನಲ್ಲಿ ಹಮ್ಮಿಕೊಂಡಿರುವ ಯಾತ್ರೆಗಳಿಗೆ ಸೆಡ್ಡುಹೊಡೆಯಲೆಂದೇ ಕಾಂಗ್ರೆಸ್ ಪಕ್ಷದವರು ಸುದ್ದಿಗೋಷ್ಠಿಗಳನ್ನು ನಡೆಸುತ್ತಿದ್ದಾರೆ ಎಂಬುದು ರಹಸ್ಯವಾಗೇನೂ ಉಳಿದಿಲ್ಲ. ಅದರಂತೆಯೇ ಸಚಿವ ಜಾರ್ಜ್ ಅವರ ಸುದ್ದಿಗೋಷ್ಟಿ ನಂತರ, ಪಕ್ಷದ ಕಾರ್ಯಾಧ್ಯಕ್ಷ ದಿನೇಶ್ ಗುಂಡುರಾವ್, ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. 

ಬಿಜೆಪಿ ನಾಯಕರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಕೆಐಎಡಿಬಿ ಭೂ ಹಗರಣದಲ್ಲಿ ಬಿಜೆಪಿ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಮಗ ಜೈಲು ಪಾಲಾಗಿದ್ದರು. ಆರ್.ಅಶೋಕ್ ಅವರು ಅಕ್ರಮ ಸಕ್ರಮ ಸಮಿತಿಯಲ್ಲಿದ್ದಾಗ 2 ಸಾವಿರ ಎಕರೆ ಭೂ ಒತ್ತುವರಿ ಆರೋಪವಿದೆ. ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ, ಯಡಿಯೂರಪ್ಪ ವಿರುದ್ಧ ಅಕ್ರಮ ಡಿನೋಟಿಫಿಕೇಷನ್ ಬಗ್ಗೆ ತನಿಖೆ ನಡೆಯುತ್ತಿದೆ. ಹೀಗಿದ್ದರೂ ಕೂಡ, ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಯಾವುದಾದರೂ ಹಗರಣ ನಡೆದಿದೆಯೇ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು.

ಬಿಜೆಪಿ ಆಡಳಿತದಲ್ಲಿ ಬೆಂಗಳೂರಿಗೆ ಗಾರ್ಬೇಜ್ ಸಿಟಿ ಎಂಬ ಕಪ್ಪು ಚುಕ್ಕೆ ಬಂದಿತ್ತು, ನಾವು ಅದನ್ನು ನಿವಾರಿಸಿದ್ದೇವೆ, ಈಗ ಬೆಂಗಳೂರು ನಗರ ವಿಶ್ವಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಡೈನಾಮಿಕ್ ಸಿಟಿ ಮತ್ತು ಸ್ಟಾರ್ಟ್ ಅಪ್ ಕ್ಯಾಪಿಟಲ್ ಎನ್ನುವ ಹೆಗ್ಗಳಿಕೆಯೂ ಬಂದಿದೆ ಎಂದು ದಿನೇಶ್ ಗುಂಡೂರಾವ್
ಸಮರ್ಥಿಸಿಕೊಂಡರು. 

ಲಂಡನ್ ನಗರವನ್ನು ಹಿಂದಿಕ್ಕಿ ಬೆಂಗಳೂರು ನಗರ ಮುನ್ನಡೆದಿದೆ, ಭ್ರಷ್ಟಾಚಾರ ನಡೆದಿದ್ದರೆ ದಾಖಲೆ ಸಮೇತ ಬಹಿರಂಗ ಪಡಿಸಲಿ ಎಂದು ದಿನೇಶ್ ಸವಾಲು ಹಾಕಿದ್ದಾರೆ. ಕರ್ನಾಟಕ ರಾಜ್ಯ,ದೇಶದ ಟಾಪ್ 10 ಕ್ರೈಮ್ ನಡೆಯುವ ರಾಜ್ಯಗಳ ಲಿಸ್ಟ್ ನಲ್ಲಿ ಇಲ್ಲ, ಹೀಗಾಗಿ ಬಿಜೆಪಿ ನಾಯಕರು ಸುಳ್ಳು ಹೇಳೋದನ್ನ ಮೊದಲು ಬಿಡಬೇಕು ಎಂದು ದಿನೇಶ್ ಗುಂಡೂರಾವ್ ಛೇಡಿಸಿದರು. ಬಿಜೆಪಿ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಮಾಡಿದ್ದು ಯುಪಿಎ ಸರ್ಕಾರ. ಆದರೆ, ಬಿಜೆಪಿ ಆಡಳಿತದ ಕಾಲದಲ್ಲಿ ಹಲವು ಕಟ್ಟಡಗಳನ್ನು ಅಡವಿಟ್ಟಿದ್ದರು, ನಾವು ಅವನ್ನೆಲ್ಲ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್ ನಂತಹ ಒಂದೇ ಒಂದು ಕೆಲಸ ಆಗಿಲ್ಲ, ಬಿಜೆಪಿಯ ಭ್ರಷ್ಟನಾಯಕರು ಈ ರೀತಿ ಹೇಳಿಕೆ ನೀಡೋದು ನಗೆಪಾಟಲು ಎಂದ ದಿನೇಶ್ ಗುಂಡೂರಾವ್ ಅವರು, ಪುಸ್ತಕ ಬಿಡುಗಡೆ ಮಾಡಿ ನಿಮ್ಮ ತಲೆ ಮೇಲೆ ನೀವೇ ಕಲ್ಲು ಹಾಕಿಕೊಳ್ಳಬೇಡಿ ಎಂದು ಬಿಜೆಪಿಯವರಿಗೆ ಸಲಹೆ ನೀಡಿದರು. ಬಿಜೆಪಿಯವರು ಲೆಕ್ಕ ಕೊಡಿ ಎಂಬ ಪುಸ್ತಕ ಬಿಡುಗಡೆ ಮಾಡಿದ್ದಾರೆ, ಬಿಜೆಪಿಯ  ಪ್ರಕಾಶ್ ಜಾವಡೇಕರ್, ಅಶೋಕ್ ಸೇರಿದಂತೆ ಎಲ್ಲರಿಗೂ ಬುರುಡೆ ಬಿಡೋದೆ ಕೆಲಸವಾಗಿದೆ. ಬಿಜೆಪಿ ಅವಧಿಯಲ್ಲಿ ಮಿಡ್ ನೈಟ್ ಟೆಂಡರ್ ಗಳಾಗಿವೆ, ಫೈಲ್ ಗಳನ್ನು ಸುಡುವ ಕೆಲಸಗಳು ನಡೆದಿವೆ, ಭ್ರಷ್ಟಾಚಾರ ಮಾಡಿರೋದು ಬಿಜೆಪಿಯವರೇ, ಆದರೆ ಲೆಕ್ಕ ಮಾತ್ರ ನಮ್ಮಿಂದ ಕೇಳುತ್ತಾರೆ, ನಾವು ಲೆಕ್ಕ ಕೊಟ್ಟೇ ಕೊಡ್ತೀವಿ ಎಂದು ದಿನೇಶ್ ಗುಂಡೂರಾವ್ ಗುಡುಗಿದರು. 

ಕಾಂಗ್ರೆಸ್ ಪಕ್ಷದ ಸರ್ಕಾರ ಮಾಡಿರುವ ಸಾಧನೆ ಬಗ್ಗೆ ನಾವೂ ಕೂಡ ಪುಸ್ತಕ ಬಿಡುಗಡೆ ಮಾಡುತ್ತೇವೆ, ಕೊಳಚೆ ಪ್ರದೇಶಗಳಿಗೆ ಉಚಿತ ನೀರು ಪೂರೈಕೆ ಮಾಡಿದ್ದೇವೆ, ಬೆಂಗಳೂರನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದೇವೆ, ಹೀಗಾಗಿ  ಬಿಜೆಪಿ ನಾಯಕರು ಮಾಡಿರುವ ಎಲ್ಲ ಆರೋಪಗಳು ನಿರಾಧಾರ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.


ಸಂಬಂಧಿತ ಟ್ಯಾಗ್ಗಳು

Dinesh Gundu Rao KPCC ಪುಸ್ತಕ ನಿರಾಧಾರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ