ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್‍ನ ಗ್ರಂಥಪಾಲಕರ ಪ್ರತಿಭಟನೆ

Kannada News

03-05-2017 1255

ಬೆಂಗಳೂರು :- ವೇತನ ಹೆಚ್ಚಳಕ್ಕೆ ಆಗ್ರಹಿಸಿ ಗ್ರಾಮ ಪಂಚಾಯತ್‍ನ ಗ್ರಂಥಪಾಲಕರು ನಗರದ ಫ್ರೀಡಂಪಾರ್ಕ್ ಬಳಿ ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ.
ಫ್ರೀಡಂಪಾರ್ಕ್‍ನ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಜತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದಾರೆ.
ಸುರೇಶ್ ಕುಮಾರ್ ಅವರ ಮಾತುಕತೆ ಬಳಿಕ ಪ್ರತಿಭಟನೆಯಲ್ಲಿ ತೊಡಗಿರುವ ಗ್ರಂಥಪಾಲಕರ ಸಂಘಟನೆ ಪದಾಧಿಕಾರಿಗಳನ್ನು ಸಂಧಾನ ನಡೆಸಲು ಸಚಿವ ತನ್ವೀರ್ ಸೇಠ್ ಆಹ್ವಾನಿಸಿದ್ದಾರೆ.
ಗ್ರಂಥಾಲಯ ಮೇಲ್ವಿಚಾರಕರಿಗೆ ಈಗ ನೀಡುತ್ತಿರುವ ಗೌರವ ವೇತನ  2500. ರೂನಿಂದ (ಅಲೆಮಾರಿ ಗ್ರಂಥಾಲಯ ಹಾಗೂ ಕೊಳಚೆ ಪ್ರದೇಶ ಗ್ರಂಥಾಲಯ) 5500 ಆಗಿದೆ. ಆದರೆ 5-8-2016ರ  ಗೆಜೆಟ್ ನೋಟಿಫಿಕೇಶನ್ ಪ್ರಕಾರ ರಾಜ್ಯದ ಎಲ್ಲಾ ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳ ಗ್ರಂಥಾ ಪಾಲಕರು/ಗ್ರಂಥಾಲಯ ಮೇಲ್ವಚಾರಕರಿಗೆ ಪರಿಷ್ಕರಿಸಿದ ಕನಿಷ್ಟ ವೇತನ 13,200 ಎಂದು ನಿಗದಿ ಮಾಡಿ ಘೋಷಿಸಲಾಗಿತ್ತು. ಆದರೆ ಇದುವರೆವಿಗೂ ಈ ಅಧಿಸೂಚನೆಯನ್ನು ಅನುಷ್ಟಾನಗೊಳಿಸಿಲ್ಲ.
ಬದಲಿಗೆ ಇವರುಗಳ ಕೆಲಸದ ಅವಧಿಯನ್ನು 4 ಗಂಟೆಗಳಿಗೆ ಕಡಿತಗೊಳಿಸಿ '' ಗ್ರಾಮ ಪಂಚಾಯಿತಿ ಗ್ರಂಥಾಲಯಗಳ ಮೇಲ್ವಿಚಾಲಕರಿಗೆ  7ಸಾವಿರ  ಮತ್ತು ಅಲೆಮಾರಿ-ಕೊಳಚೆ ಪ್ರದೇಶ ಗ್ರಂಥಾಲಯಗಳ ಮೇಲ್ವಿಚಾಲಕರಿಗೆ 5000  ಎಂದು ಹೊಸ ಆದೇಶದ ಮೂಲಕ ಸರ್ಕಾರ ಮರು ನಿಗದಿಗೊಳಿಸಿದೆ.ಹೀಗಾಗಿ  ಗ್ರಂಥಾಲಯ ಮೇಲ್ವಿಚಾರಕರು ತಮ್ಮ ವೇತನ ಹೆಚ್ಚಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

Links :ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ