ಪೇಪರ್ ಟೈಗರ್ ಗಳಿಂದ ಏನಾಗುತ್ತೆ?

Nothing will happen with paper tiger

02-03-2018

ಬೆಂಗಳೂರು: ಬಿಜೆಪಿಯವರು ಹತಾಶರಾಗಿದ್ದಾರೆ, ಅಮಿತ್ ಷಾ ಒಬ್ಬ ಪೇಪರ್ ಟೈಗರ್, ನಾವು ಬಹಳಷ್ಟು ಟೈಗರ್ ಗಳನ್ನು ನೋಡಿದ್ದೇವೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಲೇವಡಿ ಮಾಡಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಜಾರ್ಜ್ ಅವರು, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಗುಜರಾತ್ ಲಯನ್ ಬರುತ್ತಿದೆ ಎಂದು ಬಿಜೆಪಿಯವರು ಬಡಾಯಿ ಕೊಚ್ಚಿಕೊಳ್ಳುತ್ತಾರೆ, ನಮ್ಮ ಬನ್ನೇರುಘಟ್ಟದಲ್ಲೂ ಸಾಕಷ್ಟು ಲಯನ್ ಗಳಿವೆ, ಸಿಂಹ ಕಾಡಿನಲ್ಲಿದ್ದರೆ ಮಾತ್ರ ಅದಕ್ಕೆ ಶಕ್ತಿ ಎಂದು ಅಮಿತ್ ಷಾರನ್ನು ವ್ಯಂಗ್ಯವಾಡಿದರು.

ವೈದ್ಯರ ಮೇಲೆ ಹಲ್ಲೆ ನಡೆಸಿದ್ದ ಅನಂತ್ ಕುಮಾರ್ ಹೆಗಡೆಯಂಥವರಿಗೆ ಕೇಂದ್ರ ಸಚಿವ ಪದವಿ ನೀಡಿದ್ದಾರೆ, ಸಂಸದ ಪ್ರತಾಪ್ ಸಿಂಹ ಬಾಯಿ ಹರಿಬಿಡುತ್ತಾರೆ ಎಂದು ಟೀಕಿಸಿದ ಜಾರ್ಜ್ ಅವರು, ನಮ್ಮ ಸರ್ಕಾರದ ವಿರುದ್ಧ ಟೆನ್ ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಆರೋಪ ಮಾಡಿದ್ದಾರೆ, ಇಂಥ ಪ್ರಧಾನಿಯನ್ನು ನಾನು ಎಂದೂ ಕಂಡಿಲ್ಲ ಎಂದು ಕಿಡಿಕಾರಿದ್ದಾರೆ. ಪ್ರಧಾನಿ ಮೋದಿಯವರ ಈ ಮಾತು ಕನ್ನಡಿಗರಿಗೆ ಅಪಮಾನ ಮಾಡಿದೆ, ಪ್ರಧಾನಿಯನ್ನು ಸಚಿವ ರಮೇಶ್ ಕುಮಾರ್ ಅವರು ಹಿಟ್ಲರ್ ಗೆ ಹೋಲಿಸಿದ್ದರು, ಅವರ ಮಾತು ನಿಜ ಎಂದು ಸಚಿವ ಜಾರ್ಜ್ ಹೇಳಿದರು.

ಬೆಳ್ಳಂದೂರು, ವರ್ತೂರು ಕೆರೆ ಅಭಿವೃದ್ಧಿ ವಿಚಾರದ ಬಗ್ಗೆ ಮಾತನಾಡಿದ ಸಚಿವ ಜಾರ್ಜ್, ಕೆರೆಗಳ ಅಭಿವೃದ್ಧಿಗೆ  800 ಕೋಟಿ ರೂ. ಹಣ ನೀಡುವುದಾಗಿ ಕೆಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದರು, ಆದರೆ ಒಂದೇ ಒಂದು ಪೈಸೆ ಕೂಡ ನೀಡಿಲ್ಲ, ಕೇಂದ್ರಕ್ಕೆ ಪತ್ರ ಬರೆದರೆ ನಿಮ್ಮ ಹಣದಲ್ಲೇ ಕೆರೆ ಕ್ಲೀನ್ ಮಾಡಿ ಅಂತಾರೆ, ಹೀಗಿದ್ದರೆ ಸುಳ್ಳು ಹೇಳಿಕೆ ಯಾಕೆ ನೀಡಬೇಕಿತ್ತು ಎಂದು ಸಚಿವ ಜಾರ್ಜ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನ ಗಾರ್ಬೆಜ್ ಗುತ್ತಿಗೆದಾರರು ಯಾರು? ಇವರೆಲ್ಲರೂ ಬಿಜೆಪಿಯವರು ಬೆಳೆಸಿರುವವರೇ, ಇದು ಮಾಫಿಯಾದಂತೆ ಬೆಳೆದಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಜಾರ್ಜ್ ಗಂಭೀರ ಆರೋಪ ಮಾಡಿದ್ದಾರೆ. ಅಕ್ರಮ ಡಿನೋಟಿಫೈ ಮಾಡಿದವರು ಯಾರು, ಜಾಮೀನು ಪಡೆದು ಹೊರಗೆ ಓಡಾಡುತ್ತಿರುವವರು ಯಾರು? ಎಂದು ಪ್ರಶ್ನಿಸುವ ಮೂಲಕ ಜಾರ್ಜ್ ಅವರು ಮಾಜಿ ಸಿಎಂ ಯಡಿಯೂರಪ್ಪನವರ ಪ್ರಕರಣವನ್ನೂ ಪ್ರಸ್ತಾಪಿಸಿದರು. ನನ್ನ ವಿರುದ್ಧ 15 ಎಕರೆ ಭೂಮಿ ಕಬಳಿಕೆ ಆರೋಪ ಮಾಡಿದ್ದಾರೆ, ಆದರೆ ಒಂದೇ ಒಂದು ಎಕರೆ ಭೂಮಿ ತೋರಿಸಲಿ ಎಂದು ಬಿಜೆಪಿ ನಾಯಕರಿಗೆ ಜಾರ್ಜ್ ಸವಾಲ್ ಹಾಕಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಮುಂದೂಡಲು ಪ್ರಯತ್ನ ಮಾಡುತ್ತಿದ್ದಾರೆಂಬ ಬಗ್ಗೆ ಮಾಧ್ಯಮಗಳಲ್ಲಿ ತಿಳಿದಿದ್ದೇನೆ, ಬಿಜೆಪಿಯವರಿಗೆ ಸೋಲಿನ ಭೀತಿ ಎದುರಾಗಿದೆ, ಹೀಗಾಗಿ ಮುಂದೂಡಿದರೂ ಮುಂದೂಡಬಹುದು ಎಂದು ಹೇಳಿದ ಸಚಿವ ಜಾರ್ಜ್,  ನಮ್ಮ ಅವಧಿ ಮೇ ತಿಂಗಳಲ್ಲಿ ಮುಗಿಯಲಿದೆ, ಮೋದಿ, ಅಮಿತ್ ಷಾ, ಬಿಎಸ್ ವೈ ಯಾರೇ ಇದ್ದರೂ ಅವರಿಗೆ 50 ಸೀಟೂ ಕೂಡ ಬರಲ್ಲ ಎಂದು ಸಚಿವ ಕೆ.ಜೆ.ಜಾರ್ಜ್ ಲೇವಡಿ ಮಾಡಿದ್ದಾರೆ.


ಸಂಬಂಧಿತ ಟ್ಯಾಗ್ಗಳು

K.J.George Narendra modi ಸಚಿವ ಲೇವಡಿ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ