ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಆಹ್ವಾನ

Application invited for Congress ticket

02-03-2018

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡಲು ಕಾಂಗ್ರೆಸ್ ಪಕ್ಷ ಅರ್ಜಿ ಆಹ್ವಾನಿಸಿದ್ದು, ಕಳೆದ ಮೂರು ದಿನಗಳಲ್ಲಿ 800ಕ್ಕೂ ಹೆಚ್ಚು ಜನ ತಲಾ 100 ರೂ.ತೆತ್ತು ಪೈಪೋಟಿಯಲ್ಲಿ ಅರ್ಜಿ ನಮೂನೆ ಪಡೆದಿದ್ದಾರೆ. ಸಾಮಾನ್ಯ ಪುರುಷ, ಸಾಮಾನ್ಯ ಮಹಿಳೆ, ಎಸ್ಸಿ, ಎಸ್ಟಿ ಹೀಗೆ ಬೇರೆ ಬೇರೆ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದಲ್ಲಿರುವ 224 ವಿಧಾನಸಭಾ ಕ್ಷೇತ್ರಗಳಿಗೆ ಪ್ರತಿ ಕ್ಷೇತ್ರಕ್ಕೆ ಸರಾಸರಿ ನಾಲ್ವರಂತೆ ಅರ್ಜಿ ಪಡೆಯಲು ಅವಕಾಶ ನೀಡಲಾಗಿದೆ.

ಬೆಂಗಳೂರು ವ್ಯಾಪ್ತಿಯಲ್ಲೇ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದು, ಸಿದ್ದರಾಮಯ್ಯ ಸಂಪುಟದ ಪ್ರಮುಖ ಸಚಿವರಿರುವ ಕ್ಷೇತ್ರಗಳಲ್ಲೂ ಟಿಕೆಟ್ಗಾಗಿ ಅರ್ಜಿ ಪಡೆಯಲು ಆಕಾಂಕ್ಷಿಗಳು ಸಾಲುಗಟ್ಟಿ ನಿಂತಿದ್ದಾರೆ. ಸದ್ಯಕ್ಕೆ ಸುದ್ದಿಯಲ್ಲಿರುವ ಶಾಸಕ ಎನ್.ಎ.ಹ್ಯಾರಿಸ್ ಅವರ ಶಾಂತಿನಗರ ಕ್ಷೇತ್ರದ ಟಿಕೆಟ್ ಅರ್ಜಿಗೂ ಆಕಾಂಕ್ಷಿಗಳ ದಂಡೇ ಮುಂದಾಗಿದೆ.  ವಿಶೇಷವೆಂದರೆ. ಹಾಲಿ ಶಾಸಕರು, ಮಂತ್ರಿಗಳ ಪೈಕಿ ಬಹುತೇಕರು ಇನ್ನೂ ಅರ್ಜಿ ತೆಗೆದುಕೊಂಡಿಲ್ಲ.

ವೈಯಕ್ತಿಕ ವಿವರದ ಜೊತೆಗೆ ರಾಜಕೀಯ ಹಿನ್ನೆಲೆ, ಪಕ್ಷ ಬಿಟ್ಟು ಪುನಃ ಪಕ್ಷಕ್ಕೆ ಮರು ಸೇರ್ಪಡೆಗೊಂಡ ಸಂಗತಿ, ಯಾವ ಹಂತದಲ್ಲಿ ಪಕ್ಷದ ಎಷ್ಟು ಕಾರ್ಯಕ್ರಮ ಆಯೋಜಿಸಲಾಗಿದೆ ಎಂಬ ಬಗ್ಗೆ ಮಾಹಿತಿ, ಸಾಮಾಜಿಕ ಕಳಕಳಿಯ ಕಾರ್ಯಕ್ರಮ ಆಯೋಜಿಸಿದ ಮಾಹಿತಿ, ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ದಾಖಲೆ, ಕ್ರಿಮಿನಲ್ ಪ್ರಕರಣಗಳಿದ್ದರೆ ಅದರ ಕುರಿತು ಮಾಹಿತಿ ಮತ್ತು ಆಸ್ತಿ ವಿವರ ಸಲ್ಲಿಸಬೇಕಾಗಿದೆ.

ಪ್ರಮುಖವಾಗಿ ಟಿಕೆಟ್ ಆಕಾಂಕ್ಷಿಯ ಮೇಲಿರುವ ಪ್ರಕರಣಗಳ ತೀವ್ರತೆ ಗಮನಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜಾತಿ, ಧರ್ಮ ಆಧಾರಿತ ಸಂಘಟನೆಗಳಲ್ಲಿ ತೊಡಗಿಕೊಳ್ಳುವಂತಿಲ್ಲ, ಆ ಸಂಘಟನೆಗಳ ಸಭೆಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪ್ರಮಾಣೀಕರಿಸಬೇಕು, ವರದಕ್ಷಿಣೆ ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣೀಕರಿಸಬೇಕು ಎಂಬ ಅಂಶಗಳಿವೆ. ಇನ್ನೊಂದು ಅಂಶವೆಂದರೆ, ಕುಟುಂಬದ ಅಥವಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಅತಿಯಾದ ಶ್ರೀಮಂತಿಕೆ ಪ್ರದರ್ಶನ ಮಾಡುವುದಿಲ್ಲ, ಸರಿಯಾಗಿ ತೆರಿಗೆ ಪಾವತಿಸುತ್ತೇನೆ ಎಂದು ಅರ್ಜಿ ಜೊತೆಗೆ ಪ್ರಮಾಣ ಪತ್ರ ಸಲ್ಲಿಸಬೇಕಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.


ಸಂಬಂಧಿತ ಟ್ಯಾಗ್ಗಳು

election ticket Bribe ಆಕಾಂಕ್ಷಿ ಪ್ರಮಾಣ ಪತ್ರ


ಒಂದು ಕಮೆಂಟನ್ನು ಹಾಕಿ

ಟಾಪ್ ಪ್ರತಿಕ್ರಿಯೆಗಳು


ಇಲ್ಲ ಪ್ರತಿಕ್ರಿಯೆಗಳು ಕಂಡುಬಂದಿಲ್ಲ